ಕೊರೋನಿಲ್ : ಪತಂಜಲಿಗೆ ಉತ್ತರಾಖಂಡ ಹೈಕೋರ್ಟ್ ನೋಟಿಸ್
ಉತ್ತರಾಖಂಡ : ಕೊರೋನಿಲ್ ಔಷಧ ವಿವಾದಕ್ಕೆ ಸಂಬಂಧಿಸಿದಂತೆ ಬಾಬಾ ರಾಮ್‌ದೇವ್ ಅವರ ಪತಂಜಲಿ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಗೆ ಉತ್ತರಾಖಂಡ ಹೈಕೋರ್ಟ್ ನೋಟಿಸ್ ನೀಡಿದೆ.
ಔಷಧ ಕುರಿತಂತೆ ರಾಮ್‌ದೇವ್ ಅವರ ಪ್ರತಿಪಾದನೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಮೇಶ್ ರಂಗನಾಥನ್ ಮತ್ತು ನ್ಯಾಯಮೂರ್ತಿ ಆರ್.ಸಿ.ಖುಲ್ಬೆ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ನೋಟಿಸ್ ನೀಡಿದೆ.
ನೋಟಿಸ್‌ಗೆ ಒಂದು ವಾರದ ಒಳಗಾಗಿ ಉತ್ತರಿಸುವಂತೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಪತಂಜಲಿ ಆಯುರ್ವೇದ, ಉತ್ತರಾಖಂಡ ಆಯುಷ್ ಇಲಾಖೆ ನಿರ್ದೇಶಕರು, ಐಸಿಎಂಆರ್ ಮತ್ತು ಔಷಧಿ ಅಭಿವೃದ್ಧಿಪಡಿಸಲು ಸಹಯೋಗ ನೀಡಿದ ರಾಜಸ್ಥಾನದ ಎನ್‌ಐಎಂಎಸ್ ವಿವಿಗೆ ಸೂಚಿಸಲಾಗಿದೆ.
ಔಷಧವನ್ನು ನಿಷೇಧಿಸುವಂತೆ ಕೋರಿ ವಕೀಲ ಮಣಿಕುಮಾರ್ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಕೊರೋನಿಲ್, ಕೊರೋನ ವೈರಸ್ ಗುಣಪಡಿಸುತ್ತದೆ ಎಂದು ಬಿಂಬಿಸುವ ಮೂಲಕ ಯೋಗ ಗುರು ಜನಸಾಮಾನ್ಯರನ್ನು ತಪ್ಪುದಾರಿಗೆ ಎಳೆದಿದ್ದಾರೆ ಎಂದು ಅವರು ಆಪಾದಿಸಿದ್ದಾರೆ.
ಈ ಔಷಧಕ್ಕೆ ಐಸಿಎಂಆರ್ ಪ್ರಮಾಣಪತ್ರ ಇಲ್ಲ ಮಾತ್ರವಲ್ಲದೇ ಇದರ ಉತ್ಪಾದನೆ ಮಾಡಲು ಪತಂಜಲಿ ಆಯುರ್ವೇದಕ್ಕೆ ಲೈಸನ್ಸ್ ಕೂಡಾ ಇಲ್ಲ ಎಂದು ವಾದಿಸಿದ್ದಾರೆ. ಈ ಔಷಧವನ್ನು ರಾಜಸ್ಥಾನದ ಎನ್‌ಐಎಂಎಸ್ ವಿವಿ ಪರೀಕ್ಷೆ ಮಾಡಿದೆ ಎಂದು ಬಾಬಾ ಹೇಳಿದ್ದರೆ, ವಿವಿ ಆಡಳಿತ ಇದನ್ನು ನಿರಾಕರಿಸಿದೆ.