ಬಕ್ರೀದ್ ಪ್ರಯುಕ್ತ ‘ಯುಜಿ ಸಿಇಟಿ’ ಪ್ರವೇಶ ಪರೀಕ್ಷೆ ಮುಂದೂಡುವಂತೆ ಮನವಿ
ಮಂಗಳೂರು: ರಾಜ್ಯದ ವಿವಿಧ ಕಾಲೇಜುಗಳ 2020- -21ನೇ ಸಾಲಿನ ಸರಕಾರಿ ಕೋಟಾದ ವೃತ್ತಿಪರ ಕೋರ್ಸ್‍ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸುವ ಯುಜಿ ಸಿಇಟಿ ಪ್ರವೇಶ ಪರೀಕ್ಷೆಯನ್ನು ಲಾಕ್ ಡೌನ್ ಕಾರಣಕ್ಕಾಗಿ ಮುಂದೂಡಿ, ಜುಲೈ 30, 31 ಮತ್ತು ಆಗಸ್ಟ್ 1 ರಂದು ನಡೆಸುವುದೆಂದು ತೀರ್ಮಾನಿಸಲಾಗಿದೆ.
ಜುಲೈ 30 ಅಥವಾ 31 ರಂದು ರಾಜ್ಯದಲ್ಲಿ ಮುಸ್ಲಿಮರ ಪವಿತ್ರ ಹಬ್ಬ ‘ಈದುಲ್ ಅಝ್ಹಾ’ (ಬಕ್ರೀದ್) ಆಚರಿಸಲಾಗುತ್ತದೆ. ಅದೇ ದಿನ ಪರೀಕ್ಷೆ ನಡೆಸಿದಲ್ಲಿ ರಾಜ್ಯದ ಸಾವಿರಾರು ಮುಸ್ಲಿಮ್ ವಿದ್ಯಾರ್ಥಿಗಳು ಮತ್ತವರ ಕುಟುಂಬ ಪವಿತ್ರ ಹಬ್ಬಾಚರಣೆಯಿಂದ ವಂಚಿತರಾಗುತ್ತಾರೆ. ಆದ್ದರಿಂದ ಯುಜಿ ಸಿಇಟಿ ಪ್ರವೇಶ ಪರೀಕ್ಷೆಗಳ ದಿನಾಂಕಗಳನ್ನು ಮುಂದೂಡುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಆದೇಶ ನೀಡುವ ಮೂಲಕ ತುರ್ತು ಕ್ರಮಗೊಳ್ಳುವಂತೆ ಮಂಗಳೂರಿನ ಕರಿಯರ್ ಗೈಡೆನ್ಸ್ ಆಂಡ್ ಇನ್ಫೊರ್ಮೇಶನ್ ಸೆಂಟರ್ ನ ಅಧ್ಯಕ್ಷ ಉಮರ್ ಯು.ಹೆಚ್. ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ.
ಮನವಿಯ ಯಥಾಪ್ರತಿಗಳನ್ನು ಅಲ್ಪಸಂಖ್ಯಾತರ ಕಲ್ಯಾಣ, ಉನ್ನತ ಶಿಕ್ಷಣ ಮತ್ತು ವೈದ್ಯಕೀಯ ಶಿಕ್ಷಣ ಸಚಿವರುಗಳು ಹಾಗೂ ಪ್ರಧಾನ ಕಾರ್ಯದರ್ಶಿಗಳು, ಕರ್ನಾಟಕ ಅಲ್ಪಸಂಖ್ಯಾತರ ಸಚಿವಾಲಯ, ವೈದ್ಯಕೀಯ ಶಿಕ್ಷಣ ಇಲಾಖೆ; ಆಡಳಿತ ನಿರ್ದೇಶಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ; ನಿರ್ದೇಶಕರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತು ಮಾಜಿ ಸಚಿವ, ಶಾಸಕ ಯು.ಟಿ. ಖಾದರ್ ರಿಗೆ ನೀಡಲಾಗಿದೆ ಎಂದು ಉಮರ್ ಯು.ಹೆಚ್. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.