ಮೀಸಲಾತಿ ಹೆಚ್ಚಳ: ನಾಗಮೋಹನ್ ದಾಸ್ ಅವರ ಸಮಗ್ರ ಅಧ್ಯಯನ
ಇದೇ ತಿಂಗಳ ಅಂತ್ಯದಲ್ಲಿ ವರದಿ ಸಲ್ಲಿಕೆ ಸಾಧ್ಯತೆ
ಬೆಂಗಳೂರು, ಜೂ.18: ನಾಡಿನ ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದ ಮೀಸಲಾತಿ ಪ್ರಮಾಣ ಹೆಚ್ಚಳ ಕುರಿತು ಸತತ ಮೂರು ತಿಂಗಳಿಗೂ ಅಧಿಕ ಕಾಲ ಸಮಗ್ರ ಅಧ್ಯಯನ ನಡೆಸಿರುವ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಆಯೋಗದ ವರದಿ ಜೂನ್ ತಿಂಗಳ ಅಂತ್ಯದಲ್ಲಿ ರಾಜ್ಯ ಸರಕಾರದ ಕೈ ಸೇರಲಿದೆ.
ಮೀಸಲಾತಿ ಸಂಬಂಧ ಇಲ್ಲಿಯವರೆಗೂ 847 ಅಹವಾಲುಗಳು ಆಯೋಗಕ್ಕೆ ಸಲ್ಲಿಕೆಯಾಗಿದ್ದು, ಈ ಎಲ್ಲವನ್ನು ಪರಿಶೀಲಿಸಿ ವಿಚಾರಣೆಗೊಳಪಡಿಸಲಾಗಿದೆ. ಅದೇ ರೀತಿ, ಬೆಳಗಾವಿ, ಬೆಂಗಳೂರು ಸೇರಿ ರಾಜ್ಯದ ನಾಲ್ಕು ವಿಬಾಗಗಳನ್ನು ಮಾಡಿದ್ದು, ಈ ವ್ಯಾಪ್ತಿಯಲ್ಲಿ ಒಟ್ಟು 42 ಸಮಲೋಚನಾ ಸಬೆಗಳು ನಡೆದಿವೆ.
ಇದರಲ್ಲಿ ಮುಖ್ಯವಾಗಿ ಕಾನೂನು ತಜ್ಞರು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಚಿಂತಕರು ಹಾಗೂ ಸಮುದಾಯಗಳಿಗೆ ಸೇವೆ ಸಲ್ಲಿಸಿರುವ ಮುಖಂಡರ ಅಭಿಪ್ರಾಯ ಸಂಗ್ರಹಿಸಿ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಒಟ್ಟಾರೆ, ವರದಿ ಸಂಪೂರ್ಣ ಸಿದ್ಧಗೊಂಡಿದೆ.
ಈ ಕುರಿತು ‘ವಾರ್ತಾಭಾರತಿ’ ಪತ್ರಿಕೆಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್, ಜನಸಂಖ್ಯೆ ಹೆಚ್ಚಳವಾಗಿರುವುದು ಒಂದು ಅಂಶ. ಅದನ್ನು ಹೊರತಾಗಿ ಶೈಕ್ಷಣಿಕ, ಕಾನೂನು, ಉದ್ಯೋಗ, ಮಾನವ ಅಭಿವೃದ್ಧಿ ಪರಿಗಣಿಸಿ ಆ ಸಮುದಾಯದ ಸ್ಥಿತಿಗತಿಯನ್ನೂ ಅವಲೋಕಿಸಿ, ವರದಿಯಲ್ಲಿ ಅಂಶಗಳನ್ನು ಉಲ್ಲೇಖಿಸಲಾಗಿದೆ ಎಂದು ನುಡಿದರು.
ಲಾಕ್ಡೌನ್ನಲ್ಲೂ ಕಾರ್ಯ: ಈ ಹಿಂದಿನ ಸಾಲಿನ ನ. 4ರಿಂದ ಆಯೋಗದ ಚಟುವಟಿಕೆ ಆರಂಗೊಂಡಿತು. ಆದರೆ, ವರದಿ ಪ್ರಕ್ರಿಯೆ ಒಂದು ತಿಂಗಳ ಕಾಲಾವಕಾಶ ಮಾತ್ರ ನೀಡಲಾಗಿತ್ತು. ಬಳಿಕ, ಆಯೋಗದ ಪ್ರಮುಖರಾದ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಮನವಿಯಂತೆ ಮೂರು ತಿಂಗಳ ಅವಕಾಶ ದೊರೆಯಿತು.
ತದನಂತರ ಕೋವಿಡ್-19 ಪರಿಣಾಮ ಲಾಕ್ಡೌನ್ ಜಠಾರಿಯಾದರೂ, ಆಯೋಗ ಎಂದಿನಂತೆ ಕಾರ್ಯನಿರ್ವಹಿಸಿ ಪ್ರಶಂಸೆಗೆ ಪಾತ್ರವಾಗಿದೆ.
ಆಯೋಗ ಹಿನ್ನೆಲೆ: 1950ರಲ್ಲಿ ಮೀಸಲಾತಿ ಹಂಚಿಕೆಯಾಗಿದ್ದು, ಅದನ್ನೇ ಅನುಸರಿಸಿಕೊಂಡು ಮೀಸಲಾತಿ ನೀಡಲಾಗುತ್ತಿದೆ. ಕರ್ನಾಟಕ ಏಕೀಕರಣವಾದ ನಂತರ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಜನಸಂಖ್ಯೆ ಹೆಚ್ಚಳವಾಗಿದೆ.
ಅಲ್ಲದೇ, ಹಿಂದುಳಿದ ವರ್ಗಗಳಲ್ಲಿದ್ದ ಹಲವು ಜಾತಿಗಳು ಈ ಪಟ್ಟಿಯಲ್ಲಿ ಸೇರ್ಪಡೆಗೊಂಡಿವೆ. ಹೀಗಾಗಿ ಮೀಸಲಾತಿ ಹೆಚ್ಚಿಸುವ ಬೇಡಿಕೆ ಕೇಳಿಬಂದಿತ್ತು. ಈ ಹಿನ್ನೆಲೆ 2019ನೇ ಸಾಲಿನಲ್ಲಿ ರಾಜ್ಯ ಸರಕಾರ ಆಯೋಗ ರಚನೆ ಮಾಡಿತ್ತು. ಇದೇ ಸಾಲಿನ ನ.4ರಿಂದ ಕಾರ್ಯಾರಂಭಗೊಂಡಿತ್ತು.
ವರದಿಯು ಸಂಪೂರ್ಣ ತಯಾರಾಗಿದ್ದು, ಜೂನ್ ತಿಂಗಳ ಅಂತ್ಯದೊಳಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಸರಕಾರಕ್ಕೆ ಸಲ್ಲಿಸಲು ಚಿಂತನೆ ನಡೆಸಲಾಗಿದೆ.
-ಎಚ್.ಎನ್.ನಾಗಮೋಹನದಾಸ್, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ