ಬಳಕೆದಾರರ ಖಾಸಗಿತನಕ್ಕೆ ಮೊದಲ ಆದ್ಯತೆ
ಭಾರತೀಯ ಉದ್ಯೋಗಿಗಳಿಗೆ ಟಿಕ್ಟಾಕ್ ಸಿಇಒ ಸಂದೇಶ
Photo: twitter.com/tiktok_us
ಹೊಸದಿಲ್ಲಿ, ಜು.1: ಎಲ್ಲಾ ಡೇಟಾಗಳ ಬಗ್ಗೆ ಗೌಪ್ಯತೆ ಮತ್ತು ಸುರಕ್ಷತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಭಾರತದ ಕಾನೂನಿನಡಿ ಸೂಚಿಸಲಾಗಿರುವ ಎಲ್ಲಾ ಮಾರ್ಗಸೂಚಿಗಳನ್ನು ಟಿಕ್ಟಾಕ್ ಪಾಲಿಸುತ್ತಿದೆ. ಟಿಕ್ಟಾಕ್ ಯಾವಾಗಲೂ ಬಳಕೆದಾರರ ಖಾಸಗಿತನ ಮತ್ತು ಸಮಗ್ರತೆಯ ರಕ್ಷಣೆಗೆ ಮಹತ್ವ ನೀಡಿದೆ ಎಂದು ಟಿಕ್ಟಾಕ್ನ ಸಿಇಒ ಕೆವಿನ್ ಮೇಯರ್ ಸಂಸ್ಥೆಯ ಭಾರತೀಯ ಉದ್ಯೋಗಿಗಳಿಗೆ ಸಂದೇಶ ರವಾನಿಸಿದ್ದಾರೆ.
ಟಿಕ್ಟಾಕ್ ನಲ್ಲಿ ಅಂತರ್ಜಾಲವನ್ನು ಪ್ರಜಾತಂತ್ರೀಯಗೊಳಿಸುವ ಬದ್ಧತೆ ನಮ್ಮ ಪ್ರಯತ್ನಗಳಿಗೆ ಮಾರ್ಗಸೂಚಿಯಾಗಿದೆ. ಈ ಪ್ರಯತ್ನದಲ್ಲಿ ನಾವು ಯಶ ಪಡೆದಿರುವ ವಿಶ್ವಾಸ ನಮಗಿದೆ. ನಾವು ನಮ್ಮ ಧ್ಯೇಯಕ್ಕೆ ಬದ್ಧರಾಗಿದ್ದು ನಮ್ಮ ಬಳಕೆದಾರರ ಆತಂಕವನ್ನು ನಿವಾರಿಸಲು ದೃಢಸಂಕಲ್ಪ ಮಾಡಿದ್ದೇವೆ ಎಂದು ಸಂಸ್ಥೆಯ ವೆಬ್ಸೈಟ್ನಲ್ಲಿ ಹೇಳಿದ್ದಾರೆ.
ಭಾರತದಲ್ಲಿರುವ ನಮ್ಮ ಉದ್ಯೋಗಿಗಳಿಗೊಂದು ಸಂದೇಶ ಎಂಬ ಹೆಸರಿನಲ್ಲಿ ಮಾಡಿರುವ ಪೋಸ್ಟ್ನಲ್ಲಿ , ಭಾರತದಲ್ಲಿ 200 ಮಿಲಿಯಕ್ಕೂ ಅಧಿಕ ಬಳಕೆದಾರರು ತಮ್ಮ ಸಂತೋಷ ಮತ್ತು ಸೃಜನಶೀಲತೆಯನ್ನು ವ್ಯಕ್ತಪಡಿಸಲು, ಸ್ವಯಂ ಅಭಿವ್ಯಕ್ತಿಯನ್ನು ಆನಂದಿಸಲು ಮತ್ತು ಬೆಳೆಯುತ್ತಿರುವ ಜಾಗತಿಕ ಸಮುದಾಯದೊಂದಿಗೆ ತಮ್ಮ ಅನುಭವ ಹಂಚಿಕೆಯನ್ನು ಖಾತರಿಗೊಳಿಸಲು ನಾವು 2018ರಿಂದಲೂ ಕಠಿಣ ಶ್ರಮ ವಹಿಸಿದ್ದೇವೆ ಎಂದವರು ಹೇಳಿದ್ದಾರೆ. ನಮ್ಮ ಉದ್ಯೋಗಿಗಳೇ ನಮ್ಮ ಬಹುದೊಡ್ಡ ಶಕ್ತಿಯಾಗಿದೆ ಮತ್ತು ಅವರ ಹಿತಚಿಂತನೆ ನಮ್ಮ ಪ್ರಮುಖ ಆದ್ಯತೆಯಾಗಿದೆ. ನಮ್ಮ 2000ಕ್ಕೂ ಹೆಚ್ಚಿನ ಸಶಕ್ತ ಕಾರ್ಯಪಡೆ ಹೆಮ್ಮೆಪಡುವಂತಹ ಸಕಾರಾತ್ಮಕ ಅನುಭವ ಮತ್ತು ಅವಕಾಶಗಳನ್ನು ಪುನಸ್ಥಾಪಿಸುವುದಾಗಿ ಖಾತರಿಪಡಿಸುತ್ತೇವೆ ಎಂದವರು ಹೇಳಿದ್ದಾರೆ.
ದೇಶದೆಲ್ಲೆಡೆಯ ಕಲಾವಿದರು, ಕಥೆ ಹೇಳುವವರು, ಶಿಕ್ಷಣ ತಜ್ಞರಿಗೆ ತಮ್ಮ ಸೃಜನಶೀಲತೆಯನ್ನು ಪ್ರದರ್ಶಿಸಲು ಮತ್ತು ಜೀವನೋಪಾಯ ಸುಧಾರಣೆಗೆ ಹೊಸ ಮಾರ್ಗ ಮತ್ತು ಅವಕಾಶ ನೀಡಿದ್ದು, ಜಾಗತಿಕ ಮಟ್ಟದಲ್ಲಿ ಬ್ರಾಂಡ್ ಅಂಬಾಸೆಡರ್ಗಳಾಗಿ ಕಾರ್ಯ ನಿರ್ವಹಿಸಲು ( ಈ ಹಿಂದೆ ಚಿತ್ರನಟರಿಗೆ ಮತ್ತು ಕ್ರೀಡಾ ಪಟುಗಳಿಗೆ ಮಾತ್ರ ದೊರಕುತ್ತಿದ್ದ) ಅವಕಾಶವನ್ನೂ ಪಡೆದುಕೊಳ್ಳಲು ಸಾಧ್ಯವಾಗಿದೆ. ಡಿಜಿಟಲ್ ಇಂಡಿಯಾ ಅಭಿಯಾನದಲ್ಲಿ ನಮ್ಮ ಸಕ್ರಿಯ ಪಾತ್ರವನ್ನು ಮತ್ತೆ ಮುಂದುವರಿಸುವುದನ್ನು ಎದುರು ನೋಡುತ್ತಿದ್ದೇವೆ ಎಂದವರು ಹೇಳಿದ್ದಾರೆ.