ನೆಲೆ ತಪ್ಪಿದ ವಲಸೆ ಕಾರ್ಮಿಕರ ಕಣ್ಣೀರಿನ ಕತೆ
ಅನೇಕರು ವಲಸೆ ಕಾರ್ಮಿಕರಿಗೆ ರೇಷನ್ ಕಿಟ್, ಊಟದ ಪಾಕೇಟು ನೀಡುತ್ತಿದ್ದಾರೆ. ಇದು ತಾತ್ಕಾಲಿಕವಾಗಿ ಸರಿಯಾದ ನೆರವು. ಆದರೆ, ಕೊಡುವವರು ಎಷ್ಟು ದಿನ ಕೊಡುತ್ತಾರೆ? ಇದು ವಲಸೆ ಕಾರ್ಮಿಕರ ಸಮಸ್ಯೆಗೆ ಶಾಶ್ವತ ಪರಿಹಾರವಲ್ಲ. ವಲಸೆ ಕಾರ್ಮಿಕರು ತಾವು ಜನಿಸಿದ ದೇಶದಲ್ಲಿ ಸ್ವಾಭಿಮಾನದಿಂದ ಬದುಕಬೇಕಾದರೆ ಅವರಿಗೆ ಸೂಕ್ತ ಉದ್ಯೋಗಾವಕಾಶ ಒದಗಿಸಬೇಕು. ಸಂಪತ್ತಿನ ಸಮಾನ ಹಂಚಿಕೆಯಾಗಬೇಕು. ಸಮಾನತೆಯ ಸಮಾಜ ನಿರ್ಮಾಣವಾಗಬೇಕು. ಅದೊಂದೇ ಪರಿಹಾರ.
ಅಧಿಕಾರಕ್ಕೆ ಬಂದ ವಾರ್ಷಿಕೋತ್ಸವದ ಸಂಭ್ರಮದ ಆಚರಣೆಯಲ್ಲಿ ತೇಲಾಡುತ್ತಿರುವ ಕೇಂದ್ರದ ಬಿಜೆಪಿ ಸರಕಾರ ವಲಸೆ ಕಾರ್ಮಿಕರನ್ನು ನಡೆಸಿಕೊಂಡ ರೀತಿಯನ್ನು ಈ ದೇಶ ಎಂದೂ ಮರೆಯುವುದಿಲ್ಲ. ದಿಢೀರನೇ ಲಾಕ್‌ಡೌನ್ ಘೋಷಿಸಿ ದುಡಿದುಂಡು ಜೀವಿಸುವ ಶ್ರಮಜೀವಿಗಳ ಬದುಕನ್ನು ಮೂರಾಬಟ್ಟೆ ಮಾಡಿದ್ದು ಎಲ್ಲರಿಗೂ ತಿಳಿದ ಸಂಗತಿ. ಕಾಲ್ನಡಿಗೆಯಲ್ಲಿ ಸಾವಿರಾರು ಮೈಲಿ ನಡೆದು ಊರು ಸೇರಿದೆ. ನಡುವೆ ಬೀದಿ ಹೆಣವಾದವರ ಗೋಳಿನ ಕತೆ ಎಲ್ಲರಗೂ ತಿಳಿದಿದೆ.
ಎಪ್ರಿಲ್ ತಿಂಗಳಲ್ಲಿ ಇದನ್ನೆಲ್ಲ ಸುಮ್ಮನೆ ನಿರ್ಲಿಪ್ತವಾಗಿ ನೋಡಿದ ಸರಕಾರ ಮೇ ಮೊದಲ ವಾರದಿಂದ ಶ್ರಮಿಕ್ ರೈಲು ಓಡಿಸಲು ಮುಂದಾಯಿತು. ನ್ಯಾಯವಾಗಿ ಬೀದಿಗೆ ಬಿದ್ದ ಈ ವಲಸೆ ಕಾರ್ಮಿಕರನ್ನು ಉಚಿತವಾಗಿ ಅವರವರ ಊರಿಗೆ ತಲುಪಿಸಬೇಕಾಗಿತ್ತು. ಆ ದೊಡ್ಡತನ ತೋರಿಸದ ಸರಕಾರ ವಲಸೆ ಕಾರ್ಮಿಕರಿಂದ ಪ್ರಯಾಣ ವೆಚ್ಚವನ್ನು ವಸೂಲಿ ಮಾಡಿತು. ನಂತರ ಇದನ್ನು ರಾಜ್ಯ ಸರಕಾರಗಳ ತಲೆಗೆ ಕಟ್ಟಿತು. ಶ್ರಮಿಕ್‌ರೈಲು ಗಳೇನೋ ಆರಂಭವಾದವು.
ಆದರೆ, ಅವುಗಳಲ್ಲಿ ಬಹುತೇಕ ರೈಲುಗಳು ದಿಕ್ಕು ತಪ್ಪಿಎಲ್ಲೆಲ್ಲೋ ಹೋದವು. ಗುಜರಾತ್‌ನಿಂದ ಬಿಹಾರಕ್ಕೆ ಹೋಗಬೇಕಿದ್ದ ರೈಲು ದಿಕ್ಕು ತಪ್ಪಿ ಬೆಂಗಳೂರಿಗೆ ಬಂತು. ಸೂರತ್‌ನಿಂದ ಬಿಹಾರದ ಚಾಪ್ರಾಕ್ಕೆ ಹೋಗಬೇಕಿದ್ದ ರೈಲು ಒಡಿಶಾಗೆ ಬಂದು ತಲುಪಿತು. ಅಲ್ಲಿಂದ ಮತ್ತೆ ವಾಪಸ್ ಪಯಣ. ಹೀಗಾಗಿ ತುಂಬ ವಿಳಂಬವಾಗಿ ಈ ಜನ ತಮ್ಮ ಊರುಗಳನ್ನು ಸೇರಿದರು. 60 ತಾಸುಗಳ ದೀರ್ಘ ಪಯಣದಲ್ಲಿ ಅನ್ನ, ನೀರಿಲ್ಲದೆ 40 ಜನರು ಅಸುನೀಗಿದರು.
ಹೀಗೆ ರೈಲುಗಳು ದಾರಿ ತಪ್ಪಿಹೋಗಬೇಕಾದ ಸ್ಥಳ ಬಿಟ್ಟು ಎಲ್ಲೆಲ್ಲೋ ಹೋಗಲು ಕಾರಣವೇನು? ದೇಶದಲ್ಲಿ ಎಲ್ಲ ರೈಲುಗಳು ಓಡಾಡುತ್ತಿರುವಾಗಲೇ ಇಂತಹ ಅವಾಂತರವಾಗಿರಲಿಲ್ಲ. ಈಗ ಶ್ರಮಿಕ್ ರೈಲುಗಳು ಮಾತ್ರ ಓಡಾಡುವಾಗ ಅದೂ ಅತ್ಯಾಧುನಿಕ ಸಂಪರ್ಕ ವ್ಯವಸ್ಥೆ ಇರುವ ಈ ಕಾಲದಲ್ಲಿ ಹೀಗೇಕಾಯಿತು? ಈ ಬಗ್ಗೆ ಯಾವುದೇ ವಿಚಾರಣೆ ನಡೆಯಲಿಲ್ಲ.
ಅನ್ನ ನೀರಿಲ್ಲದೇ ಸತ್ತವರು ನಲವತ್ತು ಮಾತ್ರವಲ್ಲ, ಎಂಬತ್ತು ಎಂದು ತಡವಾಗಿ ಗೊತ್ತಾದರೂ ಪ್ರಧಾನಿಯಾಗಲಿ, ಗೃಹ ಸಚಿವರಾಗಲಿ, ಕನಿಷ್ಠ ರೈಲ್ವೆ ಸಚಿವರಾಗಲಿ ಈ ವಿಚಾರವನ್ನು ವ್ಯಕ್ತಪಡಿಸಲಿಲ್ಲ. ಅದೇ ಚುನಾವಣೆ ಸಂದರ್ಭವಾಗಿದ್ದರೆ ಅವರು ಅನುಕಂಪದ ನಾಟಕವಾಡುತ್ತಿದ್ದರು. ರೈಲುಗಳ ದಿಕ್ಕು ತಪ್ಪಿದ ಓಡಾಟದ ಬಗ್ಗೆ ತನಿಖೆಯೂ ನಡೆಯಲಿಲ್ಲ.
ಹಿಂದೆ ನೆಹರೂ ಕಾಲದಲ್ಲಿ ರೈಲು ಸಚಿವರಾಗಿದ್ದ ಲಾಲ್ ಬಹದ್ದೂರ್‌ಶಾಸ್ತ್ರಿ ಒಂದು ಸಣ್ಣ ರೈಲು ಅಪಘಾತ ಸಂಭವಿಸಿದ್ದಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಈಗ ರೈಲ್ವೆ ಸುರಕ್ಷತಾ ದಳ, ‘ವಲಸೆ ಕಾರ್ಮಿಕರು ಹಸಿವಿನಿಂದ, ನೀರಿಲ್ಲದೆ ಸತ್ತಿಲ್ಲ’ ಎಂದು ಕಾಟಾಚಾರದ ಹೇಳಿಕೆ ನೀಡಿ ಕೈ ತೊಳೆದು ಕೊಂಡಿದೆ. ತಮ್ಮ ಮೈ ಬೆವರು ಸುರಿಸಿ ನಮ್ಮ ಮಹಾನಗರಗಳನ್ನು ಕಟ್ಟಿದ ಶ್ರಮಜೀವಿಗಳ ಜೀವಕ್ಕೆ ಬೆಲೆಯಿಲ್ಲ ಎಂಬುದು ಇದರಿಂದ ಸ್ಪಷ್ಟವಾಯಿತು.
ನಮ್ಮ ದೇಶದ ವಲಸೆ ಕಾರ್ಮಿಕರ ಸಂಕಟದ ಸನ್ನಿವೇಶ ನಿತ್ಯವೂ ಮಾಧ್ಯಮಗಳಿಗಿಂತ ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲಿ ಕಂಡು ಬರುತ್ತಿವೆ. ಹೊಟ್ಟೆಪಾಡಿಗಾಗಿ ಮಹಾನಗರಗಳನ್ನು ಸೇರಿದ್ದ ಈ ಶ್ರಮಜೀವಿಗಳು ಕೊರೋನದ ಪರಿಣಾಮವಾಗಿ ಹೇರಲ್ಪಟ್ಟ ದಿಗ್ಬಂಧನ (ಲಾಕ್‌ಡೌನ್) ಪರಿಣಾಮವಾಗಿ ತಾವು ಜನಿಸಿದ ಹಳ್ಳಿಗಳತ್ತ ಮರಳಿ ಬಂದು ಸೇರುತ್ತಿದ್ದಾರೆ. ಹೀಗೇ ಹಳ್ಳಿಗೆ ಬಂದವರಿಗೆ ಅಲ್ಲೇನೂ ಆತ್ಮೀಯ ಸ್ವಾಗತ ಸಿಗುತ್ತಿಲ್ಲ. ಅವರಿಗೆ ಕೊರೋನ ಬಂದಿದೆ ಎಂದು ಹಳ್ಳಿಯ ಜನರು ಊರಿಗೆ ಬೇಲಿ ಕಟ್ಟಿ ತಡೆದ ಅನೇಕ ಉದಾಹರಣೆಗಳಿವೆ. ಇನ್ನು ಬಂದವರಲ್ಲಿ ಅನೇಕರು ಯಾವುದೇ ಮೂಲಸೌಕರ್ಯಗಳಿಲ್ಲದ ಕ್ವಾರಂಟೈನ್ ಕೇಂದ್ರಗಳಲ್ಲಿ ಹೇಗೋ ದಿನ ದೂಡಿ ಈಗ ಮತ್ತೆ ಬಿಟ್ಟು ಬಂದ ಮಹಾನಗರಗಳತ್ತ ಮುಖ ಮಾಡಿದ್ದಾರೆ. ಅದರಲ್ಲೂ ಬೆಂಗಳೂರಿನತ್ತ ಹೊರಟಿದ್ದಾರೆ.
ಲಾಕ್‌ಡೌನ್ ಸಡಿಲಗೊಂಡ ನಂತರ ಕಲಬುರಗಿ, ರಾಯಚೂರು, ಯಾದಗಿರಿ, ವಿಜಾಯಪುರ, ಕೊಪ್ಪಳ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳಿಂದ ಸಾವಿರಾರು ಜನ ಬೆಂಗಳೂರಿಗೆ ಮರಳಿ ಹೊರಟಿದ್ದಾರೆ. ಕಲಬುರಗಿಯಿಂದ ಆರಂಭವಾದ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ಜನ ರಾಜ್ಯದ ರಾಜಧಾನಿಗೆ ತೆರಳಿದ್ದಾರೆ.
ಈ ವಲಸೆ ಕಾರ್ಮಿಕರು ಹಳ್ಳಿಗಳಲ್ಲಿ ಇನ್ನೂ ಉಳಿದಿರುವ ಜಾತಿಯತೆ, ಅಸ್ಪಶ್ಯತೆ, ಸಾಮಾಜಿಕ ಬಹಿಷ್ಕಾರಗಳಿಂದ ರೋಸಿ ಹೋಗಿ ಮಾತ್ರವಲ್ಲ ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದೇ ನಗರಗಳಿಗೆ ವಲಸೆ ಹೋಗಿರುತ್ತಾರೆ. ಇವರೆಲ್ಲ ಬಹುತೇಕ ಭೂ ರಹಿತ ತಳ ಸಮುದಾಯಗಳಿಗೆ ಸೇರಿದವರು. ಎಲ್ಲರೂ ಜಮೀನಿಲ್ಲದವರಲ್ಲ, ಚೂರು ಪಾರು ಭೂಮಿಯಿದ್ದರೂ ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಅಭಾವ ಹಾಗೂ ಸತತ ಬರಗಾಲದಿಂದ ಏನನ್ನೂ ಬೆಳೆಯಲಾಗದೇ ಮುಂಬೈ, ಬೆಂಗಳೂರು, ಗೋವಾ, ಮಂಗಳೂರು ದಾರಿ ಹಿಡಿದಿದ್ದಾರೆ.
ತುಂಡು ಭೂಮಿಯೂ ಕೂಡ ಇಲ್ಲದವರು ಭೂಮಾಲೀಕರ ಮನೆಯಲ್ಲಿ ಜೀತದಾಳುಗಳಾಗಿ ವಂಶ ಪಾರಂಪರ್ಯವಾಗಿ ದುಡಿಯುವುದಕ್ಕಿಂತ ನಗರಗಳಲ್ಲಿ ನೆಮ್ಮದಿಯಾಗಿರಬಹುದು ಎಂದು ಹೋಗಿರುತ್ತಾರೆ. ಪ್ರಧಾನ ಮಂತ್ರಿ ದಿಢೀರ್ ಘೋಷಣೆ ಮಾಡಿದ ಲಾಕ್‌ಡೌನ್ ಇಂಥವರ ಬದುಕನ್ನು ಚಿಂದಿ ಚಿಂದಿ ಮಾಡಿದೆ.
ಉತ್ತರ ಭಾರತದ ಜನರು ಮಾತ್ರ ಶ್ರಮಿಕ್ ರೈಲುಗಳ ಮೂಲಕ ತಮ್ಮ ತಮ್ಮ ರಾಜ್ಯಗಳಿಗೆ ತೆರಳಿದ್ದಾರೆ. ಸ್ವಾತಂತ್ರದ ಏಳು ದಶಕಗಳ ನಂತರವೂ ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಅಸ್ಸಾಂ, ಮಧ್ಯಪ್ರದೇಶ ಮುಂತಾದ ರಾಜ್ಯಗಳಲ್ಲಿ ಬಡತನದ ಸಂಕಟ ಸಹಿಸದೆ ಆ ರಾಜ್ಯಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ತರುಣರು ಉದ್ಯೋಗ ಅರಸಿ ದಕ್ಷಿಣದ ರಾಜ್ಯಗಳಿಗೆ ಬರುತ್ತಾರೆ. ಎಂಥ ಕೆಲಸಕ್ಕೂ ಅವರು ತಯಾರಾಗಿರುತ್ತಾರೆ. ಇಂಥವರು ಬೆಂಗಳೂರು, ಮಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ, ಕಲಬುರಗಿಗಳಂಥ ಮಹಾನಗರಗಳಲ್ಲಿ ಮಾತ್ರವಲ್ಲ ತಾಲೂಕು ಸ್ಥಳಗಳಲ್ಲೂ ಕಾಣುತ್ತಾರೆ.
ನಮ್ಮ ಮಹಾನಗರಗಳ ಬಹು ಅಂತಸ್ತಿನ ಭವ್ಯ ಕಟ್ಟಡಗಳನ್ನು ಕಟ್ಟಿದವರು ಇದೇ ಜನ. ನಾವು ಓಡಾಡುವ ಮೆಟ್ರೋ ರೈಲಿನ ಮಾರ್ಗಗಳನ್ನು ನಿರ್ಮಿಸಿದವರು ಇದೇ ಜನ. ಇವರಲ್ಲಿ ಕೆಲವು ತರುಣರು ಹೊಟೇಲ್‌ಗಳಲ್ಲಿ ಕೆಲಸ ಮಾಡುತ್ತಾರೆ. ಅನೇಕ ಹಳ್ಳಿಯ ಹೊಟೇಲ್‌ಗಳಲ್ಲಿ ಈ ಬಿಹಾರಿ ಕಾರ್ಮಿಕರನ್ನು ನಾನು ನೋಡಿ ಮಾತಾಡಿಸಿದ್ದೇನೆ.
ವಲಸೆ ಅಂದಾಗ ನನಗೆ ಒಮ್ಮೆಲೆ ಬಾಂಗ್ಲಾದೇಶದ ಅಕ್ರಮ ನುಸುಳುಕೋರರ ನೆನಪಾಯಿತು. ಅವರು ಲಕ್ಷಾಂತರ ಸಂಖ್ಯೆಯಲ್ಲಿ ಮುಂಬೈ ಸೇರಿದಂತೆ ನಮ್ಮ ಮಹಾನಗರಗಳಲ್ಲಿ ಇದ್ದಾರೆ. ಇವರನ್ನು ಹೊರಗೆ ಹಾಕಲು ಎನ್‌ಆರ್‌ಸಿ ತಂದಿರುವುದಾಗಿ ಗೃಹ ಸಚಿವ ಅಮಿತ್ ಶಾ ಹೇಳುತ್ತಿದ್ದಾರೆ. ಅವರನ್ನು ಹೊರ ಹಾಕುವುದು ಬಿಜೆಪಿಯ ಬಹುದಿನದ ಅಜೆಂಡಾ. ಆದರೆ, ಈ ಲಾಕ್‌ಡೌನ್ ಕಾಲದಲ್ಲಿ ಮುಂಬೈ, ಬೆಂಗಳೂರು ಸೇರಿದಂತೆ ಯಾವುದೇ ಮಹಾನಗರಗಳಲ್ಲೂ ಈ ಬಾಂಗ್ಲಾದೇಶದ ಅಕ್ರಮ ನುಸುಳುಕೋರರು ಗೋಚರಿಸಲಿಲ್ಲ. ಅವರು ಒಮ್ಮಿಂದೊಮ್ಮೆಲೆ ಎಲ್ಲಿ ಮಾಯವಾದರೋ ಗೊತ್ತಾಗಲಿಲ್ಲ. ಬಹುಶಃ ಅವರಿಗೆ ಅಮಿತ್ ಶಾ ಪೌರತ್ವ ನೀಡಿದಂತೆ ಕಾಣುತ್ತದೆ!
ಅದು ಹೋಗಲಿ, ನಮ್ಮ ದೇಶದ ಜನಸಂಖ್ಯೆಯನ್ನು 130 ಕೋಟಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಆದರೆ, ತಮ್ಮ ದೇಶದಲ್ಲೆ ಕೋಟ್ಯಾಂತರ ವಲಸೆ ಕಾರ್ಮಿಕರು ಹೊಟ್ಟೆಪಾಡಿಗಾಗಿ ಊರಿಂದೂರಿಗೆ ಯಾಕೆ ಅಲೆದಾಡುತ್ತಾರೆ? ಸ್ವಂತ ದೇಶದಲ್ಲಿ ಯಾಕೆ ಬೀದಿಗೆ ಬಿದ್ದಿದ್ದಾರೆ. ಅವರಲ್ಲಿ ಬಹುತೇಕರು ಹಿಂದೂಗಳಿದ್ದರೂ ಹಿಂದೂ ಸಂಘಟನೆಗಳು ಯಾಕೆ ಈ ಕಷ್ಟಜೀವಿಗಳ ಸಂಕಟಕ್ಕೆ ಸ್ಪಂದಿಸುವುದಿಲ್ಲ.?
‘ಸಂಘದ ಸಾವಿರಾರು ಸ್ವಯಂ ಸೇವಕರು ಕೊರೋನ ಸಂದರ್ಭದಲ್ಲಿ ಸೇವಾ ಕಾರ್ಯದಲ್ಲಿ ತೊಡಗಿದ್ದಾರೆ’ ಎಂದು ಆರೆಸ್ಸೆಎಸ್ ಸಹಾಯಕ ಸರ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿದರು. ಆದರೆ, ವಲಸೆ ಕಾರ್ಮಿಕರು ಸಾವಿರಾರು ಕಿಮೀ ನಡೆದು ತಮ್ಮ ಊರುಗಳಿಗೆ ಹೊರಟ ದೃಶ್ಯಗಳನ್ನು ನೋಡಿದಾಗ ಎಲ್ಲೂ ಸಂಘದ ಸ್ವಯಂ ಸೇವಕರು ಕಾಣಲಿಲ್ಲ. ತಳ್ಳುಗಾಡಿಯಲ್ಲಿ ಬಾಣಂತಿಯನ್ನು 800 ಕಿಮೀ ಎಳೆದುಕೊಂಡು ಒಯ್ಯುವುದನ್ನು ತಡೆದು ಯಾರೂ ವಾಹನ ವ್ಯವಸ್ಥೆ ಮಾಡಲಿಲ್ಲ, ಮಹಾರಾಷ್ಟ್ರದ ಪುಣೆಯಿಂದ 9 ತಿಂಗಳ ಗರ್ಭಿಣಿಯೊಬ್ಬಳು 600 ಕಿಮೀ ನಡೆದು ಪತಿಯೊಂದಿಗೆ ಕಲಬುರಗಿಗೆ ನಡೆಯುತ್ತ ಬಂದಾಗಲೂ ಯಾರೂ ನೆರವಿಗೆ ಬರಲಿಲ್ಲ. ಇಂಥ ಸಂದರ್ಭದಲ್ಲಿ ಸೇನಾ ಪಡೆಗಳನ್ನು ಕಳುಹಿಸಿ ಈ ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ ಸರಕಾರ ತಲುಪಿಸಬಹುದಾಗಿತ್ತು. ಹಾಗೆ ತಲುಪಿಸಲು ಭಾಗವತರು ಆದೇಶ ನೀಡಬೇಕಾಗಿತ್ತು. ಆದರೆ, ಇದು ಅವರಿಗೆ ರಾಷ್ಟ್ರೀಯ ತುರ್ತು ಎನಿಸಲಿಲ್ಲ.
ವಿದೇಶದಲ್ಲಿ ನೆಲೆಸಿದ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ‘ವಂದೇ ಭಾರತ’ ಯೋಜನೆ ರೂಪಿಸಿದಂತೆ ಈ ವಲಸೆ ಕಾರ್ಮಿಕರನ್ನು ಕರೆ ತಂದು ಅವರ ಊರುಗಳಿಗೆ ಬಿಡಲು ಮುಂದಾಗಬೇಕಾಗಿತ್ತು. 2 ತಿಂಗಳು ವಿಲಿ ವಿಲಿ ಒದ್ದಾಡಿದ ನಂತರ ಅನೇಕರು ಹೆದ್ದಾರಿಗಳಲ್ಲಿ ನಡೆದು ಕೆಲವರು ಸತ್ತು ಹೋದ ನಂತರ ಶ್ರಮಿಕ್ ರೈಲು ಬಿಡುವ ಬದಲಾಗಿ ಲಾಕ್‌ಡೌನ್ ಘೋಷಣೆ ಮಾಡುವ ಮೊದಲೇ ವಾಹನ ಏರ್ಪಾಟು ಮಾಡಿದ್ದರೆ, ಅನೇಕ ಸಾವು-ನೋವುಗಳನ್ನು ತಪ್ಪಿಸಬಹುದಿತ್ತು.
ಈ ವಲಸೆ ಕಾರ್ಮಿಕರೆಲ್ಲ ಭವ್ಯ ಭಾರತ ದೇಶದ ಪ್ರಜೆಗಳೆಂಬುದು ನಿಜ. ಆದರೆ, ಅವರು ಪ್ರಜೆಗಳೆಂದು ಗೊತ್ತಾಗುವುದು ಚುನಾವಣೆ ಬಂದಾಗ ಮಾತ್ರ. ಒಂದು ಉದಾಹರಣೆ ನೀಡಬೇಕೆಂದರೆ, ಹೈದರಾಬಾದ್ ಕರ್ನಾಟಕ ಭಾಗದ ಸಾವಿರಾರು ಕಾರ್ಮಿಕರು ಅದರಲ್ಲೂ ಲಂಬಾಣಿಗಳು ಮುಂಬೈ, ಗೋವಾಗಳಲ್ಲಿ ಕೆಲಸ ಮಾಡುತ್ತಾರೆ. ಅಲ್ಲಿಯ ಧಾರಾವಿಯಂಥ ಸ್ಲಂ ಪ್ರದೇಶಗಳಲ್ಲಿ ಹಂದಿ ಗೂಡಿನಂತ ಮನೆಯನ್ನು ಬಾಡಿಗೆ ಹಿಡಿದಿರುತ್ತಾರೆ. ಅವರ ಓಟುಗಳು ಮಾತ್ರ ಅವರವರ ಹಳ್ಳಿಗಳಲ್ಲಿ ಇರುತ್ತವೆ. ಚುನಾವಣೆ ಬಂದಾಗ ಬಾಡಿಗೆ ಬಸ್‌ಗಳಲ್ಲಿ ಇವರನ್ನು ದೂರದ ನಗರಗಳಿಂದ ಕರೆ ತಂದು ಕೈಗೆ ಒಂದಿಷ್ಟು ಕಾಸು ನೀಡಿ ವಾಪಸು ಕಳುಹಿಸುತ್ತಾರೆ. ನಮ್ಮ ಜನಪ್ರತಿನಿಧಿಗಳನ್ನು ಶಾಸನ ಸಭೆಗಳಿಗೆ ಕಳಿಸಲು ಇವರ ಓಟು ನಿರ್ಣಾಯಕವಾಗಿರುತ್ತದೆ.
ಈಗ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಹೋಗಿ ಅಲ್ಲೂ ಉದ್ಯೋಗವಿಲ್ಲದೆ ದಿಕ್ಕು ತಪ್ಪಿನಿಂತಿದ್ದಾರೆ. ಇವರೆಲ್ಲ ಭಾರತದ ಪ್ರಜೆಗಳೆಂಬುದು ನಿಜ. ಆದರೆ ತಮ್ಮ ದೇಶದಲ್ಲೇ ಇವರಿಗೆ ನೆಲೆಯಿಲ್ಲ, ನೆಲವಿಲ್ಲ. ವಲಸೆ ಕಾರ್ಮಿಕರ ಬಗ್ಗೆ ಯಾರೂ ಕನಿಷ್ಠ ಚರ್ಚೆಯನ್ನೂ ಮಾಡುವುದಿಲ್ಲ. ತಬ್ಲೀಗಿ, ಅಜ್ಮೀರ್ ಎಂದೆಲ್ಲಾ ತಳ ಬುಡವಿಲ್ಲದ ಅಂತೆ ಕಂತೆಗಳನ್ನು ಮಾತಾಡಿ ಸುಳ್ಳು ಸುದ್ದಿಗಳನ್ನು ಹಬ್ಬಿಸುವವರೆಲ್ಲ ಹಿಂದೂಗಳೇ ಹೆಚ್ಚಿನ ಸಂಖ್ಯೆಯಲ್ಲಿರುವ ವಲಸೆ ಕಾರ್ಮಿಕರ ಯಾತನೆಯ ಸತ್ಯ ಸಂಗತಿಗಳ ಬಗ್ಗೆ ಮಾತಾಡುವುದಿಲ್ಲ. ಅವರ ಕಲ್ಲು ಹೃದಯ ಕರಗುವದಿಲ್ಲ. ಅಯೋಧ್ಯೆಯ ಮಂದಿರ ಕಟ್ಟಲು ಕೋಟಿ ಕೋಟಿ ರೂಪಾಯಿ ಸಂಗ್ರಹಿಸುವವರಿಗೆ ಆಧುನಿಕ ಭಾರತವನ್ನು ತಮ್ಮ ಮೈ ಬೆವರಿನಿಂದ ಕಟ್ಟಿದ ಈ ಶ್ರಮಜೀವಿಗಳ ಬಗ್ಗೆ ಕನಿಷ್ಠ ಕಾಳಜಿಯೂ ಇಲ್ಲ. ಅದರ ಬದಲಾಗಿ ಅವರ ಬಗ್ಗೆ ಸಹಾನುಭೂತಿಯಿಂದ ಮಾತಾಡಿದರೆ, ‘ವಲಸೆ ಕಾರ್ಮಿಕರೇ ಕೊರೋನ ಹಬ್ಬಿಸುತ್ತಿದ್ದಾರೆ’ ಎಂಬ ಕೊಳಕು ಮಾತುಗಳನ್ನು ಕೇಳಬೇಕಾಗಿ ಬಂದಿದೆ.