ಜಾನುವಾರು ಸಾಗಾಟಗಾರರ ಮೇಲೆ ಗುಂಪು ಥಳಿತ; ಓರ್ವ ಮೃತ್ಯು
ತನಿಖೆಯ ಹೊಣೆಯಿಂದ ನುಣುಚಿಕೊಳ್ಳಲು ಉ.ಪ್ರ., ರಾಜಸ್ಥಾನ ಪೊಲೀಸರ ಯತ್ನ
ಭರತಪುರ, ಜೂ.23: ಜಾನುವಾರು ಕಳ್ಳಸಾಗಣೆ ಮಾಡುತ್ತಿದ್ದನೆನ್ನಲಾದ ವ್ಯಕ್ತಿಯನ್ನು ಗುಂಪೊಂದು ಹೊಡೆದು ಸಾಯಿಸಿದ ಪ್ರಕರಣದ ತನಿಖೆಗೆ ಆರಂಭದಲ್ಲೇ ಅಡ್ಡಿ ಎದುರಾಗಿದೆ. ಉತ್ತರಪ್ರದೇಶ ಹಾಗೂ ರಾಜಸ್ಥಾನದ ಪೊಲೀಸರು ತಮ್ಮ ಹೊಣೆಗಾರಿಕೆಯನ್ನು ಒಬ್ಬರಿಂದ ಇನ್ನೊಬ್ಬರ ಹೆಗಲಿಗೆ ಹೊರಿಸಲು ಯತ್ನಿಸುತ್ತಿರುವುದು ಬೆಳಕಿಗೆ ಬಂದಿದೆ.
ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದರು ಎನ್ನಲಾದ ಮೂವರು ವ್ಯಕ್ತಿಗಳನ್ನು ಗುಂಪೊಂದು ಅಟ್ಟಿಸಿಕೊಂಡು ಹೋಗಿತ್ತು. ಇವರಲ್ಲಿ ಇಬ್ಬರನ್ನು ರಾಜಸ್ಥಾನ ಹಾಗೂ ಉತ್ತರಪ್ರದೇಶದ ಗಡಿಪ್ರದೇಶದಲ್ಲಿ ಹಿಡಿದು ಅಮಾನುಷವಾಗಿ ಥಳಿಸಿತ್ತು. ಗುಂಪಿನಿಂದ ಥಳಿತಕ್ಕೊಳಗಾದ ಇಬ್ಬರನ್ನು ಉತ್ತರಪ್ರದೇಶದ ಮಥುರಾದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಲ್ಲೊಬ್ಬಾತ ಅಸುನೀಗಿದ್ದ.
ಮೂರನೆಯಾತನನ್ನು ರಾಜಸ್ಥಾನದ ಭರತ್‌ಪುರ ಜಿಲ್ಲೆಯ ನೊನೆರಾದಲ್ಲಿ ಗ್ರಾಮಸ್ಥರ ಗುಂಪೊಂದು ಹಿಡಿದು ಥಳಿಸಿತ್ತು. ಆತನ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಾಯಗೊಂಡಿದ್ದ ಆತನಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗಿತ್ತು.
ಜಾನುವಾರು ಸಾಗಣೆದಾರರನ್ನು ಬೆನ್ನಟ್ಟಿಕೊಂಡು ಹೋದ ಗುಂಪು ಜುರ್‌ಹೆರಾ ಪಟ್ಟಣದ ಸಮೀಪ ತಮ್ಮ ರಾಜ್ಯದ ಗಡಿಯನ್ನು ದಾಟಿ ಉತ್ತರಪ್ರದೇಶ ಪ್ರವೇಶಿಸಿತ್ತು ಎಂದು ರಾಜಸ್ಥಾನ ಪೊಲೀಸರು ಹೇಳುತ್ತಿದ್ದಾರೆ.
ಘಟನೆಯು ಉತ್ತರಪ್ರದೇಶದ ಸರಹದ್ದಿನಲ್ಲಿ ನಡೆದಿರುವುದರಿಂದ ತಾವು ಪ್ರಕರಣದ ಬಗ್ಗೆ ತನಿಖೆ ನಡೆಸುವುದಿಲ್ಲವೆಂದು ಉತ್ತರಪ್ರದೇಶ ಪೊಲೀಸರ ವಾದವಾಗಿದೆ.
ಈ ಮೂವರನ್ನು ಬೆನ್ನಟ್ಟಲು ಗುಂಪು ಬಳಸಿದ್ದ ವಾಹನವನ್ನು ರಾಜಸ್ಥಾನ ಪೊಲೀಸರು ವಶಪಡಿಸಿಕೊಂಡಿದ್ದಾರೆ.