ಪ್ರಧಾನಿ ಮೋದಿ ನಾಯಕತ್ವದಲ್ಲಿ ಭಾರತವು ಕೊರೋನ, ಚೀನಾ ವಿರುದ್ಧ ಜಯ ಸಾಧಿಸಲಿದೆ: ಅಮಿತ್ ಶಾ
ಹೊಸದಿಲ್ಲಿ, ಜೂ.28: ಕೊರೋನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಹಾಗೂ ಚೀನಾದೊಂದಿಗಿನ ಗಡಿ ವಿವಾದವೂ ಬಿಗಡಾಯಿಸುತ್ತಿರುವಾಗಲೇ ರವಿವಾರ ಪ್ರತಿಕ್ರಿಯಿಸಿರುವ ಗೃಹ ಸಚಿವ ಅಮಿತ್ ಶಾ, ಪ್ರಧಾನಮಂತ್ರಿ ನರೇಂದ್ರ ಮೋದಿ ನಾಯಕತ್ವದಲ್ಲಿ ದೇಶವು ಎರಡು ಯುದ್ಧಗಳಲ್ಲಿ ಜಯಶಾಲಿಯಾಗಲಿದೆ ಎಂದು ಸ್ಪಷ್ಟಪಡಿಸುತ್ತೇನೆ ಎಂದರು.
ಸುದ್ದಿಸಂಸ್ಥೆಯೊಂದಿಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಶಾ ಅವರ ಬಳಿ ಭಾರತೀಯ ಭೂ ಪ್ರದೇಶದಲ್ಲಿ ಚೀನಾ ಸೈನಿಕರು ಜಮಾವಣೆಯಾಗುತ್ತಿರುವ ಕುರಿತು ಕೇಳಿದಾಗ, "ಈ ಕುರಿತು ಪ್ರತಿಕ್ರಿಯಿಸಲು ಇದು ಸರಿಯಾದ ಸಮಯವಲ್ಲ. ಗಡಿ ವಿವಾದದ ಕುರಿತು ಮಾತುಕತೆ ನಡೆಯುತ್ತಿದ್ದು, ಅಗತ್ಯವಿದ್ದರೆ ಆ ಬಗ್ಗೆ ನಾನು ಉತ್ತರಿಸುತ್ತೇನೆ'' ಎಂದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೇಲೆ ವಾಗ್ದಾಳಿ ನಡೆಸಲು ಸಂದರ್ಶನವನ್ನು ಬಳಸಿಕೊಂಡ ಶಾ, "ಭಾರತ ವಿರುದ್ಧ ಪ್ರಚಾರವನ್ನು ನಾವು ಸಶಕ್ತವಾಗಿ ನಿಭಾಯಿಸುವೆವು. ಆದರೆ,ಅಂತಹ ದೊಡ್ಡ ಪಕ್ಷದ ನಾಯಕರೊಬ್ಬರು ಇಂತಹ ಪರಿಸ್ಥಿತಿಯಲ್ಲಿ ತೀರಾ ಕಳಪೆ ರಾಜಕಾರಣ ಮಾಡುತ್ತಿರುವುದು ನೋವಿನ ವಿಚಾರ''ಎಂದರು.