ನೋಟು ನಿಷೇಧ ಗಡಿಭಾಗದಲ್ಲಿ ಭಯೋತ್ಪಾದನೆಯನ್ನು ಕಡಿಮೆ ಮಾಡುವ ಬದಲು ಹೆಚ್ಚು ಮಾಡಿತೇಕೆ?
ಇಂದಿನ The Hindu ದಿನಪತ್ರಿಕೆಯಲ್ಲಿ JNU ವಿಶ್ವವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ವ್ಯವಹಾರಗಳ ಅಧ್ಯಯನ ಸಂಸ್ಥೆಯ ಪ್ರೊಫೆಸರ್ ಆಗಿರುವ ಹ್ಯಾಪಿಮೊನ್ ಜೇಕಬ್ ಅವರು China, Kashmir and The Ghost Of Aug 5 ಎಂಬ ಲೇಖನವನ್ನು ಬರೆದಿದ್ದಾರೆ.
ಅದರಲ್ಲಿ ಅವರು 2019ರ ಆಗಸ್ಟ್ 5ರಂದು ಭಾರತ ಸರ್ಕಾರ ಕಾಶ್ಮೀರವನ್ನು ವಿಭಜನೆ ಮಾಡಿದ್ದೂ ಮತ್ತು ಚೀನಾ ಗಡಿಗೆ ಹೊಂದಿಕೊಂಡಿರುವ ಲಡಾಖ್ ಭಾಗವನ್ನು ನೇರ ಕೇಂದ್ರಾಡಳಿತ ಪ್ರದೇಶಕ್ಕೆ ತಂದುಕೊಂಡಿದ್ದೂ ಹಾಗೂ ಅಮಿತ್ ಶಾ ಅವರು ಪದೇಪದೇ ವಿವಾದಿತ ಅಕ್ಸಾಯ್ ಚಿನ್ ಪ್ರದೇಶವನ್ನು ಏಕಪಕ್ಷೀಯವಾಗಿ ಮರುವಶ ಮಾಡಿಕೊಳ್ಳಲಾಗುವುದು ಎಂದು ನೀಡುತ್ತಿರುವ ಹೇಳಿಕೆಗಳು ಹೇಗೆ 1972ರ ಸಿಮ್ಲಾ ಒಪ್ಪಂದದ ಉಲ್ಲಂಘನೆಯೆಂಬ ವ್ಯಾಖ್ಯಾನಕ್ಕೆ ಅವಕಾಶ ಮಾಡಿಕೊಡುತ್ತದೆ ಎಂದು ವ್ಯಾಖ್ಯಾನಿಸುತ್ತಾರೆ. ಈ ನಡೆಗಳು ಹೇಗೆ ಪಶ್ಚಿಮ ಗಡಿಯಲ್ಲಿ ಭಾರತದ ವಿರುದ್ಧ ಚೀನಾ ಸಹ ಪಾಕಿಸ್ತಾನದ ಜೊತೆ ಒಟ್ಟು ಸೇರುವಂತೆ ದೂಡಿದೆ ಎಂಬುದನ್ನು ವಿವರಿಸುತ್ತಾರೆ.
ತಮ್ಮ ವಾದಕ್ಕೆ ಪೂರಕವಾಗಿ ಅವರು ಭಾರತ ಪಾಕಿಸ್ತಾನ ಗಡಿಭಾಗದಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆಯ ಅಂಕಿಅಂಶಗಳನ್ನು ನೀಡುತ್ತಾರೆ. 2011ರಿಂದ 2019ರ ನವೆಂಬರ್ ವರೆಗೆ ಕಾಶ್ಮೀರ ಕಣಿವೆಯಲ್ಲಿ ನಡೆದಿರುವ ಭಯೋತ್ಪಾದನೆ ಮತ್ತು ಸೈನಿಕ ಸಂಘರ್ಷಗಳ ಅಂಕಿಅಂಶವು ಈ ಬರಹದ ಜೊತೆಗಿರುವ ಕೋಷ್ಟಕದಲ್ಲಿದೆ.
ಆ ಅಂಕಿಅಂಶಗಳು ಲೇಖನದಲ್ಲಿ ಇಲ್ಲದಿರುವ, ನೆನಪಿನಿಂದ ಮರೆಯಾಗಿರುವ ಇನ್ನೂ ಕೆಲವು ಕಟು ಸತ್ಯಗಳನ್ನು ಬಯಲುಮಾಡಿದೆ...!
ಸಾರ್ವಜನಿಕ ನೆನಪಿನ ಶಕ್ತಿ ಕಡಿಮೆ ಎಂಬುದು ನಿಜವಾದರೂ ಕೆಲವು ಜೀವನ ಪೂರ್ತಿ ನೆನೆಪಿಟ್ಟುಕೊಳ್ಳಬೇಕಾದ ಶಾಕ್ ಗಳನ್ನು ಮರೆಯಲು ಅಸಾಧ್ಯ. ಅಲ್ಲವೇ?
ಮೋದಿಯವರು ಈ ದೇಶಕ್ಕೆ ನೀಡಿರುವ ಹಲವಾರು ಆಘಾತಗಳಲ್ಲಿ ಡಿಮಾನಿಟೈಸೇಷನ್-ನೋಟು ನಿಷೇಧದ- ಶಾಕ್ ಕೂಡಾ ಒಂದು. ನೋಟು ನಿಷೇಧ ಮಾಡಲು ಮೋದಿ ಸರ್ಕಾರ ನೀಡಿದ ಮೂರು ಮುಖ್ಯ ಕಾರಣಗಳು:
ಕಪ್ಪು ಹಣ ಜಪ್ತಿ, ನಕಲಿ ನೋಟು ಚಲಾವಣೆ ತಡೆ ಮತ್ತು ಮುಖ್ಯವಾಗಿ ಕಾಶ್ಮೀರದಲ್ಲಿ ಭಯೋತ್ಪಾದನೆ ನಿಗ್ರಹ.
ನೋಟು ನಿಷೇಧದಿಂದ ಕಪ್ಪು ಹಣದ ಜಪ್ತಿಯೂ ಹೆಚ್ಚಾಗಲಿಲ್ಲ. ಬದಲಿಗೆ ಕಪ್ಪು ಹಣ ಬಿಳಿಯಾಯಿತು ಎಂಬುದನ್ನೂ ಹಾಗೂ ಹೊಸ ನೋಟುಗಳ ನಕಲೀಕರಣ ಮೊದಲಿಗಿಂತ ತುಂಬಾ ಸುಲಭ ಎಂಬುದನ್ನು ಈಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾನೇ ಒಪ್ಪಿಕೊಳ್ಳುವುದರಿಂದ ಅದರ ಬಗ್ಗೆ ಹೆಚ್ಚು ಮಾತು ಅನಗತ್ಯ.
ಇನ್ನು ಉಳಿದದ್ದು ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನೆಯ ನಿಗ್ರಹದ ವಿಷಯ. ನೋಟು ನಿಷೇಧದಿಂದ ಕಾಶ್ಮೀರದಲ್ಲಿ ಭಯೋತ್ಪಾದನೆಯು ನಿಗ್ರಹವಾಗಿದೆಯೇ ಇಲ್ಲವೇ ಎಂಬುದನ್ನು ಹೇಗೆ ಲೆಕ್ಕ ಹಾಕಬಹುದು?
2016ಕ್ಕೆ ಮುಂಚೆ ಕಾಶ್ಮೀರದಲ್ಲಿ ಭಯೋತ್ಪಾದಕರ ಒಳ ನುಸುಳುವಿಕೆ (Infiltration), ಭಯೋತ್ಪಾದಕರ ಚಲನವಲನ-ಹತ್ಯೆಗಳು, ಭದ್ರತಾ ಪಡೆಗಳ ಸೈನಿಕರ ಹಾಗೂ ನಿರಾಯುಧ ನಾಗರಿಕರ ಸಾವುಗಳು ಹಾಗೂ ಮಿಲಿಟೆಂಟ್ ಸಂಘಟನೆಗಳಿಗೆ ಸೇರುತ್ತಿರುವ ಕಾಶ್ಮೀರ ಯುವಕರ ಸಂಖ್ಯೆ- ಇವುಗಳ ಜಾಸ್ತಿ ಇದ್ದು, 2016ರ ನೋಟು ನಿಷೇಧದ ನಂತರ ಅವೆಲ್ಲವೂ ಕಡಿಮೆಯಾಗಿದ್ದಲ್ಲಿ ನೋಟು ನಿಷೇಧದಿಂದ ಭಯೋತ್ಪಾದನೆ ನಿಗ್ರಹವಾಗದೆ ಎಂಬ ತೀರ್ಮಾನಕ್ಕೆ ಬರಬಹುದು.
ಈಗ ಹ್ಯಾಪಿಮೋನ್ ಅವರು ತಮ್ಮ ಲೇಖನದಲ್ಲಿ ಒದಗಿಸಿರುವ, ಗೃಹ ಇಲಾಖೆಯಿಂದಲೇ ಪಡೆದುಕೊಂಡಿರುವ ಅಂಕಿಅಂಶಗಳನ್ನು ಗಮನಿಸಿ.
ನೋಟು ನಿಷೇಧವಾದ 2016ಕ್ಕೆ ಮುಂಚಿನ ವರ್ಷವಾದ 2015ರಲ್ಲಿ ಭಾರತದ ಗಡಿಯೊಳಗೆ ಒಳ ನುಸುಳಿದವರ ಸಂಖ್ಯೆ 405. ಆದರೆ ನೋಟು ನಿಷೇಧವಾದ ಮೂರು ವರ್ಷಗಳ ನಂತರ 2019ರಲ್ಲಿ ಒಳನುಸುಳುಳಿದವರ ಸಂಖ್ಯೆ 3,479!. ಅಂದರೆ ನೋಟು ನಿಷೇಧದ ನಂತರ ಒಳನುಸುಳುವಿಕೆ ಕಡಿಮೆಯಾಗುವುದಿರಲಿ ಒಂಭತ್ತು ಪಟ್ಟು ಹೆಚ್ಚಾಗಿದೆ.
2015ರಲ್ಲಿ ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕ ದಾಳಿಗೆ ಬಲಿಯಾದ ಭಾರತೀಯ ಯೋಧರ ಸಂಖ್ಯೆ 39. ಇದಕ್ಕೆ ಹೋಲಿಸಿದರೆ ನೋಟು ನಿಷೇಧದ ನಂತರದ ಪ್ರತಿವರ್ಷದಲ್ಲೂ ಬಲಿಯಾದ ಭಾರತೀಯ ಯೋಧರ ಸಂಖ್ಯೆ ಹೆಚ್ಚುತ್ತಲೇ ಹೋಗಿದ್ದು, 2018ರಲ್ಲಿ ಬಲಿಯಾದ ಯೋಧರ ಸಂಖ್ಯೆ 91ಕ್ಕೆ ಮುಟ್ಟಿತ್ತು. ಅಂದರೆ ನೋಟು ನಿಷೇಧವಾದ ನಂತರ ಯೋಧರ ಬಲಿ ಕಡಿಮೆಯಾಗುವುದಿರಲಿ ಮೂರು ಪಟ್ಟು ಹೆಚ್ಚಾಗಿದೆ.
ನೋಟು ನಿಷೇಧಕ್ಕೆ ಒಂದು ವರ್ಷ ಮುನ್ನ 2015ರಲ್ಲಿ 55 ಕಾಶ್ಮೀರಿ ಯುವಕರು ಭಯೋತ್ಪಾದಕರನ್ನು ಸೇರಿಕೊಂಡಿದ್ದರೆ ನೋಟು ನಿಷೇಧವಾದ ಎರಡು ವರ್ಷಗಳ ನಂತರ 2018ರಲ್ಲಿ ಭಯೋತ್ಪಾದಕ ಸಂಘಟನೆ ಸೇರಿಕೊಂಡ ಸ್ಥಳೀಯ ಕಾಶ್ಮೀರಿ ಯುವಕರ ಸಂಖ್ಯೆ 218 ಆಗಿತ್ತು. ನೋಟು ನಿಷೇಧ ಮಾಡಿದ ನಂತರ ಸ್ಥಳೀಯ ಕಾಶ್ಮೀರಿಗಳು ಭಯೋತ್ಪಾದಕರಾಗುವುದು ಕಡಿಮೆಯಾಗುವುದಿರಲಿ ನಾಲ್ಕು ಪಟ್ಟು ಹೆಚ್ಚಾಗಿದೆ.
ವಾಸ್ತವ ಹೀಗಿರುವಾಗ ಡಿಮಾನಿಟೈಸೇಷನ್ ಯಶಸ್ವಿಯಾಗಿದೆ ಎನ್ನುವವರು ದೇಶಭಕ್ತರೋ ಅಥವಾ ಭಯೋತ್ಪಾದಕರ ಮಿತ್ರರೋ?
ಜಸ್ಟ್ ಆಸ್ಕಿಂಗ್
- ಶಿವಸುಂದರ್