ಚೀನಾ ಸೈನಿಕರೊಂದಿಗೆ ಘರ್ಷಣೆ: ಭಾರತೀಯ ಸೇನೆಯ ಅಧಿಕಾರಿ, ಇಬ್ಬರು ಯೋಧರು ಹುತಾತ್ಮ
ಹೊಸದಿಲ್ಲಿ,ಜೂ.16: ಪೂರ್ವ ಲಡಾಖ್ ಗಡಿಯಲ್ಲಿ ಸೋಮವಾರ ರಾತ್ರಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್ಎ) ಯೊಂದಿಗಿನ ಹಿಂಸಾತ್ಮಕ ಮುಖಾಮುಖಿಯಲ್ಲಿ ಓರ್ವ ಅಧಿಕಾರಿ ಮತ್ತು ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಚೀನಾದ ಕಡೆಯಲ್ಲಿಯೂ ಸಾವುಗಳು ಸಂಭವಿಸಿವೆ ಎಂದು ಭಾರತೀಯ ಸೇನೆಯು ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ.
1975ರಲ್ಲಿ ಅರುಣಾಚಲ ಪ್ರದೇಶದಲ್ಲಿ ಭಾರತೀಯ ಸೇನೆಯ ಗಸ್ತುತಂಡವೊಂದು ಚೀನಿ ಪಡೆಗಳ ಗುಂಡುಗಳಿಗೆ ಬಲಿಯಾದ ಬಳಿಕ ಇವು ಪಿಎಲ್ಎ ಜೊತೆ ಘರ್ಷಣೆಯಲ್ಲಿ ಸಂಭವಿಸಿದ ಮೊದಲ ಭಾರತದ ಕಡೆಯ ಸಾವುಗಳಾಗಿವೆ.
ಮೃತರಲ್ಲಿ ಓರ್ವರು ಯೂನಿಟ್ನ ಕಮಾಂಡಿಂಗ್ ಅಧಿಕಾರಿಯಾಗಿದ್ದ ಕರ್ನಲ್ ಆಗಿದ್ದಾರೆ. ಓರ್ವ ಜ್ಯೂನಿಯರ್ ಕಮಿಷನ್ಡ್ ಅಧಿಕಾರಿ ಕೂಡ ಮೃತರಲ್ಲಿ ಸೇರಿದ್ದಾರೆ.
ಉಭಯ ಪಡೆಗಳ ನಡುವಿನ ಗಡಿ ಉದ್ವಿಗ್ನತೆಯನ್ನು ಶಮನಿಸಲು ಗಲ್ವಾನ್ ಕಣಿವೆಯಲ್ಲಿ ಎರಡೂ ದೇಶಗಳ ಹಿರಿಯ ಸೇನಾಧಿಕಾರಿಗಳ ನಡುವೆ ಮಾತುಕತೆ ನಡೆಯುತ್ತಿರುವ ಮಧ್ಯೆಯೇ ಈ ಘಟನೆ ನಡೆದಿದೆ ಎಂದು ಸೇನೆಯು ತಿಳಿಸಿದೆ.
ಘರ್ಷಣೆಯಲ್ಲಿ ಕಲ್ಲುಗಳು ಮತ್ತು ರಾಡ್ ಗಳನ್ನು ತೂರಲಾಗಿದ್ದು, ಇವುಗಳಿಂದ ಗಾಯಗೊಂಡು ಮೂವರು ಮೃತಪಟ್ಟಿದ್ದಾರೆ ಎಂದು ಬೆಳವಣಿಗೆಯನ್ನು ಬಲ್ಲ ಮೂಲಗಳು ತಿಳಿಸಿವೆ. ಸೇನೆಯು ಇದಕ್ಕೆ ಪ್ರತಿಕ್ರಿಯಿಸಿಲ್ಲ.
ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಮಂಗಳವಾರ ದಿಲ್ಲಿಯಲ್ಲಿ ಸಿಡಿಎಸ್ ಜ.ಬಿಪಿನ್ ರಾವತ್ ಮತ್ತು ಮೂರೂ ಸಶಸ್ತ್ರ ಪಡೆಗಳ ಮುಖ್ಯಸ್ಥರ ಜೊತೆ ಮಾತುಕತೆಗಳನ್ನು ನಡೆಸಿ ಎಲ್ಎಸಿಯಲ್ಲಿ ಘರ್ಷಣೆಗಳ ನಂತರದ ಪ್ರಸಕ್ತ ಕಾರ್ಯಾಚರಣೆ ಸ್ಥಿತಿಯನ್ನು ಪುನರ್ ಪರಿಶೀಲಿಸಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರೂ ಸಭೆಯಲ್ಲಿ ಉಪಸ್ಥಿತರಿದ್ದರು. ಸೇನೆಯ ಮುಖ್ಯಸ್ಥ ಜ.ಎಂ.ಎಂ.ನರವಾಣೆ ಅವರು ಮಂಗಳವಾರ ನಿಗದಿಯಾಗಿದ್ದ ತನ್ನ ಪಠಾಣ್ ಕೋಟ್ ಭೇಟಿಯನ್ನು ಮುಂದೂಡಿದ್ದಾರೆ.
ತನ್ಮಧ್ಯೆ,ಉಭಯ ಕಡೆಗಳಲ್ಲಿ ಸಾವುಗಳ ಕುರಿತು ತನಗೆ ತಿಳಿದಿಲ್ಲ ಎಂದು ಚೀನಾದ ವಿದೇಶಾಂಗ ಸಚಿವಾಲಯವು ಹೇಳಿದೆ.
ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ ನಡೆಸುತ್ತಿರುವ ಟ್ಯಾಬ್ಲಾಯ್ಡ್ ನ ಮುಖ್ಯ ಸಂಪಾದಕ ಹು ಝಿಜಿನ್ ಅವರು,ತನಗೆ ಲಭಿಸಿರುವ ಮಾಹಿತಿಯಂತೆ ಚೀನಾದ ಕಡೆಗಳಲ್ಲಿ ಸಾವುಗಳು ಸಂಭವಿಸಿವೆ ಎಂದ ಟ್ವೀಟಿಸಿದ್ದಾರೆ.
ಎಲ್ಎಸಿಯಲ್ಲಿ ಉದ್ವಿಗ್ನತೆ ತೀವ್ರಗೊಂಡಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಮಾಜಿ ನಾರ್ದರ್ನ್ ಆರ್ಮಿ ಕಮಾಂಡರ್ ಲೆ.ಜ.ಡಿ,ಎಸ್.ಹೂಡಾ ಅವರು,ಈ ವಿಷಯದಲ್ಲಿ ರಾಜತಾಂತ್ರಿಕ ಹಸ್ತಕ್ಷೇಪ ಅಗತ್ಯವಾಗಿದೆ ಎಂದರು.
ಉಭಯ ದೇಶಗಳ ನಡುವಿನ ಉದ್ವಿಗ್ನತೆಯನ್ನು ಬಗೆಹರಿಸುವ ಪ್ರಯತ್ನವಾಗಿ ಗಲ್ವಾನ್ ಪ್ರದೇಶದಲ್ಲಿ ಬ್ರಿಗೇಡಿಯರ್ ದರ್ಜೆಯ ಅಧಿಕಾರಿಗಳು ಮತ್ತು ಹಾಟ್ ಸ್ಪ್ರಿಂಗ್ಸ್ನಲ್ಲಿ ಕರ್ನಲ್ ದರ್ಜೆಯ ಅಧಿಕಾರಿಗಳು ಮಾತುಕತೆಗಳನ್ನು ನಡೆಸಿದರು.