ವಿಟಿಯು ಆನ್ಲೈನ್ ತರಗತಿಗೆ ಶೇ.77.3 ವಿದ್ಯಾರ್ಥಿಗಳು ಭಾಗವಹಿಸಿಲ್ಲ: ಎಐಡಿಎಸ್ಒ ರಾಜ್ಯಾಧ್ಯಕ್ಷೆ ಅಶ್ವಿನಿ
ಬೆಂಗಳೂರು, ಜೂ.9: ಕೋವಿಡ್-19 ಹಿನ್ನೆಲೆಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ(ವಿಟಿಯು) ಎಲ್ಲ ಕಾಲೇಜುಗಳಲ್ಲಿ ಆನ್ಲೈನ್ ಶಿಕ್ಷಣವನ್ನು ಜಾರಿ ಮಾಡಿತ್ತು. ಇದರಲ್ಲಿ ಶೇ.77.3ರಷ್ಟು ವಿದ್ಯಾರ್ಥಿಗಳು ಹಲವು ಸಮಸ್ಯೆಗಳಿಂದಾಗಿ ಭಾಗವಹಿಸದಿರುವುದು ಸಮೀಕ್ಷೆಯಿಂದ ತಿಳಿದುಬಂದಿದೆ ಎಂದು ಎಐಡಿಎಸ್ಒನ ರಾಜ್ಯಾಧ್ಯಕ್ಷೆ ಅಶ್ವಿನಿ ತಿಳಿಸಿದ್ದಾರೆ.
ಎಐಡಿಎಸ್ಒ ಹಾಗೂ ವಿಟಿಯು ವಿದ್ಯಾರ್ಥಿಗಳ ಹೋರಾಟ ಸಮಿತಿಯು ಆನ್ಲೈನ್ ತರಗತಿಯ ಸ್ಥಿತಿಗತಿಯ ಕುರಿತು ಸಮೀಕ್ಷೆ ನಡೆಸಲಾಗಿದೆ. ರಾಜ್ಯದ 210 ಎಂಜಿನಿಯರಿಂಗ್ ಕಾಲೇಜುಗಳಲ್ಲಿ 4 ಸಾವಿರ ವಿದ್ಯಾರ್ಥಿಗಳನ್ನು ಒಳಗೊಂಡು ಮಾಡಲಾದ ಸಮೀಕ್ಷೆಯಲ್ಲಿ ಶೇ.77.3ರಷ್ಟು ವಿದ್ಯಾರ್ಥಿಗಳು ಹೆಚ್ಚಿನ ಆನ್ಲೈನ್ ತರಗತಿಗಳಿಗೆ ಹಾಜರಾಗಿಲ್ಲ. ಹಾಜರಾಗಿದ್ದ ವಿದ್ಯಾರ್ಥಿಗಳಲ್ಲಿ ಶೇ.91.1ರಷ್ಟು ವಿದ್ಯಾರ್ಥಿಗಳಿಗೆ ತರಗತಿಗಳು ಅರ್ಥವಾಗಿಲ್ಲವೆಂದು ಮಾಹಿತಿ ನೀಡಿದ್ದಾರೆ.
ಭಾರತದ ಒಟ್ಟು ಜನಸಂಖ್ಯೆಯಲ್ಲಿ ಕಾಲು ಭಾಗದಷ್ಟು ಮಾತ್ರ ಸ್ಮಾರ್ಟ್ ಫೋನ್ ಹೊಂದಿದ್ದಾರೆ. ಗ್ರಾಮೀಣ ಭಾಗದಲ್ಲಿ ಇಂಟರ್ನೆಟ್, ವಿದ್ಯುತ್ ಸಮಸ್ಯೆ ಹೆಚ್ಚಾಗಿಯೇ ಇದೆ. ಇಂತಹ ಪರಿಸ್ಥಿತಿಯಲ್ಲಿ ಆನ್ಲೈನ್ ತರಗತಿ ನಡೆಸಿ, ಅದರ ಆಧಾರದ ಮೇಲೆ ಪರೀಕ್ಷೆ ನಡೆಸುವುದು ವಿದ್ಯಾರ್ಥಿ ಸ್ನೇಹಿ ನಿರ್ಧಾರವಾಗುವುದಿಲ್ಲ.
ಕೇಂದ್ರ ಸರಕಾರ ಕೋವಿಡ್-19 ಹಿನ್ನೆಲೆಯಲ್ಲಿ ಏಕಾಏಕಿ ಲಾಕ್ಡೌನ್ ಘೋಷಿಸಿದ್ದರಿಂದ ನಗರದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳು ದಿಢೀರನೆ ತಮ್ಮ ಊರುಗಳಿಗೆ ಹೋಗಬೇಕಾದ ಪರಿಸ್ಥಿತಿ ಎದುರಾಯಿತು. ಈ ವೇಳೆ ಹಲವು ವಿದ್ಯಾರ್ಥಿಗಳು ತಮ್ಮ ಪಠ್ಯಪುಸ್ತಕಗಳನ್ನು ತೆಗೆದುಕೊಂಡು ಹೋಗಿಲ್ಲ. ಇವೆಲ್ಲ ಸಮಸ್ಯೆಗಳ ಮಧ್ಯೆ ವಿಟಿಯು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ತರಾತುರಿಯಲ್ಲಿ ಪರೀಕ್ಷೆ ನಡೆಸಬಾರದೆಂದು ಎಐಡಿಎಸ್ಒ ಪ್ರಕಟನೆಯ ಮೂಲಕ ಒತ್ತಾಯಿಸಿದೆ.
ವಿಟಿಯು ಕಾಲೇಜುಗಳಲ್ಲಿ ಆನ್ಲೈನ್ ಮೂಲಕ ತರಗತಿ ನಡೆಸಿ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ, ಶೇ.97ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಆನ್ಲೈನ್ ತರಗತಿಯ ಆಧಾರದಲ್ಲಿ ಪರೀಕ್ಷೆ ನಡೆಸಬಾರದೆಂದು ಸಮೀಕ್ಷೆಯಲ್ಲಿ ಒತ್ತಾಯಿಸಿದ್ದಾರೆ. ಹೀಗಿರುವಾಗ ರಾಜ್ಯ ಸರಕಾರ ಹಾಗೂ ಕಾಲೇಜುಗಳ ಆಡಳಿತ ಮಂಡಳಿಗಳು ಯಾರಿಗಾಗಿ ಪರೀಕ್ಷೆ ನಡೆಸುತ್ತಿದೆ. ಕೂಡಲೇ ವಿದ್ಯಾರ್ಥಿಗಳ ಅಭಿಪ್ರಾಯದಂತೆ ಪರೀಕ್ಷೆಯನ್ನು ಮುಂದೂಡಿ, ವಿದ್ಯಾರ್ಥಿಗಳು, ಶಿಕ್ಷಣ ತಜ್ಞರ ಜತೆ ಚರ್ಚಿಸಿದ ನಂತರ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಲಿ.
-ಅಶ್ವಿನಿ ಕೆ.ಎಸ್. ರಾಜ್ಯಾಧ್ಯಕ್ಷೆ, ಎಐಡಿಎಸ್ಒ