20 ಲಕ್ಷ ಕೋಟಿ ರೂ. ಪ್ಯಾಕೇಜಿನಲ್ಲಿ ಜನರಿಗೆ ನೇರವಾಗಿ ದಕ್ಕುವುದು ಕೇವಲ 76,000 ಕೋಟಿ ಮಾತ್ರವಂತೆ...!
ಆತ್ಮೀಯರೇ ,
ದೆಹಲಿ ಮೂಲದ ವಿವಿಧ ಕ್ಷೇತ್ರಗಳ ಪರಿಣಿತರ ಸಂಸ್ಥೆಯಾದ Center for Budget & Governance Accountability (CBGA)ಯು ಕೋವಿಡ್ ಬಿಕ್ಕಟ್ಟನ್ನು ಎದುರಿಸಲು ಭಾರತ ಸರ್ಕಾರ ಘೋಷಿಸಿರುವ 20.9 ಲಕ್ಷ ಕೋಟಿ ಪ್ಯಾಕೇಜನ್ನು ಒಳಗೊಂಡಂತೆ ವಿವಿಧ ರಾಜ್ಯ ಸರ್ಕಾರಗಳು ಈವರೆಗೆ ತೆಗೆದುಕೊಂಡಿರುವ ಎಲ್ಲಾ ಕ್ರಮಗಳ ಬಗ್ಗೆ 50 ಪುಟಗಳಷ್ಟು ವಿವರವಾದ ಹಾಗು ವಿಶ್ಲೇಷಣಾತ್ಮಕ ಅಧ್ಯಯನ ವರದಿ - Numbers On The Edge- Assessing India's Fiscal Response To Covid-19- ಅನ್ನು ಮೇ -28 ರಂದು ಬಿಡುಗಡೆ ಮಾಡಿದೆ.
ಇದು ಕೋವಿಡ್ ಬಿಕ್ಕಟ್ಟು - ಆದರ ಪರಿಣಾಮ ಹಾಗು ಪರಿಹಾರಗಳ ಬಗ್ಗೆ ಕಾಳಜಿ ಇರುವ ಪ್ರತಿಯೊಬ್ಬರೂ ಗಮನಿಸಬೇಕಾದ ವರದಿಯಾಗಿದೆ.
ಆ ವರದಿಯ ಪಿಡಿಎಫ್ ಪ್ರತಿಯನ್ನು Attach ಮಾಡಿದ್ದೇನೆ. ಸಾಧ್ಯವಿರುವ ಎಲ್ಲರು ದಯವಿಟ್ಟು ಗಮನಿಸಿ .
ಸಾರಾಂಶದಲ್ಲಿ ಆ ವರದಿಯು ಹೇಳುವುದಿದು
1. ಕೋವಿಡ್ ಬಿಕ್ಕಟ್ಟಿನಿಂದಾಗಿ ಈ ದೇಶದ ಶೇ. 90 ಕ್ಕೂ ಹೆಚ್ಚು ಜನರು ತಮ್ಮ ಆದಾಯ, ಜೀವನೋಪಾಯ, ಉಳಿತಾಯ ಗಳನ್ನೂ ಕಳೆದುಕೊಂಡಿದ್ದರಿಂದ ದೇಶಕ್ಕೆ ಅಗತ್ಯವಿದ್ದದ್ದು ಜನರ ಜೋಬಿಗೆ ನೇರ ನಗದು ವರ್ಗಾವಣೆ ಮಾಡುವ ಕ್ರಮಗಳು....
2. ಆದರೆ ಕೇಂದ್ರ ಸರ್ಕಾರಗಳು ಹಾಗೂ ಬಹುಪಾಲು ರಾಜ್ಯ ಸರ್ಕಾರಗಳು ಅತ್ಯಗತ್ಯವಿರುವ ವಿತ್ತೀಯ ವರ್ಗಾವಣೆಯನ್ನು ಮಾಡುವ ಕ್ರಮದ ಬಗ್ಗೆ ಒತ್ತು ನೀಡಿಯೇ ಇಲ್ಲ...
3. ಕೇಂದ್ರ ಸರ್ಕಾರವಂತೂ ಈ ವಿಷಯದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಅದು ಘೋಷಿಸಿರುವ 20.9 ಲಕ್ಷ ಕೋಟಿ ಪ್ಯಾಕೇಜಿನಲ್ಲಿ ನೇರವಾಗಿ ಜನರಿಗೆ ವರ್ಗಾವಣೆಯಾಗುವ ಹಣ ಕೇವಲ 76,000 ಕೋಟಿ ಮಾತ್ರ ಎಂಬ ದಿಗ್ಭ್ರಾಂತಗೊಳಿಸುವ ವಿವರವನ್ನು ಈ ಆಧ್ಯಯನ ಬಯಲು ಮಾಡುತ್ತದೆ.
ಇದು ಒಟ್ಟಾರೆ ಪ್ಯಾಕೇಜಿನ ಕೇವಲ ಶೇ. 4 ಭಾಗ ಮಾತ್ರವಾಗುತ್ತದೆ. ಹಾಗು ದೇಶದ ಜಿಡಿಪಿಯ ಕೇವಲ 0.38 ಮಾತ್ರ!!
4. ಉಳಿದಂತೆ ಈಗಾಗಲೇ ಬಜೆಟ್ಟಿನಲ್ಲಿ ಘೋಷಿಸಿರುವ ಯೋಜನಾ ವೆಚ್ಚಗಳನ್ನು ಪ್ಯಾಕೇಜಿನಲ್ಲಿ ಸೇರಿಸಿಬಿಡಲಾಗಿದೆ. ಅವೆಲ್ಲವನ್ನು ಕೋವಿಡ್ ಬಿಕ್ಕಟ್ಟಿನ ಪರಿಹಾರದ ಲೆಕ್ಕವೆಂದೇ ಹಿಡಿದರು ಒಟ್ಟಾರೆಯಾಗಿ ಸರ್ಕಾರವು ಕೋವಿಡ್ ಬಿಕ್ಕಟ್ಟಿನ ಪರಿಹಾರಕ್ಕೆಂದು ನೇರವಾಗಿ ಮಾಡುವ ವೆಚ್ಚ 2.21 ಲಕ್ಷ ಕೋಟಿ ಗಳನ್ನೂ ದಾಟುವುದಿಲ್ಲ. ಅಂದರೆ ಪ್ಯಾಕೇಜಿನ 1 ರಷ್ಟೂ ಆಗುವುದಿಲ್ಲ..!
5. ಇನ್ನು MSME ಯಂಥಾ ಕ್ಷೇತ್ರಗಳಿಗೆ ಕೊಟ್ಟಿರುವ ಸಾಲದ ಪ್ಯಾಕೇಜುಗಳಿಂದ ಅವುಗಳ ಬಿಕ್ಕಟ್ಟು ಬಗೆಹರಿಯುವುದಿಲ್ಲ. ಮಾತ್ರವಲ್ಲ. ಬೇಡಿಕೆಯೇ ಕುಸಿದಿರುವುದರಿಂದ ಸದ್ಯಕ್ಕೆ ಹೊಸ ಸಾಲ ಮಾಡುವ ಸಾಹಸವನ್ನು ಈ ಕಿರು ಉದ್ದಿಮೆಗಳು ಮಾಡುವುದೇ ಇಲ್ಲ.
ಪ್ಯಾಕೇಜಿನಲ್ಲಿ ಸಾಲಕ್ಕೆ ಸರ್ಕಾರ ಗ್ಯಾರಂಟಿ ನಿಲ್ಲುವುದಾಗಿ ಹೇಳಿದ್ದರು ಅದರಿಂದ ಸರ್ಕಾರಕ್ಕೆ ನೇರ ವಿತ್ತೀಯ ಹೊರೆ ಸದ್ಯಕ್ಕೆ ಆಗುವುದೇ ಇಲ್ಲ. ಏಕೆಂದರೆ MSME ಗಳು ಸಾಲ ಮಾಡಿ ಕಂತು ವಾಪಸ್ ತೀರಿಸದಿದ್ದಾಗ ಅಂದರೆ ಹಲವು ವರ್ಷ ಗಳ ನಂತರದಲ್ಲಿ ಉದ್ಭವಾಗುವ ಸಮಸ್ಯೆ ಅದು.
6. ಈ ಅಧ್ಯಯನದಲ್ಲಿ ಜಗತ್ತಿನ ಇತರ ದೇಶಗಳು ತಮ್ಮತಮ್ಮ ದೇಶಗಳ ಜನರನ್ನು ರಕ್ಷಿಸಲು ಹಾಗು ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ತೆಗೆದುಕೊಂಡಿರುವ ಕ್ರಮಗಳ ಪಕ್ಷಿನೋಟವನ್ನು ಕೂಡಾ ಒದಗಿಸುತ್ತದೆ ಹಾಗು ಆ ಕ್ರಮಗಳನ್ನು ಭಾರತ ಸರ್ಕಾರ ತೆಗೆದುಕೊಂಡಿರುವ ಕ್ರಮ ಗಳೊಂದಿಗೆ ಹೋಲಿಸಿ ನೋಡಿದಲ್ಲಿ ಹೇಗೆ ಭಾರತವು ಇತರ ಬಡದೇಶಗಳಿಗಿಂತ ಕಡಿಮೆ ಸ್ಪಂದನಶೀಲವಾಗಿದೆ ಎಂಬುದನ್ನು ತೋರಿಸಿಕೊಡುತ್ತದೆ.
7. ಭಾರತಕ್ಕೆ ಈಗ ಅಗತ್ಯವಿರುವ ವಿತ್ತೀಯ ಕ್ರಮಗಳೇನಾಗಿರಬೇಕು ಎಂಬ ಕೊನೆಯ ಅಧ್ಯಾಯದಲ್ಲಿ ಈ ವರದಿಯು ಈ ಕೆಳಗಿನ ಮಹತ್ವದ ಸಲಹೆಗಳನ್ನು ಮುಂದಿಡುತ್ತದೆ.
ಅ) ಇಂದು ಜಗತ್ತು ಹಾಗು ಭಾರತವು ಎದುರಿಸುತ್ತಿರುವ ಅಸಾಧಾರಣ ಸಂದರ್ಭದಲ್ಲಿ ಅಸಾಧಾರಣ, ಧೈರ್ಯಶಾಲಿ ಮತ್ತು ಉದಾರ ವಿತ್ತೀಯ ಕ್ರಮಗಳನ್ನು ಅನುಸರಿಸಬೇಕು
ಆ ) ಕೇಂದ್ರವು ಹೆಚ್ಚಿನ ಸಂಪನ್ಮೂಲಗಳನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳಬೇಕು
ಇ ) ರಾಜ್ಯಗಳಿಗೆ ವಿತ್ತೀಯ ಕೊರತೆಯ ಮಿತಿಯನ್ನು ವಿಧಿಸುವಾಗ ಎಲ್ಲಾ ರಾಜ್ಯಗಳ ಬಗ್ಗೆಯೂ ಒಂದೇ ಬಗೆಯ ನೀತಿಗಳನ್ನು ಅನುಸರಿಸಬಾರದು
ಈ) ಪರಿಹಾರ ಒದಗಿಸಲು ಬೇಕಿರುವ ಸಂಪನ್ಮೂಲವನ್ನು ರೂಢಿಸಿಕೊಳ್ಳಲು ಉಳ್ಳವರ ಮೇಲೆ ಹೆಚ್ಚಿನ ತೆರಿಗೆ ವಿಧಿಸಬೇಕು
ಉ) ಸಾಮಾಜಿಕ ಸಂಕ್ಷೇಮ ಕಾರ್ಯಕ್ರಗಳಿಗಾಗಿ ಕೇಂದ್ರೀಯ ಯೋಜನೆಗಳಿಗಾಗಿ ಬಜೆಟ್ಟಿನಲ್ಲಿ ಎತ್ತಿಟ್ಟಿರುವ ಮೊತ್ತದಲ್ಲಿ ಕಡಿತವಾಗಬಾರದು
ಋ ) NREGAS ಯೋಜನೆಯನ್ನು ಸಾರ್ವತ್ರೀಕರಿಸಬೇಕು ಹಾಗೂ ನೇರ ಆದಾಯ ಬೆಂಬಲ ಯೋಜನೆಗಳನ್ನು ಹೆಚ್ಚಿಸಬೇಕು.
ಎ ) ಸಾರ್ವಜನಿಕ ಪಡಿತರ ವ್ಯವಸ್ಥೆಯನ್ನು ಸಾರ್ವತ್ರೀಕರಿಸಬೇಕು
ಏ ) ಮಕ್ಕಳು, ಮಹಿಳೆಯರು ಹಾಗು ಸಮಾಜದ ಇತರ ದುರ್ಬಲ ವರ್ಗಗಳ ಆರೋಗ್ಯ ರಕ್ಷಣೆಯ ಮೇಲೆ ಹೆಚ್ಚಿನ ವ್ಯಯ ಮಾಡಬೇಕು.
ಐ) ಆರೋಗ್ಯ ಹಾಗೂ ಇತರ ಸಂಬಂಧಿತ ಕ್ಷೇತ್ರಗಳ ಮೇಲೆ ಸಾರ್ವಜನಿಕ ವೆಚ್ಚವನ್ನು ಹೆಚ್ಚಿಸಬೇಕು
ಓ) ಪರಿಹಾರ ಹಾಗೂ ಪುನಶ್ಚೇತನ ನೀತಿಗಳನ್ನು ರೂಪಿಸುವಾಗ ಸಾರ್ವಜನಿಕರ ಸಲಹೆ ಮತ್ತು ಪಾಲುದಾರಿಕೆಯನ್ನು ಕಾತರಿಗೊಳಿಸಿಕೊಳ್ಳಬೇಕು.
ಇವೆಲ್ಲವೂ ತುರ್ತಿಗೆ ಹಾಗೂ ದೀರ್ಘಕ್ಕೆ ಎರಡಕ್ಕೂ ಅತ್ಯಗತ್ಯವಾಗಿರುವ ಸಲಹೆಗಳಾಗಿದ್ದು ಕೇಳುವ ಕಾಳಜಿ ಹಾಗೂ ಜಾರಿಗೆ ತರಲು ಬೇಕಾದ ರಾಜಕೀಯ ಇಚ್ಛೆಗಳು ಇರಬೇಕಷ್ಟೆ.
ಮೋದಿ ಸರ್ಕಾರಕ್ಕೆ ಅವೆರಡು ಇಲ್ಲದಿರುವುದರಿಂದ ನಾಗರಿಕ ಸಮಾಜ ಏನು ಮಾಡಬೇಕು ಎಂಬುದನ್ನು ತುರ್ತಾಗಿ ನಿರ್ಧರಿಸಬೇಕಾಗಿದೆ. ಇರಲಿ. ಸಂಪೂರ್ಣ ವರದಿಯು ಅಡಕದಲ್ಲಿದೆ. ಬಿಡುವು ಮಾಡಿಕೊಂಡು ಗಮನಿಸಿ.
https://drive.google.com/file/d/1VeQz52K4-P0aAExi2zSy9QombxWFpXIn/view
ಶಿವಸುಂದರ್