ಮೇಲ್ಜಾತಿಯ ಯುವತಿಯನ್ನು ಪ್ರೀತಿಸುತ್ತಿದ್ದ ದಲಿತ ಯುವಕನನ್ನು ರಾಡ್, ಕಲ್ಲುಗಳಿಂದ ಥಳಿಸಿ ಹತ್ಯೆ
ಪುಣೆ: ಮೇಲ್ಜಾತಿಗೆ ಸೇರಿದ ಯುವತಿಯೊಬ್ಬಳ ಜತೆ ಪ್ರೇಮ ಸಂಬಂಧ ಹೊಂದಿದ್ದ 20 ವರ್ಷದ ದಲಿತ ಯುವಕನನ್ನು ಆಕೆಯ ಕುಟುಂಬಸ್ಥರು ಥಳಿಸಿ ಕೊಂದ ಘಟನೆ ವರದಿಯಾಗಿದೆ.
ಯುವಕ ಸಾಯುವ ಮುಂಚೆ ನೀಡಿದ ಹೇಳಿಕೆಯಲ್ಲಿ ನಡೆದ ಘಟನೆ ಹಾಗೂ ತನ್ನ ಮೇಲೆ ಹಲ್ಲೆಗೈದವರ ಮಾಹಿತಿ ನೀಡಿದ್ದು ಈ ಆಧಾರದಲ್ಲಿ ಇಬ್ಬರು ಆಪ್ರಾಪ್ತರೂ ಸೇರಿದಂತೆ ಆರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಪ್ರಾಪ್ತ ಆರೋಪಿಗಳನ್ನು ರಿಮಾಂಡ್ ಹೋಂಗೆ ಕಳುಹಿಸಲಾಗಿದ್ದರೆ ಉಳಿದವರನ್ನು ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ವಹಿಸಿದೆ.
ಘಟನೆ ಜೂನ್ 7ರಂದು ನಡೆದಿತ್ತು. ರಾತ್ರಿ 9 ಗಂಟೆ ಸುಮಾರಿಗೆ ಯುವಕ ವಿರಾಜ್ ಜಗತಾಪ್‍ನ ಮೊಬೈಲ್‍ಗೆ ಹುಡುಗಿಯ ಕುಟುಂಬ ಸದಸ್ಯರು ಕರೆ ಮಾಡಿ ಅವರಿಬ್ಬರ ಸಂಬಂಧ ಕುರಿತು ಮಾತನಾಡಲಿದೆ ಎಂದು ಬರ ಹೇಳಿದ್ದರು. ಆದರೆ ಅಲ್ಲಿಗೆ ಹೋದ ವಿರಾಜ್‍ನನ್ನು ಹುಡುಗಿ ಮನೆಯವರು ಅವಮಾನಿಸಿದ್ದು ಆತ ಮನೆಗೆ ತನ್ನ ಬೈಕ್‍ನಲ್ಲಿ ವಾಪಸಾಗುತ್ತಿದ್ದ ವೇಳೆ ಆತನಿಗೆ ಟೆಂಪೋ ಢಿಕ್ಕಿ ಹೊಡೆಸಿದ್ದರು. ನಂತರ ಆತ ಕೆಳಕ್ಕೆ ಬಿದ್ದಾಗ ರಾಡ್, ಕಲ್ಲುಗಳಿಂದ ಹಲ್ಲೆ ನಡೆಸಿದ್ದರೆಂದು ಆರೋಪಿಸಲಾಗಿದೆ. ಯುವತಿಯ ತಂದೆ ಜಗದೀಶ್ ಕಾಟೆ ಕೂಡ ಅಲ್ಲಿಗೆ ಆಗಮಿಸಿ ಜಾತಿ ನಿಂದನೆಗೈದಿದ್ದರೆಂದು ಆರೋಪಿಸಲಾಗಿದೆ.
ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.