ಬಿಲ್ ಪಾವತಿಸದ ವ್ಯಕ್ತಿಯನ್ನು ಕಟ್ಟಿಹಾಕಿದ ಪ್ರಕರಣ: ಆಸ್ಪತ್ರೆಗೆ ಬೀಗ ಮುದ್ರೆ; ಎಫ್‌ಐಆರ್ ದಾಖಲು
ಭೋಪಾಲ, ಜೂ.8: ಚಿಕಿತ್ಸೆಯ ಬಿಲ್ ಪಾವತಿಸಿಲ್ಲ ಎಂಬ ಕಾರಣಕ್ಕೆ ವೃದ್ಧರೊಬ್ಬರ ಕೈಕಾಲುಗಳನ್ನು ಆಸ್ಪತ್ರೆಯ ಬೆಡ್‌ಗೆ ಕಟ್ಟಿಹಾಕಿದ ದೂರಿನ ಹಿನ್ನೆಲೆಯಲ್ಲಿ ಆಸ್ಪತ್ರೆಯನ್ನು ಸೀಲ್ ಮಾಡಿದ್ದು, ಆಸ್ಪತ್ರೆಯ ಆಡಳಿತದ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.
ಶಾಜಾಪುರ ಮೂಲದ ಸಿಟಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾದ ಹಿನ್ನೆಲೆಯಲ್ಲಿ, ಪ್ರಕರಣದ ತನಿಖೆ ನಡೆಸಲು ಸಬ್‌ಡಿವಿಷನಲ್ ಮ್ಯಾಜಿಸ್ಟ್ರೇಟ್ ನೇತೃತ್ವದ ಸಮಿತಿಯನ್ನು ರಚಿಸುವಂತೆ ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಸೂಚಿಸಿದ್ದರು. ತನಿಖೆಯ ಬಳಿಕ, ಆಸ್ಪತ್ರೆಯ ನೋಂದಣಿಯನ್ನು ಸೀಲ್ ಮಾಡಲಾಗಿದ್ದು ನಿಯಮದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಜಾಪುರ ಹೆಚ್ಚುವರಿ ಜಿಲ್ಲಾಧಿಕಾರಿ ಮಂಜೂಷಾ ವಿಕ್ರಮ್ ರಾಯ್ ಹೇಳಿದ್ದಾರೆ.
ರೋಗಿಯನ್ನು ಕಟ್ಟಿ ಹಾಕಿರುವುದನ್ನು ಆಸ್ಪತ್ರೆಯ ನಿರ್ದೇಶಕ ಡಾ. ವರುಣ್ ರಾಯ್ ನಿರಾಕರಿಸಿದ್ದಾರೆ. ರೋಗಿ ಕೈಕಾಲು ಸೆಳೆತದ ರೋಗದಿಂದ ಬಳಲುತ್ತಿದ್ದ. ಔಷಧಿ ಸ್ವೀಕರಿಸಲು ನಿರಾಕರಿಸಿದ್ದರಿಂದ ಕಾಲುಗಳನ್ನು ಬೆಡ್‌ಗೆ ಕಟ್ಟಿದ್ದು ಆತನ ಕೈಗಳನ್ನು ಕುಟುಂಬದ ಸದಸ್ಯರು ಹಿಡಿದುಕೊಂಡಿದ್ದರು. ಚಿಕಿತ್ಸೆಯ ಬಿಲ್ ಪಾವತಿಸಲು ಒಪ್ಪದೆ, ರೋಗಿಯನ್ನು ಮನೆಗೆ ಕರೆದೊಯ್ಯಲು ಕುಟುಂಬದವರು ಹಠ ಹಿಡಿದಿದ್ದರಿಂದ ಪೊಲೀಸರಿಗೆ ದೂರು ನೀಡಿದ್ದೇವೆ ಎಂದವರು ಹೇಳಿದ್ದಾರೆ. ಇದೊಂದು ಅಮಾನವೀಯ ಮತ್ತು ಅನಾಗರೀಕ ಘಟನೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಕಮಲನಾಥ್ ಖಂಡಿಸಿದ್ದಾರೆ.