ಕೊರೋನ ಯುದ್ಧಕಾಲದ ಸಿದ್ಧತೆಗಳೂ ಹರಕೆಯ ಕುರಿಗಳೂ
ಸುದ್ದಿಮನೆಗಳು ಇಂದು ಸಾರ್ವಜನಿಕರ ಮುಂದಿಡುತ್ತಿರುವ ಸರಕಾರದ ಲೋಪಗಳನ್ನು ಮಾರ್ಚ್, ಎಪ್ರಿಲ್ ತಿಂಗಳಲ್ಲೇ ಇಟ್ಟಿದ್ದಲ್ಲಿ ಜನಪ್ರತಿನಿಧಿಗಳಲ್ಲಿ ಜವಾಬ್ದಾರಿ ಮೂಡಿಸಬಹುದಿತ್ತು.ತಬ್ಲೀಗಿ ಬಾಂಬುಗಳ ಬೆನ್ನತ್ತಿ ತಮ್ಮ ನೈತಿಕ ಹೊಣೆಯನ್ನೇ ಮರೆತು ಉನ್ಮಾದ ಸೃಷ್ಟಿಸುವ ಕಾರ್ಖಾನೆಗಳಂತೆ ಸದ್ದುಮಾಡಿದ ಸುದ್ದಿಮನೆಗಳು ಈಗ ಎಚ್ಚೆತ್ತುಕೊಂಡಿವೆ.ಆದರೆ ಮತ್ತೊಮ್ಮೆ ಲಾಕ್‌ಡೌನ್ ಸುತ್ತ ಗಿರಕಿ ಹೊಡೆಯುತ್ತಾ ಜನತೆಯ ದಿಕ್ಕು ತಪ್ಪಿಸುತ್ತಿವೆ. ಒಂದು ಆಡಳಿತ ವ್ಯವಸ್ಥೆಯ ಸಮರ್ಪಕ ನಿರ್ವಹಣೆಯಲ್ಲಿ ಸುದ್ದಿ ಮಾಧ್ಯಮಗಳ ಪಾತ್ರ ಎಷ್ಟು ಹಿರಿದು ಎನ್ನುವುದನ್ನು ಕನ್ನಡದ ಸುದ್ದಿಮನೆಗಳು ಇನ್ನೂ ಅರ್ಥಮಾಡಿಕೊಂಡಿಲ್ಲ ಎನ್ನುವುದು ದುರಂತ.
ಒ ಂದು ಆಡಳಿತ ವ್ಯವಸ್ಥೆಗೆ ಮುನ್ನೋಟ ಇಲ್ಲದಿದ್ದರೆ ಏನೆಲ್ಲಾ ಅವಾಂತರಗಳು ಸಂಭವಿಸಬಹುದು ? ಈ ಪ್ರಶ್ನೆಗೆ ಸ್ಪಷ್ಟ ಉತ್ತರವನ್ನು ಕೊರೋನ ಸಂದರ್ಭದ ಭಾರತದಲ್ಲಿ ಕಾಣಬಹುದು.ಕೊರೋನ ಇಡೀ ಜಗತ್ತಿನ ಜನತೆಗೆ ಒಂದು ಹೊಸ ವಿದ್ಯಮಾನ.ಈ ಪೀಳಿಗೆಯ ಜನರಿಗೆ ಇದು ಊಹಿಸಲೂ ಸಾಧ್ಯವಾಗದಂತಹ ಬಿಕ್ಕಟ್ಟನ್ನು ಸೃಷ್ಟಿಸಿದೆ. ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಅನಿಶ್ಚಿತತೆಯನ್ನು ಸೃಷ್ಟಿಸುವಂತಹ ಹಲವು ಪ್ರಾಕೃತಿಕ ವಿಕೋಪಗಳನ್ನು ಮನುಕುಲ ಯಶಸ್ವಿಯಾಗಿ ಎದುರಿಸಿದೆ.ಹಾಗೆಯೇ ಆಳುವ ವರ್ಗಗಳ, ಬಂಡವಾಳ ವ್ಯವಸ್ಥೆಯ ಸಾಮ್ರಾಜ್ಯ ವಿಸ್ತರಣೆಯ ಪರಿಣಾಮ ಮಾನವ ನಿರ್ಮಿತ ವಿಕೋಪಗಳನ್ನೂ ಎದುರಿಸಿದೆ. ನೂರಾರು ಯುದ್ಧಗಳಲ್ಲಿ ಲಕ್ಷಾಂತರ ಅಮಾಯಕರನ್ನು ಕಳೆದುಕೊಂಡಿರುವ ಭಾರತ ಈಗ ತನ್ನ ಗ್ರಹಿಕೆಗೇ ನಿಲುಕದ ಒಂದು ವೈರಾಣುವಿನ ದಾಳಿಗೆ ತತ್ತರಿಸಿದೆ.
ಈ ವೈರಾಣು ಸೃಷ್ಟಿಸಿರುವ ಆತಂಕಗಳನ್ನು ನಿವಾರಿಸಲು ಯಾವುದೇ ಪೂರ್ವ ನಿದರ್ಶನವಿಲ್ಲ ಅಥವಾ ನವ ಭಾರತದ ಹೊಸ ಆಡಳಿತ ಪರಂಪರೆಗೆ ಅನುಗುಣವಾಗಿ 70 ವರ್ಷಗಳ ಹಿಂದಿನ ಉದಾಹರಣೆಯನ್ನೂ ನೀಡಲು ಸಾಧ್ಯವಿಲ್ಲ.ಏಕೆಂದರೆ ಸ್ವತಂತ್ರ ಭಾರತ ಇಂತಹ ವಿನಾಶಕಾರಿ ಸಾಂಕ್ರಾಮಿಕ ಪಿಡುಗನ್ನು ಎದುರಿಸಿಯೇ ಇಲ್ಲ. ನೆಹರೂ ಈ ವಿಚಾರದಲ್ಲಿ ಕೊಂಚ ಅದೃಷ್ಟ ಮಾಡಿದ್ದಾರೆ ಎನ್ನೋಣ.ಕೊರೋನ ಭಾರತಕ್ಕೆ ಕಾಲಿಟ್ಟು ಐದು ತಿಂಗಳು ಕಳೆಯುತ್ತಿದೆ.ಭಾರತ ಈ ವೈರಾಣುವಿನ ವಿರುದ್ಧ ದೀಪ ಬೆಳಗಿ, ಚಪ್ಪಾಳೆ ಹೊಡೆದು, ಗಂಟೆ ಜಾಗಟೆ ಬಾರಿಸಿ ರಣಕಹಳೆ ಮೊಳಗಿಸುವ ವೇಳೆಗೆ ಕೋವಿಡ್-19 ಬಹುಶಃ ತನ್ನ ಸಾಮ್ರಾಜ್ಯ ವಿಸ್ತರಣೆಯಲ್ಲಿ ಸಾಕಷ್ಟು ಮುನ್ನಡೆ ಸಾಧಿಸಿತ್ತು ಎನ್ನುವುದು ವಾಸ್ತವ.
ಮಾರ್ಚ್ 25ರಿಂದ ಕೇಂದ್ರ ಸರಕಾರ ಘೋಷಿಸಿದ ದೇಶವ್ಯಾಪಿ ಲಾಕ್‌ಡೌನ್ ಕೊರೋನ ಹರಡುವಿಕೆಯನ್ನು ನಿಯಂತ್ರಿಸುವ ಒಂದು ಉಪಾಯವಾಗಿತ್ತು.ಇದು ಯಶಸ್ವಿಯಾಗಿದೆಯೋ ವಿಫಲವಾಗಿದೆಯೋ ಎನ್ನುವುದಕ್ಕಿಂತಲೂ ಲಾಕ್‌ಡೌನ್ ಘೋಷಿಸಿದ ನಂತರ ಉದ್ಭವಿಸಿದ ಸಮಸ್ಯೆಗಳು ಇಂದಿಗೂ ಅಡಳಿತ ವ್ಯವಸ್ಥೆಯನ್ನು ಕಾಡುತ್ತಲೇ ಇರುವುದು ಗಮನಿಸಬೇಕಾದ ಅಂಶ.ಲಾಕ್‌ಡೌನ್ ಮೂಲಕ ಕೊರೋನ ವೈರಾಣು ಹರಡುವಿಕೆಯನ್ನು ತಡೆಗಟ್ಟಲು ಸಾಧ್ಯವೇ ಹೊರತು ಕೋವಿಡ್- 19 ನಿವಾರಣೆಯಾಗುವುದಿಲ್ಲ ಎಂದು ಕೇಂದ್ರ ಸರಕಾರ ಪದೇ ಪದೇ ಹೇಳುತ್ತಲೇ ಇದೆ.ಒಂದು ವೇಳೆ ಮಾರ್ಚ್ 25ರಿಂದ ಲಾಕ್‌ಡೌನ್ ಘೋಷಿಸದೆ ಹೋಗಿದ್ದಲ್ಲಿ ಈ ವೇಳೆಗೆ ಭಾರತದಲ್ಲಿ ಲಕ್ಷಾಂತರ ಜನರು ಸೋಂಕಿಗೆ ಗುರಿಯಾಗುತ್ತಿದ್ದರು ಎನ್ನುವ ಗುರಾಣಿಯನ್ನು ಬಳಸಿ,ಅವಸರದ ಲಾಕ್‌ಡೌನ್ ಸಮರ್ಥಿಸಿಕೊಳ್ಳಲಾಗುತ್ತಿದೆ.ಒಂದು ನೆಲೆಯಲ್ಲಿ ಈ ಪ್ರತಿಪಾದನೆಯಲ್ಲಿ ಸತ್ಯಾಂಶವನ್ನು ಕಾಣಬಹುದು.
ಆದರೆ ಲಾಕ್‌ಡೌನ್ ಹೊರತಾಗಿಯೂ ಜೂನ್ ಅಂತ್ಯದ ವೇಳೆಗೆ ಭಾರತದಲ್ಲಿ ಕೊರೋನ ಹೆಚ್ಚು ವ್ಯಾಪಿಸುತ್ತದೆ ಎಂದು ವಿಜ್ಞಾನಿಗಳು,ವೈದ್ಯಕೀಯ ತಜ್ಞರು,ಸಾಂಕ್ರಾಮಿಕ ರೋಗ ಶಾಸ್ತ್ರಜ್ಞರು ಎಚ್ಚರಿಸುತ್ತಲೇ ಇದ್ದಾರೆ.ಭಾರತದಲ್ಲಿ ಯಾವ ರಾಜ್ಯದಲ್ಲೂ ಕೊರೋನ ಸಮುದಾಯ ಪ್ರಸರಣ ಕಂಡುಬಂದಿಲ್ಲ ಎಂದು ಇಂದಿಗೂ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹೇಳುತ್ತಿವೆ.ಆದರೆ ಅನೇಕ ವೈರಾಣು ತಜ್ಞರು ಸರಕಾರದ ಅಭಿಪ್ರಾಯವನ್ನು ಅಲ್ಲಗಳೆಯುತ್ತಿದ್ದು,ಮಾರ್ಚ್ ಎರಡನೆಯ ವಾರದಲ್ಲೇ ಸೂಕ್ಷ್ಮ ನೆಲೆಯಲ್ಲಿ ಕಂಡುಬಂದಿದ್ದ ಸಮುದಾಯ ಪ್ರಸರಣ, ಜೂನ್ 1ರ ನಂತರ ಇನ್ನೂ ತೀವ್ರವಾಗುತ್ತಿದೆ ಎಂದು ಎಚ್ಚರಿಸಿದ್ದಾರೆ.
ಇತರ ಸೋಂಕಿತರೊಡನೆ ಯಾವುದೇ ಸಂಪರ್ಕ ಇಲ್ಲದೆ,ಯಾವುದೇ ಪ್ರಯಾಣ ಕೈಗೊಳ್ಳದೆ ಕೊರೋನ ಸೋಂಕಿಗೆ ಒಳಗಾಗುವುದನ್ನು ಸಮುದಾಯ ಪ್ರಸರಣದ ಲಕ್ಷಣ ಎಂದು ಗುರುತಿಸಲಾಗುತ್ತದೆ.ಕೊರೋನ ವೈರಾಣು ಮುಕ್ತವಾಗಿ ಸಮುದಾಯದ ನಡುವೆ ಸಂಚರಿಸುತ್ತಿದೆ ಎಂಬುದರ ಸೂಚನೆ ಇದಾಗಿರುತ್ತದೆ.ಸಮುದಾಯ ಪ್ರಸರಣವನ್ನು ಹೇಗೆ ನಿರ್ವಹಿಸಬೇಕು ಎನ್ನುವುದನ್ನೂ ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟಪಡಿಸಿದ್ದು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದೆ.ಭಾರತದಲ್ಲಿ ಇಂದಿಗೆ ಕೊರೋನ ಸೋಂಕಿತರ ಸಂಖ್ಯೆ 5,0,8153. ಮೃತಪಟ್ಟವರ ಸಂಖ್ಯೆ 15,682. ಗುಣಮುಖರಾದವರು 2,95,823. ಜೂನ್ 1ರ ನಂತರ ದಿನಕ್ಕೆ ಕನಿಷ್ಠ 10 ಸಾವಿರ ಪ್ರಕರಣಗಳು ವರದಿಯಾಗುತ್ತಿದ್ದು,ದೇಶದ ಪ್ರಮುಖ ನಗರಗಳು ಸಾವಿನ ಕೇಂದ್ರಗಳಾಗಿವೆ.
ಕೇಂದ್ರ ಮತ್ತು ರಾಜ್ಯ ಸರಕಾರಗಳು ಲಾಕ್‌ಡೌನ್ ನಿಯಮಗಳನ್ನು ಸಡಿಲಗೊಳಿಸಿ,ಆತ್ಮನಿರ್ಭರತೆಯತ ಮುನ್ನಡೆಯಲು ನಿರ್ಧರಿಸಿದಾಗ,ಜೂನ್ 1ರಂದು ದೇಶದಲ್ಲಿ ಕೊರೋನ ಸೋಂಕಿತರ ಸಂಖ್ಯೆ 1,90,535ರಷ್ಟಿತ್ತು.ಮೃತಪಟ್ಟವರ ಸಂಖ್ಯೆ 5,394ರಷ್ಟಿತ್ತು.ಗುಣಮುಖರಾದವರ ಸಂಖ್ಯೆ 91,819ರಷ್ಟಿತ್ತು.ಅಂದರೆ ಶೇ. 48ರಷ್ಟು ಸೋಂಕಿತರು ಗುಣಮುಖರಾಗುತ್ತಿದ್ದರು.ಮೃತಪಟ್ಟವರ ಸಂಖ್ಯೆ ಶೇ. 2.8ರಷ್ಟಿತ್ತು.ಜೂನ್ 1 ರಿಂದ 24ರವರೆಗಿನ ಅವಧಿಯಲ್ಲಿ ಸೋಂಕಿತರ ಸಂಖ್ಯೆ 2,82,450 ರಷ್ಟು ಹೆಚ್ಚಾಗಿದ್ದು ಮೃತರ ಸಂಖ್ಯೆ 9,513ರಷ್ಟು ಹೆಚ್ಚಾಗಿದೆ.ಗುಣಮುಖರಾದವರ ಪ್ರಮಾಣ ಏರಿಕೆಯಾಗುತ್ತಿದ್ದು ಶೇ. 57ರಷ್ಟಾಗಿದೆ. ಮೃತರ ಪ್ರಮಾಣ ಶೇ. 3.15ಕ್ಕೆ ಏರಿಕೆಯಾಗಿದೆ.ಜೂನ್ ತಿಂಗಳಲ್ಲೇ ಸೋಂಕಿತರ ಪ್ರಮಾಣ ಶೇ. 59ರಷ್ಟು ಹೆಚ್ಚಾಗಿರುವುದನ್ನು ಗಮನಿಸಬಹುದು.
ಈ ಸಂದರ್ಭದಲ್ಲಿ ಸುದ್ದಿಮನೆಗಳ ಉನ್ಮಾದ ಮತ್ತೊಮ್ಮೆ ಉಲ್ಬಣಿಸಿದೆ.ಈಗ ಯಾವುದೇ ಬಾಂಬುಗಳನ್ನು ಶೋಧಿಸಲಾಗುತ್ತಿಲ್ಲ.ತಬ್ಲೀಗಿಬಿಹಾರಿ ಮುಂತಾದ ಬಾಂಬುಗಳು ಈಗ ನಿಷ್ಕ್ರಿಯವಾಗಿವೆ.ಕೊರೋನ ಯಾರಿಂದ ಹರಡುತ್ತಿದೆ ಎಂದು ಅಸ್ಮಿತೆಗಳನ್ನು ಹುಡುಕುವ ಕಾಲಘಟ್ಟ ಮುಗಿದುಹೋಗಿದೆ.ನಾಲ್ಕು ತಿಂಗಳ ನಂತರ ಸುದ್ದಿಮನೆಗಳಿಗೆ ಮತ್ತು ಆಡಳಿತ ವ್ಯವಸ್ಥೆಯ ಉನ್ಮತ್ತ ಶೋಧಕರಿಗೆ ಕೊರೋನ ಸೆಕ್ಯುಲರ್ ಎಂದು ಅರಿವಾಗಿದೆ.ಅದರ ಮೂಲ ಮತ್ತು ಗುರಿ ಎರಡೂ ಮತಧರ್ಮ ಮುಕ್ತವಾಗಿರುತ್ತದೆ ಎಂದು ಅರಿವಾಗಿದೆ.ಈಗ ಕರ್ನಾಟಕದಲ್ಲೂ ಕೊರೋನ ಶೀಘ್ರವಾಗಿ ವ್ಯಾಪಿಸುತ್ತಿದೆ.ಬೆಂಗಳೂರು ಮತ್ತೊಂದು ಮುಂಬೈ ಆಗುವತ್ತ ನಡೆಯುತ್ತಿದೆ.ಈ ವಿಷಮ ಸನ್ನಿವೇಶದಲ್ಲಿ ಕೊರೋನ ವ್ಯಾಪಿಸುವುದನ್ನು ತಡೆಗಟ್ಟುವುದು ಹೇಗೆ ?
ನಿಜ, ಕೊರೋನದೊಂದಿಗೆ ಬದುಕಲು ನಾವು ಕಲಿಯಬೇಕು.ಲಾಕ್‌ಡೌನ್ ಕೋವಿಡ್ ನಿಯಂತ್ರಣಕ್ಕೆ ಪೂರಕವಾದ ಮಾರ್ಗವಲ್ಲ ಎನ್ನುವುದನ್ನು ವಿಜ್ಞಾನಿಗಳು ಹೇಳುತ್ತಲೇ ಇದ್ದಾರೆ.ಸರಕಾರಕ್ಕೂ ಈ ಪರಿಜ್ಞಾನ ಇದೆ.ಆದರೆ ಮಾರ್ಚ್ 25ರಂದು ಘೋಷಿಸಿದ ಲಾಕ್‌ಡೌನ್ ಪರಿಣಾಮದಿಂದಲೇ ಭಾರತದಲ್ಲಿ ಕೊರೋನ ಹರಡುವಿಕೆ ಕಡಿಮೆಯಾಗಿತ್ತು ಎಂದು ಎರಡು ತಿಂಗಳ ಕಾಲ ಹೇಳುವ ಮೂಲಕ ಜನರಲ್ಲಿ ಲಾಕ್‌ಡೌನ್ ಕುರಿತು ಮೌಢ್ಯ ಸೃಷ್ಟಿಸುವಲ್ಲಿ ಸರಕಾರದಷ್ಟೇ ಸುದ್ದಿಮನೆಗಳೂ ಯಶಸ್ವಿಯಾಗಿವೆ.ಹಾಗಾಗಿಯೇ ಕನ್ನಡ ಸುದ್ದಿಮನೆಗಳು ನಡೆಸುತ್ತಿರುವ ಜನಾಭಿಪ್ರಾಯ ಪ್ರಹಸನದಲ್ಲಿ ಹೆಚ್ಚಿನ ಜನರು ಲಾಕ್‌ಡೌನ್ ಬಯಸುತ್ತಿದ್ದಾರೆ.ಆದರೆ ಭಾರತದಲ್ಲಿ ಮೊದಲ ಮೂರು ತಿಂಗಳ ಅವಧಿಯಲ್ಲಿ ಕೋವಿಡ್ ಪರೀಕ್ಷೆಯ ಪ್ರಮಾಣ ಕಡಿಮೆಯಾಗಿತ್ತು ಎನ್ನುವುದು ಈಗ ಅರಿವಾಗುತ್ತಿದೆ.
ಒಂದೆಡೆ ಪ್ರಾಥಮಿಕ ಪರೀಕ್ಷೆಯ ಪ್ರಮಾಣ ಹೆಚ್ಚಾ ಗುತ್ತಿರುವಂತೆಯೇ ಮತ್ತೊಂದೆಡೆ ಲಾಕ್‌ಡೌನ್ ಸಡಿಲಿಕೆಯ ಪ್ರಕ್ರಿಯೆಯೂ ಹೆಚ್ಚಾಗತೊಡಗಿದ್ದನ್ನು ಮೇ17ರ ನಂತರದ ಅವಧಿಯಲ್ಲಿ ಗಮನಿಸಬಹುದು.ಈ ಅವಧಿಯಲ್ಲೇ ಕೊರೋನ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿರುವುದನ್ನೂ ಗಮನಿಸಬಹುದು.ಈಗಲೂ ಭಾರತದಲ್ಲಿ ಪರೀಕ್ಷೆಯ ಪ್ರಮಾಣ ಮತ್ತು ಮಾನದಂಡ ಸ್ಪಷ್ಟವಾಗಿಲ್ಲ.ಪರೀಕ್ಷೆಗಳ ಸಂಖ್ಯೆ ಜಾಗತಿಕ ಮಟ್ಟಕ್ಕೆ ಹೋಲಿಸಿದರೆ ಉತ್ತಮ ಎಂದು ಹೇಳಲಾಗುವುದಿಲ್ಲ.ಮೇಲಾಗಿ ದೇಶದ ಗ್ರಾಮೀಣ ಪ್ರದೇಶಗಳ ಪರಿಸ್ಥಿತಿ ಎಲ್ಲಿಯೂ ಸಹ ಸಮೀಕ್ಷೆಗೊಳಗಾಗುತ್ತಿಲ್ಲ.ಸುದ್ದಿಮನೆಗಳ ನಗರ ಕೇಂದ್ರಿತ ಸುದ್ದಿವಾಹಕರಿಗೆ ಭಾರತದ ಗ್ರಾಮೀಣ ಪ್ರದೇಶದ ಪರಿವೆಯೂ ಇಲ್ಲ ಪರಿಜ್ಞಾನವೂ ಇಲ್ಲ ಎನ್ನುವುದು ಕೊರೋನ ಸಂದರ್ಭದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.
ಏಕೆಂದರೆ ಈಗ ನಾವು ಎದುರಿಸುತ್ತಿರುವುದು ಕೊರೋನ ಪರ್ವಕಾಲ.ಎಲ್ಲ ಮಹಾನಗರಗಳಲ್ಲಿ,ಪಟ್ಟಣಗಳಲ್ಲಿ,ಉಪನಗರಗ ಳಲ್ಲಿ,ಗ್ರಾಮಗಳಲ್ಲಿ ಕೊರೋನ ವ್ಯಾಪಿಸುತ್ತಿದೆ.ಇತ್ತೀಚಿನ ದಿನಗಳಲ್ಲಿ ಕೊರೋನ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಸೇವೆ,ಪೊಲೀಸ್ ಮತ್ತು ಇತರ ಸಿಬ್ಬಂದಿಯೂ ಸೋಂಕಿಗೆ ಒಳಗಾಗುತ್ತಿದ್ದಾರೆ.ಎರಡು ತಿಂಗಳ ಕಾಲ ಲಾಕ್‌ಡೌನ್ ಅವಧಿಯಲ್ಲಿ ಹೊಸ ಬದುಕನ್ನು ಕಂಡು ಹೊರಬಂದಿರುವ ಹಿತವಲಯವೂ ಕೋವಿಡ್ 19 ಭೀತಿಗೊಳಗಾಗುವಂತಾಗಿದೆ.ಕೊರೋನದೊಂದಿಗೆ ಬದುಕುವುದನ್ನು ಕಲಿಯಿರಿ ಎಂದು ಉಪನ್ಯಾಸ ನೀಡುತ್ತಲೇ, ಪ್ರಾಥಮಿಕ ಆರೋಗ್ಯ ವ್ಯವಸ್ಥೆಯ ಬಗ್ಗೆ ಗಮನವನ್ನೇ ಹರಿಸದೆ,ತಮ್ಮ ರಾಜಕೀಯ ಲಾಭನಷ್ಟಗಳ ಲೆಕ್ಕಾಚಾರದಲ್ಲಿದ್ದ ಆಡಳಿತ ವ್ಯವಸ್ಥೆಯ ಪ್ರತಿನಿಧಿಗಳನ್ನೂ ಕೊರೋನ ಕಾಡುತ್ತಿದೆ.
ಈ ಸಂದರ್ಭದಲ್ಲಿ ನಮಗೆ ಹೆಚ್ಚಿನ ಆರೋಗ್ಯ ಸೌಲಭ್ಯಗಳ ಅವಶ್ಯಕತೆ ಇದೆ.ಆಸ್ಪತ್ರೆಗಳು,ಹಾಸಿಗೆಗಳು,ತುರ್ತು ನಿಗಾ ಘಟಕಗಳು, ವೆಂಟಿಲೇಟರುಗಳು,ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು,ಶುಶ್ರೂಷಕಿಯರು ಬೇಕಾಗಿದ್ದಾರೆ.ದುರಂತ ಎಂದರೆ ಭಾರತದ ಯಾವುದೇ ರಾಜ್ಯದಲ್ಲೂ ಈ ಸೌಕರ್ಯಗಳು ಸಮರ್ಪಕವಾಗಿಲ್ಲ.ಕೊರೋನ ಕಾಲಿಟ್ಟ ಸಂದರ್ಭದಲ್ಲೇ ಖಾಸಗಿ ಆಸ್ಪತ್ರೆಗಳ ಮೇಲೆ ನಿಯಂತ್ರಣ ಸಾಧಿಸಿ,ಪರೀಕ್ಷೆಯ ಪ್ರಮಾಣ ಹೆಚ್ಚಿಸಿ,ಉತ್ತಮ ಸೌಲಭ್ಯಗಳನ್ನು ಒದಗಿಸಿದ್ದರೆ ಬಹುಶಃ ಸಾವಿನ ಪ್ರಮಾಣವಾದರೂ ಕಡಿಮೆಯಾಗುತ್ತಿತ್ತು. ಸುದ್ದಿಮನೆಗಳೂ ಈ ವಿಚಾರದಲ್ಲಿ ಈಗ ಜಾಗೃತವಾಗಿವೆ.ಏಕೆಂದರೆ ಉನ್ಮಾದದ ಪರ್ವ ಅಂತ್ಯವಾಗಿದೆ.ಆದರೆ ನಾವು ಸಾವುಗಳನ್ನು ಮತ್ತೊಂದು ದೇಶದೊಡನೆ ಹೋಲಿಸಿ ನೋಡಿ ಬೆನ್ನುತಟ್ಟಿಕೊಳ್ಳುತ್ತಿದ್ದೇವೆ.ಆಂತರಿಕವಾಗಿ ರಾಜ್ಯಗಳು ಮತ್ತೊಂದು ರಾಜ್ಯದ ಸಾವಿನ ಸಂಖ್ಯೆಗೆ ಹೋಲಿಸಿಕೊಂಡು ಆತ್ಮರತಿಯಲ್ಲಿ ಬೀಗುತ್ತಿವೆ.
ಏಕೆಂದರೆ ಇಲ್ಲಿ ಜೀವಕ್ಕೆ ಬೆಲೆಯಿಲ್ಲ,ಸಾವಿಗೆ ಮರುಗುವವರಿಲ್ಲ,ಅಂಕಿಅಂಶಗಳು ಎಲ್ಲವನ್ನೂ ನುಂಗಿಹಾಕಿಬಿಡುತ್ತವೆ.ಆತ್ಮನಿರ್ಭರತೆ ಇಲ್ಲದಿದ್ದ ಭಾರತದಲ್ಲಿ,ನಿಮ್ಮ ರಕ್ಷಣೆಗೆ ನಾವಿದ್ದೇವೆ ಎಂದು ಶಂಖ ಊದಿ,ಗಂಟೆ ಜಾಗಟೆ ಬಾರಿಸಿ,ಚಪ್ಪಾಳೆ ಹೊಡೆದು ಕೊರೋನ ನಿವಾರಣೆಗೆ ಪರಿಹಾರ ಅಲ್ಲದಿದ್ದರೂ 60 ದಿನಗಳ ಕಾಲದ ಮಾರುಕಟ್ಟೆಯನ್ನು ಸ್ತಬ್ಧಗೊಳಿಸಿ ಆತ್ಮರತಿಯಲ್ಲಿ ಮುಳುಗಿದ್ದ ಆಡಳಿತ ವ್ಯವಸ್ಥೆ,ಈಗ ಲಾಕ್‌ಡೌನ್‌ನಿಂದ ಕೊರೋನ ಹೋಗುವುದಿಲ್ಲ ಎಂದು ಉಪನ್ಯಾಸ ನೀಡುತ್ತಿದೆ.ಈ ಮಾತನ್ನು ಅನೇಕ ವೈದ್ಯರು,ಸಾಂಕ್ರಾಮಿಕ ರೋಗತಜ್ಞರು,ವಿಜ್ಞಾನಿಗಳು ಮಾರ್ಚ್ ಎಪ್ರಿಲ್ ತಿಂಗಳಲ್ಲೇ ಹೇಳಿದ್ದರಲ್ಲವೇ ?ಆಗ ಅವರೆಲ್ಲರೂ ದೇಶದ್ರೋಹಿಗಳಂತೆ ಕಂಡುಬಿಟ್ಟರೇಕೆ ?ಕೊರೋನ ಸಮುದಾಯ ಪ್ರಸರಣ ಆರಂಭವಾಗಿದೆ ಒಪ್ಪಿಕೊಳ್ಳಿ ಎಂದು ಹೇಳಿದ ವೈದ್ಯರ ಮಾತಿಗೆ ಕಿವಿಗೊಡದ ಸರಕಾರ ವೈರಾಣುವಿನ ಮೂಲ ಶೋಧಿಸುವುದರಲ್ಲಿ ತೊಡಗಿತ್ತು.
ಈಗ ಸಮುದಾಯ ಪ್ರಸರಣ ಇರುವುದನ್ನು ಅನಧಿಕೃತವಾಗಿಯಾದರೂ ಒಪ್ಪಿಕೊಳ್ಳಲೇಬೇಕಿದೆ.ಆದರೆ ಇದನ್ನು ಸಮರ್ಪಕವಾಗಿ ನಿಭಾಯಿಸುವ ಪೂರ್ವಸಿದ್ಧತೆಗಳನ್ನು ಸರಕಾರಗಳು ಮಾಡಿಕೊಂಡಿಲ್ಲ.ಕೊರೋನ ಪ್ರವೇಶಿಸಿದ ಐದು ತಿಂಗಳ ನಂತರವೂ ಪಿಪಿಇ ಕೊರತೆ ಇದೆ,ವೆಂಟಿಲೇಟರ್ ಕೊರತೆ ಇದೆ,ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆ ಇದೆ.ಸೂಕ್ತ ರಕ್ಷಣೆ ಇಲ್ಲದೆ ಕೊರೋನ ಸೋಂಕಿತರ ಜೀವ ರಕ್ಷಣೆಗಾಗಿ ಹಗಲಿರುಳೂ ದುಡಿದ ವಾರಿಯರ್ಸ್ ಇಂದು ಸೋಂಕಿತರೊಡನೆಯೇ ನಿಲ್ಲುವಂತಾಗಿದೆ.ಖಾಸಗಿ ಆಸ್ಪತ್ರೆಗಳನ್ನು ಬಳಸಿಕೊಳ್ಳಲು ಸರಕಾರ ಮುಂದಾಗಿದ್ದರೂ ಅದು ಲಾಭನಷ್ಟಗಳ ಲೆಕ್ಕಾಚಾರದ ಚೌಕಟ್ಟಿನಲ್ಲಿ ನಿರ್ಧಾರವಾಗಿದೆಯೇ ಹೊರತು ಸೇವಾ ಮನೋಭಾವದ ನೆಲೆ ಕಂಡುಬರುತ್ತಿಲ್ಲ.
ಮೊದಲನೇ ಲಾಕ್‌ಡೌನ್ ಘೋಷಿಸಿದ ಸಂದರ್ಭದಲ್ಲೇ ಸರಕಾರ ಮತ್ತು ಆಡಳಿತ ವ್ಯವಸ್ಥೆ ಈ ಮೂಲ ಸೌಕರ್ಯಗಳ ಬಗ್ಗೆ ಗಮನಹರಿಸಿದ್ದಲ್ಲಿ ಇಂದು ಈ ರೀತಿಯ ಅಸಹಾಯಕತೆ ಕಾಣುತ್ತಿರಲಿಲ್ಲ. ಸರಕಾರ ಏನು ಮಾಡೋಕಾಗುತ್ತೆ? ನಿಮ್ಮ ಆರೋಗ್ಯ ನೀವು ಕಾಪಾಡಿಕೊಳ್ಳಿ ಎನ್ನುವ ಬೇಜವಾಬ್ದಾರಿಯ ಮಾತುಗಳು ನಿರಂಕುಶಪ್ರಭುತ್ವದ ಸಂಕೇತ.ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆಡಳಿತ ನಿರ್ವಹಣೆಗೂ ಸಾರ್ವಜನಿಕ ಚಟುವಟಿಕೆಗೂ ನಡುವೆ ಸೂಕ್ಷ್ಮ ಸಂಬಂಧ ಇರುತ್ತದೆ ಎನ್ನುವ ಕನಿಷ್ಠ ಪ್ರಜ್ಞೆ ಆಳುವವರಲ್ಲಿ ಇರಬೇಕಲ್ಲವೇ ಮನುಷ್ಯ ಸಹಜ ಬದುಕಿಗೆ ಒಗ್ಗಿಹೋಗಿರುತ್ತಾನೆ.ಯಾವುದೇ ಅಸಹಜ ಜೀವನ ಮಾರ್ಗಗಳು ಅಪ್ಯಾಯಮಾನವಾಗುವುದಿಲ್ಲ.ಕೊರೋನ ಇಂತಹ ಅಸಹಜ ಬದುಕಿಗೆ ತೆರೆದುಕೊಳ್ಳುವಂತೆ ಮಾಡುತ್ತಿದೆ.ಈ ವ್ಯತ್ಯಯವನ್ನು ಸಮರ್ಪಕವಾಗಿ ಜನಸಾಮಾನ್ಯರಿಗೆ ಮನದಟ್ಟು ಮಾಡುವ ಯಾವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ? ಸರಕಾರಗಳು ಈ ಪ್ರಶ್ನೆಗೆ ಉತ್ತರಿಸಲೇಬೇಕಿದೆ.
ಸಾರ್ವಜನಿಕರು ನಿಯಮ ಪಾಲಿಸುತ್ತಿಲ್ಲ ಹಾಗಾಗಿ ಕೊರೋನ ವ್ಯಾಪಿಸುತ್ತಿದೆ ಎಂದು ಆರೋಪಿಸುವ ಮುನ್ನ ಅಧಿಕಾರ ಪೀಠದಲ್ಲಿರುವವರು ಪಾಲಿಸುತ್ತಿದ್ದಾರೆಯೇ ಎಂದೂ ಗಮನಿಸಬೇಕಲ್ಲವೇ ?ಕೊರೋನ ಕಿಟ್ ವಿತರಣೆಯಿಂದ ಹಿಡಿದು ರಾಜಕೀಯ ಮೆವಣಿಗೆಗಳವರೆಗೆ ತಮ್ಮ ಅಸ್ತಿತ್ವವನ್ನು ಸಾರ್ವಜನಿಕ ನೆಲೆಯಲ್ಲಿ ಕಾಪಾಡಿಕೊಳ್ಳುವುದನ್ನೇ ಪರಮ ಧ್ಯೇಯ ಎಂದುಕೊಂಡಿರುವ ಜನಪ್ರತಿನಿಧಿಗಳು ಯಾವ ರೀತಿ ಜನಸಾಮಾನ್ಯರಿಗೆ ಮಾದರಿಯಾಗಿದ್ದಾರೆ ಎಂದೂ ಈ ಸಂದರ್ಭದಲ್ಲಿ ಪ್ರಶ್ನಿಸಬೇಕಾಗುತ್ತದೆ.ಲಾಕ್‌ಡೌನ್ ಸಡಿಲಿಕೆಯ ನಂತರವೂ ವಿಧಿಸಲಾಗಿರುವ ನಿಯಮಗಳನ್ನು ಪಾಲಿಸುವಲ್ಲಿ ಲೋಪಗಳಾಗುತ್ತಿದ್ದರೂ ಕಾನೂನು ವ್ಯವಸ್ಥೆ ಏಕೆ ಕಣ್ಣು ಮುಚ್ಚಿ ಕುಳಿತಿದೆ ? ಎಷ್ಟು ಸಾರ್ವಜನಿಕ ಸಭೆಗಳಲ್ಲಿ,ವಿವಾಹ ಮತ್ತಿತರ ಸಮಾರಂಭಗಳಲ್ಲಿ ನಿಯಮ ಪಾಲಿಸಲಾಗಿದೆ ?ಈ ಲೋಪಗಳಿಗೆ ಜನರು ಹೊಣೆ ನಿಜ ಆದರೆ ಕಾನೂನು ಪಾಲಕರ ಜವಾಬ್ದಾರಿಯೂ ಇದೆ ಅಲ್ಲವೇ ?
ಸುದ್ದಿಮನೆಗಳು ಇಂದು ಸಾರ್ವಜನಿಕರ ಮುಂದಿಡುತ್ತಿರುವ ಸರಕಾರದ ಲೋಪಗಳನ್ನು ಮಾರ್ಚ್, ಎಪ್ರಿಲ್ ತಿಂಗಳಲ್ಲೇ ಇಟ್ಟಿದ್ದಲ್ಲಿ ಜನಪ್ರತಿನಿಧಿಗಳಲ್ಲಿ ಜವಾಬ್ದಾರಿ ಮೂಡಿಸಬಹುದಿತ್ತು.ತಬ್ಲೀಗಿ ಬಾಂಬುಗಳ ಬೆನ್ನತ್ತಿ ತಮ್ಮ ನೈತಿಕ ಹೊಣೆಯನ್ನೇ ಮರೆತು ಉನ್ಮಾದ ಸೃಷ್ಟಿಸುವ ಕಾರ್ಖಾನೆಗಳಂತೆ ಸದ್ದುಮಾಡಿದ ಸುದ್ದಿಮನೆಗಳು ಈಗ ಎಚ್ಚೆತ್ತುಕೊಂಡಿವೆ.ಆದರೆ ಮತ್ತೊಮ್ಮೆ ಲಾಕ್‌ಡೌನ್ ಸುತ್ತ ಗಿರಕಿ ಹೊಡೆಯುತ್ತಾ ಜನತೆಯ ದಿಕ್ಕು ತಪ್ಪಿಸುತ್ತಿವೆ. ಒಂದು ಆಡಳಿತ ವ್ಯವಸ್ಥೆಯ ಸಮರ್ಪಕ ನಿರ್ವಹಣೆಯಲ್ಲಿ ಸುದ್ದಿ ಮಾಧ್ಯಮಗಳ ಪಾತ್ರ ಎಷ್ಟು ಹಿರಿದು ಎನ್ನುವುದನ್ನು ಕನ್ನಡದ ಸುದ್ದಿಮನೆಗಳು ಇನ್ನೂ ಅರ್ಥಮಾಡಿಕೊಂಡಿಲ್ಲ ಎನ್ನುವುದು ದುರಂತ.ಅರ್ಥಮಾಡಿಕೊಂಡಿದ್ದಲ್ಲಿ ಈ ವೇಳೆಗೆ ಕರ್ನಾಟಕದ ಗ್ರಾಮಗಳತ್ತ ಒಮ್ಮೆಯಾದರೂ ಗಮನ ಹರಿಸಿ ಕೊರೋನ ಸಮಸ್ಯೆಯನ್ನು ಗಮನಿಸುತ್ತಿದ್ದವು.
ಈಗ ಸುದ್ದಿಮನೆಗಳ ರಣಕೇಕೆಗಳು ವಿಚಿತ್ರವಾಗಿ ‘ಮ’ರಣ ಕೇಕೆಗಳಾಗಿವೆ.ಮುಂದಿನ ದಿನಗಳಲ್ಲಿ ‘ವೀರ’ ರಣಕೇಕೆಗಳಾಗುತ್ತವೆ.ಅವಸರದ ಲಾಕ್‌ಡೌನ್ ಘೋಷಣೆ,ವಲಸೆ ಕಾರ್ಮಿಕರನ್ನು ನಿರ್ವಹಿಸಿದ ರೀತಿ,ಮುನ್ಸೂಚನೆ ಇಲ್ಲದೆ ವಿಧಿಸಿದ ಲಾಕ್‌ಡೌನ್ ಪರಿಣಾಮ ದೇಶದ ಆರ್ಥಿಕತೆ ಎದುರಿಸಿದ ಬಿಕ್ಕಟ್ಟು,ಈ ಬಿಕ್ಕಟ್ಟು ಪರಿಹರಿಸಲು ಜಾರಿಗೊಳಿಸಿರುವ ಅವೈಜ್ಞಾನಿಕ ನಿಯಮಗಳು,ಕೊರೋನ ನಡುವೆಯೂ ತಮ್ಮ ಬದುಕು ಸವೆಸಲು ಹೆಣಗಾಡಬೇಕಾದ ಶ್ರಮಜೀವಿಗಳ ಪಾಡು,ಈ ವಿಷಮ ಸಂದರ್ಭದಲ್ಲೂ ತಮ್ಮ ರಾಜಕೀಯ ಅಸ್ತಿತ್ವ ಮತ್ತು ಅಧಿಕಾರಕ್ಕಾಗಿ ಜನಪ್ರತಿನಿಧಿಗಳ ಹಪಹಪಿ ಮತ್ತು ಇಷ್ಟರ ನಡುವೆ ಇಂದಿಗೂ ನಿರ್ಲಕ್ಷ್ಯಕ್ಕೊಳಗಾಗಿರುವ ಪ್ರಾಥಮಿಕ ಆರೋಗ್ಯ ವ್ಯವಸ್ಥೆ ಈ ಅಂಶಗಳು ನಮ್ಮನ್ನು ಕಾಡದೆ ಹೋದರೆ ಬಹುಶಃ ನಾವು,ಕೊರೋನದೊಂದಿಗೆ ಬದುಕುವ ಬದಲು ಸಾಯುವುದನ್ನು ಕಲಿಯಬೇಕಾಗುತ್ತದೆ.
ವೈದ್ಯಕೀಯ ಲೋಕ ಜನಸಾಮಾನ್ಯರಿಗೆ ಮಾಸ್ಕ್ ಧರಿಸಲು ಹೇಳಿರುವುದು ಕೊರೋನ ತಡೆಗಟ್ಟುವ ಉದ್ದೇಶದಿಂದಷ್ಟೇ.ಇದು ಬಾಯಿ ಮುಚ್ಚಿಸುವ ಪ್ರಯತ್ನವಲ್ಲ.ಪ್ರಭುತ್ವದ ವಿರುದ್ಧ,ಆಡಳಿತ ವ್ಯವಸ್ಥೆಯ ವಿರುದ್ಧ ಮಾಸ್ಕ್ ಇದ್ದರೂ ಮಾತನಾಡಬಹುದು ಎಂಬ ನಾಗರಿಕ ಪ್ರಜ್ಞೆ ನಮ್ಮ್‌ಳಗೆ ಜಾಗೃತವಾಗಬೇಕಿದೆ.ಆಡಳಿತ ವ್ಯವಸ್ಥೆಯ ವೈಫಲ್ಯ, ಅಧಿಕಾರಸ್ಥರ ಬೇಜವಾಬ್ದಾರಿತನ,ಆರೋಗ್ಯ ಸೇವೆಯ ಕೊರತೆ,ಆರೋಗ್ಯ ಕ್ಷೇತ್ರದ ಅವ್ಯವಸ್ಥೆ,ಜನಪ್ರತಿನಿಧಿಗಳ ಅಧಿಕಾರದಾಹ ಇವೆಲ್ಲದರ ನಡುವೆ ಜನತೆ ಕೊರೋನ ವಿರುದ್ಧ ಹೋರಾಡಬೇಕಿದೆ.ಹಾಗೆಯೇ ನಮ್ಮೆಳಗಿನ ನಾಗರಿಕ ಪ್ರಜ್ಞೆಯನ್ನೂ ಜಾಗೃತವಾಗಿರಿಸಿಕೊಂಡು ವೈದ್ಯಕೀಯ ತಜ್ಞರು ಸೂಚಿಸುವ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ.
ಬೆಂಗಳೂರಿನಲ್ಲಿ ಪರಿಸ್ಥಿತಿ ಕೈ ಮೀರಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.ಅಂದರೆ ಕೈಮೀರುವ ಪರಿಸ್ಥಿತಿಗೆ ಒಂದು ನಿರ್ದಿಷ್ಟ ಅಂಕಿಅಂಶವನ್ನು ನಿಗದಿಪಡಿಸಲಾಗಿದೆ ಎಂದರ್ಥ.ಆ ಗುರಿಯನ್ನು ತಲುಪಿದ ನಂತರ ಆಡಳಿತ ವ್ಯವಸ್ಥೆ ಚುರುಕಾಗಬಹುದು.ಅಲ್ಲಿಯವರೆಗೆ ನಾವು ಸಾವಿನೊಡನೆ ಬದುಕಲು ಕಲಿಯಬೇಕಾಗುತ್ತದೆ.ಆಡಳಿತ ವ್ಯವಸ್ಥೆ ಈಗ ಯುದ್ಧಕಾಲದ ಶಸ್ತ್ರಾಭ್ಯಾಸ ಆರಂಭಿಸಿದೆ.ಅಲ್ಲಿಯವರೆಗೆ ಸುದ್ದಿಮನೆಗಳ ರಣಕೇಕೆ ಮುಂದುವರಿಯುತ್ತದೆ.ಆದರೆ ಕೊರೋನ ಇದಾವುದನ್ನೂ ಗಮನಿಸುವುದಿಲ್ಲ.ಬಲಿಪೀಠದ ಮೇಲಿನ ಹರಕೆಯ ಕುರಿಗಳು ಬಲಿಯಾಗುತ್ತಲೇ ಹೋಗುತ್ತವೆ.ಏಕೆಂದರೆ ನಮ್ಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಶಿಥಿಲವಾಗಿಯೇ ಉಳಿದಿದೆ.