‘ನಿರ್ದೇಶಕನ ಧರ್ಮ’ ನಿರ್ವಹಿಸಿರುವ ತೃಪ್ತಿಯಲ್ಲಿ ಕಿರಣ್ ರಾಜ್!
ರಕ್ಷಿತ್ ಶೆಟ್ಟಿ ನಟನೆಯ ‘777 ಚಾರ್ಲಿ’ ಚಿತ್ರದ ವಿಶೇಷ ಟೀಸರ್ ಒಂದು ನಿನ್ನೆ ಬಿಡುಗಡೆಯಾಗಿದೆ. ಅದನ್ನು ರಕ್ಷಿತ್ ಶೆಟ್ಟಿಯವರ ಜನ್ಮದಿನದ ಪ್ರಯುಕ್ತ ಬಿಡುಗಡೆಗೊಳಿಸಿರುವುದಾಗಿ ನಿರ್ದೇಶಕ ಕಿರಣ್ ರಾಜ್ ಹೇಳುತ್ತಾರೆ. ಅಂದಹಾಗೆ ಚಿತ್ರದಲ್ಲಿ ರಕ್ಷಿತ್ ಶೆಟ್ಟಿಯ ಪಾತ್ರದ ಹೆಸರು ಧರ್ಮ. ಇದು ಅವರ ನಿರ್ದೇಶನದ ಪ್ರಥಮ ಚಿತ್ರ. ಮೊದಲ ಚಿತ್ರದಲ್ಲೇ ರಕ್ಷಿತ್ ಶೆಟ್ಟಿಯಂತಹ ಸ್ಟಾರ್ ನಟನನ್ನು ನಿರ್ದೇಶಿಸುವ ಅವಕಾಶ ಅವರಿಗೆ ದೊರಕಿದ್ದು ಹೇಗೆ? ಕಿರಣ್ ರಾಜ್ ಅವರ ಹಿನ್ನೆಲೆ ಏನು ಮತ್ತು ಚಿತ್ರದ ವಿಶೇಷತೆಗಳ ಕುರಿತಾದ ಪ್ರಶ್ನೆಗಳಿಗೆ ಅವರು ‘ವಾರ್ತಾಭಾರತಿ’ಗೆ ನೀಡಿದ ಉತ್ತರಗಳು ಇಲ್ಲಿವೆ.
ಚಿತ್ರರಂಗಕ್ಕೆ ನಿಮ್ಮ ಪ್ರವೇಶವಾಗಿದ್ದು ಹೇಗೆ?
ನನ್ನದು ಮೂಲತಃ ಕಾಸರಗೋಡು. ಡಾ.ವಿಷ್ಣುವರ್ಧನ್ ಅವರ ಮೂರನೇ ಪುಣ್ಯತಿಥಿಯ ಅಂಗವಾಗಿ ಬೆಂಗಳೂರಿನಲ್ಲಿ ನಡೆದ ಕಿರುಚಿತ್ರ ಸ್ಪರ್ಧೆಯಲ್ಲಿ ನನ್ನ ‘ಕಬ್ಬಿನ ಹಾಲು’ ಕಿರುಚಿತ್ರಕ್ಕೆ ಮೊದಲ ಸ್ಥಾನ ದೊರಕಿತ್ತು. ಅದರ ತೀರ್ಪುಗಾರರಾಗಿದ್ದ ನಿರ್ದೇಶಕ ಜಯತೀರ್ಥ ಅವರು, ತಮ್ಮ ‘ಟೋನಿ’ ಸಿನೆಮಾಕ್ಕೆ ಸಹಾಯಕ ನಿರ್ದೇಶಕನಾಗಲು ನನ್ನನ್ನು ಆಹ್ವಾನಿಸಿದರು. ಅಲ್ಲಿ ನನಗೆ ಪರಿಚಯವಾದ ಇಮ್ರಾನ್ ಸರ್ದಾರಿಯ ಅವರು ನನ್ನನ್ನು ತಮ್ಮ ‘ಎಂದೆಂದಿಗೂ’ ಚಿತ್ರಕ್ಕೆ ಅಸಿಸ್ಟೆಂಟ್ ಆಗಿ ನೇಮಿಸಿಕೊಂಡರು. ಅದರ ಬಳಿಕ ಆ ಚಿತ್ರದ ನಿರ್ಮಾಪಕರಾದ ಎಸ್.ವಿ ಬಾಬು ಅವರು ನಿರ್ಮಿಸಿದ ಮತ್ತೊಂದು ಚಿತ್ರ ‘ರಿಕ್ಕಿ’ಯಲ್ಲಿ ನಿರ್ದೇಶಕ ರಿಷಭ್ ಸರ್ ಮೂಲಕ ನನಗೆ ಅವಕಾಶ ಮಾಡಿಕೊಟ್ಟರು. ಹಾಗೆ ಕನ್ನಡ ಚಿತ್ರರಂಗದಲ್ಲಿ ಒಂದೊಂದೇ ಹೆಜ್ಜೆ ಇರಿಸತೊಡಗಿದೆ.
ನಿರ್ದೇಶಕನಾಗುವುದೇ ನಿಮ್ಮ ಗುರಿ ಆಗಿತ್ತೇ?
ನಿಜ ಹೇಳಬೇಕೆಂದರೆ ಚಿತ್ರರಂಗ ಪ್ರವೇಶಿಸುವ ಮೊದಲು ನನಗೆ ನಟನಾಗುವ ಕನಸಿತ್ತು. ಊರಿನಲ್ಲೇ ಬೀದಿ ನಾಟಕ ಮೊದಲಾದವುಗಳಲ್ಲಿ ತೊಡಗಿಸಿಕೊಂಡಿದ್ದೆ. ಸ್ನೇಹಿತರೊಂದಿಗೆ ಸೇರಿ ‘ಕಾವಳ’ ಎನ್ನುವ ಕತೆ ಬರೆದು ಟೆಲಿಫಿಲ್ಮ್ ಮಾಡಿದ್ದೆ. ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳು ಉನ್ನತ ಶಿಕ್ಷಣಕ್ಕಾಗಿ ನಗರ ಸೇರಿದಾಗ ಅವರು ಎದುರಿಸುವ ಸಮಸ್ಯೆಗಳ ಬಗ್ಗೆ ಚಿತ್ರ ಮಾಡಿದ್ದೆ. ಅದು ಶಾಲೆಗಳಲ್ಲಿ ನೂರಾರು ಪ್ರದರ್ಶನ ಕಂಡಿತ್ತು. ಆನಂತರದ್ದು ‘ಕಬ್ಬಿನ ಹಾಲು’. ನಿರ್ದೇಶಕನಾಗಿ ದೊಡ್ಡ ಸಿನೆಮಾ ಮಾಡಿಲ್ಲವಾದರೂ, ರಿಷಭ್ ಶೆಟ್ಟಿಯವರ ‘ಕಥಾ ಸಂಗಮ’ದಲ್ಲಿ ‘ಸಾಗರ ಸಂಗಮ’ ಎನ್ನುವ ಒಂದು ಚಿತ್ರವನ್ನು ನಾನು ನಿರ್ದೇಶಿಸಿದ್ದೆ. ಅದರಲ್ಲಿ ರಿಷಭ್ ಸರ್ ಮತ್ತು ಹರಿಪ್ರಿಯಾ ನಟಿಸಿದ್ದರು. ಇದೀಗ ಚಾರ್ಲಿಯ ಮೂಲಕ ರಕ್ಷಿತ್ ಶೆಟ್ಟಿಯವರನ್ನು ನಿರ್ದೇಶಿಸುವ ಅವಕಾಶ ದೊರಕಿದೆ.
ನಿನ್ನೆ ಬಿಡುಗಡೆಯಾದ ‘777 ಚಾರ್ಲಿ’ಯ ಟೀಸರ್ ಗೆ ಸಿಕ್ಕಿರುವ ಪ್ರತಿಕ್ರಿಯೆ ಹೇಗಿದೆ?
ಅದನ್ನು ಚಿತ್ರದ ಟೀಸರ್ ಎನ್ನುವುದಕ್ಕಿಂತ ರಕ್ಷಿತ್ ನಿರ್ವಹಿಸಿರುವ ಧರ್ಮನ ಪಾತ್ರವನ್ನು ಪರಿಚಯ ಮಾಡುವ ದೃಶ್ಯಗಳು ಎನ್ನಬಹುದು. ಅದರ ಬಿಡುಗಡೆಯಾದ ತಕ್ಷಣ ಹಲವಾರು ಮಂದಿ ಫೋನ್ ಮಾಡಿ ಅಭಿನಂದಿಸಿದ್ದಾರೆ. ರಕ್ಷಿತ್ ಅವರು ಡಬ್ಬಿಂಗ್ ವೇಳೆಯಲ್ಲೇ ಮೆಚ್ಚಿದ್ದಾರೆ. ಕೆಲವು ಸನ್ನಿವೇಶಗಳನ್ನು ರಿಪೀಟ್ ಆಗುವಂತೆ ತೋರಿಸಿದ್ದರೂ ಆ ಶೈಲಿ ಚಿತ್ರದಲ್ಲಿ ಇರುವುದಿಲ್ಲ. ಆದರೆ ಹಿನ್ನೆಲೆ ಸಂಗೀತದ ವಿಚಾರಕ್ಕೆ ಬಂದರೆ ಸಿನೆಮಾ ಕೂಡ ಇದೇ ರೀತಿಯ ಮ್ಯೂಸಿಕ್ ಇಂಪ್ಯಾಕ್ಟ್ ಮೂಡಿಸಲಿದೆ. ನಾವು ಸಿನೆಮಾ ಟೀಸರನ್ನೇ ತಯಾರು ಮಾಡಲು ಹೊರಟಿದ್ದೆವು. ಆದರೆ ಈಗಾಗಲೇ ಶೂಟಿಂಗ್, ಚಿತ್ರ ಬಿಡುಗಡೆ ಮೊದಲಾದವು ಮುಂದೆ ಹೋಗಿರುವ ಕಾರಣ, ಟೀಸರ್ ಅಲ್ಲಿರುವ ಅಂಶಗಳನ್ನು ಅಡಗಿಸಿ ಈ ಬರ್ತ್ ಡೇ ಟೀಸರ್ ಮಾಡಿದ್ದೇವೆ. ಎಷ್ಟು ತಡವಾದರೂ ಪರವಾಗಿಲ್ಲ, ಸಿನೆಮಾವನ್ನು ಥಿಯೇಟರಲ್ಲೇ ತರಬೇಕು ಎನ್ನುವ ನಿರ್ಧಾರ ನಮ್ಮದಾಗಿದೆ. ಯಾಕೆಂದರೆ ಡಾಗ್ ಶೋ ಸೇರಿದಂತೆ ಚಿತ್ರಮಂದಿರದಲ್ಲೇ ನೋಡಬೇಕಾದ ಒಂದಷ್ಟು ಆಕರ್ಷಕ ಅಂಶಗಳು ಚಿತ್ರದಲ್ಲಿವೆ.
ರಕ್ಷಿತ್ ಶೆಟ್ಟಿ ಸ್ವತಃ ನಿರ್ದೇಶಕರಾದ ಕಾರಣ ಇಲ್ಲಿ ನಿಮ್ಮನ್ನು ಎಷ್ಟರ ಮಟ್ಟಿಗೆ ನಿಯಂತ್ರಿಸಿದ್ದಾರೆ?
ಅವರು ತಾವು ಕತೆ, ಚಿತ್ರಕತೆ ಬರೆದಾಗ ಮಾತ್ರ ಆ ಚಿತ್ರದಲ್ಲಿ ಸಜೆಶನ್ ನೀಡುತ್ತಾರೆ. ಇತರರ ಕತೆ ಇರುವಾಗ ಅವರು ತಮ್ಮ ಅಭಿಪ್ರಾಯ ಹೇಳಿದಂತಹ ಉದಾಹರಣೆಗಳಿಲ್ಲ. ಇದು ನನ್ನದೇ ಕತೆ, ಚಿತ್ರಕತೆ ಇರುವ ಚಿತ್ರ. ಹಾಗಾಗಿ ಒಮ್ಮೆ ಕತೆ ಒಪ್ಪಿದ ಮೇಲೆ ಅವರು ನಾನು ನೀಡಿದ ಸನ್ನಿವೇಶಗಳಿಗೆ ಮೆಚ್ಚುಗೆ ಹೇಳಿದ್ದು ಬಿಟ್ಟರೆ ಯಾವುದೇ ಬದಲಾವಣೆ ಬಯಸಿಲ್ಲ. ಇನ್ನು ನಿರ್ಮಾಪಕರ ವಿಚಾರಕ್ಕೆ ಬಂದರೆ ಅವರು ಕೂಡ ಬಜೆಟ್ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎನ್ನುತ್ತಿರುತ್ತಾರೆ. ಹಾಗಾಗಿ ನಿರ್ಮಾಣ ವೆಚ್ಚ ತಗ್ಗಿಸಲಿಕ್ಕಾಗಿ ಕೂಡ ಯಾವುದೇ ಹೊಂದಾಣಿಕೆ ಮಾಡುವ ಅಗತ್ಯ ಬಂದಿಲ್ಲ. ಆದುದರಿಂದ ಪೂರ್ತಿ ಚಿತ್ರ ನನ್ನ ನಿಯಂತ್ರಣದಲ್ಲೇ ಇತ್ತು ಎಂದು ಸಂತೃಪ್ತಿಯಿಂದ ಹೇಳಬಲ್ಲೆ. ಪೂರ್ತಿ ಚಿತ್ರ ನೋಡಿದಾಗ ಪ್ರೇಕ್ಷಕರಿಗೂ ಅವರು ಈ ಹಿಂದೆ ಮಾಡಿರುವ ಚಿತ್ರಗಳಿಗಿಂತ ವಿಭಿನ್ನವಾಗಿ ಕಾಣಿಸಲಿದೆ ಎನ್ನುವ ಭರವಸೆ ನೀಡಬಲ್ಲೆ.
‘777 ಚಾರ್ಲಿ’ ಚಿತ್ರದ ಪ್ರಮುಖ ವಿಶೇಷತೆಗಳೇನು?
ಇದುವರೆಗೆ ಬಂದಿರುವ ನಾಯಿ ಮನುಷ್ಯನ ಕತೆಗಿಂತ ವಿಭಿನ್ನವಾದ ಕತೆ ಇದರಲ್ಲಿದೆ. ಅಂದರೆ ಇಲ್ಲಿ ಭಾವನೆಗಳ ಜತೆಗೆ ಪ್ರೇಕ್ಷಕನಿಗೆ ಕನೆಕ್ಟ್ ಆಗಲುಹೆಚ್ಚು ಅವಕಾಶಗಳಿವೆ. ಪಶುವೈದ್ಯರಾಗಿ ರಾಜ್ ಬಿ.ಶೆಟ್ಟಿಅಭಿನಯಿಸಿದ್ದಾರೆ. ಚಿತ್ರವನ್ನು ಪಂಜಾಬ್ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಚಿತ್ರೀಕರಿಸಲಾಗುತ್ತಿದೆ. ದೃಶ್ಯ, ಹಿನ್ನೆಲೆ ಸಂಗೀತ ಸೇರಿದಂತೆ ಒಟ್ಟು ಎಲ್ಲ ಕಾರಣಗಳಿಂದಲೂ ಸಿನೆಮಾ ಪ್ರೇಕ್ಷಕರಲ್ಲಿ ಒಂದು ಫ್ರೆಶ್ ಮೂಡ್ ತರುವುದೆನ್ನುವ ನಿರೀಕ್ಷೆ ಇದೆ.