ವೈಟ್‌ಹೌಸ್ ಎದುರು ಭಾರೀ ಪ್ರತಿಭಟನೆ ವೇಳೆ ಟ್ರಂಪ್‌ರನ್ನು ಭೂಗತ ಬಂಕರ್‌ನೊಳಗೆ ಕರೆದೊಯ್ಯಲಾಗಿತ್ತು: ವರದಿ
ವಾಷಿಂಗ್ಟನ್, ಜೂ.1: ವಾಷಿಂಗ್ಟನ್ ಡಿಸಿಯ ವೈಟ್‌ಹೌಸ್ ಹೊರಗೆ ಶುಕ್ರವಾರ ರಾತ್ರಿ ಪ್ರತಿಭಟನಾಕಾರರು ಜಮಾಯಿಸುತ್ತಿದ್ದಂತೆಯೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಸ್ವಲ್ಪ ಸಮಯ ವೈಟ್‌ಹೌಸ್‌ನ ಭೂಗತ ಬಂಕರ್‌ನೊಳಗೆ ಕರೆದೊಯ್ಯಲಾಗಿತ್ತು ಎಂದು 'ದಿ ನ್ಯೂಯಾರ್ಕ್ ಟೈಮ್ಸ್' ವರದಿ ಮಾಡಿದೆ.
ಟ್ರಂಪ್ ಬಂಕರ್‌ನಿಂದ ಹೊರಗೆ ಬರುವ ಮೊದಲು ಸುಮಾರು 1 ಗಂಟೆಯ ತನಕ ಅಲ್ಲಿದ್ದರು.ಶುಕ್ರವಾರ ನೂರಾರು ಜನರು ವೈಟ್ ಹೌಸ್‌ನತ್ತ ಧಾವಿಸಿದಾಗ ಸೀಕ್ರೆಟ್ ಸರ್ವಿಸ್ ಹಾಗೂ ಅಮೆರಿಕದ ಪಾರ್ಕ್ ಪೊಲೀಸ್ ಅವರನ್ನು ತಡೆದರು .ಶುಕ್ರವಾರ ರಾತ್ರಿ ವೈಟ್ ಹೌಸ್‌ನ ಹೊರಗೆ ಜನರು ದೊಡ್ಡ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸಿದ್ದನ್ನು ನೋಡಿ ಟ್ರಂಪ್ ಅವರ ತಂಡ ಬೆಚ್ಚಿಬಿದ್ದಿತ್ತು ಎಂದು ಅಮೆರಿಕದ ದಿನಪತ್ರಿಕೆ ವರದಿ ಮಾಡಿದೆ.
ಮೆಲೆನಿಯಾ ಟ್ರಂಪ್ ಹಾಗೂ ಬರೊನ್ ಟ್ರಂಪ್‌ರನ್ನು ಡೊನಾಲ್ಡ್ ಟ್ರಂಪ್ ಜೊತೆಗೆ ಭೂಗತ ಬಂಕರ್‌ನೊಳಗೆ ಕರೆದೊಯ್ಯಲಾಗಿತ್ತೇ ಎಂಬ ಕುರಿತು ಸ್ಪಷ್ಟವಾಗಿಲ್ಲ.
ಆಫ್ರಿಕ-ಅಮೆರಿಕದ ಪ್ರಜೆ ಜಾರ್ಜ್ ಫ್ಲಾಯ್ಡ್ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ ಬಳಿಕ ಅಮೆರಿಕದಾದ್ಯಂತ ಪ್ರತಿಭಟನೆ ಹಾಗೂ ಹಿಂಸಾಚಾರ ಮುಂದುವರಿದಿದೆ. ನ್ಯಾಶನಲ್ ಗಾರ್ಡ್ ಮೆಂಬರ್ಸ್ ವಾಷಿಂಗ್ಟನ್ ಡಿಸಿ ಹಾಗೂ 15 ರಾಜ್ಯಗಳಲ್ಲಿ ಸಕ್ರಿಯರಾಗಿದ್ದಾರೆ.