ರಾಹುಲ್ ನಕಲಿ ವೀಡಿಯೊ ಶೇರ್ ಮಾಡಿರುವ ಶಿವರಾಜ್ ವಿರುದ್ಧ ಎಫ್‌ಐಆರ್ ದಾಖಲಿಸುತ್ತೇನೆ: ದಿಗ್ವಿಜಯ್ ಸಿಂಗ್
ಭೋಪಾಲ, ಜೂ.16: 2019ರ ಸಾರ್ವತ್ರಿಕ ಚುನಾವಣೆಯ ಪ್ರಚಾರದ ಸಂದರ್ಭ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯ ನಕಲಿ ವೀಡಿಯೊ ಶೇರ್ ಮಾಡಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವಿರುದ್ಧ ಎಫ್‌ಐಆರ್ ದಾಖಲಿಸುವುದಾಗಿ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
2019ರ ಮೇ 14ರಂದು ಮಧ್ಯಪ್ರದೇಶದ ನೀಮುಂಚ್ ಎಂಬಲ್ಲಿ ನಡೆದಿದ್ದ ಪ್ರಚಾರ ರ್ಯಾಲಿಯೊಂದರಲ್ಲಿ ರಾಹುಲ್ ಗಾಂಧಿ ಮಾಡಿದ್ದರು ಎನ್ನಲಾದ ಭಾಷಣದ ವೀಡಿಯೊವನ್ನು ಉಲ್ಲೇಖಿಸಿ ಮೇ 16ರಂದು ಚೌಹಾಣ್ ಟ್ವೀಟ್ ಮಾಡಿದ್ದರು.
13 ಸೆಕೆಂಡ್ ಅವಧಿಯ ವೀಡಿಯೊದಲ್ಲಿ ರಾಹುಲ್ ‘ ಮಧ್ಯಪ್ರದೇಶದ ಮುಖ್ಯಮಂತ್ರಿ ಭೂಪೇಶ್ ಬೇಲ್‌ಜಿ, ಛತ್ತೀಸ್‌ಗಢದ ಮುಖ್ಯಮಂತ್ರಿ ಹುಕುಮ್ ಸಿಂಗ್ ಕರಾಡ ಜಿ’ ಎಂದು ಉಲ್ಲೇಖಿಸಿರುವುದನ್ನು ತೋರಿಸಲಾಗಿದೆ. ಇದನ್ನು ಟ್ವೀಟ್ ಮಾಡಿದ್ದ ಚೌಹಾಣ್ ‘ ಏನಿದು ರಾಹುಲ್‌ಜಿ, ರೈತರ ಸಾಲ ಮನ್ನಾ ಮಾಡದಿರುವುದಕ್ಕೆ ನೀವು ಮಧ್ಯಪ್ರದೇಶದ ಮುಖ್ಯಮಂತ್ರಿಯನ್ನು ಬದಲಾಯಿಸಿದ್ದೀರಾ ? ನಿಮ್ಮಂತಹ ಮಹಾನ್ ವ್ಯಕ್ತಿಗಳು ಮಾತ್ರ ಕ್ಷಣಮಾತ್ರದಲ್ಲಿ ಹೀಗೆ ಮಾಡಲು ಸಾಧ್ಯ ’ ಎಂದು ಹೇಳಿದ್ದರು.
ಆದರೆ ಇದು ನಕಲಿ ವೀಡಿಯೊ. ಮೂಲ ವೀಡಿಯೋದಲ್ಲಿ ರಾಹುಲ್ ‘ಕಮಲನಾಥ್ ಜಿ, ಮಧ್ಯಪ್ರದೇಶದ ಮುಖ್ಯಮಂತ್ರಿ, ಭೂಪೇಶ್ ಭಾಘೇಲ್ ಜಿ, ಛತ್ತೀಸ್‌ಗಢದ ಮುಖ್ಯಮಂತ್ರಿ, ಹುಕುಮ್ ಸಿಂಗ್ ಕರಾಡ ಜಿ’ ಎಂದು ಹೇಳಿದ್ದರು. ತಿರುಚಿದ ವೀಡಿಯೊವನ್ನು ಚೌಹಾಣ್ ಶೇರ್ ಮಾಡಿಕೊಂಡಿದ್ದಾರೆ. ತನ್ನ ವಿರುದ್ಧ ಬಿಜೆಪಿ ಮುಖಂಡರು ಯಾವ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸುತ್ತಾರೋ ಅದೇ ಠಾಣೆಯಲ್ಲಿ ಚೌಹಾಣ್ ವಿರುದ್ಧ ಎಫ್‌ಐಆರ್ ದಾಖಲಿಸುತ್ತೇನೆ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ದಿಗ್ವಿಜಯ್ ಸಿಂಗ್ ಆರೋಪವನ್ನು ನಿರಾಕರಿಸಿರುವ ಸಚಿವ ನರೋತ್ತಮ ಮಿಶ್ರ, ತಾನು ನಕಲಿ ವೀಡಿಯೊ ಶೇರ್ ಮಾಡಿಕೊಂಡಿರುವ ತಪ್ಪನ್ನು ಮುಚ್ಚಿಕೊಳ್ಳಲು ದಿಗ್ವಿಜಯ್ ಸಿಂಗ್ ಈ ನಾಟಕವಾಡುತ್ತಿದ್ದಾರೆ ಎಂದಿದ್ದಾರೆ.