ಉ.ಪ್ರ.: 8 ಪೊಲೀಸರ ಹತ್ಯೆ ರೂವಾರಿ ವಿಕಾಸ್ ದುಬೆ ಬಂಧನಕ್ಕೆ 25ಕ್ಕೂ ಅಧಿಕ ಪೊಲೀಸ್ ತಂಡಗಳ ರಚನೆ
ಲಕ್ನೊ,ಜು.4: ತನ್ನನ್ನು ಬಂಧಿಸಲು ಬಂದಿದ್ದ ಉತ್ತರಪ್ರದೇಶ ಪೊಲೀಸರ ಮೇಲೆ ದಾಳಿ ನಡೆಸಿ 8 ಪೊಲೀಸರನ್ನು ಹತ್ಯೆಗೈದಿರುವ ಕುಖ್ಯಾತ ಕ್ರಿಮಿನಲ್ ವಿಕಾಸ್ ದುಬೆ ಹಾಗೂ ಆತನ ಸಹಚರರು ಘಟನೆ ನಡೆದು 36 ಗಂಟೆಗಳು ಕಳೆದರೂ ಯಾರ ಕೈಗೂ ಸಿಗದೆ ತಲೆಮರೆಸಿಕೊಂಡಿದ್ದಾರೆೆ. ದುಬೆಯನ್ನು ಬಂಧಿಸಲು ಉತ್ತರಪ್ರದೇಶದ ಪೊಲೀಸ್ ಇಲಾಖೆ 25ಕ್ಕೂ ಅಧಿಕ ತಂಡಗಳನ್ನು ರಚಿಸಿದೆ.
ವಿಕಾಸ್ ದುಬೆ ಹಾಗೂ ಆತನ ಸಹಚರರನ್ನು ಬಂಧಿಸಲು ಸುಮಾರು 25 ತಂಡಗಳನ್ನು ರಚಿಸಲಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಬೇರೆ ರಾಜ್ಯಗಳಿಗೂ ತೆರಳಿ ಹುಡುಕಾಟ ನಡೆಸಲಿದ್ದಾರೆ.ದುಬೆ ಇರುವಿಕೆಯ ಮಾಹಿತಿ ನೀಡಿದವರಿಗೆ 50,000 ರೂ.ಬಹುಮಾನ ನೀಡಲಾಗುವುದು ಎಂದು ಕಾನ್ಪುರದ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಮೋಹಿತ್ ಅಗರ್ವಾಲ್ ಹೇಳಿದ್ದಾರೆ.
ಕಣ್ಗಾವಲು ತಂಡ ಸುಮಾರು 500 ಮೊಬೈಲ್ ಫೋನ್‌ಗಳ ಸ್ಕಾನಿಂಗ್ ನಡೆಸುತ್ತಿದ್ದು,60 ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ದುಬೆಗೆ ಸಂಬಂಧಿಸಿದ ಮಾಹಿತಿಯನ್ನು ಕಲೆ ಹಾಕಲು ಪ್ರಯತ್ನಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.