ಈ ಬಿಸಿಲ ಧಗೆಯಲ್ಲಿ ಮೂಸಂಬಿ ರಸ ಅತ್ಯುತ್ತಮ ಪಾನೀಯ
ಈ ಹಣ್ಣಿನ ಆರೋಗ್ಯಲಾಭಗಳು ನಿಮಗೆ ಗೊತ್ತಿರಲಿ
ಬಿರುಬೇಸಿಗೆಯ ಈ ದಿನಗಳಲ್ಲಿ ನಮ್ಮ ಶರೀರದಲ್ಲಿ ದ್ರವಾಂಶ ಕಡಿಮೆಯಾಗದಂತೆ ಕಾಳಜಿ ವಹಿಸುವುದು ಮುಖ್ಯವಾಗಿದೆ, ಇಲ್ಲದಿದ್ದರೆ ನಿರ್ಜಲೀಕರಣ ಸಮಸ್ಯೆಯುಂಟಾಗುತ್ತದೆ. ಶರೀರಕ್ಕೆ ದ್ರವಾಂಶದ ಜೊತೆಗೆ ನಮ್ಮ ಪೋಷಕಾಂಶ ಮತ್ತು ಶಕ್ತಿ ಅಗತ್ಯಗಳನ್ನೂ ಪೂರೈಸುವ ಹಣ್ಣಿನ ರಸಗಳು ಬೇಸಿಗೆಯಲ್ಲಿ ಅತ್ಯುತ್ತಮ ಪಾನೀಯಗಳಾಗಿವೆ. ದಿನಕ್ಕೆ ಕನಿಷ್ಠ ಒಂದು ಸಲವಾದರೂ ಒಂದು ಗ್ಲಾಸ್ ತಾಜಾ ಹಣ್ಣಿನ ರಸವನ್ನು ಸೇವಿಸುವುದು ಅಗತ್ಯ. ಆದರೆ ಬಿಸಿ ಮತ್ತು ಆರ್ದ್ರವಾದ ಋತುವಿನಲ್ಲಿ ಯಾವ ಹಣ್ಣಿನ ರಸ ಸೇವನೆಗೆ ಸೂಕ್ತ? ಅನುಮಾನವೇ ಇಲ್ಲ, ಅದು ಮೂಸಂಬಿ ರಸ. ಸಿಟ್ರಸ್ ಕುಟುಂಬಕ್ಕೆ ಸೇರಿದ ಈ ಹಣ್ಣು ಶರೀರವನ್ನು ಜಲೀಕರಣ ಮತ್ತು ತಂಪುಗೊಳಿಸುವುದು ಮಾತ್ರವಲ್ಲ, ಅದಕ್ಕಿಂತ ಹೆಚ್ಚಿನ ಆರೋಗ್ಯಲಾಭಗಳನ್ನು ನೀಡುತ್ತದೆ. ಇಲ್ಲಿವೆ ಈ ಕುರಿತು ಮಾಹಿತಿಗಳು......
ತನ್ನ ಪೋಷಕಾಂಶ ಮೌಲ್ಯದಿಂದಾಗಿ ಮೂಸಂಬಿ ರಸವು ಬೇಸಿಗೆ ಕಾಲದ ಹಣ್ಣಿನ ರಸಗಳು ಮತ್ತು ಪಾನೀಯಗಳಲ್ಲಿ ಅಗ್ರ ಸ್ಥಾನಕ್ಕೆ ಅರ್ಹವಾಗಿದೆ. ನಾರು, ವಿಟಾಮಿನ್ ಸಿ, ಕ್ಯಾಲ್ಸಿಯಂ, ಕಬ್ಬಿಣ, ಪೊಟ್ಯಾಷಿಯಂ ಮತ್ತು ತಾಮ್ರಗಳನ್ನು ಸಮೃದ್ಧವಾಗಿ ಹೊಂದಿರುವ ಈ ಹಣ್ಣಿನ ಅತ್ಯುತ್ತಮ ಅಂಶವೆಂದರೆ ಅದು ಕಡಿಮೆ ಕ್ಯಾಲರಿಗಳನ್ನು ಒಳಗೊಂಡಿದೆ. ಒಂದು ದೊಡ್ಡ ಗಾತ್ರದ ಮೂಸಂಬಿಯಲ್ಲಿ ಗರಿಷ್ಠವೆಂದರೆ 43 ಕ್ಯಾಲರಿಗಳು ಮಾತ್ರ ಇರುತ್ತವೆ.
► ಜೀರ್ಣಕ್ರಿಯೆ ಮತ್ತು ದೇಹತೂಕ ಇಳಿಸಲು ನೆರವಾಗುತ್ತದೆ
ಬೇಸಿಗೆಯಲ್ಲಿ ಜೀರ್ಣ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತಿರುತ್ತವೆ. ಅನಾರೋಗ್ಯಕರವಾದ ಏನನ್ನಾದರೂ ತಿಂದಾಗ ಅದು ಕರುಳಿನಲ್ಲಿ ಕಿರಿಕಿರಿಯನ್ನುಂಟು ಮಾಡುತ್ತದೆ. ಆಗಾಗ್ಗೆ ಅತಿಸಾರ, ಮಲಬದ್ಧತೆ ಇತ್ಯಾದಿಗಳು ಕಾಣಿಸಿಕೊಳ್ಳುತ್ತಿದ್ದರೆ ಅಂತಹವರು ಮೂಸಂಬಿ ರಸವನ್ನು ಅಗತ್ಯವಾಗಿ ಸೇವಿಸಬೇಕು. ಅದರಲ್ಲಿರುವ ಫ್ಲಾವನಾಯ್ಡಾಗಳು ಜಠರದಲ್ಲಿಯ ಪಿತ್ತರಸ,ಜೀರ್ಣ ರಸಗಳು ಮತ್ತು ಆಮ್ಲಗಳನ್ನು ನಿಯಂತ್ರಿಸುತ್ತವೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಮೂಸಂಬಿಯು ಕರುಳಿನ ಚಲನವಲನಗಳನ್ನು ಉತ್ತಮಗೊಳಿಸುತ್ತದೆ ಮತ್ತು ಶರೀರವನ್ನು ವಿಷಮುಕ್ತಗೊಳಿಸಲು ಆಮ್ಲಗಳ ಸ್ರವಿಸುವಿಕೆಯನ್ನು ನಿಯಂತ್ರಿಸುತ್ತದೆ. ಈ ಬೇಸಿಗೆಯಲ್ಲಿ ಕೆಲವು ಕೆಜಿಗಳಷ್ಟು ತೂಕ ಕಡಿಮೆ ಮಾಡಿಕೊಳ್ಳಲು ಬಯಸಿರುವವರು ತಮ್ಮ ಆಹಾರಕ್ರಮದಲ್ಲಿ ಮೂಸಂಬಿಯನ್ನು ಅಗತ್ಯವಾಗಿ ಸೇರಿಸಿಕೊಳ್ಳಬೇಕು.
► ನಿರ್ಜಲೀಕರಣದ ವಿರುದ್ಧ ಹೋರಾಡುತ್ತದೆ
ಅತಿಯಾದ ತಾಪಮಾನವು ಶರೀರದಲ್ಲಿಯ ನೀರಿನ ಮಟ್ಟವನ್ನು ಮತ್ತು ಶಕ್ತಿಯನ್ನು ಕುಂದಿಸುವುದರಿಂದ ಬೇಸಿಗೆಯಲ್ಲಿ ನಿರ್ಜಲೀಕರಣವು ಸಾಮಾನ್ಯ ಸಮಸ್ಯೆಯಾಗಿದೆ. ನೀರನ್ನು ಆಗಾಗ್ಗೆ ಸೇವಿಸುತ್ತಿರುವುದು ಈ ಸಮಸ್ಯೆಯಿಂದ ಪಾರಾಗಲು ಅತ್ಯುತ್ತಮ ಮಾರ್ಗವಾಗಿದೆ,ಆದರೆ ನಿಮ್ಮಲ್ಲಿ ಶಕ್ತಿಯ ಕೊರತೆಯುಂಟಾದಾಗ ಮತ್ತು ಅದನ್ನು ತಕ್ಷಣ ಹೆಚ್ಚಿಸಬೇಕು ಎಂದಿದ್ದರೆ ಒಂದು ಗ್ಲಾಸ್ ಮೂಸಂಬಿ ರಸವನ್ನು ಸೇವಿಸಿ. ಈ ಹಣ್ಣಿನ ರಸದ ಸೇವನೆಯು ಆರೋಗ್ಯಕ್ಕೆ ಹಲವಾರು ರೀತಿಗಳಲ್ಲಿ ಅನಾರೋಗ್ಯಕರವಾಗಿರುವ ನಿಮ್ಮ ಇಂಗಾಲೀಕೃತ ಪಾನಿಯಗಳ ಸೇವನೆಯ ಪ್ರಮಾಣವನ್ನೂ ತಗ್ಗಿಸುತ್ತದೆ.
► ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಫ್ಲು, ಸೋಂಕುಗಳ ವಿರುದ್ಧ ಹೋರಾಡಲು ನಮಗೆ ಬಲವಾದ ನಿರೋಧಕ ವ್ಯವಸ್ಥೆಯು ಅಗತ್ಯವಿದೆ. ಮೂಸಂಬಿಯು ಅಧಿಕ ಪ್ರಮಾಣದಲ್ಲಿ ಲಿಮೋನಿನ್ ಗ್ಲುಕೊಸೈಡ್‌ನ್ನು ಹೊಂದಿದೆ. ಫ್ಲಾವನಾಯ್ಡಾ ಆಗಿರುವ ಇದು ನಂಜುನಿವಾರಕ,ಉತ್ಕರ್ಷಣ ನಿರೋಧಕ,ಬ್ಯಾಕ್ಟೀರಿಯಾ ನಿರೋಧಕ ಮತ್ತು ಕ್ಯಾನ್ಸರ್ ನಿರೋಧಕ ಗುಣಗಳನ್ನು ಹೊಂದಿದೆ. ಇದರರ್ಥ ಮೂಸಂಬಿಯು ನಿಮ್ಮ ಶರೀರಕ್ಕೆ ಹಲವಾರು ಆರೋಗ್ಯ ಸಮಸ್ಯೆಗಳಿಂದ ರಕ್ಷಣೆ ನೀಡುತ್ತದೆ.
► ಕಣ್ಣುಗಳಿಗೆ ಸೋಂಕು ತಡೆಯುತ್ತದೆ
ಮೂಸಂಬಿಯು ನಮ್ಮ ದೃಷ್ಟಿಯ ಮೇಲೂ ಅಚ್ಚರಿಯ ಪರಿಣಾಮವನ್ನು ಬೀರುತ್ತದೆ. ಅದು ಬ್ಯಾಕ್ಟೀರಿಯಾ ನಿರೋಧಕ ಗುಣಗಳನ್ನು ಹೊಂದಿರುವುದರಿಂದ ವಿವಿಧ ಕಣ್ಣು ಸೋಂಕುಗಳು ಮತ್ತು ಗ್ಲಾಕೋಮಾ,ಕ್ಯಾಟರಾಕ್ಟ್‌ನಂತಹ ಕಣ್ಣಿನ ರೋಗಗಳ ವಿರುದ್ಧ ರಕ್ಷಣೆ ನೀಡುತ್ತದೆ.