ದಿಲ್ಲಿಯಲ್ಲಿ ಕೋವಿಡ್-19 ರೋಗಿಗಳಿಗಾಗಿ ಕೇಂದ್ರದಿಂದ 500 ರೈಲ್ವೆ ಬೋಗಿಗಳ ವ್ಯವಸ್ಥೆ
ಹೊಸದಿಲ್ಲಿ, ಜೂ.14: ದಿಲ್ಲಿಯಲ್ಲಿ ಕೊರೋನ ವೈರಸ್ ಸೋಂಕಿತರಿಗಾಗಿ ಹಾಸಿಗೆಗಳ ಕೊರತೆಯಿರುವ ಹಿನ್ನೆಲೆಯಲ್ಲಿ ಕೇಂದ್ರವು 500 ರೈಲ್ವೆ ಬೋಗಿಗಳನ್ನು ಒದಗಿಸಲಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ರವಿವಾರ ಇಲ್ಲಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರಿಗೆ ತಿಳಿಸಿದರು.
ಈ ಬೋಗಿಗಳು ದಿಲ್ಲಿಯಲ್ಲಿ ಹಾಲಿ ಲಭ್ಯವಿರುವ ಹಾಸಿಗೆಗಳ ಜೊತೆಗೆ ಹೆಚ್ಚುವರಿಯಾಗಿ 8,000 ಹಾಸಿಗೆಗಳನ್ನು ಒದಗಿಸಲಿವೆ ಮತ್ತು ಕೊರೋನ ವೈರಸ್ ಸೋಂಕಿನ ಚಿಕಿತ್ಸೆಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳು ಹಾಗೂ ಉಪಕರಣಗಳನ್ನು ಹೊಂದಿವೆ ಎಂದೂ ಅಮಿತ್ ಶಾ ಹೇಳಿದರು.
ದಿಲ್ಲಿಯಲ್ಲಿ ಕೋವಿಡ್-19 ಸ್ಥಿತಿಯ ಕುರಿತು ಚರ್ಚಿಸಲು ಶಾ ಕರೆದಿದ್ದ ಈ ಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ, ದಿಲ್ಲಿಯ ಲೆ.ಗ.ಅನಿಲ ಬೈಜಾಲ್ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳೂ ಭಾಗವಹಿಸಿದ್ದರು.
ಮಹಾರಾಷ್ಟ್ರ ಮತ್ತು ತಮಿಳುನಾಡು ನಂತರ ಮೂರನೇ ಅತ್ಯಂತ ಪೀಡಿತ ರಾಜ್ಯವಾಗಿರುವ ದಿಲ್ಲಿಯಲ್ಲಿ ರವಿವಾರ ಬೆಳಿಗ್ಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ 2,134 ಹೊಸ ಕೊರೋನ ವೈರಸ್ ಪ್ರಕರಣಗಳು ವರದಿಯಾಗಿದ್ದು, ಒಟ್ಟೂ ಸಂಖ್ಯೆ 38,958ಕ್ಕೆ ಮತ್ತು ಸಾವಿನ ಸಂಖ್ಯೆ 1,271ಕ್ಕೇರಿದೆ.
ದಿಲ್ಲಿಯ ಕೊರೋನ ವೈರಸ್ ಆ್ಯಪ್ ತೋರಿಸಿರುವಂತೆ ಹಾಲಿ ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳು ಸೇರಿದಂತೆ ಕೋವಿಡ್-19 ರೋಗಿಗಳಿಗಾಗಿ ರಾಜ್ಯದ ಹಾಸಿಗೆ ಸಾಮರ್ಥ್ಯವು 9,698ರಷ್ಟಿದ್ದು,ಈ ಪೈಕಿ 4,248 ಹಾಸಿಗೆಗಳು ಖಾಲಿಯಿವೆ.
ಸೋಂಕು ತ್ವರಿತವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಸರಕಾರವು 40 ಹೋಟೆಲ್‌ಗಳು ಮತ್ತು 77 ಬ್ಯಾಂಕೆಟ್ ಹಾಲ್‌ಗಳನ್ನು ತಾತ್ಕಾಲಿಕ ಆಸ್ಪತ್ರೆಗಳನ್ನಾಗಿ ಪರಿವರ್ತಿಸಲು ಯೋಜಿಸಿದೆ. ದಕ್ಷಿಣ ದಿಲ್ಲಿಯ ಎರಡು ಪ್ರಮುಖ ಹೋಟೆಲ್‌ಗಳಾದ ವಸಂತ ಕಾಂಟಿನೆಂಟಲ್ ಮತ್ತು ಹಯಾತ್ ರಿಜೆನ್ಸಿಗಳಿಗೆ ಅವು ಸಂಯೋಜಿತಗೊಂಡಿರುವ ಆಸ್ಪತ್ರೆಗಳಿಗೆ ಕೋಣೆಗಳನ್ನು ಲಭ್ಯವಾಗಿಸುವಂತೆ ಸೂಚಿಸಲಾಗಿದೆ.