ಭಾರತದಲ್ಲಿ ತಾಪಮಾನ 4.4 ಡಿಗ್ರಿ ಸೆಲ್ಸಿಯಸ್ನಷ್ಟು ಏರಿಕೆಯಾಗಲಿದೆ: ಸರಕಾರದ ವರದಿ
ಹೊಸದಿಲ್ಲಿ: ಭಾರತದ ಸರಾಸರಿ ತಾಪಮಾನ ಈ ಶತಮಾನದ ಅಂತ್ಯದ ವೇಳೆಗೆ 4.4 ಡಿಗ್ರಿ ಸೆಲ್ಸಿಯಸ್ನಷ್ಟು ಏರಿಕೆಯಾಗಿ ಬಿಸಿಲಿನ ಧಗೆ ಮೂರರಿಂದ ನಾಲ್ಕು ಪಟ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಬದಲಾವಣೆ ಕುರಿತ ಸರಕಾರದ ವರದಿ ಹೇಳಿದೆ.
ಭಾರತದ ಸರಾಸರಿ ತಾಪಮಾನ 1901-2018ರ ನಡುವೆ ಸುಮಾರು 0.7 ಡಿಗ್ರಿ ಸೆಲ್ಸಿಯಸ್ನಷ್ಟು ಏರಿಕೆಯಾಗಿದೆ ಹಾಗೂ ಇದು ಹಸಿರು ಮನೆ ಅನಿಲಗಳಿಂದ (ಗ್ರೀನ್ ಹೌಸ್ ಗ್ಯಾಸ್) ಉಂಟಾಗಿದೆ ಎಂದು ಭೂ ವಿಜ್ಞಾನ ಸಚಿವಾಲಯದ ವರದಿ ತಿಳಿಸಿದೆ. ಈ ಮಾಹಿತಿಯನ್ನು ಕೇಂದ್ರ ಸಚಿವ ಹರ್ಷವರ್ಧನ್ ಮಂಗಳವಾರ ಬಿಡುಗಡೆಗೊಳಿಸುವ ಸಾಧ್ಯತೆಯಿದೆ.
ವರದಿಯನ್ನು ಭೂವಿಜ್ಞಾನಗಳ ಸಚಿವಾಲಯದ ಅಧೀನದಲ್ಲಿ ಬರುವ ಪುಣೆಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮಿಟ್ಯೊರಾಲಜಿಯ ಘಟಕವಾದ ಸೆಂಟರ್ ಫಾರ್ ಕ್ಲೈಮೇಟ್ ಚೇಂಜ್ ರಿಸರ್ಚ್ ತಯಾರಿಸಿದೆ.
ಭಾರತದಲ್ಲಿ 1986-2015ರ ನಡುವಿನ 30 ವರ್ಷಗಳ ಅವಧಿಯಲ್ಲಿ ಗರಿಷ್ಠ ತಾಪಮಾನದ ದಿನ ಹಾಗೂ ಕನಿಷ್ಠ ತಾಪಮಾನದ ರಾತ್ರಿಯಲ್ಲಿ ತಾಪಮಾನ ಕ್ರಮವಾಗಿ 0.63 ಹಾಗೂ 0.4 ಡಿಗ್ರಿ ಸೆಲ್ಸಿಯಸ್ನಷ್ಟು ಏರಿಕೆಯಾಗಿದೆ.
ಈ ಶತಮಾನದ ಅಂತ್ಯದೊಳಗೆ ಗರಿಷ್ಠ ತಾಪಮಾನದ ದಿನ ಹಾಗೂ ಕನಿಷ್ಠ ತಾಪಮಾನದ ರಾತ್ರಿಯ ತಾಪಮಾನಗಳಲ್ಲಿ ಕ್ರಮವಾಗಿ 4.7 ಹಾಗೂ 5.5 ಡಿಗ್ರಿ ಸೆಲ್ಸಿಯಸ್ನಷ್ಟು ಏರಿಕೆಯಾಗಲಿದೆ.