ನ್ಯಾಯಾಲಯದ ಆದೇಶಕ್ಕೆ ಬೆಲೆ ಕೊಡದ ಅಬಕಾರಿ ಇಲಾಖೆ: ಅನಧಿಕೃತ 385 ಮದ್ಯದಂಗಡಿಗಳಿಗೆ ಅಂಕುಶವಿಲ್ಲ
ಸಾಂದರ್ಭಿಕ ಚಿತ್ರ
ಬೆಂಗಳೂರು, ಜೂ.29: ರಾಜ್ಯದಲ್ಲಿ ಈ ಹಿಂದೆ ಸಿಎಲ್2 (ವೈನ್ಶಾಪ್) ಖೋಟಾದಡಿ ನಿಗದಿಕ್ಕಿಂತ ಹೆಚ್ಚುವರಿಯಾಗಿ ಮಂಜೂರು ಆಗಿದ್ದ 385 ವೈನ್ಶಾಪ್ಗಳನ್ನು ರದ್ದುಪಡಿಸುವಂತೆ ಸರ್ಕಾರ ಹಾಗೂ ಹೈಕೋರ್ಟ್ ಹೊರಡಿಸಿದ್ದ ಆದೇಶಗಳಿಗೆ ಅಬಕಾರಿ ಇಲಾಖೆಯಲ್ಲಿ ಕಿಮ್ಮತ್ತು ಇಲ್ಲದಂತಾಗಿದೆ.
ಬೆಂಗಳೂರು 289, ರಾಮನಗರ 10, ಕೊಡಗು 49, ಹಾಸನ 28, ಧಾರವಾಡ 7 ಹಾಗೂ ಚಿಕ್ಕಮಗಳೂರು 2 ಸೇರಿ ಒಟ್ಟು 385 ಸಿಎಲ್2 ಶಾಪ್ಗಳನ್ನು 1987ರಲ್ಲಿ ನಿಗದಿಪಡಿಸಿ 1994ರಲ್ಲಿ ಆಗಿನ ಸರಕಾರ ರದ್ದುಪಡಿಸಿತ್ತು. ಅಲ್ಲದೆ, 1999ರಲ್ಲಿ ನಡೆದ ಪ್ರಕರಣದಲ್ಲಿ ಹೈಕೋರ್ಟ್ ಕೂಡ ಹೆಚ್ಚುವರಿ ಮಂಜೂರು ಆಗಿದ್ದ ಸಿಎಲ್2 ಅಂಗಡಿಗಳನ್ನು ರದ್ದುಪಡಿಸುವಂತೆ ಆದೇಶಿಸಿತ್ತು. ತದನಂತರ, 2016ರಲ್ಲಿ ಈ ಬಗ್ಗೆ ಆದೇಶ ಹೊರಡಿಸಿದ್ದರೂ, ಇಲಾಖೆ ಅಧಿಕಾರಿಗಳು ಆದೇಶ ಪಾಲಿಸಲು ಹಿಂದೇಟು ಆಗುತ್ತಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಆದೇಶ ಪಾಲನೆಗೆ ಹಿಂದೇಟು: ಅಬಕಾರಿ ಇಲಾಖೆ ನಿಯಮ 12ರಂತೆ ರಾಜ್ಯದ ಪ್ರತಿ ತಾಲೂಕು ಹಾಗೂ ನಗರ ಪ್ರದೇಶಕ್ಕೆ 7,500 ಜನಕ್ಕೆ ಒಂದು ಸಿಎಲ್-2 ಹಾಗೂ 3,500 ಜನಕ್ಕೆ ಹೆಚ್ಚುವರಿ ಸನ್ನದು ನಿಗದಿಪಡಿಸಲಾಗಿತ್ತು. ಗ್ರಾಮೀಣ ಪ್ರದೇಶದಲ್ಲಿ 15 ಸಾವಿರ ಜನಕ್ಕೆ ಒಂದು ಸಿಎಲ್2 ಹಾಗೂ 7500 ಜನಕ್ಕೆ ಹೆಚ್ಚುವರಿ ಒಂದು ಸನ್ನದು ನಿಗದಿಯಾಗಿತ್ತು.
ತಾಲೂಕಿನ ನಗರ ಪ್ರದೇಶಕ್ಕೆ ಎ ಹಾಗೂ ಗ್ರಾಮೀಣ ಪ್ರದೇಶಕ್ಕೆ ಬಿ ಎಂದು ಖೋಟಾ ನಿಗದಿಪಡಿಸಲಾಗಿತ್ತು. ಇದಕ್ಕೆ ಸಂಬಂಧಪಟ್ಟಂತೆ 1987ರಲ್ಲಿ ನಿಯಮ 12ರಂತೆ ಆಗಿನ ಸರ್ಕಾರವು ರಾಜ್ಯದ ಎಲ್ಲ ತಾಲೂಕಿನಲ್ಲಿ ಖೋಟಾ ನಿಗದಿ ಪಡಿಸಿತ್ತು. ನಿಯಮ 12ರಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಸಿಎಲ್2 ಹೆಚ್ಚುವರಿ ಸನ್ನದು ನಿಗದಿಯಂತೆ ಬೆಂಗಳೂರು 289, ರಾಮನಗರ 10, ಕೊಡಗು 49, ಹಾಸನ 28, ಧಾರವಾಡ 7 ಹಾಗೂ ಚಿಕ್ಕಮಗಳೂರು 2 ಸೇರಿ ಒಟ್ಟು 385 ಸಿಎಲ್2 ಶಾಪ್ ಮಂಜೂರು ಮಾಡಲಾಗಿತ್ತು. ಆದರೆ, 1994ರಂದು ಆಗಿನ ಸರ್ಕಾರವು ಹೆಚ್ಚುವರಿಯಾಗಿ ನೀಡಿರುವ ಶಾಪ್ಗಳನ್ನು ರದ್ದುಪಡಿಸಬೇಕು ಎಂದು ಆದೇಶಿಸಿತ್ತು. ಆದರೆ, ಈವರೆಗೂ ಇಲಾಖೆ ಅಧಿಕಾರಿಗಳು ಸರಕಾರ ಆದೇಶದ ಪಾಲನೆ ಮಾಡದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ.
ಬಾಕಿ ಉಳಿದ 258 ಸಿಎಲ್2 ?: 1987ರಲ್ಲಿ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಬರುವ ತಾಲೂಕಿಗೆ ಅಬಕಾರಿ ನಿಯಮ 12ರಂತೆ ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶಕ್ಕೆ ಸಿಎಲ್2 ಖೋಟಾ ನಿಗದಿಯಾಗಿತ್ತು. ಅದರಂತೆ, ರಾಜ್ಯದ ನಗರ ಪ್ರದೇಶಕ್ಕೆ ನಿಗದಿಯಾದ ಸಿಎಲ್2 ಖೋಟಾದಂತೆ ನಗರ ಪ್ರದೇಶಕ್ಕೆ 2,158 ಹಾಗೂ ಗ್ರಾಮೀಣ ಪ್ರದೇಶಕ್ಕೆ 2,048 ಸೇರಿ ಒಟ್ಟು 4,206 ಸಿಎಲ್2 ಅಂಗಡಿಗಳನ್ನು ನಿಗದಿಪಡಿಸಲಾಗಿದೆ.
ಆದರೆ, ಇದೀಗ ನಗರದ ಪ್ರದೇಶದಲ್ಲಿ 2,510 ಹಾಗೂ ಗ್ರಾಮೀಣ ಪ್ರದೇಶಕ್ಕೆ 1,438 ಸೇರಿ ಒಟ್ಟು 3,948 ಸಿಎಲ್2 ಅಂಗಡಿಗಳು ಕಾರ್ಯನಿರ್ವಹಿಸುತ್ತಿವೆ. ಖೋಟಾದಂತೆ ಬಾಕಿ ಉಳಿದ 258 ಸಿಎಲ್2 ಶಾಪ್ಗಳನ್ನು ಖೋಟಾದಡಿ ಭರ್ತಿ ಮಾಡಿ ನಗರ ಪ್ರದೇಶದಲ್ಲಿ ಹೆಚ್ಚುವರಿಯಾಗಿ ಮಂಜೂರು ಮಾಡಿದ್ದ 385 ಸಿಎಲ್2 ಶಾಪ್ಗಳನ್ನು ರದ್ದುಪಡಿಸಬೇಕಿದೆ.
1.5 ಕೋಟಿ ಬೇಕು !
ರಾಜ್ಯದಲ್ಲಿ ಕ್ಲಬ್(ಸಿಎಲ್4), ಹೋಟೆಲ್ ಮತ್ತು ಗೃಹ(ಸಿಎಲ್-7), ವೈನ್ ಟ್ಯಾವರಿನ್, ವೈನ್ ಬೋಟಿಕ್ ಹಾಗೂ ಮೈಕ್ರೋಬ್ರಿವರಿ ಹೊರತುಪಡಿಸಿ ಉಳಿದ ಮಾದರಿಯ ಹೊಸ ಮದ್ಯದಂಗಡಿಗಳ ಪರವಾನಗಿ ನೀಡಲು ಈಗಾಗಲೇ ನಿಲ್ಲಿಸಲಾಗಿದೆ. ನಿಯಮದ ಪ್ರಕಾರ ಒಂದು ಮದ್ಯದಂಗಡಿ ತೆರೆಯಲು ಗ್ರಾಮೀಣ ಪ್ರದೇಶದಲ್ಲಿ 4.5 ಲಕ್ಷ ಹಾಗೂ ನಗರ ಪ್ರದೇಶದಲ್ಲಿ 8.5 ಲಕ್ಷ ರೂ. ಬಂಡವಾಳ ಬೇಕು.
ಆದರೆ, ಇಲಾಖೆ ಅಧಿಕಾರಿಗಳು ಮದ್ಯದಂಗಡಿ ತೆರೆಯಲು ಅರ್ಜಿ ಹಾಕುವುದರಿಂದ ಹಿಡಿದು ಅನುಮತಿ ಪಡೆಯುವರೆಗೆ ನಡೆಯುವ ಪ್ರಕ್ರಿಯೆಗೆ ಅಂದಾಜು 80 ಲಕ್ಷ ರೂ. ಬೇಕಿದೆ. ಒಂದು ವೇಳೆ ಅರ್ಜಿಯಲ್ಲಿ ಲೋಪ ಅಥವಾ ಬೇರೆ ಏನಾದರೂ ಸಮಸ್ಯೆ ಇದ್ದರೆ ಮತ್ತಷ್ಟು ಲಂಚ ನೀಡಬೇಕಾಗುತ್ತದೆ. ಮದ್ಯ ಖರೀದಿಸಲು 25 ಲಕ್ಷ ರೂ. ಬೇಕಾಗುತ್ತದೆ. ಒಟ್ಟಾರೆ ಮದ್ಯದಂಗಡಿ ತೆರೆಯಲು ಏನಿಲ್ಲವಾದರೂ 1.5 ಕೋಟಿ ರೂ. ಬೇಕಿದೆ.
10,410 ಮದ್ಯದಂಗಡಿ
3,948 ವೈನ್ಶಾಪ್(ಸಿಎಲ್2), 232 ಕ್ಲಬ್(ಸಿಎಲ್4), 1037 ಹೋಟೆಲ್ ಮತ್ತು ಗೃಹ (ಸಿಎಲ್7), 3552 ಬಾರ್ ಆ್ಯಂಡ್ ರೆಸ್ಟೋರೆಂಟ್(ಸಿಎಲ್9), 705 ಎಂಎಸ್ಐಎಲ್ (ಸಿಎಲ್11ಸಿ), 467 ರಿಟೇಲ್ ವೆಡಿಂಗ್ ಬಿಯರ್ (ಆರ್ವಿಬಿ) ಸೇರಿ ಒಟ್ಟಾರೆ 10,410 ಮದ್ಯದಂಗಡಿಗಳಿವೆ.