ಒಂದು ವರ್ಷ ಹೊಸ ಸರಕಾರಿ ಯೋಜನೆಗಳಿಲ್ಲ:ಹಣಕಾಸು ಸಚಿವಾಲಯ
ಹೊಸದಿಲ್ಲಿ, ಜೂ.5: ದೇಶದಲ್ಲಿ ಕೊರೋನ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಖರ್ಚುವೆಚ್ಚ ಕಡಿಮೆಗೊಳಿಸುವ ಭಾಗವಾಗಿ ಹಣಕಾಸು ಸಚಿವಾಲಯದಿಂದ ಒಂದು ವರ್ಷದವರೆಗೆ ಯಾವುದೇ ಹೊಸ ಯೋಜನೆ ಪ್ರಾರಂಭವಾಗುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.
ಹೊಸ ಯೋಜನೆಗಳಿಗಾಗಿ ಹಣಕಾಸು ಸಚಿವಾಲಯಗಳಿಗೆ ಮನವಿಗಳನ್ನು ಕಳುಹಿಸುವುದನ್ನು ನಿಲ್ಲಿಸುವಂತೆ ಎಲ್ಲ ಸಚಿವಾಲಯಗಳಿಗೆ ತಿಳಿಸಲಾಗಿದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಹಾಗೂ ಇತ್ತೀಚೆಗೆ ಘೋಷಿಸಿರುವ 'ಆತ್ಮನಿರ್ಭರ ಭಾರತ' ನೀತಿ ಅಡಿಯಲ್ಲಿ ಮಾತ್ರ ಖರ್ಚು ಮಾಡಲು ಅವಕಾಶವಿರುತ್ತದೆ.
ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್, ಆತ್ಮನಿರ್ಭರ ಭಾರತ್ ಅಭಿಯಾನ ಪ್ಯಾಕೇಜ್ ಅಥವಾ ಯಾವುದೇ ಇತರ ವಿಶೇಷ ಪ್ಯಾಕೇಜ್/ ಘೋಷಣೆ ಹೊರತುಪಡಿಸಿ ಇತರ ಯಾವುದೇ ಯೋಜನೆ/ಉಪಯೋಜನೆಗಳನ್ನು ಈ ವರ್ಷ(2020-21) ಜಾರಿಗೊಳಿಸಬಾರದು ಎಂದು ತಿಳಿಸಲಾಗಿದೆ.
ಈಗ ಜಾರಿಯಲ್ಲಿರುವ ಯೋಜನೆಗಳಿಗೆ ಸಂಬಂಧಿಸಿ, 2021ರ ಮಾರ್ಚ್ 31ರವರೆಗೆ ಅಥವಾ 15ನೇ ವಿತ್ತ ಆಯೋಗದ ಶಿಫಾರಸುಗಳು ಜಾರಿಗೆ ಬರುವವರೆಗೆ ಮಧ್ಯಂತರ ವಿಸ್ತರಣೆಯನ್ನು ಈಗಾಗಲೇ ನೀಡಲಾಗಿದೆ. ಈ ಸೂಚನೆಗೆ ಕಟ್ಟುನಿಟ್ಟಾಗಿ ಅನುಗುಣವಾಗಿರದ ಯೋಜನೆಗಳಿಗೆ ಯಾವುದೇ ನಿಧಿಯನ್ನು ಬಿಡುಗಡೆ ಮಾಡಬಾರದು. ಅಥವಾ ಅಂತಹ ಯೋಜನೆಗಳಿಗೆ ಬಜೆಟ್ ನಿಬಂಧನೆಗಳ ಮೂಲಕ ಧನವಿನಿಯೋಗ ಮಾಡಬಾರದು . ಈ ಮಾರ್ಗಸೂಚಿಗಳಿಗೆ ಯಾವುದೇ ವಿನಾಯಿತಿ ಬೇಕಿದ್ದರೆ ವೆಚ್ಚ ಇಲಾಖೆಯಿಂದ ಅನುಮೋದನೆ ಪಡೆಯಬೇಕು ಎಂದು ತಿಳಿಸಲಾಗಿದೆ.