ಕೊರೋನ ವೈರಸ್: ದಿಲ್ಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಸ್ಥಿತಿ ಗಂಭೀರ
ಹೊಸದಿಲ್ಲಿ,ಜೂ.20: ಕೊರೋನಾ ಸೋಂಕು ಪೀಡಿತರಾಗಿರುವ ದಿಲ್ಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರ ಆರೋಗ್ಯಸ್ಥಿತಿ ತೀರಾ ಹದಗೆಟ್ಟಿದ್ದು, ಅವರಿಗೆ ಪ್ಲಾಸ್ಮಾ ಥೆರಪಿ ನೀಡಲಾಗುವುದೆಂದು ಅಧಿಕೃತ ಮೂಲಗಳು ತಿಳಿಸಿವೆ.
ಭಾರೀ ಜ್ವರ ಹಾಗೂ ಆಮ್ಲಜನಕದ ಮಟ್ಟದಲ್ಲಿ ಹಠಾತ್ ಕುಸಿತ ಕಂಡುಬಂದ ಬಳಿಕ ಜೈನ್ ಅವರನ್ನು ರಾಜೀವ್ ಗಾಂಧಿ ಸೂಪರ್ ಸ್ಪೆಶಾಲಿಟಿ ಹಾಸ್ಪಿಟಲ್ (ಆರ್ಜಿಎಸ್ಎಸ್ಎಚ್)ಗೆ ದಾಖಲಿಸಲಾಗಿತ್ತು. ಆದರೆ ಅವರ ದೇಹಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದರಿಂದ ಮ್ಯಾಕ್ಸ್ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಜೈನ್ ಅವರು ನ್ಯುಮೊನಿಯಾ ಕೂಡಾ ಬಾಧಿಸಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಕಂಡುಬಂದಿದೆ. 55 ವರ್ಷದ ಸತ್ಯೇಂದ್ರ ಜೈನ್ ಅವರನ್ನು ಈಗ ಸಂಪೂರ್ಣವಾಗಿ ಕೃತಕ ಉಸಿರಾಟ ವ್ಯವಸ್ಥೆಯಲ್ಲಿರಿಸಲಾಗಿದೆ. ಅವರಿಗೆ ನ್ಯುಮೋನಿಯಾ ಕೂಡಾ ಇರುವುದು ಪರೀಕ್ಷೆಯಲ್ಲಿ ಕಂಡುಬಂದಿದ್ದು, ಅವರನ್ನು ಐಸಿಯುನಲ್ಲಿ ದಾಖಲಿಸಲಾಗಿದೆ ಎಂದು ಆಸ್ಪತ್ರೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಮಧ್ಯೆ ದಿಲ್ಲಿ ಆರೋಗ್ಯ ಸಚಿವರು ಶೀಘ್ರವಾಗಿ ಚೇತರಿಸಲೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾರೈಸಿದ್ದಾರೆ. ಜೈನ್ ಅವರಿಗೆ ಕೋವಿಡ್-19 ಸೋಂಕು ತಗಲಿರುವುದು ಬುಧವಾರ ದೃಢಪಟ್ಟಿತ್ತು.