ಸಾರ್ವಜನಿಕ ಬದುಕಿಗೆ ಘನತೆ ತಂದವರು
ನಮ್ಮ ಸಾರ್ವಜನಿಕ ಬದುಕು ಈಗಿನಷ್ಟು ಹಿಂದೆಂದೂ ಪತನದ ಅಂಚಿಗೆ ಬಂದು ನಿಂತಿರಲಿಲ್ಲ. ಹಿಂದೆಲ್ಲ ನಮಗೆ ಸ್ಫೂರ್ತಿ ನೀಡುವ ಸರಿಯಾದ ದಾರಿಯಲ್ಲಿ ನಡೆಯಲು ಪ್ರೇರೇಪಿಸುವ ಐಕಾನ್‌ಗಳಿದ್ದರು. ಅವರನ್ನು ನೋಡಿ ಅವರಂತೆ ಬದುಕಬೇಕೆಂಬ ಛಲ ಯುವಕರಲ್ಲಿ ಮೂಡುತ್ತಿತ್ತು. ಆದರೆ, ಈಗ ಮೌಲ್ಯಗಳ ಕುಸಿತದ ಕಾಲ. ಲಾಭಕೋರ ಬಂಡವಾಳ ಶಾಹಿ ವ್ಯವಸ್ಥೆ ಎಲ್ಲವನ್ನೂ ಮಾರುಕಟ್ಟೆಯಲ್ಲಿ ಇಟ್ಟ ನವ ಉದಾರವಾದಿ ಅರ್ಥ ವ್ಯವಸ್ಥೆ. ಇಂತಹ ಕಾಲದಲ್ಲಿ ಸರಳವಾಗಿ, ಪ್ರಾಮಾಣಿಕವಾಗಿ, ತತ್ವನಿಷ್ಠವಾಗಿ ಬದುಕುವವರು ತುಂಬ ಅಪರೂಪ. ಹೀಗೆ ಬದುಕಿದ ಮೂವರು ಕಳೆದವಾರ ನಮ್ಮನ್ನು ಅಗಲಿದರು. ಇಂತಹವರು ಮರಳಿ ಬಾರದ ಕಡೆ ಹೊರಟು ಹೋದಾಗ ಒಂದು ಶೂನ್ಯ ಆವರಿಸುತ್ತದೆ.
ಇವರು ಅಂತಿಂಥವರಲ್ಲ. ಸುತ್ತಲಿನ ಕತ್ತಲನ್ನೂ ತೊಲಗಿಸಲು ಬೆಳಕಾಗಿ ಉರಿದವರು. ತಮ್ಮನ್ನು ತಾವು ಸುಟ್ಟುಕೊಂಡವರು. ನಮ್ಮನ್ನು ಅಗಲಿದ ಆ ಮೂವರೆಂದರೆ ಜಾರ್ಖಂಡ್‌ನ ಕಲ್ಲಿದ್ದಲು ಗಣಿ ಪ್ರದೇಶದ ಕಾರ್ಮಿಕ ನಾಯಕ ಎ.ಕೆ .ರಾಯ್ ಎಂದೇ ಪ್ರಸಿದ್ಧರಾದ ಅರುಣ ಕುಮಾರ್ ರಾಯ್, ಮುಂಬೈಯ ವಿಶ್ರಾಂತ ನ್ಯಾಯಾಧೀಶ ದಿವಂಗತ ಹೊಸಬೆಟ್ಟು ಸುರೇಶ್ ಮತ್ತು ನಮ್ಮ ಕರ್ನಾಟಕದ ನ್ಯಾಯವಾದಿ ಎಂ.ಸಿ.ನರಸಿಂಹನ್ ಅವರ ಅಗಲಿಕೆಯ ಶೂನ್ಯ ತುಂಬುವುದು ಸಾಧ್ಯವಿಲ್ಲ.
ಎ.ಕೆ.ರಾಯ್
ಜಾರ್ಖಂಡ್‌ನ ಎ.ಕೆ.ರಾಯ್ ಎಂಬ ಜನನಾಯಕನ ಬದುಕಿನ ಬಗ್ಗೆ ತುಂಬ ಅಚ್ಚರಿಯಾಯಿತು. ಮೂರು ಬಾರಿ ಲೋಕಸಭಾ ಸದಸ್ಯ, ಮೂರು ಬಾರಿ ಬಿಹಾರ ವಿಧಾನಸಭಾ ಸದಸ್ಯ. ಆದರೂ ಯಾವುದೇ ಬ್ಯಾಂಕ್‌ನಲ್ಲಿ ಅವರ ಹೆಸರಿನ ಖಾತೆ ಇಲ್ಲ. ಶ್ರಮಜೀವಿಗಳ ಚಳವಳಿಯ ಈ ಸಂಗಾತಿಯ ವಾಸ್ತವ್ಯ ಮಾರ್ಕ್ಸಿಸ್ಟ್ ಕೋಆರ್ಡಿನೇಶನ್ ಸೆಂಟರ್ ಎಂಬ ತಾನೇ ಕಟ್ಟಿದ ಪಕ್ಷದ ಕಚೇರಿಯಲ್ಲಿ. ಈ ಕಚೇರಿಯಲ್ಲಿ ವಿದ್ಯುತ್ ಸಂಪರ್ಕವಿಲ್ಲ. ‘ಕಲ್ಲಿದ್ದಲು ಗಣಿಯ ಪ್ರತಿ ಕಾರ್ಮಿಕನ ಮನೆಗೆ ಕರೆಂಟ್ ಬರುವವರೆಗೆ ನಮಗೂ ಅದು ಬೇಡ’ ಎಂಬುದು ಕಾಮ್ರೇಡ್ ರಾಯ್ ಹಠ. ಹೀಗೆ ಯಾವ ಮೂಲಸೌಕರ್ಯಗಳಿಲ್ಲದ ಕಚೇರಿಯಲ್ಲೇ ಅವರು ಬದುಕನ್ನು ಕಳೆದರು.
ಎ.ಕೆ.ರಾಯ್ ಜನಿಸಿದ್ದು ಬಾಂಗ್ಲಾದೇಶದಲ್ಲಿ. ವ್ಯಾಸಂಗ ಮಾಡಿದ್ದು ಕೋಲ್ಕತಾದಲ್ಲಿ. ಅಲ್ಲಿ ಇಂಜಿನಿಯರಿಂಗ್ ಪದವಿ ಪಡೆದು ಜರ್ಮನಿಗೆ ಹೋಗಿ ಉನ್ನತ ಪದವಿ ಪಡೆದು ಬಂದರು. ನಂತರ ಅವಿಭಜಿತ ಬಿಹಾರದ ಜಾರ್ಖಂಡ್‌ನ ಕಲ್ಲಿದ್ದಲು ಗಣಿ ಪ್ರದೇಶದ ಕಂಪೆನಿಯಲ್ಲಿ ಇಂಜಿನಿಯರ್ ಆಗಿ ಕೆಲಸಕ್ಕೆ ಸೇರಿದರು. ಈ ನೌಕರಿಯನ್ನೂ ಅವರು ಬಹಳ ದಿನ ಮಾಡಲಿಲ್ಲ. ಕೆಲವೇ ತಿಂಗಳುಗಳಲ್ಲಿ ನೌಕರಿಗೆ ರಾಜೀನಾಮೆ ಬಿಸಾಕಿ ಕಾರ್ಮಿಕ ಚಳವಳಿಗೆ ಧುಮುಕಿದರು. ಕಲ್ಲಿದ್ದಲು ಗಣಿ ಪ್ರದೇಶದಲ್ಲಿ ನಡೆಯುತ್ತಿದ್ದ ಕಾರ್ಮಿಕರ ಶೋಷಣೆಯನ್ನು ಕಂಡು ಅದನ್ನು ತಪ್ಪಿಸಲು ತನ್ನ ಇಡೀ ಬದುಕನ್ನು ಚಳವಳಿಗೆ ಅರ್ಪಿಸಿಕೊಂಡರು. ಎಲ್ಲಿಯ ಬಾಂಗ್ಲಾದೇಶ, ಎಲ್ಲಿಯ ಜಾರ್ಖಂಡ್. ಚೇ ಹೇಳಿದಂತೆ, ‘ಜಗತ್ತಿನ ಯಾವುದೇ ಮೂಲೆಯಲ್ಲಿ ಇರಲಿ ಶೋಷಣೆಗೆ ಒಳಗಾದವರೆಲ್ಲ ನನ್ನ ಬಂಧುಗಳು’ ಎಂಬುದು ರಾಯ್ ನಂಬಿಕೆಯಾಗಿತ್ತು.
ಜಾರ್ಖಂಡ್‌ನ ಕಲ್ಲಿದ್ದಲು ಗಣಿ ಪ್ರದೇಶದ ಕಾರ್ಮಿಕ ಚಳವಳಿಗೆ ತನ್ನನ್ನು ಅರ್ಪಿಸಿಕೊಂಡ ಎ.ಕೆ.ರಾಯ್ ಮೊದಲು ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷದಲ್ಲಿದ್ದರು. ನಂತರ ಅದರಿಂದ ಹೊರಗೆ ಬಂದು ತಮ್ಮದೇ ಆದ ‘ಮಾರ್ಕ್ಸ್‌ವಾದಿ ಸಮನ್ವಯ ಕೇಂದ್ರ’ (ಎಂಸಿಸಿ) ಸ್ಥಾಪಿಸಿದರು. ಆ ಪಕ್ಷದಿಂದಲೇ ಬಿಹಾರ ವಿಧಾನಸಭೆಗೆ ಮೂರು ಬಾರಿ ಮತ್ತು ಲೋಕಸಭೆಗೆ ಮೂರು ಬಾರಿ ಚುನಾಯಿತರಾದರು. ಅವರನ್ನು ಸೋಲಿಸಲು ಜಾರ್ಖಂಡ್, ಪಶ್ಚಿಮ ಬಂಗಾಳದ ಗಡಿ ಪ್ರದೇಶದಲ್ಲಿ ವ್ಯಾಪಿಸಿರುವ ಕಲ್ಲಿದ್ದಲು ಗಣಿ ಮಾಫಿಯಾ ಕೋಟಿ, ಕೋಟಿ ರೂಪಾಯಿ ಖರ್ಚು ಮಾಡಿದರೂ ಬರಿಗೈನಲ್ಲಿ ಸ್ಪರ್ಧಿಸುತ್ತಿದ್ದ ರಾಯ್ ಗೆಲ್ಲುತ್ತಲೇ ಬಂದರು. ಎಷ್ಟು ಬಾರಿ ಗೆದ್ದರೂ ಅವರು ತಮಗಾಗಿ ಮನೆ ಮಾಡಿಕೊಳ್ಳಲಿಲ್ಲ. ರೈಲಿನಲ್ಲಿ ಸಾಮಾನ್ಯ ಜನರೊಂದಿಗೆ ಜನರಲ್ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದರು. ಶಾಸಕರಾಗಿದ್ದಾಗ, ಸಂಸದರಾಗಿದ್ದಾಗ, ತಮಗೆ ಬರುತ್ತಿದ್ದ ಸಂಬಳ, ಭತ್ತೆಗಳನ್ನು ಪಾರ್ಟಿಯ ಪೂರ್ಣಾವಧಿ ಕಾರ್ಯಕರ್ತರಿಗೆ ಮತ್ತು ಕಾರ್ಮಿಕರಿಗೆ ಹಂಚುತ್ತಿದ್ದರು. ಪಿಂಚಣಿ ಹಣವನ್ನೂ ಕೈಯಿಂದ ಮುಟ್ಟುತ್ತಿರಲಿಲ್ಲ. ಅದನ್ನು ರಾಷ್ಟ್ರಪತಿಗಳ ಪರಿಹಾರ ನಿಧಿಗೆ ಅರ್ಪಿಸುತ್ತಿದ್ದರು.
ಹೀಗೆ ನಿಜ ಸಂತನಂತೆ, ಅವಧೂತನಂತೆ ಬದುಕಿದ ಎ.ಕೆ.ರಾಯ್ ಕಾರ್ಮಿಕ ಚಳವಳಿ ಮಾತ್ರವಲ್ಲದೆ ಆ ಪ್ರದೇಶದ ಆದಿವಾಸಿಗಳ ಮಧ್ಯೆಯೂ ಕೆಲಸ ಮಾಡಿದರು. ಶಿಬು ಸೂರೇನ್ ಎಂಬ ಆದಿವಾಸಿ ಕಾರ್ಯಕರ್ತ ಜಾರ್ಖಂಡ್ ಮುಕ್ತಿ ಮೋರ್ಚಾ ಎಂಬ ಸ್ವತಂತ್ರ ರಾಜಕೀಯ ಪಕ್ಷ ಕಟ್ಟಲು ಬೆನ್ನೆಲುಬಾಗಿ ನಿಂತರು. ಆ ಪಕ್ಷವೀಗ ಬಿಜೆಪಿಯನ್ನು ಸೋಲಿಸಿ ಜಾರ್ಖಂಡ್‌ನ ಅಧಿಕಾರ ಸೂತ್ರ ಹಿಡಿದಿದೆ.
ಎ.ಕೆ.ರಾಯ್ ಉಳಿದ ಕಾರ್ಮಿಕ ನಾಯಕರಂತಲ್ಲ. ಉಳಿದವರಂತೆ ಕಾರ್ಮಿಕರಿಗೆ ಸಂಬಳ ಕೊಡಿಸುವ ಹೋರಾಟ ಮಾತ್ರ ಅವರದಾಗಿರಲಿಲ್ಲ. ಅದನ್ನೂ ಮೀರಿ ಕಾರ್ಮಿಕರಲ್ಲಿ ಕುಡಿತದ ಚಟ ಬಿಡಿಸುವುದು, ಅಕ್ಷರ ಕಲಿಸುವುದು, ಜನಸಂಸ್ಕೃತಿಯ ಅರಿವು ಮೂಡಿಸುವುದರಲ್ಲಿ ತಮ್ಮನ್ನು ಅವರು ತೊಡಗಿಸಿಕೊಂಡಿದ್ದರು. ಅದೇ ಸಂದರ್ಭದಲ್ಲಿ ಛತ್ತೀಗಡದಲ್ಲಿ ಕಾಮ್ರೇಡ್ ಶಂಕರ ಗುಹಾ ನಿಯೋಗಿ ಕೂಡ ಕಲ್ಲಿದ್ದಲು ಗಣಿ ಕಾರ್ಮಿಕರ ನಡುವೆ ಕೆಲಸ ಮಾಡುತ್ತ, ಸಾರಾಯಿ ಮಾಫಿಯಾ ವಿರುದ್ಧವೂ ಜನ ಜಾಗೃತಿ ಮೂಡಿಸುತ್ತಿದ್ದರು. ಈ ಮಾಫಿಯಾ ಕೊನೆಗೂ ನಿಯೋಗಿ ಅವರನ್ನು ಬಲಿ ತೆಗೆದುಕೊಂಡಿತು.
ನ್ಯಾಯಮೂರ್ತಿ ಹೊಸಬೆಟ್ಟು ಸುರೇಶ್
ನಮ್ಮ ಮಂಗಳೂರಿನವರಾದ ಬಾಂಬೆ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಹೊಸಬೆಟ್ಟು ಸುರೇಶ್ 91ನೇ ವಯಸ್ಸಿನಲ್ಲಿ ಕಳೆದ ಶುಕ್ರವಾರ ತೀರಿಕೊಂಡರು. ಮೂಲತಃ ಸುರತ್ಕಲ್ ಸಮೀಪದಲ್ಲಿರುವ ಹೊಸಬೆಟ್ಟು ಗ್ರಾಮದವರಾದ ಇವರು ವಿದ್ಯಾದಾಯಿನಿ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮುಗಿಸಿ ಕಾನೂನು ವ್ಯಾಸಂಗಕ್ಕೆ ಮುಂಬೈಗೆ ಹೋದವರು ಅಲ್ಲಿಯೇ ನೆಲೆಸಿ ಹೈಕೋರ್ಟ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದರು. ಇದು ದೊಡ್ಡ ಸಂಗತಿಯಲ್ಲ. ಆದರೆ, ನಿವೃತ್ತರಾದ ನಂತರ 30 ವರ್ಷಗಳವರೆಗೆ ಮಾನವ ಹಕ್ಕುಗಳ ಪರವಾಗಿ, ಕೋಮುವಾದದ ವಿರುದ್ಧ ಹೊಸಬೆಟ್ಟು ಅವಿಶ್ರಾಂತವಾಗಿ ಶ್ರಮಿಸಿದರು. ಈಗಿನ ನ್ಯಾಯಾಧೀಶರು ಅಧಿಕಾರದಲ್ಲಿ ಇದ್ದವರಿಗೆ ಬೆಣ್ಣೆ ಹಚ್ಚಿ ರಾಜ್ಯಪಾಲರಾದ, ರಾಜ್ಯಸಭಾ ಸದಸ್ಯರಾದ ಕತೆಗಳನ್ನು ಕೇಳುತ್ತಿದ್ದೇವೆ. ಆದರೆ ಹೊಸಬೆಟ್ಟು ಸುರೇಶ್ ಹಾಗಲ್ಲ.
1991ರಲ್ಲಿ ನಿವೃತ್ತರಾದ ನಂತರ ಗುಜರಾತ್ ಹತ್ಯಾಕಾಂಡ ನಡೆದಾಗ ನ್ಯಾಯಮೂರ್ತಿ ವಿ.ಆರ್.ಕೃಷ್ಣ ಅಯ್ಯರ್ ನೇತೃತ್ವದ ಸತ್ಯಶೋಧನಾ ಸಮಿತಿ ಸದಸ್ಯರಾಗಿ ಅಂದಿನ ಗುಜರಾತಿನ ಮೋದಿ ಸರಕಾರಕ್ಕೆ ಮರ್ಮಾಘಾತವಾಗುವಂತಹ ವರದಿಯನ್ನು ನೀಡಿದ್ದರು.
2002ರಲ್ಲಿ ನಡೆದ ಗುಜರಾತ್ ಹತ್ಯಾಕಾಂಡದ ಸಂದರ್ಭದಲ್ಲಿ ಸತ್ಯಶೋಧನಾ ಸಮಿತಿಯ ಸದಸ್ಯರಾಗಿ ಸುರೇಶ್ ಹೊಸಬೆಟ್ಟು ಗುಜರಾತ್‌ಗೆ ಹೋದಾಗ ಆಗಿನ ಗುಜರಾತಿನ ಗೃಹಮಂತ್ರಿ ಹರೇನ್ ಪಾಂಡೆ ಅವರು ಹೊಸಬೆಟ್ಟು ಅವರೊಂದಿಗೆ ಮಾತಾಡುತ್ತ ‘ಗಲಭೆ ನಡೆದಾಗ ಸುಮ್ಮನಿರುವಂತೆ’ ಮುಖ್ಯಮಂತ್ರಿ ತನಗೆ ರಹಸ್ಯವಾಗಿ ಹೇಳಿದ್ದರು ಎಂದು ತಿಳಿಸಿ ಇದನ್ನು ಯಾರ ಮುಂದೆಯೂ ಹೇಳಬಾರದೆಂದು ಮನವಿ ಮಾಡಿದ್ದರು. ಆದರೆ, ನಂತರ ಹರೇನ್ ಪಾಂಡೆ ಹತ್ಯೆ ನಡೆಯಿತು. ಆಗ ಇದನ್ನು ಸುರೇಶ್ ಹೊಸಬೆಟ್ಟು ಬಹಿರಂಗ ಪಡಿಸಿದ್ದರು.
ಸಾಮಾನ್ಯವಾಗಿ ನ್ಯಾಯಮೂರ್ತಿಗಳಾಗಲಿ ಯಾರೇ ಆಗಲಿ ನಿವೃತ್ತರಾದ ನಂತರ ಗುಡಿ, ಗುಂಡಾರಗಳಿಗೆ ಹೋಗುತ್ತ, ಉಳಿದ ಬದುಕನ್ನು ಪರಲೋಕ ಚಿಂತನೆಯಲ್ಲಿ ಕಳೆಯುತ್ತಾರೆ. ಆದರೆ, ನಿವೃತ್ತರಾದ ನಂತರವೇ ಹೆಚ್ಚು ಸಕ್ರಿಯ ರಾದ ಸುರೇಶ್ ಹೊಸಬೆಟ್ಟು ನ್ಯಾಯಾಧೀಶರು ಸಂವಿಧಾನದ ಸೆಕ್ಯುಲರ್ ಮೌಲ್ಯಗಳಿಗೆ ಬದ್ಧರಾಗಿರಬೇಕೆಂದು ಪ್ರತಿಪಾದಿಸುತ್ತಿದ್ದರು.
ಇಂತಹ ನ್ಯಾಯಮೂರ್ತಿ ಸುರೇಶ್ ಹೊಸಬೆಟ್ಟು ಅವರನ್ನು ಕಾಣುವ ಅವಕಾಶವೊಂದು ನನಗೆ ಒದಗಿತ್ತು. 2006ನೇ ಇಸವಿ ದಿಲ್ಲಿಯಲ್ಲಿ ಮಾನವ ಹಕ್ಕು ಸಂಘಟನೆಯೊಂದು ಖೈರ್ಲಾಂಜಿ ಸೇರಿದಂತೆ ದೇಶದಲ್ಲಿ ದಲಿತರ ಮೇಲೆ ಹಾಗೂ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಸಾರ್ವಜನಿಕ ಅಹವಾಲು ಕೇಳುವ ಕಾರ್ಯಕ್ರಮವೊಂದನ್ನು ಏರ್ಪಡಿಸಿತ್ತು. ಅದರಲ್ಲಿ ನಾನೂ ಪಾಲ್ಗೊಂಡಿದ್ದೆ. ಅಲ್ಲಿ ಬಂದಿದ್ದ ಸ್ನೇಹಿತರೊಬ್ಬರು ಕರ್ನಾಟಕದಿಂದ ಬಂದಿರುವುದಾಗಿ ನನ್ನನ್ನು ಅವರಿಗೆ ಪರಿಚಯಿಸಿದರು. ನನ್ನೊಂದಿಗೆ ಕನ್ನಡದೊಂದಿಗೆ ಮಾತಾಡಿದ ಸುರೇಶ್ ಅವರು ಮಂಗಳೂರಿನ ಬೆಳವಣಿಗೆಗಳ ಬಗ್ಗೆ ವಿಶೇಷವಾಗಿ ಕೇಳಿದರು. ಆ ನಂತರ ಅವರನ್ನು ಕಾಣುವ ಅವಕಾಶ ಮತ್ತೆ ನನಗೆ ಸಿಗಲಿಲ್ಲ.ಈಗ ಅವರಿಲ್ಲ.ಅಂತಹವರ ನೆನಪು ಸದಾ ಉಳಿಯುತ್ತದೆ.
ಎಂ.ಸಿ.ನರಸಿಂಹನ್
ಕರ್ನಾಟಕ ಕಂಡ ಹಿರಿಯ ಕಾರ್ಮಿಕ ನಾಯಕ ಎಂ.ಸಿ.ನರಸಿಂಹನ್ ಇತ್ತೀಚೆಗೆ ನಮ್ಮನ್ನಗಲಿದರು. ಭಾರತ ಕಮ್ಯುನಿಸ್ಟ್ ಪಕ್ಷದ ನಾಯಕರಾಗಿದ್ದ ನರಸಿಂಹನ್ ವಿಧಾನಸಭೆ ಹಾಗೂ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ವಿದ್ಯಾರ್ಥಿಯಾಗಿದ್ದಾಗಲೇ ಮಾರ್ಕ್ಸ್‌ವಾದದತ್ತ ಆಕರ್ಷಿತರಾಗಿ ಕಮ್ಯುನಿಸ್ಟ್ ಚಳವಳಿಗೆ ಬಂದ ನರಸಿಂಹನ್ ಮತ್ತೆ ಹೊರಳಿ ನೋಡಲಿಲ್ಲ. ಇಂಜಿನಿಯರಿಂಗ್ ಓದಲು ಚೆನ್ನೈಗೆ ಹೋದವರು ಅರ್ಧದಲ್ಲೇ ಅದನ್ನು ಬಿಟ್ಟು ಕಮ್ಯುನಿಸ್ಟ್ ಪಕ್ಷದ ಪೂರ್ಣಾವಧಿ ಕಾರ್ಯಕರ್ತರಾದರು. ಪ್ರಭುತ್ವದ ನಿರ್ಬಂಧಗಳನ್ನು ಎದುರಿಸಿ ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸಿದರು.
ನಂತರ ಕಾನೂನು ವ್ಯಾಸಂಗ ಮಾಡಿ ವಕೀಲರಾದರು. ಪಕ್ಷದ ಆದೇಶವನ್ನು ಮನ್ನಿಸಿ ಕೋಲಾರ ಚಿನ್ನದ ಗಣಿ ಪ್ರದೇಶಕ್ಕೆ ಹೋಗಿ ಕಾರ್ಮಿಕರನ್ನು ಸಂಘಟಿಸಿದರು. 1957ರಲ್ಲಿ ಅಲ್ಲಿಂದ ರಾಜ್ಯ ವಿಧಾನಸಭೆಗೆ ಚುನಾಯಿತರಾಗಿ ಬಂದರು. ದಾವಣಗೆರೆ, ಹುಬ್ಬಳ್ಳಿ, ಮೈಸೂರು ಮುಂತಾದ ಕಡೆ ಕಾರ್ಮಿಕ ಸಂಘಟನೆಗಳನ್ನು ಕಟ್ಟಿದರು. ಕಳೆದ ಏಳು ದಶಕಗಳಲ್ಲಿ ಕರ್ನಾಟಕದ ದುಡಿಯುವ ವರ್ಗದ ಹಿತರಕ್ಷಣೆಗಾಗಿ ನ್ಯಾಯಾಲಯದಲ್ಲಿ ವಕೀಲರಾಗಿ ಕಾನೂನು ಸಮರ ನಡೆಸುತ್ತಲೇ ಬಂದರು. ಅಷ್ಟೆ ಅಲ್ಲ, ಪತ್ರಕರ್ತರು ಮತ್ತು ಪತ್ರಿಕಾ ನೌಕರರ ಸಂಘಟನೆಗಳ ಕಾನೂನು ಸಲಹೆಗಾರರಾಗಿ ಸೇವೆ ಸಲ್ಲಿಸಿದರು.
ಹೈಕೋರ್ಟ್ ನ್ಯಾಯಾಧೀಶರಾಗಲು ಎರಡು ಬಾರಿ ಅವಕಾಶ ಮನೆಯ ಬಾಗಿಲಿಗೆ ಬಂದಾಗಲೂ ನರಸಿಂಹನ್ ಅದನ್ನು ಒಪ್ಪಿಕೊಳ್ಳಲಿಲ್ಲ. ನರಸಿಂಹನ್‌ರಂತಹವರು ಸದನದಲ್ಲಿ ಇರಬೇಕೆಂದು ನಿಜಲಿಂಗಪ್ಪ ನವರು ಮುಖ್ಯಮಂತ್ರಿ ಆಗಿದ್ದಾಗ ಕಾಂಗ್ರೆಸ್ ನಿಂದ ಬೆಂಬಲ ನೀಡಿ ವಿಧಾನ ಪರಿಷತ್ತಿಗೆ ಆರಿಸಿ ಬರುವಂತೆ ಮಾಡಿದರು. ಸದನದಲ್ಲಿ ನರಸಿಂಹನ್ ಅವರ ವಾಕ್ ಚಾತುರ್ಯವನ್ನು ಪಾಟೀಲ ಪುಟ್ಟಪ್ಪನವರು ನನ್ನ ಬಳಿ ಹಲವಾರು ಬಾರಿ ಶ್ಲಾಘಿಸುತ್ತಿದ್ದರು.
ನಾನು ಕೂಡ ಹಲವಾರು ಸಲ ನರಸಿಂಹನ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ. ಒಮ್ಮೆ ಚಿಕ್ಕಮಗಳೂರಿನಿಂದ ಒಟ್ಟಿಗೆ ಕಾರಿನಲ್ಲಿ ಬರುವಾಗ ತಮ್ಮ ಜೀವನದ ನಡೆದು ಬಂದ ದಾರಿಯ ಬಗ್ಗೆ ನರಸಿಂಹನ್ ಸುದೀರ್ಘವಾಗಿ ಹೇಳಿದರು. ಕಾರ್ಮಿಕರ ಹಕ್ಕಿನ ಪ್ರಶ್ನೆಯಲ್ಲಿ ಅವರ ಬದ್ಧ್ದತೆ ಪ್ರಶ್ನಾತೀತ. ಇನ್ನು ಮುಂದೆ ನ್ಯಾಯಾಲಯದಲ್ಲಿ ಕಾರ್ಮಿಕರ ಹಕ್ಕುಗಳ ಪರವಾಗಿ ಕಾನೂನು ಸಮರ ನಡೆಸುವ ಇನ್ನೊಬ್ಬ ನರಸಿಂಹನ್ ಬರುವುದು ಸಾಧ್ಯವಿಲ್ಲ.
ರಾಜ್ಯದ ದುಡಿಯುವ ಜನರ ಚಳವಳಿಯಲ್ಲಿ ನರಸಿಂಹನ್ ಮತ್ತು ಅನಂತಸುಬ್ಬರಾವ್ ಜೋಡಿ ಇತಿಹಾಸದಲ್ಲಿ ದಾಖಲೆಯಾಗಿ ಉಳಿಯಲಿದೆ. ಸರಳತೆ, ಸಜ್ಜನಿಕೆ, ಬದ್ಧತೆಯಲ್ಲಿ ನರಸಿಂಹನ್ ಅವರಿಗೆ ಸರಿಸಾಟಿಯಾದ ಅನಂತಸುಬ್ಬರಾವ್ ಶ್ರಮಜೀವಿಗಳ ಅದರಲ್ಲೂ ರಾಜ್ಯ ರಸ್ತೆ ಸಾರಿಗೆ ಕಾರ್ಮಿಕರ ಹೋರಾಟದಲ್ಲಿ ಬೀದಿಯಲ್ಲಿ ನಿಂತು ಸಮರ ಸಾರಿದರೆ, ನರಸಿಂಹನ್ ಕಾನೂನಿನ ಸಲಹೆ ಮೂಲಕ ಅವರಿಗೆ ಸಾಥ್ ನೀಡುತ್ತ ಬಂದಿದ್ದರು. ಈಗ ಅನಂತಸುಬ್ಬರಾವ್ ಒಂಟಿಯಾದರೆನಿಸುತ್ತದೆ.
ಒಟ್ಟಾರೆ ಕಾಮ್ರೇಡ್ ಎ.ಕೆ.ರಾಯ್, ನ್ಯಾಯಮೂರ್ತಿ ಹೊಸಬೆಟ್ಟು ಸುರೇಶ್, ಎಂ.ನರಸಿಂಹನ್ ಇಂತಹವರು ಜಗತ್ತಿನ, ಭಾರತದ ಈ ಕಡು ಕಷ್ಟದ ಕಾಲದಲ್ಲಿ ಇರಬೇಕಿತ್ತು. ಆದರೆ ಸಾವೆಂಬುದು ಪ್ರಕೃತಿ ನಿಯಮ.ಅದನ್ನು ಒಪ್ಪಿಕೊಳ್ಳಲೇಬೇಕು. ಇವರು ಮೂವರೂ ಅವರ ಆಶಯಗಳಲ್ಲಿ ಜೀವಂತವಾಗಿರುತ್ತಾರೆ.