ಉಡುಪಿ: ಮೂವರ ಗಂಟಲುದ್ರವ ಪರೀಕ್ಷಾ ವರದಿ ಪಾಸಿಟಿವ್-ನೆಗೆಟಿವ್
ಸ್ಯಾಂಪಲ್ ಪರೀಕ್ಷೆ ವಿಧಾನದ ಮೇಲೆ ಸಂಶಯದ ಕರಿನೆರಳು
ಉಡುಪಿ, ಮೇ 29: ಕೋವಿಡ್-19 ಸೋಂಕು ಪತ್ತೆಗೆ ಸದ್ಯ ಇರುವ ಏಕೈಕ ವಿಧಾನವಾದ ಶಂಕಿತ ವ್ಯಕ್ತಿಯ ಗಂಟಲು ದ್ರವ ಮಾದರಿ ಪರೀಕ್ಷಾ ವರದಿಯ ಮೇಲೆ ಸಂಶಯದ ಕರಿನೆರಳು ಮೂಡುವ ಘಟನೆಗಳು ಉಡುಪಿ ಜಿಲ್ಲೆಯಲ್ಲಿ ನಡೆಯುತ್ತಿದೆ. ಇದು ಜಿಲ್ಲೆಯ ಜನರು ಕೊರೋನ ವೈರಸ್ ಸೋಂಕು ಪತ್ತೆ ಹಚ್ಚುವ ಪ್ರಕ್ರಿಯೆ ಕುರಿತಂತೆ ಬಲವಾದ ಸಂಶಯ ತಾಳಲು ಕಾರಣವಾಗುತ್ತಿದೆ.
ಜಿಲ್ಲೆಯಲ್ಲಿ ಈವರೆಗೆ 164 ಪ್ರಕರಣಗಳು ಪಾಸಿಟಿವ್ ಆಗಿ ವರದಿಯಾಗಿವೆ. ಆದರೆ ಇದರಲ್ಲಿ ಮೂರು ಪ್ರಕರಣಗಳ ಪರೀಕ್ಷಾ ಫಲಿತಾಂಶ ಕೆಲವೇ ದಿನಗಳಲ್ಲಿ ತಲೆಕೆಳಗಾಗಿರುವುದೇ ಜನರಿಗೆ ಇವುಗಳ ಬಗ್ಗೆ ಶಂಕೆ ಮೂಡಲು ಪ್ರಮುಖ ಕಾರಣ. ಇದಕ್ಕೆ ಮೂಲಭೂತವಾಗಿ ಯಾರು ಕಾರಣರು, ನಿಜವಾದ ಕಾರಣಗಳೇನು ಎಂಬುದು ತಿಳಿಯದೇ, ಅಥವಾ ಸಂಬಂದಪಟ್ಟವರು ತಿಳಿಸದೇ ಈ ಸಂಶಯ ಇನ್ನಷ್ಟು ಹೆಚ್ಚಲು ಕಾರಣರಾಗುತಿದ್ದಾರೆ.
ಮೊದಲು ಸ್ಯಾಂಪಲ್ ಪರೀಕ್ಷೆ ಪಾಸಿಟಿವ್ ಬಂದು, ಎರಡು-ಮೂರು ದಿನಗಳಲ್ಲಿ ಮತ್ತೊಂದು ಲ್ಯಾಬ್‌ನಲ್ಲಿ ನೆಗೆಟಿವ್ ಬರುವುದು ಪ್ರಾರಂಭಗೊಂಡ ಬಳಿಕ ಇವೆಲ್ಲವೂ ನಡೆಯುತ್ತಿದೆ. ನಿಜವಾಗಿ ಇದಕ್ಕೆ ಪ್ರಯೋಗಾಲಯದ ಎಡವಟ್ಟು ಕಾರಣವೇ ಎಂಬುದನ್ನು ಈವರೆಗೆ ಜಿಲ್ಲಾಡಳಿತವಾಗಲೀ, ಆರೋಗ್ಯ ಇಲಾಖೆಯಾಗಲೀ ಸ್ಪಷ್ಟಪಡಿಸಿಲ್ಲ.
ಮೊದಲು ಉಡುಪಿ ಜಿಲ್ಲೆಯ ಸ್ಯಾಂಪಲ್‌ಗಳನ್ನು ಶಿವಮೊಗ್ಗ, ಹಾಸನ, ಬೆಂಗಳೂರುಗಳಿಗೆ ಕಳುಹಿಸಲಾಗುತ್ತಿತ್ತು. ಬಳಿಕ ಮಂಗಳೂರಿನ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಕೋವಿಡ್-19 ಪ್ರಯೋಗಾಲಯ ಪ್ರಾರಂಭಗೊಂಡ ಬಳಿಕ ಅಲ್ಲಿಗೆ ಸ್ಯಾಂಪಲ್‌ಗಳನ್ನು ಕಳುಹಿಸಲಾರಂಭವಾಯಿತು. ಈ ತಿಂಗಳ ಪ್ರಾರಂಭದಲ್ಲಿ ಮಣಿಪಾಲ ಕೆಎಂಸಿಯಲ್ಲೂ ಕೋವಿಡ್-19 ಪತ್ತೆಗೆ ಪ್ರಯೋಗಾಲಯ ತೆರೆಯಲು ಐಸಿಎಂಆರ್ ಅನುಮತಿ ನೀಡಿದ ಬಳಿಕ ಘಟನೆಗಳು ನಡೆಯ ತೊಡಗಿವೆ.
ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕ್ಯಾನ್ಸರ್ ಚಿಕಿತ್ಸೆಗೆಂದು ಮೇ 17ರಂದು ದಾಖಲಾದ ಚಿತ್ರದುರ್ಗದ 17ರ ಹರೆಯದ ಬಾಲಕಿಗೆ ವೆನ್ಲಾಕ್‌ನಲ್ಲಿ ಕೋವಿಡ್ ಪರೀಕ್ಷೆ ನಡೆಸಿದಾಗ ಅದು ಮೇ 19ರಂದು ಪಾಸಿಟಿವ್ ಆಗಿ ಬಂದಿತ್ತು. ಆದರೆ ಅದನ್ನು ಕೆಎಂಸಿ ಲ್ಯಾಬ್‌ನಲ್ಲಿ 24 ಗಂಟೆಗಳ ಅಂತರದಲ್ಲಿ ಎರಡು ಬಾರಿ ಪರೀಕ್ಷಿಸಿದಾಗ ಮೇ 22ರಂದು ನೆಗೆಟಿವ್ ಆಗಿ ಬಂದಿತ್ತು.!
ಅದೇ ರೀತಿ ಮೇ 24ರಂದು ಕಾರ್ಕಳದ 22ರ ಪ್ರಾಯದ ತುಂಬು ಗರ್ಭಿಣಿಗೂ ಪಾಸಿಟಿವ್ ವರದಿಯನ್ನು ವೆನ್ಲಾಕ್ ಆಸ್ಪತ್ರೆ ನೀಡಿತ್ತು. ಆದರೆ ಆಕೆಗೆ ಪ್ರಯಾಣದ ಹಾಗೂ ಶಂಕಿತ ಕೋವಿಡ್ ವ್ಯಕ್ತಿಗಳ ಸಂಪರ್ಕವೇ ಇಲ್ಲದ ಕಾರಣ ರಾಜ್ಯ ಮಟ್ಟದಲ್ಲಿ ಮರು ಪರೀಕ್ಷೆ ನಡೆಸಿದಾಗ ಎರಡು ಸ್ಯಾಂಪಲ್‌ಗಳು ನೆಗೆಟಿವ್ ಫಲಿತಾಂಶ ನೀಡಿದ್ದವು ಎನ್ನಲಾಗಿದೆ.
ಇದು ಜಿಪಂ ಸಿಬ್ಬಂದಿಯಾದ 30ರ ಹರೆಯದ ಯುವಕನಲ್ಲೂ ನಡೆದಿತ್ತು. ಅವರ ಮೊದಲ ಪ್ರಯೋಗಾಲಯ ವರದಿ ಪಾಸಿಟಿವ್ ಬಂದಿದ್ದರೆ, ಮೇ 27ರಂದು ಕೆಎಂಸಿಗೆ ಕಳುಹಿಸಿದ ವರದಿ ನೆಗೆಟಿವ್ ಆಗಿ ಬಂದಿತ್ತು. ಅಲ್ಲಿಗೆ ಈ ಮೂವರಲ್ಲಿ ಕೋವಿಡ್ ಸೋಂಕು ಇರಲಿಲ್ಲ ಎಂದು ಇಲಾಖೆ ಖಚಿತಪಡಿಸಿ ಕೊಂಡಿತ್ತು.
ಆದರೆ ಈ ಮೂರು ಘಟನೆಗಳು ಕೋವಿಡ್-19ರ ಪತ್ತೆಗಾಗಿ ನಡೆಸುವ ಗಂಟಲು ದ್ರವ ಮಾದರಿಗಳ ಪರೀಕ್ಷಾ ವಿಧಾನದ ಮೇಲೆಯೇ ಸಂಶಯದ ಕರಿನೆರಳು ಬೀಳುವಂತೆ ಮಾಡಿದೆ. ಎರಡು ಪ್ರಯೋಗಾಲಯಗಳಲ್ಲಿ 3-4ದಿನಗಳ ಅಂತರದಲ್ಲಿ ನಡೆಸುವ ಪರೀಕ್ಷೆ ತದ್ವಿರುದ್ಧದ ಫಲಿತಾಂಶ ನೀಡಲು ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನು ಜನಸಾಮಾನ್ಯರು ಎತ್ತುವಂತೆ ಮಾಡಿವೆ. ಹಾಗೂ ಪರೀಕ್ಷಾ ವಿಧಾನವೇ ಸಂಶಯದ ಸುಳಿಗೆ ಸಿಲುಕುವಂತಾಗಿದೆ.
ಡಿಎಚ್‌ಓ ಸ್ಪಷ್ಟೀಕರಣ
ಜಿಲ್ಲೆಯ ಮೂರು ಪ್ರಕರಣಗಳ ಪಾಸಿಟಿವ್- ನೆಗೆಟಿವ್ ಪ್ರಸಂಗ ಜನರಲ್ಲಿ ಆರೋಗ್ಯ ಇಲಾಖೆಯ ಅನುಸರಿಸುವ ಪರೀಕ್ಷಾ ವಿಧಾನವನ್ನೇ ಸಂಶಯದ ದೃಷ್ಟಿಯಿಂದ ನೋಡುವಂತೆ ಮಾಡುತ್ತಿಲ್ಲವೇ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ಅವರ ಮುಂದಿಟ್ಟಾಗ ಈ ಸಂಶಯವನ್ನು ನಿರಾಕರಿಸಿದರು.
ಕೊರೋನ ಎಂಬುದು ಸಾಮಾನ್ಯ ಶೀತಜ್ವರದಂತೆ. ಮೊದಲ ಬಾರಿ ಪರೀಕ್ಷಿಸುವಾಗ ಕೊರೋನ ವೈರಸ್‌ಗಳು ಅಧಿಕವಾಗಿದ್ದು ಆತನ ಮಾದರಿ ಪಾಸಿಟಿವ್ ಬಂದರೂ, ಬೇರೆ ಬೇರೆ ಕಾರಣಗಳಿಗಾಗಿ 3-4ದಿನ ಬಿಟ್ಟು ಮರು ಪರೀಕ್ಷೆ ನಡೆಸಿದಾಗ, ಆರೋಗ್ಯವಂತನ ದೇಹದ ಪ್ರತಿರೋಧ ಶಕ್ತಿಯಿಂದ ಅದರ ಅಂಶ ಕಡಿಮೆಯಾಗಿ ನೆಗೆಟಿವ್ ಬುವ ಸಾಧ್ಯತೆ ಇರುತ್ತದೆ ಎಂದರು.
ಅಲ್ಲದೇ ಉಡುಪಿ ಜಿಲ್ಲೆಯ 164 ಮಂದಿ ಪಾಸಿಟಿವ್ ಬಂದವರಲ್ಲಿ ಕೇವಲ ಆರು ಮಂದಿಯಲ್ಲಿ ಮಾತ್ರ ಮೂಲ ಕೊರೋನದ ಗುಣಲಕ್ಷಣಗಳಿದ್ದವು. ಮಾ.29ರವರೆಗೆ ಪಾಸಿಟಿವ್ ಬಂದ ಮೊದಲ ಮೂವರಲ್ಲಿ ಹಾಗೂ ಅನಂತರ ವರದಿಯಾದ 161 ಪ್ರಕರಣಗಳಲ್ಲಿ ಕೇವಲ ಮೂವರಲ್ಲಿ ಮಾತ್ರ ಕೊರೋನ ಸಿಂಫ್ಟಮ್ ಇತ್ತು. ಉಳಿದ ಯಾರಲ್ಲೂ ಅದು ಕಂಡಿರಲಿಲ್ಲ. ಇದೂ ಸಹ ಎರಡನೇ ಬಾರಿ ಪರೀಕ್ಷೆ ನಡೆಸಿದಾಗ ನೆಗೆಟಿವ್ ಬರಲು ಕಾರಣವಾಗಿರಬಹುದು ಎಂದರು.
ಒಟ್ಟಿನಲ್ಲಿ ಕೋವಿಡ್-19ರ ಅಬ್ಬರದಲ್ಲಿ ಪಾಸಿಟಿವ್-ನೆಗೆಟಿವ್‌ನ ಕಣ್ಣಮುಚ್ಚಾಲೆಯಾಟ ಜನರಲ್ಲಿ ವ್ಯವಸ್ಥೆಯ ಕುರಿತಂತೆ ಸಂಶಯವನ್ನಂತೂ ಹುಟ್ಟುಹಾಕಿದೆ.