ಕೊರೋನ ವೈರಸ್‌ಗೆ ಡಿಎಂಕೆ ಶಾಸಕ ಅನ್ಬಳಗನ್ ಬಲಿ
ಚೆನ್ನೈ, ಜೂ.10: ಕೊರೋನ ವೈರಸ್ ಸೋಂಕು ದೃಢಪಟ್ಟ ಬಳಿಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಮಿಳುನಾಡಿನ ಡಿಎಂಕೆ ಶಾಸಕ ಅನ್ಬಳಗನ್ ಬುಧವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಅನ್ಬಳಗನ್ ತಮಿಳುನಾಡಿನಲ್ಲಿ ಕೊರೋನ ವೈರಸ್‌ಗೆ ಬಲಿಯಾದ ಮೊದಲ ಪ್ರಮುಖ ರಾಜಕೀಯ ಮುಖಂಡರಾಗಿದ್ದಾರೆ. ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರ ಆಪ್ತರಾಗಿದ್ದ ಅನ್ಬಳಗನ್ ತನ್ನ 62ನೇ ಜನ್ಮದಿನದಂದೇ ಮೃತಪಟ್ಟಿದ್ದಾರೆ.
ಅನ್ಬಳಗನ್ ಜೂನ್ 2ರಂದು ತೀವ್ರ ಉಸಿರಾಟ ಸಮಸ್ಯೆಗೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೇ ವೇಳೆ ಅವರು ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿತ್ತು. ಉಸಿರಾಟದ ಸಮಸ್ಯೆ ಉಲ್ಬಣಿಸಿದ ಕಾರಣ ಜೂನ್ 3ರಂದು ಅನ್ಬಳಗನ್‌ಗೆ ಕೃತಕ ಉಸಿರಾಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಸೋಮವಾರ ಸಂಜೆ ಅವರ ಪರಿಸ್ಥಿತಿ ಬಿಗಡಾಯಿಸಿತ್ತು ಎಂದು ಡಾ.ರೇಲಾ ಆಸ್ಪತ್ರೆ ತಿಳಿಸಿದೆ.
ತನ್ನ ನೇರ ಸ್ವಭಾವಕ್ಕೆ ಹೆಸರಾಗಿದ್ದ ಅನ್ಬಳಗನ್ ಮೇ ತಿಂಗಳಿನಲ್ಲಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆದಿದ್ದ ಜಿಲ್ಲಾ ಕಾರ್ಯದರ್ಶಿಗಳ ಸಭೆಯಲ್ಲಿ ಪಕ್ಷದ ನಿರ್ಧಾರಗಳು ಚುನಾವಣಾ ತಜ್ಞ ಪ್ರಶಾಂತ ಕಿಶೋರ ಅವರಿಂದ ಪ್ರಭಾವಿತಗೊಳ್ಳುತ್ತಿವೆ ಎಂದು ಟೀಕಿಸಿದ್ದರು. ಮೇ 2021ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಾಗಿ ತನ್ನ ಕಾರ್ಯತಂತ್ರವನ್ನು ರೂಪಿಸಲು ಕಿಶೋರ ಅವರನ್ನು ಡಿಎಂಕೆ ನಿಯೋಜಿಸಿದೆ.
ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಅವರು ಅನ್ಬಳಗನ್ ನಿಧನಕ್ಕೆ ತೀವ್ರ ಸಂತಾಪಗಳನ್ನು ವ್ಯಕ್ತಪಡಿಸಿದ್ದಾರೆ.