ಗುಲಾಬಿ ಬಣ್ಣಕ್ಕೆ ತಿರುಗಿದ ಲೋನಾರ್ ಕೆರೆ ನೀರು: ಕಾರಣ ಪತ್ತೆಗೆ ತಜ್ಞರ ತಂಡ
ಮುಂಬೈ, ಜೂ.13: ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯ ಲೋನಾರ್ ಕೆರೆಯ ನೀರು ಗುಲಾಬಿ ಬಣ್ಣಕ್ಕೆ ತಿರುಗಿರುವುದು ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ. ಕೆರೆಯ ನೀರಿನ ಬಣ್ಣ ಬದಲಾಗಿರುವ ಹಿಂದಿನ ಕಾರಣವನ್ನು ಪತ್ತೆಹಚ್ಚಲು ವಿಜ್ಞಾನಿಗಳ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೆರೆಯಲ್ಲಿ ಬೆಳೆದಿರುವ ಪಾಚಿ ಮತ್ತು ಕೆರೆ ನೀರಿನಲ್ಲಿರುವ ಲವಣತ್ವ ನೀರು ಬಣ್ಣ ಬದಲಿಸಲು ಕಾರಣವಾಗಿರಬಹುದು ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸುಮಾರು 50,000 ವರ್ಷದ ಹಿಂದೆ ಉಲ್ಕಾಪಾತ ಅಪ್ಪಳಿಸಿದ ಪರಿಣಾಮ ಅಂಡಾಕಾರದ ಲೋನಾರ್ ಕೆರೆ ರೂಪುಗೊಂಡಿದೆ. ಇದೊಂದು ಅನನ್ಯ ಭೌಗೋಳಿಕ ಪ್ರದೇಶ ಎಂದು 1823ರಲ್ಲಿ ಸಿಜೆಇ ಅಲೆಕ್ಸಾಂಡರ್ ಎಂಬ ಬ್ರಿಟಿಷ್ ಅಧಿಕಾರಿ ಗುರುತಿಸಿದ್ದಾನೆ. ಕೆರೆಯ ಸರಾಸರಿ ವ್ಯಾಸ ಸುಮಾರು 1.2 ಕಿ. ಮೀ ಆಗಿದ್ದು ಪ್ರಸಿದ್ಧ ಪ್ರವಾಸೀ ತಾಣವಾಗಿದ್ದು ವಿಶ್ವದೆಲ್ಲೆಡೆಯ ವಿಜ್ಞಾನಿಗಳೂ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.
ನಾಗಪುರ ಮೂಲದ ನ್ಯಾಷನಲ್ ಎನ್‌ವಯರ್ನಮೆಂಟಲ್ ಇಂಜಿನಿಯರಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ವಿಜ್ಞಾನಿಗಳ ತಂಡ ಜೂನ್ 15ರಂದು ಭೇಟಿ ನೀಡಿ, ಕೆರೆಯ ನೀರನ್ನು ಪರೀಕ್ಷಿಸಿ ನಿಖರ ಕಾರಣ ಪತ್ತೆಹಚ್ಚಲಿದೆ ಎಂದು ಬುದ್ವಾನಾದ ಜಿಲ್ಲಾಧಿಕಾರಿ ಸುಮನ್ ಚಂದ್ರ ಹೇಳಿದ್ದಾರೆ.