ದೇಶದಲ್ಲಿ ನಾಲ್ಕು ಲಕ್ಷದ ಹೊಸ್ತಿಲಲ್ಲಿ ಕೊರೋನ ಪ್ರಕರಣ
ಹೊಸದಿಲ್ಲಿ : ದೇಶದಲ್ಲಿ ಶುಕ್ರವಾರ ಮತ್ತೆ 14 ಸಾವಿರಕ್ಕೂ ಅಧಿಕ ಕೊರೋನ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ ನಾಲ್ಕು ಲಕ್ಷದ ಸನಿಹಕ್ಕೆ ಬಂದಿದೆ. ರಾಜ್ಯಗಳಿಂದ ಬಂದ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಪ್ರಸ್ತುತ ಕೋವಿಡ್-19 ಸೋಂಕಿತರ ಸಂಖ್ಯೆ 3.95 ಲಕ್ಷ.
ಜೂನ್ ತಿಂಗಳಲ್ಲಿ ವರದಿಯಾದ ಕೋವಿಡ್-19 ಪ್ರಕರಣಗಳ ಸಂಖ್ಯೆ 2,10,655 ಆಗಿದೆ. ದೇಶದಲ್ಲಿ ಇದುವರೆಗೆ ಪತ್ತೆಯಾದ ಪ್ರಕರಣಗಳ ಪೈಕಿ ಶೇಕಡ 53ರಷ್ಟು ಪ್ರಕರಣಗಳು ಜೂನ್ ತಿಂಗಳಲ್ಲೇ ದೃಢಪಟ್ಟಿವೆ. ಅಂತೆಯೇ ಸೋಂಕಿನಿಂದ ಮೃತಪಟ್ಟ 12,888 ಮಂದಿಯ ಪೈಕಿ 7484 ಸಾವುಗಳು ಈ ತಿಂಗಳಲ್ಲಿ ಸಂಭವಿಸಿವೆ. ಕಳೆದ ಮೇ ತಿಂಗಳಲ್ಲಿ 1.5 ಲಕ್ಷ ಪ್ರಕರಣಗಳು ದೃಢಪಟ್ಟಿದ್ದರೆ, 4267 ಸಾವು ಸಂಭವಿಸಿತ್ತು.
ಗುರುವಾರ ದೇಶದಲ್ಲಿ ಒಂದೇ ದಿನ ಗರಿಷ್ಠ ಪ್ರಕರಣ (14052) ವರದಿಯಾಗಿತ್ತು. ಆದರೆ ಶುಕ್ರವಾರ ಆ ದಾಖಲೆ ಮುರಿದು 14574 ಪ್ರಕರಣಗಳು ದೃಢಪಟ್ಟಿವೆ. ಮಹಾರಾಷ್ಟ್ರ (3827) ಮತ್ತು ದೆಹಲಿ (3137) ಅಗ್ರಸ್ಥಾನಿಗಳಾಗಿ ಮುಂದುವರಿದಿವೆ. ಮಹಾರಾಷ್ಟ್ರ ಹೊರತುಪಡಿಸಿದರೆ ದೆಹಲಿ, ಒಂದೇ ದಿನ ಮೂರು ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾದ ಏಕೈಕ ರಾಜ್ಯ ಎನಿಸಿಕೊಂಡಿದೆ.
ಮಹಾರಾಷ್ಟ್ರದಲ್ಲಿ 1,24,331 ಪ್ರಕರಣಗಳು ದಾಖಲಾಗಿದ್ದು, ಶುಕ್ರವಾರ 142 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 5873ಕ್ಕೇರಿದೆ.
ಉತ್ತರ ಪ್ರದೇಶದಲ್ಲಿ 809 ಹೊಸ ಪ್ರಕರಣಗಳು ಶುಕ್ರವಾರ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 16,594ಕ್ಕೇರಿದೆ. 19 ಮಂದಿ ಶುಕ್ರವಾರ ಮೃತಪಟ್ಟಿದ್ದು, ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 507ಕ್ಕೇರಿದೆ. ಹರ್ಯಾಣ (525), ಆಂಧ್ರಪ್ರದೇಶ (465), ಪಂಜಾಬ್ (217) ರಾಜ್ಯಗಳಲ್ಲೂ ಅಧಿಕ ಸಂಖ್ಯೆಯ ಪ್ರಕರಣಗಳು ದೃಢಪಟ್ಟಿವೆ.