ನೆನಪಿನಂಗಳದಲ್ಲಿ ನಾಡೋಜ ಗೀತಾ ನಾಗಭೂಷಣ
ಭಾಗ 3
ಗೀತಾ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿದ್ದಾಗ ನಾಗಭೂಷಣ ಅವರೂ ಅಲ್ಲೇ ಗುಮಾಸ್ತರಾಗಿ ಸೇರಿದ್ದರು. ಇಬ್ಬರೂ ಒಂದೇ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ನಂತರ ನಾಗಭೂಷಣ ಅವರ ಮದುವೆ ನಡೆದಾಗ ಗೀತಾ ಅವರು ಆ ಮದುವೆಗೂ ಹೋಗಿದ್ದರು. ಮುಂದೊಂದು ದಿನ ಈ ವ್ಯಕ್ತಿ ತಮ್ಮ ಬಾಳಸಂಗಾತಿಯಾಗುತ್ತಾನೆಂಬುದನ್ನು ಅವರು ಕನಸು ಮನಸಿನಲ್ಲೂ ನೆನೆಸಿರಲಿಲ್ಲ. ಮುಂದೊಂದು ದಿನ ನಾಗಭೂಷಣ ನೌಕರಿ ಬಿಟ್ಟು ಸೀರೆ ಅಂಗಡಿ ಆರಂಭಿಸಿದರು. ಆಗ ಗೀತಾ ಅವರು ಸೀರೆ ಕೊಳ್ಳಲು ಅವರ ಅಂಗಡಿಗೆ ಹೋಗುವಾಗ ಸ್ನೇಹ ಪ್ರೀತಿಗೆ ತಿರುಗಿತು. 1969ರಲ್ಲಿ ನಾಗಭೂಷಣರನ್ನು ದೇವಸ್ಥಾನವೊಂದರಲ್ಲಿ ಮದುವೆಯಾದರು. ಈ ಮದುವೆ ಕೂಡ ಸುಖಕ್ಕಿಂತ ಹೆಚ್ಚಿನ ನೋವು ತಂದಿತು. ತಾಂತ್ರಿಕ ದೋಷದಿಂದಾಗಿ ನಾಗಭೂಷಣ ಅವರ ರಾಜೀನಾಮೆ ಸ್ವೀಕೃತವಾಗಿರಲಿಲ್ಲ. ಅನೇಕ ವರ್ಷಗಳ ನಂತರ ಅವರು ಮತ್ತೆ ಕೆಲಸಕ್ಕೆ ಹಾಜರಾದರು. ಅವ್ಯವಹಾರವೊಂದರಲ್ಲಿ ಸಿಲುಕಿ ಅಮಾನತುಗೊಂಡರು. ಆ ಸಂದರ್ಭದಲ್ಲಿ ಗೀತಾ ಅವರ ಮನೆಯನ್ನೂ ಪೊಲೀಸರು ಶೋಧ ಮಾಡಿದರು. ಗೀತಾ ಅವರಿಗೆ ಈ ಅಪಮಾನ ಸಹಿಸಲಿಕ್ಕಾಗಲಿಲ್ಲ. ಅಷ್ಟೇ ಅಲ್ಲದೆ ಕುಡಿತದ ಚಟ ಅಂಟಿಸಿಕೊಂಡಿದ್ದ ನಾಗಭೂಷಣ ಅವರು ಹೊಡಿಬಡಿ ಮಾಡುತ್ತಲೇ ಇದ್ದರು. ನಾಗಭೂಷಣರಿಂದ ಇಬ್ಬರು ಮಕ್ಕಳು ಹುಟ್ಟಿದ ನಂತರವೂ ಈ ಹೊಡಿಬಡಿ ಮುಂದುವರಿದಿತ್ತು. ಅವರ ಜೊತೆಗಿನ 10 ವರ್ಷಗಳನ್ನು ಗೀತಾ ದುಸ್ವಪ್ನದಂತೆ ಕಳೆದರು. ಅವರ ಹಣ ಮತ್ತು ಒಡವೆಗಳನ್ನು ಕೂಡ ನಾಗಭೂಷಣ ಬಿಡಲಿಲ್ಲ. ಈ ಕಾರಣಕ್ಕಾಗಿ ಜಗಳವೂ ಆಯಿತು. ನಿನ್ನ ಒಡವೆಗಳನ್ನು ತೆಗೆದುಕೊಂಡೇ ಮನೆಗೆ ಬರುವೆ ಎಂದು ಹೇಳಿಹೋದವರು ಮತ್ತೆ ಬರಲಿಲ್ಲ. ಕೊನೆಗೆ ಗೀತಾ ಅವರೇ ಅವರ ಅಂತ್ಯಸಂಸ್ಕಾರಕ್ಕೆ ಹೋಗಬೇಕಾಯಿತು.
ನಾಗಭೂಷಣ ಅವರನ್ನು ಮದುವೆ ಮಾಡಿಕೊಂಡಿದ್ದರಿಂದ ಅವರು ತಮ್ಮ ಕಬ್ಬಲಿಗ (ತಳವಾರ) ಸಮಾಜದಿಂದಷ್ಟೇ ಅಲ್ಲದೆ ತವರು ಮನೆಯಿಂದಲೂ ದೂರಾದರು. ಅವರ ಮನೆಯವರು ಬಂದದ್ದು ನಾಗಭೂಷಣರ ಸಾವಿನ ನಂತರವೆ. ಈ ಸಂದರ್ಭದಲ್ಲಿ ಅವರ ಆತ್ಮೀಯ ಗೆಳತಿಯರೂ ದೂರಾದರು. ಆಗ ಅವರಿಗೆ ಸಾಹಿತ್ಯವೊಂದೇ ಸಂಗಾತಿಯಾಯಿತು. ಹೀಗೆ ಅವರ ಬಾಲ್ಯ, ಯೌವನ ಮತ್ತು ವೃದ್ಧಾಪ್ಯ ಕೂಡ ಒಂದೊಂದು ರೀತಿಯ ನೋವಿನಿಂದ ಕೂಡಿದೆ. ಅವರು ತಮ್ಮ ನೋವನ್ನು ಸೃಜನಶೀಲವಾಗಿ ಪರಿವರ್ತಿಸಿದರು. ಬರೆದು ಬರೆದು ಮನಸ್ಸನ್ನು ಹಗುರ ಮಾಡಿಕೊಂಡರು.
ಮೊದಲಿಗೆ ಅವರು ಜನಪ್ರಿಯ ಕಾದಂಬರಿಗಳನ್ನು ಬರೆದರು. ಬಡತನದ ಕಾರಣ ತಾವು ಬದುಕಿನಲ್ಲಿ ಅನುಭವಿಸಲಿಕ್ಕಾಗದ್ದನ್ನು ಕಾದಂಬರಿಯಲ್ಲಿ ರಂಗುರಂಗಾಗಿ ಚಿತ್ರಿಸಿದರು. ‘ತಾವರೆ ಹೂ’ವಿನಂಥ ರಮ್ಯ ಕಾದಂಬರಿ ಬರೆದ ಅವರು ಜೀವನಾನುಭವ ಹೆಚ್ಚಾದಂತೆಲ್ಲ ವಾಸ್ತವ ಬದುಕಿನ ಚಿತ್ರಣದ ಕಡೆಗೆ ವಾಲಿದರು. ಹಾಗೇ ಮುನ್ನಡೆದರು. ಲಂಕೇಶ, ಎಂ.ಬಿ. ಸಿಂಗ್, ಜಿ.ಎಸ್. ಸದಾಶಿವ ಮತ್ತು ಸಂತೋಷಕುಮಾರ ಗುಲ್ವಾಡಿ ಅವರಂತಹ ಸಂಪಾದಕರು ಅವರ ಸಾಹಿತ್ಯವನ್ನು ಪ್ರಕಟಿಸಿದರು. 1980ರ ನಂತರ ಅವರಿಗೆ ಪ್ರಶಸ್ತಿಗಳು ಹುಡುಕಿಕೊಂಡು ಬಂದವು. ಅವರ ಬರವಣಿಗೆಯ ಶೈಲಿ ಮತ್ತು ಭಾಷೆ ಬದಲಾಯಿತು. ಕೀರ್ತಿ ಹೆಚ್ಚುತ್ತಲೇ ಹೋಯಿತು. ದಿಲ್ಲಿಯವರೆಗೂ ಹೋಯಿತು.
‘‘ಮೊದಲಿಗೆ ಬಂಡಾಯ ಚಳವಳಿ ನನ್ನ ಮೇಲೆ ಬಹಳ ಪ್ರಭಾವ ಬೀರಿತು. ಬಂಡಾಯ ಸಾಹಿತ್ಯ ಶೋಷಿತರ ಸಾಹಿತ್ಯ ಎಂಬ ಭಾವ ಮೂಡಿತು. ನಾಳೆ ಏನಾದರೂ ಆದರೆ ಕೇಳುವವರು ಇದ್ದಾರೆ ಎಂಬ ಧೈರ್ಯ ಬಂದಿತು’’ ಎಂದು ಅವರು ತರಂಗಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ‘‘ಒಳ್ಳೆಯ ಸಾಹಿತ್ಯ ರಚನೆಯಾಗುತ್ತಿರುವುದರಲ್ಲಿ ಸಂಶಯವಿಲ್ಲ. ಆದರೆ ಬಂಡವಾಳಶಾಹಿ ಲೋಕ ಸಾಹಿತಿಗಳನ್ನೇ ಖರೀದಿಸುತ್ತಿದೆ. ಸಾಹಿತಿಗಳು ಮಾರಾಟದ ಸರಕುಗಳಾಗಬಾರದು. ಈ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಸಾಹಿತಿಗಳು ನಿರ್ಣಾಯಕ ಪಾತ್ರವನ್ನು ವಹಿಸಬೇಕು’’ ಎಂದು ತಮ್ಮ ಆಶಯವನ್ನು ವ್ಯಕ್ತಪಡಿಸಿದ್ದಾರೆ.
‘‘ಸಮಾಜ ಎತ್ತ ಸಾಗಿದೆ. ಇಂದು ಉಡಿಗೆ ತೊಡಿಗೆ ಹಿಡಿದುಕೊಂಡು ಎಲ್ಲದರಲ್ಲಿಯೂ ಬದಲಾವಣೆ ಕಂಡು ಬರುತ್ತಿದೆ. ಆದರೆ ಬಾಲ್ಯವಿವಾಹ ಪದ್ಧತಿ ಮತ್ತು ವರದಕ್ಷಿಣೆ ಸಾವು ಇಂದಿಗೂ ನಿಂತಿಲ್ಲ’’ ಎಂದು ಅವರು ಖೇದ ವ್ಯಕ್ತಪಡಿಸುತ್ತಾರೆ. ‘‘ಜಾಗತೀಕರಣ ಎಲ್ಲದರ ಮೇಲೆಯೂ ದುಷ್ಪರಿಣಾಮ ಬೀರುತ್ತಿದೆ. ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಹೆಚ್ಚಾಗುತ್ತಿದೆ. ಸಮಾಜವನ್ನು ಬದುಕಿಸುವ ರೈತರೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮಕ್ಕಳ ಮುಗ್ಧತೆಯೂ ಮಾರಾಟದ ವಸ್ತುವಾಗುತ್ತಿದೆ. ಅವರು ಒತ್ತಡಕ್ಕೆ ಒಳಗಾಗುವಂತಹ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿದೆ. ಭವಿಷ್ಯ ಹೇಳುವವರು, ಜ್ಯೋತಿಷಿಗಳು, ಬಾಬಾಗಳು ಟಿವಿಗಳಲ್ಲಿ ರಾರಾಜಿಸುತ್ತಿದ್ದಾರೆ. ವಿದ್ಯುನ್ಮಾನ ಮಾಧ್ಯಮಗಳು ಜನರಲ್ಲಿ ಪುನರ್ಜನ್ಮದ ಭ್ರಮೆಯನ್ನೂ ಹುಟ್ಟಿಸುತ್ತಿವೆ. ಮೂಢನಂಬಿಕೆ ಹೆಚ್ಚಿಸಿ ಜನರ ಸುಲಿಗೆ ಮಾಡಲು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ. ಇವೆಲ್ಲ ನನಗೆ ನಿತ್ಯ ನೋವುಂಟು ಮಾಡುತ್ತಿವೆ’’ ಎಂದು ಅವರು ವಾರಪತ್ರಿಕೆಯೊಂದರ ಮುಂದೆ ಖೇದ ವ್ಯಕ್ತಪಡಿಸಿದ್ದರು. ಮಂಡಿ ನೋವಿನಿಂದ ಸಭೆ ಸಮಾರಂಭಗಳಿಗೆ ಹೋಗಲಿಕ್ಕಾಗುತ್ತಿಲ್ಲ. ಗದಗ ಸಮ್ಮೇಳನ ಮುಗಿದ ಮೇಲೆ ಆತ್ಮಚರಿತ್ರೆ ಬರೆಯುವ ವಿಚಾರವಿದೆ ಎಂದು ಗೀತಾ ನಾಗಭೂಷಣ ಅವರು ವಾರಪತ್ರಿಕೆಯೊಂದಕ್ಕೆ ತಿಳಿಸಿದ್ದರು.
ಉಪನ್ಯಾಸಕಿ ಮಗಳು ಕಾವ್ಯಶ್ರೀಗೆ ಇಬ್ಬರು ಮಕ್ಕಳು. ಮೊಮ್ಮಗಳು ಪೂಜಾ ಬಿ.ಇ. ಓದುತ್ತಿದ್ದಾಳೆ. ಮೊಮ್ಮಗ ಆದಿತ್ಯ 9ನೇ ಕ್ಲಾಸಿನಲ್ಲಿದ್ದಾನೆ. ವೈಭವ ಮತ್ತು ನಿಧಿ ಮಗ ಭರತನ ಪುಟ್ಟ ಮಕ್ಕಳು. ಸೊಸೆ ಸುಜಾತಾ ಮಗಳಿಗಿಂತಲೂ ಚೆನ್ನಾಗಿ ನೋಡಿಕೊಳ್ಳುತ್ತಾಳೆ ಎಂದು ಅವರು ನಾನು ಈ ಹಿಂದೆ ಸಂದರ್ಶನ ಮಾಡಿದಾಗ ಹರ್ಷ ವ್ಯಕ್ತಪಡಿಸಿದ್ದರು. ತಮ್ಮ ಶ್ಯಾಮ ಸಾವಳಗಿ ಬೀದರ್‌ನಲ್ಲಿ ಅಬಕಾರಿ ಇನ್‌ಸ್ಪೆೆಕ್ಟರ್ ಆಗಿದ್ದಾರೆ. ತಂಗಿ ಗಂಗಾ ಶಾಲಾ ಶಿಕ್ಷಕಿಯಾಗಿದ್ದಾಳೆ ಎಂದು ತಿಳಿಸಿದ್ದರು.
ಕಡುಬಡತನದಲ್ಲಿ ಹುಟ್ಟಿ ಬೆಳೆದ ಗೀತಾ ಅವರ ಬದುಕು ನೋವಿನ ಗಾಥೆಯಾಗಿದೆ. ಅವರ ಸೃಜನಶೀಲತೆಯ ಆಳದಲ್ಲಿ ಹಳ್ಳಿಗಾಡಿನ ಕೆಳಜಾತಿಗಳ ಹೆಣ್ಣುಗಳ ದುಃಖದ ಆರ್ತನಾದವಿದೆ. ಕನ್ನಡ ಸಾರಸ್ವತ ಲೋಕದಲ್ಲಿ ಈ ಆರ್ತನಾದವನ್ನು ದಾಖಲಿಸಿದ ಮೊದಲ ಮಹಿಳೆ ಗೀತಾ ನಾಗಭೂಷಣ. ಕನ್ನಡ ಸಾರಸ್ವತ ಲೋಕದಲ್ಲಿ ಅವರಿಗಿಂತ ಮೊದಲು ಇಷ್ಟೊಂದು ದಟ್ಟವಾಗಿ ಕಟ್ಟಕಡೆಯ ಹೆಣ್ಣಿನ ಚಿತ್ರಣವನ್ನು ಸಹೃದಯರ ಮುಂದೆ ಇಟ್ಟ ಲೇಖಕಿ ಇನ್ನೊಬ್ಬರಿಲ್ಲ.
ಅವರ ‘ಧುಮ್ಮಸು’ ಕಾದಂಬರಿಯ ಸೋನಿ ಮದುವೆಗೆ ಮುಂಚೆ ಬಸ್ ಚಾಲಕನೊಬ್ಬನನ್ನು ಪ್ರೀತಿಸುತ್ತಾಳೆ. ದೈಹಿಕ ಸಂಪರ್ಕವೂ ಬೆಳೆಯುತ್ತದೆ. ಮದುವೆ ನಿಶ್ಚಯವಾಗುತ್ತದೆ. ಆದರೆ ಮದುವೆಗೆ ಮುಂಚೆ ಆತ ಅಪಘಾತದಲ್ಲಿ ಸಾಯುತ್ತಾನೆ. ಆದರೆ ಸೋನಿ ಗರ್ಭಿಣಿಯಾಗಿರುತ್ತಾಳೆ. ಊರವರು ಗರ್ಭಪಾತಕ್ಕೆ ಒತ್ತಾಯಿಸುತ್ತಾರೆ. ಆದರೆ ತನ್ನ ಪ್ರೀತಿಯ ಕುಡಿಯನ್ನು ಕಳೆದುಕೊಳ್ಳಬಯಸುವುದಿಲ್ಲ. ಅದಕ್ಕಾಗಿ ಅವಳು ಪಡುವ ಕಷ್ಟ ಹೇಳತೀರದಷ್ಟು.
ಅಂದಿನ ಕಾಲದಲ್ಲಿ ಸೇಂದಿಖಾನೆಗಳು ಚಹಾದ ಅಂಗಡಿಗಳ ಹಾಗೆ ಇ್ದದ್ದವು. ಕೆಳವರ್ಗ, ಕೆಳಜಾತಿಗಳವರಲ್ಲಿ ನೆಂಟಸ್ತನದ ಮಾತುಕತೆಗಳು ಕೂಡ ಸೇಂದಿಖಾನೆಗಳಲ್ಲೇ ನಡೆಯುತ್ತಿದ್ದವು. ‘ಆಶ್ರಯ’ ಕಾದಂಬರಿಯ ತಾಳವ್ವನ ತಂದೆ ಸೇಂದಿಖಾನೆಯಲ್ಲಿ ಕುಡುಕನೊಬ್ಬನಿಗೆ ಮಗಳನ್ನು ಕೊಡುವುದಾಗಿ ಮಾತು ಕೊಟ್ಟ. ಮದುವೆಯೂ ಆಯಿತು. ಹಣಕ್ಕಾಗಿ ಆ ಕುಡುಕ ಹೆಂಡತಿಯನ್ನು ಬೇರೆಯವರಿಗೆ ಬಿಟ್ಟುಕೊಡಲೂ ಸಿದ್ಧನಿದ್ದ. ಕೊನೆಗೆ ಇದ್ದೊಬ್ಬ ಮಗನೊಂದಿಗೆ ದುಡಿದು ಬದುಕು ಸಾಗಿಸಬೇಕಾಯಿತು. ನಂತರ ಮಗನ ಮದುವೆಯಾಯಿತು. ಬರಗಾಲದಲ್ಲಿ ಮಗ ತಾಯಿಗೆ ಹೇಳದೆ ಹೆಂಡತಿಯೊಡನೆ ಗುಳೆ ಹೋದ. ಮನುಸ್ಮತಿಯಲ್ಲಿ ತಿಳಿಸಿದಂತೆ ಅವಳಿಗೆ ಬಾಲ್ಯದಲ್ಲಿ ತಂದೆಯ ಆಶ್ರಯ ಸಿಗಲಿಲ್ಲ. ಮದುವೆಯಾದ ಮೇಲೆ ಗಂಡನ ಆಶ್ರಯ ಸಿಗಲಿಲ್ಲ. ತಾಯಿಯಾದ ಮೇಲೆ ಮಗನ ಆಶ್ರಯ ಸಿಗಲಿಲ್ಲ. ಒಂಟಿ ಮುದುಕಿ ರಟ್ಟೆಯ ಶಕ್ತಿಯಿಂದ ಬದುಕು ಸಾಗಿಸಿದಳು. ಚಂದ್ರಶೇಖರ ಕಂಬಾರರ ‘ಸಿಂಗಾರೆವ್ವ ಮತ್ತು ಅರಮನೆ’ ಓದಿದ ಬಳಿಕ ಗುಲ್ಬರ್ಗದ ಹಳ್ಳಿಗಾಡಿನ ಕೆಳವರ್ಗದವರ ಭಾಷೆಯಲ್ಲಿ ಕಾದಂಬರಿ ಬರೆಯಲು ಗೀತಾ ನಿರ್ಧರಿಸಿದರು. ಹಾಗೆ ಬರೆದ ‘ನೀಲಗಂಗಾ’ ಕಾದಂಬರಿ ಲಂಕೇಶ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಯಿತು. ದೌರ್ಜನ್ಯಕ್ಕೊಳಗಾದ ಕೆಳವರ್ಗದ ಹೆಣ್ಣಿನ ದೌರ್ಜನ್ಯ ಆ ಕಾಲದಲ್ಲಿ ಹೊಸವಸ್ತುವಾಗಿತ್ತು. ದೇಶೀಯ ಸೊಗಡಿನಿಂದ ಕೂಡಿದ ಭಾಷೆ ಕೂಡ ಹೊಸದಾಗಿತ್ತು. ಓದುಗರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತು. ನೀಲಗಂಗಾ, ಗೌಡನ ಆಳುಮಗನ ಹೆಂಡತಿ. ದೇಹಸುಖ ನೀಡದಿದ್ದರೆ ಗಂಡನ ಕೊಲೆ ಮಾಡುವುದಾಗಿ ಗೌಡ ಹೆದರಿಸುತ್ತಾನೆ. ಗಂಡನಿಗಾಗಿ ನೀಲಗಂಗಾ ಪಾತಿವ್ರತ್ಯವನ್ನು ಕಳೆದುಕೊಳ್ಳುತ್ತಾಳೆ. ಗೌಡ ಕೊಟ್ಟ ಧನಕನಕಗಳನ್ನು ಮುಟ್ಟದೆ ನೆಲದಲ್ಲಿ ಹೂತುಬಿಡುತ್ತಾಳೆ. ಈ ಸಂಬಂಧ ಗೊತ್ತಾದ ಕೂಡಲೇ ನೀಲಗಂಗಾನ ಬಗ್ಗೆ ತಪ್ಪು ತಿಳಿದುಕೊಂಡ ಗಂಡ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ನೀಲಗಂಗಾ ಹುಚ್ಚಿಯಾಗುತ್ತಾಳೆ. ಹೀಗೆ ಅವರು ತಮ್ಮ ಕಾದಂಬರಿಗಳಲ್ಲಿ ಹೆಣ್ಣಿನ ಅಂತರಾಳಕ್ಕೆ ಕನ್ನಡಿ ಹಿಡಿಯುತ್ತಾರೆ. ಪುರುಷ ಪ್ರಧಾನವಾದ ಈ ವ್ಯವಸ್ಥೆಯಲ್ಲಿ ಅವರ ಹೆಣ್ಣು ಪಾತ್ರಗಳು ಯಾವ ತಪ್ಪೂ ಮಾಡದೆ ನೋವನ್ನು ಅನುಭವಿಸುತ್ತಲೇ ಇರುತ್ತವೆ. ‘ಹಸಿ ಮಾಂಸ ಮತ್ತು ಹದ್ದುಗಳು’, ‘ಕಾಗೆ ಮುಟ್ಟಿತು’ ಮುಂತಾದ ಕಾದಂಬರಿಗಳಲ್ಲಿ ಹೆಣ್ಣಿನ ಮೌನರೋಧನದ ವಿವಿಧ ಮುಖಗಳಿವೆ. ಅವರ 27 ಕಾದಂಬರಿಗಳಲ್ಲಿನ ಬಹುಪಾಲು ಹೆಣ್ಣಿನ ಒಳತೋಟಿಗೆ ಹಿಡಿದ ಕನ್ನಡಿಗಳಾಗಿವೆ.
ಗೀತಾ ನಾಗಭೂಷಣ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟ ‘ಬದುಕು’ ವಿಶಿಷ್ಟವಾಗಿದೆ. ಲಿಂಗಾಯತ ಸಾಹುಕಾರರ ಮಗ ಲಿಂಗರಾಜು ಮತ್ತು ತಳವಾರರ ಹುಡುಗಿ ಕಾಶೆಮ್ಮ ಪ್ರೀತಿಸುತ್ತಾರೆ. ಎರಡೂ ಮನೆತನದವರು ಇವರ ಮದುವೆಗೆ ಸಮ್ಮತಿಸುವುದಿಲ್ಲ. ಕಾಶೆಮ್ಮಳ ಗಂಡ ಮಾರ್ತಾಂಡ ಕಾರ್ಮಿಕನಾಗಿದ್ದಾನೆ. ಹೆಂಡತಿಯನ್ನು ತೀವ್ರವಾಗಿ ಪ್ರೀತಿಸುತ್ತಾನೆ. ಆದರೆ ಲಿಂಗಾರಾಜನನ್ನು ಪ್ರೀತಿಸುತ್ತಿದ್ದ ಕಾಶೆಮ್ಮ, ತಾನು ಗಂಡನಿಗೆ ಮೋಸ ಮಾಡುತ್ತಿದ್ದೇನೆಂದು ಕೊರಗುತ್ತಾಳೆ. ಮುಂದೊಂದು ದಿನ ಲಿಂಗರಾಜು ಹೋಗಿ ಕಾಶೆಮ್ಮಳನ್ನು ಕರೆದುಕೊಂಡು ಬರುತ್ತಾನೆ. ಮಾರ್ತಾಂಡನ ಅದಮ್ಯ ಪ್ರೀತಿ ಆತನನ್ನು ಸನ್ಯಾಸಿಯನ್ನಾಗಿ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ‘ಬದುಕು’ ಅವರ ವಿಶಿಷ್ಟ ಕಾದಂಬರಿಯಾಗಿದೆ.