ತಬ್ಲೀಗಿ ಸಮಾವೇಶ: 541 ವಿದೇಶಿಯರ ವಿರುದ್ಧ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್ ಸಲ್ಲಿಕೆ
ಹೊಸದಿಲ್ಲಿ, ಮೇ 28: ವೀಸಾ ಷರತ್ತುಗಳನ್ನು ಉಲ್ಲಂಘಿಸಿದ, ಅಕ್ರಮವಾಗಿ ಮತಪ್ರಚಾರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಮತ್ತು ಕೋವಿಡ್-19 ಪಿಡುಗಿನ ಹಿನ್ನೆಲೆಯಲ್ಲಿ ಸರಕಾರದ ಮಾರ್ಗಸೂಚಿಗಳನ್ನು ಧಿಕ್ಕರಿಸಿದ ಆರೋಪದಲ್ಲಿ ದಿಲ್ಲಿಯ ನಿಝಾಮುದ್ದೀನ್ ಮರ್ಕಝ್‌ನಲ್ಲಿ ನಡೆದಿದ್ದ ತಬ್ಲೀಗಿ ಸಮಾವೇಶದಲ್ಲಿ ಭಾಗಿಯಾಗಿದ್ದ ಮೂರು ದೇಶಗಳಿಗೆ ಸೇರಿದ 541 ವಿದೇಶಿ ಪ್ರಜೆಗಳ ವಿರುದ್ಧ 12 ದೋಷಾರೋಪಣ ಪಟ್ಟಿಗಳನ್ನು ದಿಲ್ಲಿ ಪೊಲೀಸರು ಗುರುವಾರ ಇಲ್ಲಿಯ ಮಹಾನಗರ ನ್ಯಾಯಾಲಯದಲ್ಲಿ ಸಲ್ಲಿಸಿದ್ದಾರೆ.
ನ್ಯಾ.ಅರ್ಚನಾ ಬೇನಿವಾಲ್ ಅವರು ಜೂ.25ರಂದು ಈ ದೋಷಾರೋಪಣ ಪಟ್ಟಿಗಳನ್ನು ಪರಿಶೀಲಿಸಲಿದ್ದಾರೆ. ಆರೋಪಿಗಳ ಪೈಕಿ 42 ಜನರು ಮಲೇಷಿಯಾ, 85 ಜನರು ಕಿರ್ಗಿಸ್ತಾನ್ ಮತ್ತು 414 ಜನರು ಇಂಡೋನೇಷಿಯಾಕ್ಕೆ ಸೇರಿದವರಾಗಿದ್ದಾರೆ.
ದೋಷಾರೋಪಣ ಪಟ್ಟಿಗಳಲ್ಲಿ ಆರೋಪಿಗಳ ವಿರುದ್ಧ ಸಾಂಕ್ರಾಮಿಕ ರೋಗಗಳ ಕಾಯ್ದೆ, ವಿಪತ್ತು ನಿರ್ವಹಣೆ ಕಾಯ್ದೆ ಮತ್ತು ಸಿಪಿಸಿಯ ಕಲಂ 144ರಡಿ ನಿಷೇಧಾಜ್ಞೆಗೆ ಸಂಬಂಧಿಸಿದಂತೆ ನಿಯಮಗಳನ್ನು ಉಲ್ಲಂಘಿಸಿದ್ದ ಆರೋಪಗಳನ್ನೂ ಹೊರಿಸಲಾಗಿದೆ. ಇದರ ಜೊತೆಗೆ ಐಪಿಸಿ ಮತ್ತು ವಿದೇಶಿಯರ ಕಾಯ್ದೆಯ ವಿವಿಧ ಕಲಮ್‌ಗಳಡಿಯೂ ಆರೋಪಗಳನ್ನು ಹೇರಲಾಗಿದೆ.
ಕೇಂದ್ರವು ಈ ವಿದೇಶಿಯರ ವೀಸಾಗಳನ್ನು ರದ್ದುಗೊಳಿಸಿ,ಅವರನ್ನು ಕಪ್ಪುಪಟ್ಟಿಗೆ ಸೇರಿಸಿದೆ. ಈ ವಿದೇಶಿ ಪ್ರಜೆಗಳನ್ನು ಈವರೆಗೆ ಬಂಧಿಸಲಾಗಿಲ್ಲ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಒಟ್ಟು 915 ವಿದೇಶಿ ಪ್ರಜೆಗಳ ವಿರುದ್ಧ 47 ದೋಷಾರೋಪಣ ಪಟ್ಟಿಗಳನ್ನು ಸಲ್ಲಿಸಲಾಗಿದೆ.
ದಿಲ್ಲಿ ಪೊಲೀಸರು ಮಂಗಳವಾರ 20 ರಾಷ್ಟ್ರಗಳಿಗೆ ಸೇರಿದ 82 ವಿದೇಶಿಯರ ವಿರುದ್ಧ 20 ಮತ್ತು ಬುಧವಾರ 14 ರಾಷ್ಟ್ರಗಳಿಗೆ ಸೇರಿದ 294 ವಿದೇಶಿಯರ ವಿರುದ್ಧ 15 ದೋಷಾರೋಪಣ ಪಟ್ಟಿಗಳನ್ನು ಸಲ್ಲಿಸಿದ್ದರು.
ನಿಝಾಮುದ್ದೀನ್‌ನಲ್ಲಿ ನಡೆದಿದ್ದ ಧಾರ್ಮಿಕ ಸಮಾವೇಶದಲ್ಲಿ ಭಾಗವಹಿಸಿದ್ದ ನೂರಾರು ತಬ್ಲೀಗಿಗಳು ಕೊರೋನ ವೈರಸ್‌ಗೆ ಪಾಸಿಟಿವ್ ಆದ ಬಳಿಕ ಕಳೆದ ಎಪ್ರಿಲ್‌ನಲ್ಲಿ ದೇಶಾದ್ಯಂತ ಕೋವಿಡ್-19 ಪ್ರಕರಣಗಳಲ್ಲಿ ಏರಿಕೆಯಾಗಿತ್ತು. ವಿದೇಶಿಯರು ಸೇರಿದಂತೆ ಕನಿಷ್ಠ 9,000 ಜನರು ಸಮಾವೇಶದಲ್ಲಿ ಪಾಲ್ಗೊಂಡಿದ್ದು, ಅವರ ಪೈಕಿ ಹಲವರು ನಂತರ ದೇಶದ ವಿವಿಧ ಭಾಗಗಳಿಗೆ ಪ್ರಯಾಣಿಸಿದ್ದರು.
ಈ ವಿದೇಶಿ ಪ್ರಜೆಗಳು ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಆಗಮಿಸಿದ್ದರು ಮತ್ತು ಸಮಾವೇಶದಲ್ಲಿ ಅಕ್ರಮವಾಗಿ ಭಾಗಿಯಾಗಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ. ವೀಸಾ ನಿಯಮಗಳನ್ನು ಉಲ್ಲಂಘಿಸಿ ದ್ದಲ್ಲದೆ ಕೊರೋನ ವೈರಸ್ ಸೋಂಕು ಹರಡಿ ಮರ್ಕಝ್ ನಿವಾಸಿಗಳಿಗೆ ಮತ್ತು ಸಾರ್ವಜನಿಕರ ಜೀವಗಳಿಗೆ ಅಪಾಯದ ಬೆದರಿಕೆಯುಂಟಾಗಿದ್ದ ಸ್ಥಿತಿಗೆ ಕಾರಣರಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.