ಉ.ಪ್ರ: ದಲಿತರ ಮೇಲೆ ಹಲ್ಲೆ ನಡೆಸಿದ್ದ 16 ಜನರ ಬಂಧನ
ಲಕ್ನೋ,ಜೂ.13: ಅಝಮ್‌ಗಡ ಜಿಲ್ಲೆಯ ಸಿಕಂದರಪುರ ಐಮಾ ಗ್ರಾಮದಲ್ಲಿ ದಲಿತರ ಮೇಲೆ ಹಲ್ಲೆ ನಡೆಸಿದ್ದ ಆರೋಪದಲ್ಲಿ 16 ಯುವಕರನ್ನು ಉತ್ತರ ಪ್ರದೇಶ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ತಲೆಮರೆಸಿಕೊಂಡಿರುವ ಇತರ ಮೂವರು ಆರೋಪಿಗಳ ಬಗ್ಗೆ ಮಾಹಿತಿ ನೀಡುವವರಿಗೆ 25,000 ರೂ.ಗಳ ಬಹುಮಾನವನ್ನು ಘೋಷಿಸಲಾಗಿದೆ. ಆರೋಪಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ)ಯನ್ನು ಹೇರಲಾಗುವುದು ಎಂದು ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿದ್ದಾರೆ.
ಆರೋಪಿಗಳು ಗ್ರಾಮದ ಕೊಳವೆ ಬಾವಿಯ ಬಳಿ ಕುಳಿತುಕೊಂಡು ಶಾಲೆಗೆ ಹೋಗಿಬರುವ ದಲಿತ ಸಮುದಾಯದ ಬಾಲಕಿಯರನ್ನು ಚುಡಾಯಿಸುತ್ತಿದ್ದರು. ಬುಧವಾರ ಕೆಲವು ದಲಿತ ಯವಕರು ಇದನ್ನು ಪ್ರಶ್ನಿಸಿದಾಗ ಅವರ ನಡುವೆ ವಾಗ್ವಾದ ನಡೆದಿತ್ತು. ಕೆಲ ಸಮಯದ ಬಳಿಕ ದಲಿತರ ಮನೆಗಳ ಬಳಿ ಜಮಾಯಿಸಿದ್ದ ಗುಂಪು ಅಲ್ಲಿದ್ದವರ ಮೇಲೆ ಹಲ್ಲೆ ನಡೆಸಿತ್ತು, ಮಹಿಳೆಯರತ್ತ ಕಲ್ಲುಗಳನ್ನೂ ತೂರಿತ್ತು.
ದಾಳಿಯಲ್ಲಿ 12 ದಲಿತ ಯುವಕರು ಗಾಯಗೊಂಡಿದ್ದಾರೆ.
ನಿರ್ಲಕ್ಷದ ಆರೋಪದಲ್ಲಿ ಸಂಬಂಧಿಸಿದ ಪೊಲೀಸ್ ಠಾಣಾಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಎಸ್‌ಪಿ ತ್ರಿವೇಣಿ ಸಿಂಗ್ ಅವರು ಸುದ್ದಿಗಾರರಿಗೆ ತಿಳಿಸಿದರು.