ಕೋವಿಡ್-19 ಪಾಸಿಟಿವ್ ಎಂದು ಎಂಟು ಮಂದಿಗೆ ತಪ್ಪು ವರದಿ ನೀಡಿದ ನೊಯ್ಡಾದ ಖಾಸಗಿ ಲ್ಯಾಬ್‍ಗಳು
ನೊಯ್ಡಾ: ಇಲ್ಲಿನ ಗೌತಮ್ ಬುದ್ಧ್ ನಗರದ ಎಂಟು ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷೆ ನಡೆಸಿದ ಅಲ್ಲಿನ ಕೆಲ ಖಾಸಗಿ ಪ್ರಯೋಗಾಲಯಗಳು ಅವರಿಗೆ ಕೋವಿಡ್-19 ಪಾಸಿಟಿವ್ ಎಂದು ತಪ್ಪಾಗಿ ವರದಿ ನೀಡಿರುವುದು ಆ ವ್ಯಕ್ತಿಗಳ ಗಂಟಲು ದ್ರವ ಮಾದರಿಗಳನ್ನು ಸರಕಾರಿ ಲ್ಯಾಬ್‍ಗಳಲ್ಲಿ ಪರೀಕ್ಷೆ ನಡೆಸಿದಾಗ ತಿಳಿದು ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಎಂಟು ಮಂದಿಯನ್ನು ಇದೀಗ ಅವರು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಮಾಡಲಾಗಿದ್ದು, ತಪ್ಪು ವರದಿ ನೀಡಿದ್ದ ಖಾಸಗಿ ಲ್ಯಾಬ್‍ಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಖಾಸಗಿ ಲ್ಯಾಬ್‍ಗಳು ನೀಡುವ ವರದಿಗಳು ಶಂಕಾಸ್ಪದವಾಗಿದ್ದರೆ ಅವುಗಳನ್ನು ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಬಯಲಾಜಿಕಲ್ಸ್ ಸಹಿತ ಗವರ್ನ್‍ಮೆಂಟ್ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸಸ್ ಇಲ್ಲಿ ಪರಿಶೀಲಿಸಲಾಗುತ್ತಿದೆ.
ಯಾರನ್ನು ಪರೀಕ್ಷೆಗೊಳಪಡಿಸಬೇಕು ಎಂಬುದರ ಕುರಿತು ಐಸಿಎಂಆರ್ ಮಾನದಂಡಗಳನ್ನು ಅನುಸರಿಸಬೇಕು ಹಾಗೂ ಐಸಿಎಂಆರ್ ಮಾನ್ಯತೆ ಪಡೆದ ಲ್ಯಾಬ್‍ಗಳಲ್ಲಿ ಮಾತ್ರ ಪರೀಕ್ಷೆ ನಡೆಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲ್ಯಾಬ್‍ಗಳು ತಪ್ಪಾಗಿ ವರದಿ ನೀಡಿದ ಪ್ರಕರಣ ಗೌತಮ್ ಬುದ್ಧ್ ನಗರ್ ಪ್ರದೇಶದಲ್ಲಿ ಇದೇ ಮೊದಲ ಬಾರಿ ವರದಿಯಾಗಿದ್ದು ಈ ಹಿಂದೆ ದಿಲ್ಲಿ, ರಾಜಸ್ಥಾನ ಹಾಗೂ ಉತ್ತರ ಪ್ರದೇಶದ ಕೆಲವೆಡೆ ತಪ್ಪಾದ ವರದಿಗಳನ್ನು ನೀಡಿದ ಪ್ರಕರಣಗಳು ಬೆಳಕಿಗೆ ಬಂದಿದ್ದವು.