ಉಪಚುನಾವಣೆಗೆ ಕೆಲವೇ ದಿನಗಳಿರುವಾಗ ಕಾಂಗ್ರೆಸ್ ಸೇರಿದ ಮಾಜಿ ಬಿಜೆಪಿ ನಾಯಕ
ಭೋಪಾಲ್: ತಮ್ಮನ್ನು ಬಿಜೆಪಿ ಪಕ್ಷದಿಂದ ಉಚ್ಛಾಟಿಸಿದ ಕೆಲವೇ ದಿನಗಳ ಅಂತರದಲ್ಲಿ ಮಾಜಿ ಸಂಸದ ಪ್ರೇಮಚಂದ್ ಗುಡ್ಡು ತಮ್ಮ ಪುತ್ರ ಅಜಿತ್ ಬೊರಸಿ ಜತೆಗೂಡಿ ಕಾಂಗ್ರೆಸ್ ಸೇರಿದ್ದಾರೆ. ಮಧ್ಯಪ್ರದೇಶದ 28 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಗಳು ಇನ್ನಷ್ಟೇ ನಡೆಯಬೇಕಿರುವುದರಿಂದ ಈ ಬೆಳವಣಿಗೆ ಮಹತ್ವ ಪಡೆದಿದೆ.
ಉಜ್ಜಯನಿ ಕ್ಷೇತ್ರದ ಮಾಜಿ ಸಂಸದರಾಗಿರುವ ಗುಡ್ಡು ಅವರು 2018ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಪುತ್ರನ ಜತೆ ಬಿಜೆಪಿ ಸೇರಿದ್ದರು. ಆ ಸಂದರ್ಭ ಬಿಜೆಪಿ ಅಜಿತ್ ಅವರನ್ನು ಉಜ್ಜಯನಿ ಜಿಲ್ಲೆಯ ಘಟಿಯ ಕ್ಷೇತ್ರದಿಂದ ಕಣಕ್ಕಿಳಿಸಿದ್ದರೂ ಅವರು ಸೋತಿದ್ದರು.
ಕಳೆದ ಕೆಲ ತಿಂಗಳುಗಳಿಂದ ತಂದೆ-ಮಗ ಮತ್ತೆ ಕಾಂಗ್ರೆಸ್ ಪಕ್ಷ ಸೇರಲು ಹಾತೊರೆಯುತ್ತಿದ್ದರು. ಅಜಿತ್ ಈಗಾಗಲೇ ಪೌರತ್ವ ತಿದ್ದುಪಡಿ ಕಾಯಿದೆಯನ್ನು ಹಲವು ಬಾರಿ ಟೀಕಿಸಿ ಬಿಜೆಪಿಯ ಆಕ್ರೋಶಕ್ಕೆ ಗುರಿಯಾಗಿದ್ದರೆ, ಗುಡ್ಡು ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಮಧ್ಯ ಪ್ರದೇಶದ ಕಮಲ್ ನಾಥ್ ಸರಕಾರದ ಪತನಕ್ಕೆ ಕಾರಣರಾದ ಜ್ಯೊತಿರಾದಿತ್ಯ ಸಿಂಧ್ಯಾ ಅವರನ್ನು ಟೀಕಿಸಿದ್ದರು.
ಈ ಬೆಳವಣಿಗೆಯ ಬೆನ್ನಲ್ಲೇ ಬಿಜೆಪಿ ಗುಡ್ಡು ಅವರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿತ್ತಾದರೂ ತಾವು ಫೆಬ್ರವರಿಯಲ್ಲಿಯೇ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾಗಿ ಅವರು ಹೇಳಿಕೊಂಡಿದ್ದರು. ಆದರೆ ಅವರ ರಾಜೀನಾಮೆ ಪತ್ರ ತನಗೆ ತಲುಪಿಲ್ಲ ಎಂದು ಹೇಳಿದ್ದ ಬಿಜೆಪಿ ಅವರನ್ನು ಇತ್ತೀಚೆಗೆ ಪಕ್ಷದಿಂದ ಉಚ್ಛಾಟಿಸಿತ್ತು.