varthabharthi


ಭಿನ್ನ ರುಚಿ

ಪುರಿಯೆಂಬ ಪುಣ್ಯ ಪ್ರಸಾದ

ವಾರ್ತಾ ಭಾರತಿ : 25 May, 2020
ರಾಜೇಂದ್ರ ಪ್ರಸಾದ್

ದಕ್ಷಿಣ ಕರ್ನಾಟಕದ ಜನರಿಗೆ ಮಂಡಕ್ಕಿ ಎಂದರೆ ಏನೆಂದೂ ಅರ್ಥವಾಗುವುದಿಲ್ಲ. ಕಡ್ಲೆಪುರಿ ಅಂದರೇನೇ ಗೊತ್ತಾಗೋದು. ಅಸಲಿಗೆ ‘‘ಪುರಿ’’ ಅಂತಷ್ಟೇ ಕರೆಯುವ ಇದಕ್ಕೆ ಹೆಚ್ಚು ಹುರಿಗಡಲೆ ಬೆರೆಸಿ ತಿನ್ನುವ ಅಭ್ಯಾಸವಿರುವುದರಿಂದ ಕಡ್ಲೆಪುರಿ ಎನ್ನುವ ಹೆಸರೇ ಜನಪ್ರಿಯ. ಮಂಡಕ್ಕಿ ಉರುಫ್ ಕಡ್ಲೆಪುರಿ ಬಡವನಿಂದ ಸಿರಿವಂತನವರೆಗೆ, ಹಳ್ಳಿಗರಿಂದ ನಗರದ ಜನರವರೆಗೆ, ಹುಟ್ಟಿನಿಂದ ಸಾವಿನವರೆಗೆ, ದೈವಿಕ ಆಚರಣೆಗಳಿಗೆ ಸೇರಿದಂತೆ ಎಷ್ಟೋ ಜನರ ಒಂದೊತ್ತಿನ ಆಹಾರವಾಗಿದೆ. ಕಾಲದಿಂದ ಕಾಲಕ್ಕೆ ಹೊಸ ಹೊಸ ಪದಾರ್ಥಗಳ ಹೊಸ ತಿಂಡಿಗಳು ಬರುತ್ತಿದ್ದರೂ ಇದರ ಜನಪ್ರಿಯತೆ ಇಂದಿಗೂ ಕಡಿಮೆಯಾಗಿಲ್ಲ. ಉತ್ತರ ಮತ್ತು ದಕ್ಷಿಣ ಕರ್ನಾಟಕದಲ್ಲಿ ತನ್ನದೇ ವಿಶಿಷ್ಟ ಛಾಪು ಮೂಡಿಸಿರುವ ಮಂಡಕ್ಕಿ, ಪುರಿ ಬೇರೆ ಬೇರೆ ರಾಜ್ಯ, ದೇಶಗಳಲ್ಲೂ ಕೂಡ ಬೇರೆ ಬೇರೆ ತೆರನಾದ ರೀತಿಯಲ್ಲಿ ದೊರಕುತ್ತದೆ. ಆದರೆ ನಮ್ಮಲ್ಲಿ ಮಾತ್ರ ಅದರ ಜನಪ್ರಿಯತೆಗೆ ಮತ್ತು ಅದರ ಗರಿಗರಿಯಾದ ರುಚಿಗೆ ಮತ್ಯಾವುದೂ ಸಾಟಿಯಿಲ್ಲ. ದಕ್ಷಿಣ ಏಷ್ಯಾದಲ್ಲಿ ‘ಮುರಿ’, ಮುದಿ, ಮುರೈ, ಮುರ್ಮೂರೆ, ಚಿರ್ಮುರೆ, ಮಂಡಕ್ಕಿ ಅಂತೆಲ್ಲಾ ಪ್ರಸಿದ್ಧವಾಗಿರುವ ಪುರಿಯನ್ನು ಅಕ್ಕಿಯಿಂದ ತಯಾರಿಸಲಾಗುತ್ತದೆ.

ನೀರಿನಲ್ಲಿ ನೆನೆ ಹಾಕಿದ ಅಕ್ಕಿಯನ್ನು ತೆಗೆದು ಹುರಿದು ಒಣಗಿಸಿ ನಂತರ ಬಿಸಿಯಾದ ಮರಳು ಅಥವಾ ಉಪ್ಪಿನ ಹರಳು ಗಳ ಜೊತೆಗೆ ಹುರಿದಾಗ ಹರಳು ರೂಪದ ಗರಿಗರಿಯಾಗಿ ಊದಿಕೊಂಡ ‘ಪುರಿ’ ಸಿಗುತ್ತದೆ. ಇದು ಭಾರತ, ನೇಪಾಳ, ಪಾಕಿಸ್ತಾನ, ಬಾಂಗ್ಲಾ, ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಆಹಾರ ಪದಾರ್ಥವಾಗಿ ಚಾಲ್ತಿಯಲ್ಲಿದೆ. ಅಕ್ಕಿಯಿಂದ ಮಾಡುವ ಪದಾರ್ಥವಾಗಿದ್ದರಿಂದ ಈ ಭೌಗೋಳಿಕ ಪ್ರದೇಶದಲ್ಲಿ ಅತಿ ಹೆಚ್ಚು ಭತ್ತವನ್ನು ಬೆಳೆಯುವುದರಿಂದಲೂ ಇಲ್ಲಿನ ಜನರಿಗೆ ಇದು ಬಲು ಅಗ್ಗ ಮತ್ತು ಸುಲಭ. ಇವತ್ತಿನ ಆಧುನಿಕ ಆಮದಿನ ತಿಂಡಿಗಳು ಸಿಗದ ಕಾಲದಲ್ಲಿ ನಮಗೆ ಕೆಲವೇ ಅಗ್ಗದ ದರದಲ್ಲಿ ದೊರಕುವ ತಿಂಡಿಗಳಲ್ಲಿ ಮಂಡಕ್ಕಿಯೇ ಮುಖ್ಯವಾದುದು. ಹಳ್ಳಿಯ ಕಿರಾಣಿ ಅಂಗಡಿಯಿಂದ ಹಿಡಿದು ಜಾತ್ರೆಯ ಬತ್ತಾಸಿನ ಅಂಗಡಿಯವರೆಗೆ ಈ ಪುರಿಯ ಮೂಟೆಗಳು ಸಾಲು ಸಾಲು ಜೋಡಿಸುವುದು ಸಾಮಾನ್ಯವಾಗಿತ್ತು.

ಜಾತ್ರೆಗಳಲ್ಲಿ ಓಡಾಡುವವರ ಕೈಯಲ್ಲಿ ಪುರಿಯ ಪೊಟ್ಟಣ ಇಲ್ಲದೆ ಇರುತ್ತಿರಲಿಲ್ಲ. ಅದಕ್ಕೆ ಕಡಲೆ ಬೆರೆಸುವವರು ಕೆಲವರಾದರೆ, ಖಾರಾಬೂಂದಿ ಬಳಸುವವರು ಕೆಲವರು, ಇನ್ನು ಕೆಲವರು ಬರಿಯ ಪುರಿ ತಿನ್ನುತ್ತ ಕಾಲದೂಡುತ್ತಿದ್ದರು. ಮಕ್ಕಳಿಗೂ ಇದು ಬಲು ಇಷ್ಟದ ತಿಂಡಿಯಾಗಿತ್ತು. ಜಾತ್ರೆಗಳಲ್ಲಿ ಒಗ್ಗರಣೆ ಹಾಕಿದ ಪುರಿ ಮತ್ತು ಖಾರ, ಈರುಳ್ಳಿ ಬೆರೆಸಿದ ಚುರುಮುರಿ ಬಹಳ ಪ್ರಸಿದ್ಧ. ಚುರುಮುರಿ ಮಹಾರಾಷ್ಟ್ರ ಕಡೆಯಿಂದ ನಮ್ಮ ಕಡೆಗೆ ಸಾಗಿ ಬಂದ ತಿಂಡಿ. ಹಳೇ ಮೈಸೂರು ಭಾಗದ ಹಳ್ಳಿಗರು ಈಗಲೂ ದೊಡ್ಡ ಲೋಟಕ್ಕೆ ಅರ್ಧ ಟೀ ಇನ್ನರ್ಧ ಪುರಿ ತುಂಬಿಕೊಂಡು ಕುಡಿಯುತ್ತ ಜೊತೆಗೆ ಟೀನಲ್ಲಿ ನೆನೆದ ಪುರಿಯನ್ನು ತಿನ್ನುವುದು ರೂಢಿ. ಇನ್ನು ಊರಿನಲ್ಲಿ ದೇವರಿಗೆ ಪೂಜೆ ಪುನಸ್ಕಾರಗಳು ನಡೆದರೆ ಸಿಗುತ್ತಿದ್ದ ಪ್ರಸಾದವು ಕೂಡ ಈ ಪುರಿಮಯವಾಗಿತ್ತು. ಕೆಲವು ಸಲ ತೆಂಗಿನ ಕಾಯಿಯ ಚೂರು ಮತ್ತು ಪುರಿಯನ್ನು ಬೆರೆಸಿಕೊಟ್ಟರೆ ಇನ್ನೂ ಕೆಲವು ಸಲ ಬಾಳೆಹಣ್ಣು, ತೆಂಗಿನ ತುರಿ, ಬೆಲ್ಲ, ಏಲಕ್ಕಿಗಳ ಜೊತೆಗೆ ಪುರಿಯನ್ನು ಬೆರೆಸಿ ರಸಾಯನ ಮಾಡಿಕೊಡುತ್ತಿದ್ದರು.

ಇದಂತೂ ನಮ್ಮ ಬಾಲ್ಯದ ಅದ್ಭುತ ರುಚಿಯ ಪ್ರಸಾದವಾಗಿತ್ತು. ಪುರಿಯಿಲ್ಲದೆ ಪೂಜೆಗಳೇ ಇರುತ್ತಿರಲಿಲ್ಲ. ಈಗ ಮನೆ ಮತ್ತು ಅಂಗಡಿ ಮುಂಗಟ್ಟುಗಳಲ್ಲಿ ನಡೆಯುವ ಪೂಜೆಗಳಿಗೆ ಪುರಿ ನಿಗದಿತ ಪ್ರಸಾದವಾಗಿಬಿಟ್ಟಿದೆ. ದೇವಸ್ಥಾನ, ಪುಣ್ಯಕ್ಷೇತ್ರಗಳಿಗೆ ಯಾತ್ರೆ ಹೋದವರು ವಾಪಸ್ ಮನೆಗೆ ಬಂದ ಮೇಲೆ ಅಲ್ಲಿಂದ ತಂದ ತೀರ್ಥ ಪ್ರಸಾದದ ಜೊತೆಗೆ ಪುರಿ ಕಡಲೆ ಮತ್ತು ತೆಂಗಿನ ಚೂರು ಹಾಕಿ ಹತ್ತಿರದ ನೆರೆ ಹೊರೆಗೆ ಮತ್ತು ಪರಿಚಿತರಿಗೆ ಕೊಡುವುದು ವಾಡಿಕೆ. ಮನುಷ್ಯ ಸತ್ತಾಗ ಕೂಡ ಆತನ ಮೇಲೆ ಪುರಿಯನ್ನೇ ಎಸೆಯುತ್ತಾ ಮಣ್ಣು ಮಾಡುವುದು ಸಂಪ್ರದಾಯ. ಬಹುತೇಕ ಎಲ್ಲ ಜಾತಿ ವರ್ಗಗಳಲ್ಲೂ ಈ ಅಭ್ಯಾಸವಿದೆ. ಆಮೇಲೆ ನಡೆಯುವ ತಿಥಿಯಲ್ಲೂ ಆಚರಣೆಗಳಿಗೆ ಪುರಿಯ ಬಳಕೆ ಮಾಡುತ್ತಾರೆ. ಇನ್ನು ವೈಯಕ್ತಿಕವಾಗಿ ಮನೆಗಳಲ್ಲಿ ಉಪಾಹಾರವಾಗಿ ಪುರಿಯನ್ನು ಬಳಸುವುದು ಇವತ್ತಿಗೂ ಇದೆ. ಎಂತಹುದೇ ಆಧುನಿಕ ರುಚಿರುಚಿಯಾದ ಸಿದ್ಧ ಆಹಾರ ಪದಾರ್ಥಗಳು ಬಂದರು ಕೂಡ ಪುರಿಯನ್ನು ಹಿಮ್ಮೆಟ್ಟಿಸಲು ಸಾಧ್ಯವಾಗಿಲ್ಲ. ಪುರಿ, ಮಂಡಕ್ಕಿಯನ್ನು ನೀರಿನಲ್ಲಿ ನೆನೆಸಿ ತೆಗೆದು ಒಗ್ಗರಣೆ ಕೊಟ್ಟು ‘ಸೂಸಲ’ ಮಾಡುತ್ತಾರೆ, ಗರಿಗರಿಯಾದ ಪುರಿಗೆ ಒಗ್ಗರಣೆ ಕೊಟ್ಟು ‘ಒಗ್ಗರಣೆ ಮಂಡಕ್ಕಿ’ ಮಾಡುತ್ತಾರೆ. ಆದರ ಜೊತೆಗೆ ಒಳ್ಳೆಯ ಖಾರದ ಹಸಿಮೆಣಸಿನಕಾಯಿ ಬಜ್ಜಿ ಮಾಡಿ ಜೊತೆಯಲ್ಲಿ ಸವಿಯುತ್ತಾರೆ. ಇವೆರಡು ಉತ್ತರ ಕರ್ನಾಟಕದಲ್ಲಿ ಬಹಳ ಜನಪ್ರಿಯ ತಿಂಡಿಗಳು.

ಹಳೇ ಮೈಸೂರು ಭಾಗದಲ್ಲಿ ಬೆಲ್ಲದ ಪಾಕಕ್ಕೆ ಪುರಿಯನ್ನು ಸೇರಿಸಿ ‘ಪುರಿಯುಂಡೆ’ ಮಾಡುತ್ತಾರೆ. ಸಿಹಿ ಮತ್ತು ಗರಿಗರಿಯಾಗಿ ತಿನ್ನಲು ಚೆನ್ನಾಗಿರುತ್ತವೆ. ಆಗಲೇ ಹೇಳಿದಂತೆ ಬಾಳೆಹಣ್ಣಿನ ರಸಾಯನಕ್ಕೆ ಬಳಸುತ್ತಾರೆ ಉಳಿದಂತೆ ಹೆಚ್ಚು ಅದನ್ನು ನೇರವಾಗಿ ತಿನ್ನಲೂ ಬಯಸುತ್ತಾರೆ. ಅದರಲು ಹುರಿಗಡಲೆ ಮತ್ತು ಖಾರ ಜೊತೆ ಒಳ್ಳೆಯ ಜೋಡಿ. ಅಲ್ಲಲ್ಲಿ ಹರಟೆಕಟ್ಟೆಗಳಲ್ಲಿ ಸೇರುವ ಜನ ಕೂಡ ಬಟ್ಟಲುಗಟ್ಟಲೆ ಪುರಿಯನ್ನು ಸುರಿವಿಕೊಂಡು ಲೋಕಾಭಿರಾಮ ಮಾತಾಡುತ್ತಾರೆ. ಇನ್ನು ಉತ್ತರದ ಬಳುವಳಿ ಬೇಲ್ ಪುರಿ, ಚುರುಮುರಿಗೆ ಕಡ್ಲೆಪುರಿ ಬೇಕೇ ಬೇಕು. ಇವೆರಡೂ ಯಾವ ಮಟ್ಟಿಗೆ ಇಡೀ ಭಾರತವನ್ನು ಆಕ್ರಮಿಸಿಕೊಂಡಿವೆ ಎಂದರೆ ಇವುಗಳ ಮೂಲ ಕಂಡು ಹಿಡಿಯಲಾರದಷ್ಟು ಮಟ್ಟಿಗೆ ಎಲ್ಲ ಪ್ರದೇಶಗಳಲ್ಲೂ ಚಾಚಿಕೊಂಡಿವೆ. ಜನರಂತೂ ಇವುಗಳ ರುಚಿಗೆ ಮಾರುಹೋಗಿ ಬಿಟ್ಟಿರಲಾರದಷ್ಟು ಮೋಹ ಬೆಳೆಸಿಕೊಂಡುಬಿಟ್ಟಿದ್ದಾರೆ. ಆಯಾ ಪ್ರದೇಶದ ಜನರ ಉಪ್ಪು, ಹುಳಿ ಮತ್ತು ಖಾರಗಳಿಗೆ ಹೊಂದಾಣಿಕೆಯಾಗಿ ಸ್ಥಳೀಯ ಆಹಾರದ ಕ್ರಮಗಳ ಹಾಗೆ ಬೇಡಿಕೆ ಸೃಷ್ಟಿಸಿಬಿಟ್ಟಿವೆ.

 ವಿಶೇಷವಾದ ಒಂದು ಪುರಿಯ ಕಥೆ ಹೇಳಲೇಬೇಕಿದೆ. ಇದುವರೆಗೂ ಬರಿ ಹಸಿಯಾಗೇ ಬಳಸುವ ಪುರಿಯ ಕೆಲವು ತಿನಿಸುಗಳನ್ನು ನೋಡಿದೆವು, ಒರಿಸ್ಸಾ ರಾಜ್ಯದಲ್ಲಿ ಮುದಿ(ಪುರಿ)ಯ ಬಳಕೆ ಹೆಚ್ಚು. ಅಲ್ಲಿನ ಜನರು ಪುರಿಯನ್ನು ಕೋಳಿಸಾರಿನಲ್ಲಿ ಕಲಸಿ ‘ಮುದಿ ಮಾಂಸ’ ಮಾಡುತ್ತಾರೆ. ಅದು ಅಲ್ಲಿನ ಫೇಮಸ್ ಅಡುಗೆ. ಬಿಹಾರ ಮತ್ತು ಜಾರ್ಖಂಡ್ ನಡುವಿನ ಮಿಥಿಲಾ ಪ್ರದೇಶದಲ್ಲಿನ ಮೈಥಿಲಿಗಳು ಹುರಿದ ಆಲೂಗೆಡ್ಡೆ, ಈರುಳ್ಳಿಯ ಜೊತೆಗೆ ಮೀನು ಸಾರು ಮಾಡುತ್ತಾರೆ ಅಥವಾ ಕುರಿ ಮಾಂಸದ ಸಾರು ಮಾಡುತ್ತಾರೆ. ಅದಕ್ಕೆ ಈ ಪುರಿಯನ್ನು ಬೆರೆಸಿಕೊಂಡು ತಿನ್ನುವುದು ಅವರ ಕ್ರಮವಾಗಿದೆ. ಆದರೆ ನಮ್ಮಲ್ಲಿ ಮಾತ್ರ ಪುರಿಗೆ ಮಾಂಸ ಬೆರೆಸುವುದು ನಿಷಿದ್ಧವಾಗಿದೆ. ಅದೊಂದು ಬೇಡದ ನಿಷಿದ್ಧತೆ ಮಾಂಸದ ಬಗ್ಗೆ ನಮಗೆ ಯಾಕೆ ಅನ್ನುವುದೇ ಅರ್ಥವಾಗುವುದಿಲ್ಲ. ಕಡ್ಲೆಪುರಿ ಜೊತೆಗೆ ಹುರಿದ ಸಣ್ಣಸಣ್ಣ ಮಾಂಸದ ತುಂಡುಗಳನ್ನು ಬೆರೆಸಿ ಒಗ್ಗರಣೆ ಮಾಡಬಹುದು. ಇದರಲ್ಲಿ ಮಾಂಸದ ತುಂಡುಗಳಲ್ಲಿ ಮೂಳೆ ಇರಬಹುದು ಮತ್ತು ನೀರಿನಂಶ ಇರಬಾರದು. ಕೈಮಾ ವಡೆಗಳ ಜೊತೆಗೆ ಒಗ್ಗರಣೆ ಪುರಿಯನ್ನು ತಿನ್ನಲು ಬಳಸಬಹುದು. ಚುರುಮುರಿಗೆ ಹುರಿದ ಸಿಹಿನೀರಿನ ಸೀಗಡಿಗಳನ್ನು ಹಾಕಿದರೆ ತುಂಬಾ ರುಚಿ ಮತ್ತು ಗರಿಗರಿಯಾಗಿರುತ್ತದೆ.

ಮಸಾಲೆ ಒಗ್ಗರಣೆ ಕೊಟ್ಟು ಅದಕ್ಕೆ ಸೀಗಡಿ ಹುರಿದು ಪುಡಿ ಮಾಡಿ ಕಲಸಿದರೆ ಘಮಘಮ ಎನ್ನುತ್ತಿರುತ್ತದೆ. ಹಾ! ಇದು ಬಯಲು ಸೀಮೆಯಲ್ಲಿ ಸಿಗುವ ಕೆಂಪು ಬಣ್ಣದ ಸೀಗಡಿ ಆಗಿರಬೇಕು. ಸಮುದ್ರದ ಸೀಗಡಿ ಅಥವಾ ಸಣ್ಣ ಕರಿಮೀನು ರುಚಿಸುವುದಿಲ್ಲ, ಕಹಿ ಬರುತ್ತದೆ. ಹೀಗೆ ಇನ್ನು ಹತ್ತು ಹಲವು ಪ್ರಯೋಗಗಳನ್ನು ಮಾಡಬಹುದು. ಅದಕ್ಕೆ ಮನಸ್ಸೂ ಇರಬೇಕು. ಆದರೆ ನಮಗೆ ಬೇಕಿರುವುದು ಈಗಾಗಲೇ ಕೆಲವರು ನಮ್ಮನ್ನು ಕಟ್ಟಿಹಾಕಿರುವ ಆಹಾರದ ಮಡಿ ಸಂಸ್ಕೃತಿಯನ್ನು ಮೀರಿ ಯೋಚಿಸುವ ಜನರು ಮತ್ತವರ ವಿವಿಧ ಪಾಕಪ್ರಯೋಗಗಳು. ನಮಗೆ ಯಾವತ್ತು ಆಹಾರವು ಮುಖ್ಯ ಎನಿಸುತ್ತದೋ, ಅದನ್ನು ನಾವು ದೈವದ ಹಾಗೆ ಕಾಣಲು ಶುರು ಮಾಡುತ್ತೇವೋ ಅವತ್ತಿಗೆ ನಮ್ಮಗಳ ನಡುವೆ ಎದ್ದಿರುವ ಜಾತಿ, ಧರ್ಮದ ಕೇಡಿನ ಗೋಡೆ ಬಿದ್ದು ಹೋಗುತ್ತದೆ. ಹಾಗೆ ನೋಡಿದರೆ ಮಂಡಕ್ಕಿ, ಮುದಿ, ಪುರಿ ಈ ನೆಲದ ಬಡವರ ಆಹಾರದ ಧರ್ಮದೇವತೆ. ಅದೆಷ್ಟೋ ಹಸಿದ ಹೊಟ್ಟೆಗಳನ್ನು ತುಂಬಿಸುತ್ತಾ, ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲೇ ಅವತಾರಗಳ ಎತ್ತುತ್ತಾ ಎಲ್ಲರ ಕೈಗೂ ಎಟುಕುವ ತಿನಿಸಾಗಿ ಎಲ್ಲ ಪದಾರ್ಥಗಳ ಜೊತೆಗೆ ಹುಳಿಗೆ, ಸಿಹಿಗೆ, ಖಾರಕ್ಕೆ ಕಡೆಗೆ ಕುಡುಕರಿಗೂ ಜೊತೆಯಾಗಿ ಬದುಕಿಸುವ ಪುಣ್ಯಪ್ರಸಾದದಂತೆ ತೋರುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)