ಕಿರ್ಗಿಸ್ತಾನದಲ್ಲಿ ಸಿಕ್ಕಿಹಾಕಿಕೊಂಡಿರುವ ರಾಜ್ಯದ 150ಕ್ಕೂ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳು
ಬೆಂಗಳೂರು : ವೈದ್ಯಕೀಯ ಶಿಕ್ಷಣಕ್ಕಾಗಿ ತೆರಳಿರುವ ರಾಜ್ಯದ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೇಂದ್ರ ಏಷ್ಯಾ ದೇಶವಾದ ಕಿರ್ಗಿಸ್ತಾನ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದು, ತಾಯ್ನಾಡಿಗೆ ಮರಳಲು ಕಾಯುತ್ತಿದ್ದಾರೆ.
ಕಿರ್ಗಿಸ್ತಾನದಲ್ಲಿ ಮಾ. 17ರಂದು ಲಾಕ್‌ಡೌನ್ ಘೋಷಣೆಯಾದ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ಭಾರತೀಯರು ಅರೆಕಾರಿಕ ಉದ್ಯೋಗ ಕಳೆದುಕೊಂಡು, ಬಾಡಿಗೆ ಹಾಗೂ ಇತರ ವೆಚ್ಚಗಳನ್ನು ಭರಿಸಲಾಗದೇ ಪರದಾಡುತ್ತಿದ್ದಾರೆ. ವಂದೇ ಭಾರತ್ ಮಿಷನ್ ಆರಂಭವಾದ ಬಳಿಕ ಬಹಳಷ್ಟು ಮಂದಿ ಭಾರತೀಯ ವಿದ್ಯಾರ್ಥಿಗಳು ಬಿಷ್ಕಾಕ್‌ನಿಂದ ಭಾರತಕ್ಕೆ ಏರ್ ಇಂಡಿಯಾ ವಿಮಾನಗಳಲ್ಲಿ ಬಂದಿದ್ದರು.
ವಿಷಾದದ ಸಂಗತಿಯೆಂದರೆ ಕರ್ನಾಟಕದ 150-200 ವಿದ್ಯಾರ್ಥಿಗಳು ಇಲ್ಲಿ ಸಿಕ್ಕಿಹಾಕಿಕೊಂಡಿದ್ದರೂ ಕರ್ನಾಟಕಕ್ಕೆ ಯಾವ ವಿಮಾನವನ್ನೂ ಕಲ್ಪಿಸಿಲ್ಲ. ನಾವು ಎಲ್ಲಿಗೂ ಹೋಗುವಂತಿಲ್ಲ ಎಂದು ಮಾಗಡಿರಸ್ತೆ ಮೂಲದ ಅಜಿತ್ ಕುಮಾರ್ ವಿವರಿಸಿದರು. ಬಿಷ್ಕಾಕ್‌ನಲ್ಲಿ ಅವರು ಮೂರನೇ ವರ್ಷದ ವೈದ್ಯಕೀಯ ವಿದ್ಯಾರ್ಥಿ.
ಕುಮಾರ್ ಅವರ ತಂದೆ ಬೆಂಗಳೂರಿನಲ್ಲಿ ತೀವ್ರ ಅಸ್ವಸ್ಥರಾಗಿದ್ದು, ಅವರ ಆರೋಗ್ಯ ವಿಚಾರಿಸಲು ತಾಯ್ನಾಡಿಗೆ ಮರಳಲು ವ್ಯವಸ್ಥೆ ಕಲ್ಪಿಸುವಂತೆ ಕೋರಿ ಹಲವು ಬಾರಿ ಅವರು ಭಾರತೀಯ ರಾಯಭಾರ ಕಚೇರಿಗೆ ಅಲೆದಿದ್ದಾರೆ. ಆದರೆ ಪ್ರಯತ್ನ ವ್ಯರ್ಥವಾಗಿದೆ. ದೆಹಲಿ, ಅಹ್ಮದಾಬಾದ್, ಹೈದರಾಬಾದ್ ಹಾಗೂ ನಾಗ್ಪುರಕ್ಕೆ ತೆರಳಿದ ವಿಮಾನಗಳಲ್ಲಿ ನಮ್ಮ ಹಲವು ಮಂದಿ ಸಹಪಾಠಿಗಳು ಭಾರತಕ್ಕೆ ಮರಳಿದ್ದಾರೆ ಎಂದು ಅವರು ವಿವರಿಸುತ್ತಾರೆ.
ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳು ವಾಟ್ಸ್ಆ್ಯಪ್ ಮೂಲಕ ಸಂಪರ್ಕದಲ್ಲಿದ್ದು, ಬೆಂಗಳೂರಿಗೆ ಮರಳುವ ಮಾರ್ಗೋಪಾಯದ ಬಗ್ಗೆ ಚಿಂತಿಸುತ್ತಿದ್ದಾರೆ. ನಮ್ಮ ಸ್ನೇಹಿತೆಯರು ಹಾಸ್ಟೆಲ್‌ನಿಂದ ಹೋಗಿದ್ದಾರೆ ಎಂದು ಉತ್ತರ ಕನ್ನಡ ಜಿಲ್ಲೆ ಕೈಗಾದ ಜೆ.ಸುನೀತಾ ಹೇಳುತ್ತಾರೆ. ಇವರು ಕೂಡಾ ಮೂರನೇ ವರ್ಷದ ವೈದ್ಯ ವಿದ್ಯಾರ್ಥಿನಿ. ರಾಯಭಾರ ಕಚೇರಿಗೆ ಹಲವು ಬಾರಿ ಕರೆ ಮಾಡಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ; ಹೈದರಾಬಾದ್‌ಗೆ ತೆರಳುವ ವಿಮಾನದಲ್ಲಿ ಟಿಕೆಟ್ ಪಡೆಯುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳಿದರು.
ಬಿಷ್ಕಾಕ್ ಹೊರತುಪಡಿಸಿ ಜಲಾಲ್ ಅಬಾದ್ ಮತ್ತು ಓಷಾದಲ್ಲೂ ಬಹಳಷ್ಟು ವಿದ್ಯಾರ್ಥಿಗಳು ಸಿಕ್ಕಿಹಾಕಿಕೊಂಡಿದ್ದಾರೆ.