ಮೃತದೇಹಗಳ ದಫನ ಮಾಡಲು ಜಾಗವಿಲ್ಲ: ಕಬರ್ ಸ್ತಾನ ಸಮಿತಿಯ ಅಳಲು
ದಿಲ್ಲಿಯಲ್ಲಿ ಕೋವಿಡ್ 19 ಅಟ್ಟಹಾಸ
ಕೃಪೆ: thequint.com
ಹೊಸದಿಲ್ಲಿ: ರಾಜಧಾನಿ ದಿಲ್ಲಿಯಲ್ಲಿ ದಿನೇ ದಿನೇ ಕೋವಿಡ್-19 ಪ್ರಕರಣಗಳ ಏರಿಕೆಯೊಂದಿಗೆ ಸಾವಿನ ಪ್ರಮಾಣವೂ ಹೆಚ್ಚಾಗುತ್ತಿದೆ. ಇದರ ನೇರ ಪರಿಣಾಮ ಎಂಬಂತೆ ಮಧ್ಯ ದಿಲ್ಲಿಯ ಆದಾಯ ತೆರಿಗೆ ಕಚೇರಿ ಸಮೀಪವಿರುವ ಮೂರು ಎಕರೆ ವಿಸ್ತೀರ್ಣದ ದಫನ ಭೂಮಿ ಶೇ.75ರಷ್ಟು ತುಂಬಿ ಹೋಗಿದೆ.
ಈ ವಿಚಾರ ಕಬರ್ ಸ್ತಾನ ಸಮಿತಿಯ ಆತಂಕಕ್ಕೆ ಕಾರಣವಾಗಿದೆ. ಸದ್ಯ ಈ ದಫನಭೂಮಿಯಲ್ಲಿ ಇನ್ನೂ 100 ಮೃತದೇಹಗಳನ್ನು ಮಾತ್ರ ದಫನ ಮಾಡಲು ಅವಕಾಶವಿದೆ. ಪ್ರತಿ ದಿನ 10ರಿಂದ 12 ಮೃತದೇಹಗಳ ದಫನ ಇಲ್ಲಿ ನಡೆಯುತ್ತಿರುವುದರಿಂದ ಇನ್ನೊಂದು ವಾರದಲ್ಲಿ ಈ ದಫನ ಭೂಮಿ ತನ್ನ ಪೂರ್ಣ ಸಾಮರ್ಥ್ಯ ತಲುಪಿ ಮತ್ತೆ ಇಲ್ಲಿ ಜಾಗವೇ ಇಲ್ಲದಂತಾಗುತ್ತದೆ.
“ಈ ದಫನ ಭೂಮಿಯನ್ನು ವಿಸ್ತರಿಸಲು ಸಾಧ್ಯವಿಲ್ಲ. ಕೋವಿಡ್ ನಿಂದ ಮೃತಪಟ್ಟವರ ಮೃತದೇಹಗಳನ್ನು ದಫನ ಮಾಡಲು ನಮಗೆ ಹೆಚ್ಚು ಜಮೀನನ್ನು ದಿಲ್ಲಿ ಸರಕಾರ ನೀಡಬೇಕು. ಈ ಕುರಿತಂತೆ ಸರಕಾರಕ್ಕೆ ಹಲವು ಬಾರಿ ಪತ್ರೆ ಬರೆದಿದ್ದರೂ ಯಾವುದೇ ಪ್ರತಿಕ್ರಿಯೆ ದೊರಕಿಲ್ಲ'' ಎಂದು ಕಬರ್ ಸ್ತಾನ ಸಮಿತಿ ಸದಸ್ಯ ಶಮಿ ಮುಹಮ್ಮದ್ ಖಾನ್ ಹೇಳುತ್ತಾರೆ
ಈ ಧಫನಭೂಮಿಗೆ ಬರುವ ಕೋವಿಡ್-19 ರೋಗಿಗಳ ಕಳೇಬರಗಳ ಪೈಕಿ ಗರಿಷ್ಠ ಕಳೇಬರಗಳು ಲೋಕ್ ನಾಯಕ್ ಜಯಪ್ರಕಾಶ್ ಆಸ್ಪತ್ರೆ, ಸಫ್ದರ್ ಜಂಗ್ ಆಸ್ಪತ್ರೆ, ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ ಹಾಗೂ ಏಮ್ಸ್ ನಿಂದ ಬರುತ್ತವೆ ಎಂದು ಅವರು ಹೇಳುತ್ತಾರೆ.
“ಒಂದು ದಿನವಂತೂ ಇಲ್ಲಿ 15 ಕಳೇಬರಗಳು ದಫನಕ್ಕಾಗಿ ತರಲಾಗಿತ್ತು. ಇನ್ನು ಹೆಚ್ಚು ಸಾಧ್ಯವಿಲ್ಲ ಮರುದಿನ ಕಳೇಬರಗಳನ್ನು ಕಳುಹಿಸಿ ಎನ್ನಬೇಕಾಯಿತು. ಇಲ್ಲಿ ಬಿಸಿಲಿನ ಧಗೆ ಬಹಳಷ್ಟಿದೆ. ವಿಶ್ರಾಂತಿಗೆ ಜಾಗವೂ ಇಲ್ಲ'' ಎಂದು ಇಮಾಮ್ ಆಗಿರುವ ವಸೀಂ ಹಾಗೂ ದಫನಭೂಮಿಯ ಮ್ಯಾನೇಜರ್ ಶಮೀಮ್ ಹೇಳುತ್ತಾರೆ.
ಇಬ್ಬರೂ ಪ್ರತಿ ತಿಂಗಳಿಗೊಮ್ಮೆ ಕೋವಿಡ್ 19 ಪರೀಕ್ಷೆಗೆ ಒಳಗಾಗುತ್ತಾರೆ. ದಫನಭೂಮಿಗೆ ಬರುವ ಕಳೇಬರಗಳ ಸಂಖ್ಯೆ ಮುಂದೊಂದು ದಿನ ಕಡಿಮೆಯಾಗಬಹುದೆಂಬ ನಿರೀಕ್ಷೆಯಲ್ಲಿ ಇಬ್ಬರೂ ಇದ್ದಾರೆ.