varthabharthi


Social Media

ಸೌಹಾರ್ದದ ಕಥೆ ಹೇಳಿದ ಶ್ಯಾಮಲಾ ಟೀಚರ್

ಆಸಿಫ್-ದೇವದಾಸ್-ಭಾಗ್ಯರಾಜ್: ಅಪಘಾತದಲ್ಲಿ ಮೃತಪಟ್ಟ ಯುವಕನಿಗಾಗಿ ನಡುರಾತ್ರಿಯಲ್ಲಿ ಒಂದಾದ ಸಹೋದರರು

ವಾರ್ತಾ ಭಾರತಿ : 7 Jun, 2020

ಇತ್ತೀಚೆಗೆ ಅಬುಧಾಬಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಯುವಕರೊಬ್ಬರು ಮೃತಪಟ್ಟಿದ್ದು, ಮನೆಯವರ ಮಾಹಿತಿ ಲಭ್ಯವಾಗುತ್ತಿಲ್ಲ ಎನ್ನುವ ಬಗ್ಗೆ ‘ವಾರ್ತಾಭಾರತಿ’ಗೆ ಅಬುಧಾಬಿಯ ಓದುಗರು ತಿಳಿಸಿದ್ದರು. ಈ ಬಗ್ಗೆ ‘ವಾರ್ತಾಭಾರತಿ’ ಮೃತ ಯುವಕನ ಫೇಸ್ ಬುಕ್ ಖಾತೆಯನ್ನು ಪರಿಶೀಲಿಸಿದ್ದು, ಅದರಲ್ಲಿ ಕೈಕಂಬ ಶಾಲೆಯಲ್ಲಿ ಅವರು ಕಲಿತಿದ್ದರು ಎನ್ನುವ ಮಾಹಿತಿ ಲಭಿಸಿತ್ತು. ಇದರ ಆಧಾರದಲ್ಲಿ ತಂಡವು ಕೈಕಂಬದ ಸೂರಲ್ಪಾಡಿಯ ಓದುಗ, ಉದ್ಯಮಿ, ತೋಡಾರು ಆದರ್ಶ್ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಆಸಿಫ್ ರನ್ನು ಸಂಪರ್ಕಿಸಿ ಮಾಹಿತಿ ನೀಡಿತ್ತು. ಆನಂತರ ಆಸಿಫ್ ಮತ್ತಿತರರು ನಡೆಸಿದ ಪ್ರಯತ್ನದಿಂದಾಗಿ ಮೃತ ಯುವಕನ ಮನೆಯವರಿಗೆ ವಿಷಯ ತಿಳಿದಿತ್ತು. ಆಸಿಫ್ ಕರೆ ಮಾಡಿದ್ದು ಯಾರಿಗೆ?, ಆಸಿಫ್ ಕರೆ ಮಾಡಿದ ವ್ಯಕ್ತಿ ಯಾವ ರೀತಿಯ ಪ್ರಯತ್ನಗಳನ್ನೆಲ್ಲಾ ನಡೆಸಿ ಮನೆಯವರಿಗೆ ಮಾಹಿತಿ ನೀಡಿದ್ದರು ಎನ್ನುವ ಬಗ್ಗೆ ಕೈಕಂಬದ ರೋಝಾ ಮಿಸ್ಟಿಕಾ ಸ್ಕೂಲ್ ಶಿಕ್ಷಕಿ ಶ್ಯಾಮಲಾ ಟೀಚರ್ ಬರೆದಿರುವ ಫೇಸ್ ಬುಕ್ ಪೋಸ್ಟ್ ಈ ಕೆಳಗಿದೆ.

.........................

ಮಾನವೀಯತೆಯ ಮುಂದೆ ಜಾತಿ-ಧರ್ಮದ ಬಂಧವಿದೆಯೇ? ಹೀಗೊಂದು ಜಿಜ್ಞಾಸೆ:

ಮುಂಜಾನೆಯಷ್ಟೇ ಫೇಸ್‌ ಬುಕ್‌ ನಲ್ಲಿ ಆದಿತ್ಯ ನಾರಾಯಣ ಎಂಬವರು ಮೊನ್ನೆ ತಾನೆ ನಡೆದ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ ಬಂಟ್ವಾಳ ಪೋಲಿಸ್ ಠಾಣೆಯ ಸಿಬ್ಬಂದಿಗಳ ಮಾನವೀಯತೆಯ ಬಗ್ಗೆ ಬರೆದದ್ದು ನನಗೆ ತುಂಬ ಇಷ್ಟವಾಯಿತು. ರಾತ್ರಿ ಹೊತ್ತಲ್ಲಿ ಲಾರಿ ಚಾಲಕರೊಬ್ಬರ ಅಜಾಗರೂಕತೆಯಿಂದ ಬೈಕಲ್ಲಿ ಸಂಚರಿಸುತ್ತಿದ್ದ ಇವರು ಸ್ಕಿಡ್ ಆಗಿ ಬಿದ್ದ ಅಸಹಾಯಕತೆ ಸ್ಥಿತಿಯಲ್ಲಿ ಠಾಣೆಗೆ ಮಾಡಿದ ಕಾಲ್ ಕಾರ್ಯನಿರತವಾಗದೇ ಇದ್ದಾಗ ಗೂಗಲ್ ಸರ್ಚ್ ನಲ್ಲಿ ಸಿಕ್ಕಿದ ಎಸ್ಐ ಯವರಿಗೆ ಕಾಲ್ ಮಾಡಿದಾಗ ಕೂಡಲೇ ಅವರು ಬಂಟ್ವಾಳ ಠಾಣೆಯನ್ನು ಸಂಪರ್ಕಿಸಿ ಆ್ಯಂಬುಲೆನ್ಸ್ ಹಾಗೂ ಸಿಬ್ಬಂದಿಗಳನ್ನು ಕಳಿಸಿಕೊಟ್ಟು ಮಾನವೀಯತೆ ಮೆರೆದರು. ಈ ಸಿಬ್ಬಂದಿಗಳ ಮೇಲಿನ ಕೃತಜ್ಞತೆಯಿಂದ ಆದಿತ್ಯರು ಸೆಲ್ಫೀ ತೆಗೆಯೋಣ ಎಂದಾಗ " ರೀ, ಇಂತಹ ಸಣ್ಣಪುಟ್ಟ ವಿಚಾರಗಳಿಗೆಲ್ಲ ಪ್ರಚಾರ ಬಯಸಲು ನಾವೇನೂ ರಾಜಕಾರಣಿಗಳಲ್ಲ...ಕರ್ತವ್ಯನಿರತ ಪೋಲೀಸರು" ಎಂದ ಇವರ ಮಾತು ನಿಜಕ್ಕೂ ಶ್ಲಾಘನೀಯವಲ್ಲವೇ?

ನಿನ್ನೆ ರಾತ್ರಿ ಒಂದು ಘಂಟೆಯ ಅವೇಳೆಗೆ ಅನಿರೀಕ್ಷಿತವಾಗಿ ನಮ್ಮ ದೇವದಾಸನ ಕರೆ ಬಂದಾಗ ನನಗೆ ಅಚ್ಚರಿಯಾಯಿತು. ಆತ ಒಬ್ಬನ ಭಾವಚಿತ್ರ ಹಾಗೂ ಫೇಸ್‌ಬುಕ್‌ ಪ್ರೊಫೈಲ್ ಪೇಜನ್ನು ಕಳಿಸಿ ಈತನ ಮನೆಯವರ ಮಾಹಿತಿ ಕಲೆಹಾಕಬಹುದಾ ಎಂದು ಕೇಳಿದ. ಏನಾಯ್ತಂದರೆ ಆತನಿಗೆ ಸುಮಾರು 11.45ರ ವೇಳೆಗೆ ತೋಡಾರ್ ಆಸಿಫ್ ಎಂಬವನಿಂದ ಕರೆ ಬಂದಿದ್ದು ಈ ಹುಡುಗನಿಗೆ ಅಬುದಾಭಿಯಲ್ಲಿ ಅಪಘಾತವಾಗಿದ್ದು ಮನೆಯವರ ಕಾಂಟ್ಯಾಕ್ಟ್ ಬೇಕಿತ್ತು, ದಯಮಾಡಿ ಸಹಾಯಮಾಡಬಲ್ಲಿರಾ ಎಂದು ಕೇಳಿದ್ದ. ದೇವದಾಸನಾದರೋ ತನಗೆ ಗುರುತುಪರಿಚಯವಿಲ್ಲದ ಈತನ ಪ್ರೊಫೈಲ್ ಜಾಲಾಡಿ ಯಾರ್ಯಾರಿಗೋ ಕರೆ ಮಾಡಿದ್ರೂ ಏನೊಂದೂ ಪ್ರಯೋಜನವಾಗದೆ ಕೊನೆಗೆ ಆತನ ಪ್ರೊಫೈಲ್ ನಲ್ಲಿ ರೋಸಾಮಿಸ್ತಿಕಾ ಹೆಸರು ಕಂಡಾಗ ತತ್ ಕ್ಷಣ ನನ್ನ ನೆನಪಾಗಿ  ಸುಮಾರು  ಒಂದು ಗಂಟೆ ಹೊತ್ತಿಗೆ ನಂಗೆ ಕರೆ ಮಾಡಿದ್ದ...

ರಾತ್ರಿ ಹೊತ್ತಿನ ಎಮರ್ಜೆನ್ಸಿ ಅನುಭವ ನನಗಿದ್ದುದರಿಂದ ಸಾಮಾನ್ಯವಾಗಿ ಗಾಢನಿದ್ರೆಯಲ್ಲಿದ್ದರೂ ಅಲರ್ಟ್ ಆಗಿರುತ್ತೇನೆ. ಆತನ ಪ್ರೊಫೈಲ್ ನ ಆಧಾರದಲ್ಲಿ ಮ್ಯೂಚುವಲ್ ಫ್ರೆಂಡ್ ನಾಲ್ಕು ಮಂದಿಯಲ್ಲಿ ಇಬ್ಬರ ನಂಬರ್ ನನ್ನಲ್ಲಿರಲಿಲ್ಲ, ನೆಟ್ ಆಫ್ ಆಗಿತ್ತು... ಇನ್ನಿಬ್ಬರ ಮೊಬೈಲ್‌ ಸ್ವಿಚ್ ಆಫ್ ಆಗಿತ್ತು. ಇನ್ನೇನಪ್ಪಾ ಮಾಡೋದು ಎಂದು ಆಲೋಚಿಸುತ್ತಿರಲು ಅದಾಗಲೇ ಅಲರ್ಟ್ ಆಗಿದ್ದ ನನ್ನ ಮಗಳು ಅಮ್ಮಾ ಈ ಕೂಡಲೇ ಭಾಗ್ಯರಾಜಣ್ಣನಿಗೆ ಕರೆ ಮಾಡು ಎಂದು ಆಜ್ಞಾಪಿಸಿಯೇ ಬಿಟ್ಟಳು. ಎಷ್ಟೆಂದರೂ ಆಕೆಯ ಬಾಲ್ಯಕಾಲದ ಗ್ಯಾಂಗ್ ಹೀರೋ ಆಗಿದ್ದದ್ದೇ ಈ ಭಾಗ್ಯರಾಜ್!!!

ಸರಿ, ಕರೆ ಮಾಡಿ ಒಂದು ರಿಂಗ್ ಆಗುವಷ್ಟರಲ್ಲೇ ಅತ್ಯಂತ ಕೂಲಾಗಿ ಹೇಳಿ ಮೇಡಮ್ ಅಂದಾಗ ನನ್ನ ಜನ್ಮ ಸಾರ್ಥಕ ಆಯ್ತು ಅಂದ್ಕೊಂಡೆ. ನನಗೆ ಬಂದ ಮೆಸೇಜ್ ಅನ್ನು ಫಾರ್ವರ್ಡ್ ಮಾಡಿ ವಿಷಯ ತಿಳಿಸಿದೆ. ದೇವದಾಸನ ನಂಬರನ್ನೂ ನೀಡಿದೆ, ಆತನಿಂದ ಆಸಿಫ್ ನಂಬರ್, ಇನ್ನಿತರ ಹಲವಾರು ಮಂದಿಯನ್ನು ಆ ಹೊತ್ತಲ್ಲಿ ಕರೆಮಾಡಿ ಕೊನೆಗೂ ಆರೇಳು ಮಂದಿಯನ್ನು ಸಂಪರ್ಕಿಸುವಲ್ಲಿ ಯಶಸ್ವಿಯಾಗಿ ಸುಮಾರು ಎರಡು ಗಂಟೆಯ ಹೊತ್ತಿಗೆ ಆತನ ಮನೆಯನ್ನು, ಮನೆಯವರ ಕಾಂಟ್ಯಾಕ್ಟ್ ನಂಬರನ್ನು ಸಂಪಾದಿಸಿದ ತೃಪ್ತಿಯಲ್ಲಿ ಭಾಗ್ಯರಾಜನ ಕರೆ ಬಂದಾಗಲೇ ನನಗೂ ಸಮಾಧಾನವಾಗಿದ್ದು.! ರಾತ್ರಿ ಹೊತ್ತಾದ ಕಾರಣ ಮನೆಮಂದಿ ಕರೆ ಸ್ವೀಕರಿಸಿರಲಿಲ್ಲ.

ಬಹುಷಃ ರಾತ್ರಿ ಒಂದು ಗಂಟೆಯಿಂದ ಭಾಗ್ಯರಾಜ್ ನಿದ್ರಿಸಿರಲಾರ. ಅಬುದಾಭಿಯ ಮಿತ್ರರನ್ನು, ಗಣ್ಯರನ್ನು ಸಂಪರ್ಕಿಸಿ ಅಲ್ಲಿನ ವ್ಯವಹಾರ ಸುಸೂತ್ರವಾಗಿ ನಡೆಯುವಂತೆ ನೋಡಿಕೊಂಡ. ಅಪಘಾತಕ್ಕೀಡಾದವನ ಮನೆಮಂದಿಗೆ ಮುಂಜಾನೆ ಕರೆಮಾಡಿದುದಲ್ಲದೆ, ಪಾಪ ಭಾಷೆ ಬಾರದೆ ಸಂವಹನ ಸಮಸ್ಯೆಯಿಂದಾಗಿ ಭಾಗ್ಯರಾಜನೇ ಅವರ ಮನೆಗೆ ತೆರಳಿದ. ಅಷ್ಟರಲ್ಲಾಗಲೇ ಇವನಿಂದ ಮಾಹಿತಿ ಪಡೆದ ಆಸಿಫ್ ಹಾಗೂ ಇತರ ಹಿಂದೂ ಮುಸಲ್ಮಾನ ಮಿತ್ರರೂ ಅಲ್ಲಿ ಬಂದು ಸೇರಿದ್ದರಂತೆ. ಅಂತೂ ಇಂತೂ ಊಟನಿದ್ರೆ ಬಿಟ್ಟು ಎಲ್ಲಾ ವ್ಯವಸ್ಥೆ ಮಾಡಿ ಭಾಗ್ಯರಾಜ ತನ್ನ ಆಫೀಸಿಗೆ ತೆರಳುವಾಗ ಎರಡು ಗಂಟೆ ದಾಟಿತ್ತು. ವಿಷೇಶ ಏನೆಂದರೆ ಇಲ್ಲಿಯೂ, ಅಬುದಾಭಿಯಲ್ಲೂ ಸಹಾಯಕ್ಕೆ ಸಿಕ್ಕವರಲ್ಲಿ ಅನೇಕರು ಮುಸಲ್ಮಾನ ಮಿತ್ರರು!

ಇದೇ ಭಾಗ್ಯರಾಜ್ ಮೊನ್ನೆ ಮೊನ್ನೆ ಅಪಘಾತಕ್ಕೀಡಾದ ಮುಸಲ್ಮಾನ ಹುಡುಗನೊಬ್ಬನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ ವಿಚಾರವೂ ನನಗೆ ತಿಳಿದುಬಂತು.

ಪಾಣೆಮಂಗಳೂರಿನಲ್ಲಿ ಇತ್ತೀಚೆಗೆ ನೇತ್ರಾವತಿ ನದಿಗೆ ಹಾರಿದ ಹಿಂದೂ ಯುವಕನನ್ನು ನೀರಿನಿಂದ ಮೇಲಕ್ಕೆತ್ತಿ ರಕ್ಷಣೆ ಮಾಡಲು ಹೊರಟವರು ನಾಲ್ಕುಮಂದಿ ಮುಸಲ್ಮಾನ ಯುವಕರು.

ಮೊನ್ನೆಮೊನ್ನೆ ಮಂಜೇಶ್ವರದಲ್ಲಿ ಸಮುದ್ರಕ್ಕೆ ಹಾರಿದ ಮುಸಲ್ಮಾನನೊಬ್ಬನನ್ನು ರಕ್ಷಿಸಿದ್ದು ಹಿಂದೂ ಧರ್ಮದವರು.

ಮೊನ್ನೆ ರಂಜಾನ್ ಸಮಯದಲ್ಲಿ ನನ್ನ ಫೇಸ್‌ಬುಕ್‌ ಮಿತ್ರರೊಬ್ಬರು ಮುಸಲ್ಮಾನ ಬಾಂಧವರಿಗೆ ಶುಭಾಶಯಗಳನ್ನು ತಿಳಿಸುತ್ತಾ ತಾವು ಮಗಳೊಂದಿಗೆ ಪ್ರವಾಸದ ವೇಳೆ ವಿದೇಶದ ಮಸೀದಿಯೊಂದಕ್ಕೆ ಭೇಟಿ ನೀಡಿದ ಫೋಟೋ ಪೋಸ್ಟ್ ಮಾಡಿದ್ದರು. ಅದ್ಯಾವಾಕೆಯೋ ಭೇದಭಾವದ ವಿಚಾರ ತೆಗೆದು ನಮ್ಮ ಮನಸ್ಥಿತಿ ಬದಲಾಗಬೇಕು ಎಂದು ಟೀಕಿಸಿದ್ದು ಓದಿದಾಗ ಭೇದಭಾವ ಯಾರಲ್ಲಿ ಎಂಬ ಜಿಜ್ಞಾಸೆ ಹುಟ್ಟಿ ವಿಷಾದವೆನಿಸಿತ್ತು. ಮಿತ್ರರಾದರೋ ಸೌಹಾರ್ದತೆಯನ್ನೇ ಮೆರೆದ ಸೌಜನ್ಯಶೀಲರು. 

ಈಗ ಹೇಳಿ ಈ ಸೌಹಾರ್ದತೆ, ಮಾನವೀಯತೆಯ ಮುಂದೆ ಈ ಧರ್ಮಾಂಧತೆ ನಮ್ಮಲ್ಲಿ ಯಾಕೆ?

ತನ್ನ ಜಾತಿಯಲ್ಲದವನ ಬಗ್ಗೆ ಕಾಳಜಿತೋರಿದ ಆಸಿಫ್, ಗುರುತುಪರಿಚಯವಿಲ್ಲದವನಿಗಾಗಿ ನಿದ್ರೆಕೆಟ್ಟು ಪರದಾಡಿದ ದೇವದಾಸ್, ಅವೇಳೆಯಲ್ಲೂ ಕರೆ ಸ್ವೀಕರಿಸಿ ಮುಂದಿನ ದಿಟ್ಟಹೆಜ್ಜೆ ಇಟ್ಟ ಭಾಗ್ಯರಾಜ್ ಇವರ ಶ್ರಮ ಇಲ್ಲದಿದ್ದಲ್ಲಿ ವೀಸಾ ಅವಧಿ ಮುಗಿದು, ಊರಿನ ಕಾಂಟ್ಯಾಕ್ಟ್ ತಪ್ಪಿ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿ ಅಪಘಾತಕ್ಕೀಡಾಗಿ ದುರ್ಮರಣ ಹೊಂದಿದ ಈ ನನ್ನ ಶಿಷ್ಯ ಕುಟುಂಬಸ್ಥರಿಗೂ ಗೊತ್ತಾಗದೆ ಹೇಳಹೆಸರಿಲ್ಲದಂತಾಗುತ್ತಿದ್ದನೋ ಏನೋ!, ಹಾಗಿದ್ದಲ್ಲಿ ಇವರನ್ನೆಲ್ಲಾ ಅನರ್ಘ್ಯ ರತ್ನಗಳೆನ್ನದೆ ಇನ್ನೇನನ್ನಲಿ? ಇವರೊಂದಿಗೆ ಜೊತೆ ಸೇರಿದ ಉಳಿದೆಲ್ಲಾ ಹಿಂದೂ ಮುಸಲ್ಮಾನ ಬಾಂಧವರೂ ಚೊಕ್ಕ ಚಿನ್ನವೇ ಅಲ್ಲವೇ?  ದುರ್ಮರಣಕ್ಕೀಡಾದ ಶಿಷ್ಯನ ಮುಂದಿನ ವಿಧಿವಿಧಾನಗಳು ಸರಾಗವಾಗಿ ನಡೆಯಲಿ, ಆತನ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬ ವರ್ಗಕ್ಕೆ ದುಃಖವನ್ನು ಸಹಿಸುವ ಶಕ್ತಿ ಆ ಭಗವಂತ ನೀಡಲಿ ಎಂಬುದೇ ನನ್ನ ಸದಾಶಯಗಳು.

ಈ ಹೊತ್ತಲ್ಲಿ ನನ್ನ ಮಗಳು ಇಷ್ಟಪಟ್ಟ ಒಂದು Quote ಅನ್ನು ಇಲ್ಲಿ ಪ್ರಕಟಿಸುತ್ತೇನೆ. 

ಏನಾದರಾಗಲೀ ನಾವು ನಕಾರಾತ್ಮಕ ಧೋರಣೆಯನ್ನು ತೊರೆದು ಸಕಾರಾತ್ಮಕವಾಗಿ ಬದುಕಲು ಕಲಿಯೋಣ.

 " ಸರ್ವೇ ಜನಾಃ ಸುಖಿನೋ ಭವಂತು "

(ಬರಹ: ಶ್ಯಾಮಲಾ ಟೀಚರ್, ರೋಝಾ ಮಿಸ್ಟಿಕಾ ಸ್ಕೂಲ್ ಕೈಕಂಬ) 

ಶ್ಯಾಮಲಾ ಟೀಚರ್ ಅವರ ಫೇಸ್ ಬುಕ್ ಪೋಸ್ಟ್ ಈ ಕೆಳಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)