ಅಮೆರಿಕದ ಬೀದಿಗಳಲ್ಲಿ ಅದುಮಿಟ್ಟ ಹತಾಶೆ ಸ್ಫೋಟಿಸಿದಾಗ
ವರ್ಣಭೇದದ ಕುಲುಮೆಯಲ್ಲಿ ಅಮೆರಿಕ
ಅಮೆರಿಕದ 46 ವರ್ಷದ ಕರಿಯ ವರ್ಣೀಯ ಜಾರ್ಜ್ ಫ್ಲಾಯ್ಡ್ ಎಂಬವರು ಇತ್ತೀಚೆಗೆ ಮಿನಸೋಟ ರಾಜ್ಯದ ಮಿನಪೊಲಿಸ್ ನಗರದಲ್ಲಿ ಪೊಲೀಸರ ಕಸ್ಟಡಿಯಲ್ಲಿ ಮೃತಪಟ್ಟರು. 20 ಡಾಲರ್ ಮುಖಬೆಲೆಯ ನಕಲಿ ನೋಟೊಂದನ್ನು ಚಲಾಯಿಸಿದ ಆರೋಪದಲ್ಲಿ ಬಿಳಿಯ ಪೊಲೀಸ್ ಅಧಿಕಾರಿಯೊಬ್ಬರು ಅವರಿಗೆ ಕೈಕೋಳ ತೊಡಿಸಿ ನೆಲಕ್ಕೆ ಕೆಡವಿದರು ಹಾಗೂ ಅವರು ಮಿಸುಕಾಡದಂತೆ ಅವರ ಕುತ್ತಿಗೆಯ ಮೇಲೆ ಮೊಣಕಾಲೂರಿ ಕುಳಿತರು. ನನಗೆ ಉಸಿರಾಡಲು ಆಗುತ್ತಿಲ್ಲ ಎಂದು ಆರೋಪಿಯು ಗೋಗರೆದರೂ ವಿಚಲಿತನಾಗದ ಪೊಲೀಸ್ ಅಧಿಕಾರಿ 9 ನಿಮಿಷಗಳ ಬಳಿಕ ಎದ್ದಾಗ ಅವರು ಶವವಾಗಿದ್ದರು.
ಫ್ಲಾಯ್ಡಾ ವಿರುದ್ಧದ ಆರೋಪವೇನೂ ಗಂಭೀರವಾಗಿರಲಿಲ್ಲ. ತನಗೆ ಬಂದಿದ್ದ ನಕಲಿ ನೋಟನ್ನು ಅವರು ಇನ್ನೊಂದು ಕಡೆ ನೀಡಿದರು, ಅಷ್ಟೆ. ಈ ಅಮಾನುಷ ಪೊಲೀಸ್ ದೌರ್ಜನ್ಯದ ವಿರುದ್ಧ ಕರಿಯ ಸಮುದಾಯ ಎಷ್ಟು ತೀವ್ರತೆಯಿಂದ ಸಿಡಿದೇಳಿತೆಂದರೆ-ಇಂತಹ ಅಸಮಾನತೆ, ಅನ್ಯಾಯ, ದೌರ್ಜನ್ಯ ಅದರ ಒಡಲಲ್ಲಿ ಇಷ್ಟು ಸಮಯದಿಂದ ಕುದಿಯುತ್ತಿತ್ತೆ ಎಂದು ಜಗತ್ತು ಅಚ್ಚರಿಯಿಂದ ಅಮೆರಿಕದತ್ತ ನೋಡುವಂತಾಗಿದೆ. ಪ್ರತಿಭಟನಾಕಾರರ ಆಕ್ರೋಶ ಎಷ್ಟಿತ್ತೆಂದರೆ ಹಲವು ಕಡೆ ಪ್ರತಿಭಟನೆಗಳು ಹಿಂಸೆಗೆ ತಿರುಗಿದವು. ಅಂಗಡಿಗಳು, ಮಾಲ್ಗಳು, ಹೊಟೇಲ್ಗಳಿಗೆ ಕೆಲವರು ಬೆಂಕಿಹಚ್ಚಿದರು. ದೇಶದ ಹಲವು ನಗರಗಳಲ್ಲಿ ಕರ್ಫ್ಯೂ ವಿಧಿಸಲಾಯಿತು. ಅಮೆರಿಕದ ಆಡಳಿತ ಕೇಂದ್ರ ಮತ್ತು ಅಧ್ಯಕ್ಷರ ನಿವಾಸ ಹಾಗೂ ಕಚೇರಿ ಇರುವ ಶ್ವೇತಭವನದ ಹೊರಗೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಕಾಳಗ ನಡೆಯಿತು ಹಾಗೂ ಈ ಸಂದರ್ಭದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರನ್ನು ಸುರಕ್ಷತೆಗಾಗಿ ಭದ್ರತಾ ಸಿಬ್ಬಂದಿ ಭೂಗತ ಬಂಕರ್ಗೆ ಕರೆದೊಯ್ದರು.
ಇದರೊಂದಿಗೆ ‘ಬ್ಲ್ಯಾಕ್ ಲೈವ್ಸ್ ಮ್ಯಾಟರ್’ (ಕರಿಯರ ಜೀವಕ್ಕೂ ಬೆಲೆಯಿದೆ) ಎಂಬ ಚಳವಳಿ ಮತ್ತೆ ಮುನ್ನೆಲೆಗೆ ಬಂದಿದೆ.
ಅದು ಕೇವಲ ಫ್ಲಾಯ್ಡ್ ರ ಸಾವು ಆಗಿರಲಿಲ್ಲ
ಅಮೆರಿಕವು ಮಹಾಮಾರಿ ಕೊರೋನ ವೈರಸ್ ಸಾಂಕ್ರಾಮಿಕದಿಂದ ತತ್ತರಿಸುತ್ತಿದ್ದರೂ, ಜನರು ಈ ಮಟ್ಟದಲ್ಲಿ ಬೀದಿಗಿಳಿದು ಪ್ರತಿಭಟಿಸಲು ಏನು ಕಾರಣ? ಯಾಕೆಂದರೆ ಅದು ಕೇವಲ ಜಾರ್ಜ್ ಫ್ಲಾಯ್ಡ್ ಎಂಬವರ ಸಾವು ಆಗಿರಲಿಲ್ಲ. ಅಮೆರಿಕದಲ್ಲಿ ಪೊಲೀಸರು ಮತ್ತು ಇತರರು, ಯಾವುದೇ ರೀತಿಯ ಉತ್ತರದಾಯಿತ್ವಕ್ಕೆ ಒಳಪಡದೆ ನಡೆಸುತ್ತಿರುವ ಕರಿಯರ ನ್ಯಾಯಾಂಗೇತರ ಹತ್ಯೆಗಳು ನಿಲ್ಲಬೇಕೆನ್ನುವುದು ‘ಬ್ಲ್ಯಾಕ್ ಲೈವ್ಸ್ ಮ್ಯಾಟರ್’ ಚಳವಳಿಯ ಉದ್ದೇಶವಾಗಿದೆ.
ವಾಸ್ತವವಾಗಿ ಪ್ರಸಕ್ತ ನಡೆಯುತ್ತಿರುವ ಬೃಹತ್ ಪ್ರತಿಭಟನೆಗಳು 2014ರಲ್ಲಿ ನಡೆದ ರಾಷ್ಟ್ರವ್ಯಾಪಿ ಪ್ರತಿಭಟನೆಗಳ ಮುಂದುವರಿದ ಭಾಗವಾಗಿದೆ. ಅಂದು ನ್ಯೂಯಾರ್ಕ್ ನಗರದ ಬಿಳಿಯ ಪೊಲೀಸ್ ಅಧಿಕಾರಿಯೊಬ್ಬರ ಕೈಯಲ್ಲಿ ಇನ್ನೋರ್ವ ಕರಿಯ ವ್ಯಕ್ತಿ ಎರಿಕ್ ಗಾರ್ನರ್ ಹತರಾಗಿದ್ದರು. ಆ ಸಂದರ್ಭದಲ್ಲಿ ‘ಬ್ಲ್ಯಾಕ್ ಲೈವ್ಸ್ ಮ್ಯಾಟರ್’ ಚಳವಳಿಯು ಮುಂಚೂಣಿಗೆ ಬಂದಿತ್ತು.
ಜಾರ್ಜ್ ಫ್ಲಾಯ್ಡ್ ರಂತೆ ಎರಿಕ್ ಗಾರ್ನರ್ರ ಕೊನೆಯ ಮಾತುಗಳು ‘ಐ ಕಾಂಟ್ ಬ್ರೀದ್’ (ನನಗೆ ಉಸಿರಾಡಲು ಆಗುತ್ತಿಲ್ಲ) ಆಗಿತ್ತು.
ಉತ್ತರದಾಯಿತ್ವವೇ ಇಲ್ಲದ ಹತ್ಯೆಗಳು
2019ರಲ್ಲಿ ಪೊಲೀಸರ ಕೈಯಲ್ಲಿ 1,000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರ ಹಿಂಸೆಯ ಬಗ್ಗೆ ಮಾಹಿತಿ ಸಂಗ್ರಹಿಸುವ ಸಂಶೋಧನಾ ಮಾಹಿತಿಕೋಶವೊಂದು ತಿಳಿಸಿದೆ. ಮೃತರ ಪೈಕಿ ಕರಿಯರ ಪ್ರಮಾಣ 24 ಶೇಕಡವಾಗಿದೆ. ಆದರೆ ಅಮೆರಿಕದ ಜನಸಂಖ್ಯೆಯಲ್ಲಿ ಅವರ ಪ್ರಮಾಣ ಸುಮಾರು 13 ಶೇಕಡವಾಗಿದೆ.
ಅದರ ಜೊತೆಗೆ ಈ ಹತ್ಯೆಗಳಿಗೆ ಉತ್ತರದಾಯಿತ್ವವೇ ಇಲ್ಲವಾಗಿರುವುದು ಜನರನ್ನು ಕೆರಳಿಸಿದೆ. 2013 ಮತ್ತು 2019ರ ನಡುವಿನ ಅವಧಿಯಲ್ಲಿ ನಡೆದ ಹತ್ಯೆಗಳ ಪೈಕಿ 99 ಶೇಕಡ ಪ್ರಕರಣಗಳಲ್ಲಿ ಮೊಕದ್ದಮೆಯೇ ದಾಖಲಾಗಲಿಲ್ಲ.
ಮಾರ್ಟಿನ್ ಲೂಥರ್ ಕಿಂಗ್ ಪರಂಪರೆ
ಕರಿಯರ ನಾಗರಿಕ ಹಕ್ಕುಗಳು ಮತ್ತು ಸಮಾನತೆಗಾಗಿ ಬೃಹತ್ ಪ್ರಮಾಣದಲ್ಲಿ ಶಾಂತಿಯುತ ಹೋರಾಟವನ್ನು ಸಂಘಟಿಸಿದ ನಾಗರಿಕ ಹಕ್ಕುಗಳ ಹೋರಾಟಗಾರ ಮಾರ್ಟಿನ್ ಲೂಥರ್ ಕಿಂಗ್ 1968 ಎಪ್ರಿಲ್ 3ರಂದು ಟೆನೆಸಿ ರಾಜ್ಯದ ಮೆಂಫಿಸ್ನಲ್ಲಿ ಪ್ರಸಿದ್ಧ ಭಾಷಣವೊಂದನ್ನು ಮಾಡಿದರು. ಅವರ ಭಾಷಣವು ಆಗ ನಡೆಯುತ್ತಿದ್ದ ಸ್ವಚ್ಛತಾ ಕೆಲಸಗಾರರ ಮುಷ್ಕರಕ್ಕೆ ಒತ್ತು ನೀಡಿತ್ತು. ಸರಕಾರ ಒಡ್ಡುತ್ತಿದ್ದ ಅಡೆತಡೆಗಳು ಮತ್ತು ತನಗೆ ಎದುರಾಗಿರುವ ಜೀವಬೆದರಿಕೆಗಳ ಹೊರತಾಗಿಯೂ, ಅಹಿಂಸಾತ್ಮಕ ಪ್ರತಿಭಟನೆಗಳ ಮೂಲಕ ಅನ್ಯಾಯದ ವಿರುದ್ಧದ ಹೋರಾಟವನ್ನು ಮುಂದುವರಿಸುವುದಾಗಿ ಅವರು ತನ್ನ ಭಾಷಣದಲ್ಲಿ ಪಣತೊಟ್ಟರು.
‘‘ಆ ಪರ್ವತದ ತುದಿಯನ್ನು ಏರಲು ದೇವರು ನನಗೆ ಅನುಮತಿ ನೀಡಿದ್ದಾರೆ. ನಮಗೆ ನೀಡಲಾಗಿರುವ ‘ಭರವಸೆಯ ನೆಲ’ವನ್ನು ನಾನು ಅಲ್ಲಿ ಆ ಪರ್ವತದ ತುದಿಯಲ್ಲಿ ನೋಡುತ್ತಿದ್ದೇನೆ. ನಿಮ್ಮಿಂದಿಗೆ ನನಗೆ ಅಲ್ಲಿಗೆ ಹೋಗಲು ಸಾಧ್ಯವಾಗದಿರಬಹುದು. ಆದರೆ, ನಾವು ಒಂದು ಜನ ಸಮುದಾಯವಾಗಿ ಆ ‘‘ಭರವಸೆಯ ನೆಲ’’ವನ್ನು ತಲುಪುತ್ತೇವೆ ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು ಎಂದು ನಾನು ಬಯಸುತ್ತೇನೆ’’ ಎಂದು ಅವರು ಹೇಳಿದರು.
ಅದರ ಮಾರನೆ ದಿನ, ಅಂದರೆ 1968 ಎಪ್ರಿಲ್ 4ರಂದು ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ರನ್ನು ಹತ್ಯೆ ಮಾಡಲಾಯಿತು.
ಅವರ ಹತ್ಯೆಯ ಸುದ್ದಿ ಹರಡುತ್ತಲೇ ಅಮೆರಿಕದ 100ಕ್ಕೂ ಅಧಿಕ ನಗರಗಳಲ್ಲಿ ಹಿಂಸೆ ಸ್ಫೋಟಗೊಂಡಿತು. ಕೆಲವು ನಗರಗಳಲ್ಲಿ ಹಿಂಸೆ ಹಲವು ದಿನಗಳ ಕಾಲ ಮುಂದುವರಿಯಿತು. ನೂರಾರು ಕಟ್ಟಡಗಳಿಗೆ ಆಕ್ರೋಶಿತರು ಬೆಂಕಿ ಕೊಟ್ಟರು. 40ಕ್ಕೂ ಅಧಿಕ ಮಂದಿ ಪ್ರಾಣಗಳನ್ನು ಕಳೆದುಕೊಂಡರು. ಸಾವಿರಾರು ಮಂದಿಯನ್ನು ಬಂಧಿಸಲಾಯಿತು.
ಅದು ನಾಗರಿಕ ಯುದ್ಧದ ಬಳಿಕ ಅಮೆರಿಕ ಕಂಡ ಅತಿ ದೊಡ್ಡ ಸಾಮಾಜಿಕ ಅಶಾಂತಿಯಾಗಿತ್ತು. ಕೆಲವು ಬೃಹತ್ ಪ್ರಮಾಣದ ದೊಂಬಿಗಳು ವಾಶಿಂಗ್ಟನ್ ಡಿಸಿ, ಬಾಲ್ಟಿಮೋರ್, ಶಿಕಾಗೊ ಮತ್ತು ಕ್ಯಾನ್ಸಸ್ ಸಿಟಿ ನಗರಗಳಲ್ಲಿ ನಡೆದವು.
ದೊಂಬಿಗಳಲ್ಲಿ ಭಾಗವಹಿಸಿದವರ ಪೈಕಿ ಹೆಚ್ಚಿನವರು ಕರಿಯರು. ಆದರೆ, ಎಲ್ಲರೂ ಬಡವರಲ್ಲ. ಮಧ್ಯಮ ವರ್ಗದ ಬಡವರೂ ವ್ಯವಸ್ಥೆಯಲ್ಲಿರುವ ಅಸಮಾನತೆಯ ವಿರುದ್ಧ ಪ್ರತಿಭಟನೆ ನಡೆಸಿದರು.
ಪ್ರತ್ಯೇಕ ಕಾಲನಿಗಳು, ಪ್ರತ್ಯೇಕ ಶಾಲೆಗಳು...
1968ರ ಹಿಂಸಾಚಾರದ ಬಳಿಕ, ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸುವ ಕ್ರಮಗಳ ಬಗ್ಗೆ ಶಿಫಾರಸುಗಳನ್ನು ಮಾಡುವುದಕ್ಕಾಗಿ ಅಂದಿನ ಅಮೆರಿಕ ಅಧ್ಯಕ್ಷ ಲಿಂಡನ್ ಜಾನ್ಸನ್, ಕರ್ನರ್ ಆಯೋಗವನ್ನು ಸ್ಥಾಪಿಸಿದರು. ಆಯೋಗ ಸಲ್ಲಿಸಿದ ವರದಿಗೆ ಈಗ 52 ವರ್ಷಗಳೇ ತುಂಬಿವೆ, ಆದರೆ ಅದು ಬಹುತೇಕ ಮರೆತು ಹೋಗಿದೆ.
ಬಿಳಿಯರು ಮತ್ತು ಕರಿಯರಿಗಾಗಿ ಪ್ರತ್ಯೇಕ ಪೊಲೀಸ್ ವರ್ತನೆ, ಪ್ರತ್ಯೇಕ ಕಾಲನಿಗಳು ಮತ್ತು ಪ್ರತ್ಯೇಕ ಶಾಲೆಗಳು ಮುಂತಾದ ಪ್ರತ್ಯೇಕತೆಗಳನ್ನು ರದ್ದುಪಡಿಸಬೇಕೆನ್ನುವುದು ವರದಿಯ ಮುಖ್ಯಾಂಶಗಳಾಗಿದ್ದವು.
ಪ್ರತ್ಯೇಕ ಸಮಾಜಗಳ ಸ್ಥಾಪನೆಗೆ ಅವಕಾಶ ನೀಡುವ ನೀತಿಗಳಿಗೆ ಬೆಂಬಲ ನೀಡುವ ಮತ್ತು ಅವುಗಳ ಪರವಾಗಿ ಮತ ಹಾಕುವ ಮೂಲಕ ಬಿಳಿಯರು ತಮಗಾಗಿ ವ್ಯವಸ್ಥೆಯನ್ನು ತಿರುಚಿಕೊಂಡಿದ್ದಾರೆ ಎಂದೂ ಸಮಿತಿ ತನ್ನ ವರದಿಯಲ್ಲಿ ಹೇಳಿತು. ವಸತಿ, ಅವಕಾಶಗಳು ಮತ್ತು ಪೊಲೀಸ್ ವ್ಯವಸ್ಥೆಗಳಲ್ಲಿ ಕರಿಯರಿಗೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ಬೆಟ್ಟು ಮಾಡಿತು. ಆದರೆ, ವರದಿ ನಿಧಾನವಾಗಿ ಹಿನ್ನೆಲೆಗೆ ಸರಿಯಿತು. 52 ವರ್ಷಗಳ ಬಳಿಕ, ಅಮೆರಿಕದಲ್ಲಿ ಇಂದು ಅವೇ ತಾರತಮ್ಯಗಳ ವಿರುದ್ಧ ಜನರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ.
ಮಾನವ ಜೀವಗಳನ್ನು ಹೇಗೆ ಮರಳಿ ತರುತ್ತೀರಿ?
ಪ್ರತಿಭಟನಾಕಾರರು ತಮ್ಮ ಪಕ್ಕದ ಅಂಗಡಿಗಳನ್ನು ಯಾಕೆ ಸುಡುತ್ತಿದ್ದಾರೆ, ತಮ್ಮದೇ ಬೀದಿಗಳಿಗೆ ಯಾಕೆ ಬೆಂಕಿ ಕೊಡುತ್ತಿದ್ದಾರೆ ಎಂಬ ಪ್ರಶ್ನೆಗಳನ್ನು ಹಲವರು ಕೇಳುತ್ತಿದ್ದಾರೆ. ಇವು ತಮ್ಮ ಹತಾಶೆಯನ್ನು ವ್ಯಕ್ತಪಡಿಸುವ ರಚನಾತ್ಮಕ ವಿಧಾನಗಳೇ ಎಂಬ ಪ್ರಶ್ನೆಗಳೂ ಎದ್ದಿವೆ.
ಇವೇ ಪ್ರಶ್ನೆಗಳು 1960ರ ದಶಕದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಗಳ ವೇಳೆಯೂ ಕೇಳಿ ಬಂದಿದ್ದವು. ಈಗ ಅವೇ ಪ್ರಶ್ನೆಗಳು ಮತ್ತೆ ಎದುರಾಗಿವೆ.
ಮಾರ್ಟಿನ್ ಲೂಥರ್ ಕಿಂಗ್ (ಜೂನಿಯರ್)ರ ಹಿರಿಯ ಮಗ ತೃತೀಯ ಮಾರ್ಟಿನ್ ಲೂಥರ್ ಕಿಂಗ್ ಹೀಗೆ ಪ್ರತಿಕ್ರಿಯಿಸುತ್ತಾರೆ: ‘‘ಜನರು ಹತಾಶರಾದಾಗ ಹಾಗೂ ಅದನ್ನು ವ್ಯಕ್ತಪಡಿಸಲು ಅವಕಾಶವಿಲ್ಲದಾಗ ಹಾಗೂ ಭರವಸೆಯನ್ನು ಕಳೆದುಕೊಂಡಾಗ ಇಂತಹ ಘಟನೆಗಳು ಸಂಭವಿಸುತ್ತವೆ’’.
‘‘ಆದರೆ, ಇಂದು ಅಮೆರಿಕದ ರಸ್ತೆಗಳಲ್ಲಿ ನಡೆಯುತ್ತಿರುವ ದೊಂಬಿ ಮತ್ತು ಲೂಟಿಯನ್ನು ನಾನು ಮನ್ನಿಸುವುದಿಲ್ಲ. ಆದರೆ, ಜನರು ಮಾನವೀಯತೆಯನ್ನು ಎದುರು ನೋಡುತ್ತಾರೆ. ಎಲ್ಲಿದೆ ಮಾನವೀಯತೆ? ತನಗೆ ಉಸಿರಾಡಲು ಆಗುತ್ತಿಲ್ಲ ಎಂದು ಪರಿ ಪರಿಯಾಗಿ ಜಾರ್ಜ್ ಫ್ಲಾಯ್ಡ್ ಬೇಡಿಕೊಂಡರೂ ಆ ಪೊಲೀಸ್ ಅಧಿಕಾರಿಯಲ್ಲಿ ಮಾನವೀಯತೆ ಇರಲಿಲ್ಲ. ಆ ವ್ಯಕ್ತಿಯ ವಿರುದ್ಧದ ಆರೋಪಗಳು ಏನೇ ಇರಲಿ. ಅದರ ಬಗ್ಗೆ ಬೇರೆ ಚರ್ಚೆ ಮಾಡೋಣ. ತನಗೆ ಉಸಿರಾಡಲು ಆಗುತ್ತಿಲ್ಲ, ಕಾಲಿನ ಪಟ್ಟನ್ನು ಸ್ವಲ್ಪ ಸಡಿಲಿಸಿ ಎಂದು ಆ ವ್ಯಕ್ತಿ ಗೋಗರೆದರೂ ಪೊಲೀಸರಲ್ಲಿ ಮಾನವೀಯತೆ ಇರಲಿಲ್ಲ’’ ಎಂದು ಅವರು ಹೇಳುತ್ತಾರೆ.
‘‘ಜನರು ಅನುಭವಿಸುತ್ತಿರುವ ನೋವು, ಕಾತರ, ಹತಾಶೆಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಹಿಂಸಾಚಾರ ತಪ್ಪು. ಆದರೆ, ಕಟ್ಟಡಗಳನ್ನು ಮತ್ತೆ ನಿರ್ಮಿಸಬಹುದು. ಮಾನವ ಜೀವಗಳನ್ನು ಹೇಗೆ ಮರಳಿ ತರುತ್ತೀರಿ?’
ಇದು ನಮ್ಮ ಬಂಡಾಯ
ನಾವು ಈ ದೇಶದಲ್ಲಿ ಕಾಲಿಟ್ಟಂದಿನಿಂದಲೂ, ಕ್ಷಮಿಸಿ... ನಮ್ಮನ್ನು ದರೋಡೆ ಮಾಡಿ ಈ ದೇಶಕ್ಕೆ ಕರೆತಂದಂದಿನಿಂದಲೂ ನಮ್ಮ ವಿರುದ್ಧ ಅಪರಾಧಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ನಮ್ಮನ್ನು ತುಳಿಯುವುದನ್ನು, ನಮ್ಮ ಮೇಲೆ ದೌರ್ಜನ್ಯ ನಡೆಸುವುದನ್ನು, ನಮ್ಮನ್ನು ಬದಿಗೆ ಸರಿಸುವುದನ್ನು ಹಾಗೂ ಕೊಲ್ಲುವುದನ್ನು ನೀವು ಮುಂದುವರಿಸಲು ಸಾಧ್ಯವಿಲ್ಲ. ನೀವು ಹೀಗೆ ಮಾಡಿದರೂ ನಾವು ಎದ್ದು ನಿಲ್ಲುವುದಿಲ್ಲ ಹಾಗೂ ತಿರುಗಿ ಬೀಳುವುದಿಲ್ಲ ಎಂದು ನೀವು ಭಾವಿಸಬಾರದು. ಇದು ನಮ್ಮ ಬಂಡಾಯವಾಗಿದೆ. ಲೂಟಿಯಲ್ಲಿ ತೊಡಗಿರುವವರನ್ನು ನಾನು ಬೆಂಬಲಿಸುವುದಿಲ್ಲ. ಆದರೆ, ಅದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಇಲ್ಲಿನ ವ್ಯವಸ್ಥೆಗಳನ್ನು ನಮ್ಮ ಪರವಾಗಿ ರೂಪಿಸಲಾಗಿಲ್ಲ.
ಮಾರ್ಕಿಸ್ ಆರ್ಮ್ಸ್ಟ್ರಾಂಗ್, ಸಮುದಾಯ ಹೋರಾಟಗಾರ