ಲಾಕ್‌ಡೌನ್ ವೇಳೆ ಜಮ್ಮು-ಕಾಶ್ಮೀರದ ಶೇ.77 ಮಕ್ಕಳಿಗೆ ಪ್ರಾಥಮಿಕ ಆರೋಗ್ಯ ಸೇವೆ ಅಲಭ್ಯ
ಅಧ್ಯಯನ ವರದಿ
ಶ್ರೀನಗರ,ಜೂ.29: ಕೊರೋನ ವೈರಸ್ ಲಾಕ್‌ಡೌನ್ ಅವಧಿಯಲ್ಲಿ ಜಮ್ಮು-ಕಾಶ್ಮೀರದ ಶೇ.77ರಷ್ಟು ಮಕ್ಕಳು ರೋಗ ನಿರೋಧಕ ಲಸಿಕೆಯಂತಹ ಪ್ರಾಥಮಿಕ ಆರೋಗ್ಯ ರಕ್ಷಣೆ ಸೇವೆಗಳಿಂದ ವಂಚಿತರಾಗಿದ್ದರು ಎಂದು ಎನ್‌ಜಿಒ ‘ಚೈಲ್ಡ್ ರೈಟ್ಸ್ ಆ್ಯಂಡ್ ಯು (ಕ್ರೈ)’ಸೋಮವಾರ ತನ್ನ ಅಧ್ಯಯನ ವರದಿಯನ್ನು ಉಲ್ಲೇಖಿಸಿ ಹೇಳಿದೆ.
ಲಾಕ್‌ಡೌನ್ ಮೊದಲ ಮತ್ತು ದ್ವಿತೀಯ ಹಂತದ ಸಂದರ್ಭದಲ್ಲಿ ಜಮ್ಮು-ಕಾಶ್ಮೀರ ಸೇರಿದಂತೆ ದೇಶಾದ್ಯಂತದಿಂದ ಪೋಷಕರು ಮತ್ತು ಪ್ರಾಥಮಿಕ ಆರೋಗ್ಯ ಕಾರ್ಯಕರ್ತರ ಉತ್ತರಗಳನ್ನು ಆಧರಿಸಿ ಈ ಅಧ್ಯಯನವನ್ನು ನಡೆಸಲಾಗಿತ್ತು. ಜಮ್ಮು-ಕಾಶ್ಮೀರದ ಒಟ್ಟು 387 ಜನರು ಅಧ್ಯಯನದಲ್ಲಿ ಪಾಲ್ಗೊಂಡಿದ್ದರು ಎಂದು ಕ್ರೈ ಹೇಳಿಕೆಯಲ್ಲಿ ತಿಳಿಸಿದೆ.
ಲಾಕ್‌ಡೌನ್ ಅವಧಿಯಲ್ಲಿ ದೇಶಾದ್ಯಂತ ರೋಗನಿರೋಧಕ ಲಸಿಕೆಗಳನ್ನು ನೀಡುವ ಕಾರ್ಯಕ್ರಮಗಳಿಗೆ ಹಿನ್ನಡೆಯುಂಟಾಗಿತ್ತು. 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಸಿದ ಅಧ್ಯಯನವು ಐದು ವರ್ಷದೊಳಗಿನ ಸುಮಾರು ಶೇ.50 ರಷ್ಟು ಮಕ್ಕಳಿಗೆ ರೋಗ ನಿರೋಧಕ ಸೇವೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿರಲಿಲ್ಲ ಎನ್ನುವುದನ್ನು ತೋರಿಸಿದೆ ಎಂದು ತಿಳಿಸಿರುವ ಕ್ರೈ, ಜಮ್ಮು-ಕಾಶ್ಮೀರದಲ್ಲಿ ಶೇ.77.14ರಷ್ಟು ಮಕ್ಕಳು ಈ ಸೇವೆಯಿಂದ ವಂಚಿತರಾಗಿದ್ದರು ಎನ್ನುವುದು ಕಳವಳದ ವಿಷಯವಾಗಿದೆ ಎಂದಿದೆ.
ಜಮ್ಮು-ಕಾಶ್ಮೀರದಲ್ಲಿ ಅಧ್ಯಯನದಲ್ಲಿ ಪಾಲ್ಗೊಂಡಿದ್ದವರ ಪೈಕಿ ಶೇ.35ರಷ್ಟು ಜನರು,ಲಾಕ್‌ಡೌನ್ ಸಂದರ್ಭದಲ್ಲಿ ತಮ್ಮ ಮಕ್ಕಳು ಅನಾರೋಗ್ಯಕ್ಕೆ ಗುರಿಯಾಗಿದ್ದಾಗ ಅವರಿಗೆ ವೈದ್ಯಕೀಯ ನೆರವು ಲಭಿಸಿರಲಿಲ್ಲ ಎಂದು ತಿಳಿಸಿದ್ದಾರೆ.
ಲಾಕ್‌ಡೌನ್ ಅವಧಿಯಲ್ಲಿ ಶಾಲಾ ತರಗತಿಗಳ ಬದಲು ಆರಂಭಿಸಲಾಗಿರುವ ಆನ್‌ಲೈನ್ ತರಗತಿಗಳನ್ನೂ ಪ್ರಸ್ತಾಪಿಸಿರುವ ಕ್ರೈ,ಶೋಷಿತ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸೇರಿದ ಮಕ್ಕಳು ಸ್ಮಾರ್ಟ್‌ಫೋನ್ ಮತ್ತು ಅಂತರ್ಜಾಲ ಸಂಪರ್ಕದಿಂದ ವಂಚಿತರಾಗಿದ್ದು,ರಾಷ್ಟ್ರಮಟ್ಟದಲ್ಲಿ ಕೇವಲ ಶೇ.41ರಷ್ಟು ಕುಟುಂಬಗಳ ಮಕ್ಕಳಿಗೆ ಮಾತ್ರ ನಿಯಮಿತವಾಗಿ ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿದೆ ಎಂದು ತಿಳಿಸಿದೆ.