ನಿಜವಾದ ಜನ ನಾಯಕರಿಲ್ಲದ ದೇಶ
ಭಾರತ ಅಂತಿಂಥ ದೇಶವಲ್ಲ. 130 ಕೋಟಿ ಜನರ ಹಲವಾರು ಭಾಷೆಗಳ, ಧರ್ಮಗಳ, ಸಂಸ್ಕೃತಿಗಳ, ವಿಭಿನ್ನ ರಾಷ್ಟ್ರೀಯತೆಗಳ ಒಂದು ಒಕ್ಕೂಟ ದೇಶ. ಅಂತಲೇ ನಮ್ಮ ಸಂವಿಧಾನ ನಿರ್ಮಾಪಕರು ಇದನ್ನು ಫೆಡರಲ್ ಸ್ಟೇಟ್ ಎಂದು ಕರೆದರು. ಇಂತಹ ಒಂದು ದೇಶಕ್ಕೆ ನಾಯಕನಾಗುವವನು ಯಾವುದೇ ಜಾತಿ, ಧರ್ಮ, ಪ್ರದೇಶಗಳೊಂದಿಗೆ ಗುರುತಿಸಿಕೊಳ್ಳಬಾರದು.ಎಲ್ಲ ಸಮುದಾಯಗಳನ್ನು ಒಟ್ಟಿಗೆ ಕರೆದುಕೊಂಡು ಹೋಗುವವನೇ ನಿಜವಾದ ಜನ ನಾಯಕ. ದೇಶದ ಸ್ವಾತಂತ್ರ್ಯ ಚಳವಳಿ ತೀವ್ರತೆ ಪಡೆಯಲು ಕಾರಣ ಗಾಂಧೀಜಿಯಂತಹ ಒಬ್ಬ ನಾಯಕ ಸಿಕ್ಕಿದ್ದರಿಂದ. ಗಾಂಧಿ ಬಗ್ಗೆ ಅನೇಕ ಭಿನ್ನಾಭಿಪ್ರಾಯಗಳಿರಬಹುದು. ಆದರೆ ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗುವ ನಾಯಕತ್ವದ ಗುಣ ಅವರಿಗಿತ್ತು. ಪಂಡಿತ ಜವಾಹರಲಾಲ್ ನೆಹರೂ, ಸುಭಾಷ್ ಚಂದ್ರ ಬೋಸ್, ಡಾ.ಅಂಬೇಡ್ಕರ್, ಭಗತ್ ಸಿಂಗ್, ಮೌಲಾನಾ ಅಬ್ದುಲ್ ಕಲಾಮ್ ಆಝಾದ್ ಇವರೆಲ್ಲ ನಿಜವಾದ ಜನ ನಾಯಕರಾಗಿದ್ದರು
ಕೊರೋನದ ಹೊಡೆತಕ್ಕೆ ತತ್ತರಿಸಿ ಹೋಗಿರುವ ಈ ಭವ್ಯ ಭಾರತದಲ್ಲಿ ಈಗ ಜನ ಸಮೂಹವನ್ನು ಆಕರ್ಷಿಸಿ ಮುನ್ನಡೆಸಬಲ್ಲ ನಾಯಕರ ಕೊರತೆ ಎದ್ದು ಕಾಣುತ್ತದೆ. ಜನರೇ ಇತಿಹಾಸವನ್ನು ನಿರ್ಮಿಸಿದರೂ ಕೂಡ ಆ ಜನ ಸಮೂಹವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಬಲ್ಲ ಒಬ್ಬ ಮುಖಂಡ ಇಲ್ಲವೇ ನೇತಾರರ ತಂಡ ಬೇಕಾಗುತ್ತದೆ. ಇಂತಹ ಒಂದು ಸಮರ್ಥ ತಂಡವಿದ್ದರೆ ಎಂತಹ ಸವಾಲನ್ನಾದರೂ ದೇಶ ಎದುರಿಸಿ ಗೆಲ್ಲಬಹುದು.ಸ್ವಾತಂತ್ರ್ಯ ಆಂದೋಲನದಲ್ಲಿ ಇಂತಹ ನೇತಾರರ ಒಂದು ಸಮೂಹವೇ ಇತ್ತು. ಆದರೆ ಈಗ ? ದೇಶದ ಅನೇಕರು ಭಾವಿಸಿದಂತೆ ಈಗಿರುವ ನಾಯಕರು ನಿಜವಾದ ನಾಯಕರೇ?
ಭಾರತ ಅಂತಿಂಥ ದೇಶವಲ್ಲ. 130 ಕೋಟಿ ಜನರ ಹಲವಾರು ಭಾಷೆಗಳ, ಧರ್ಮಗಳ, ಸಂಸ್ಕೃತಿಗಳ, ವಿಭಿನ್ನ ರಾಷ್ಟ್ರೀಯತೆಗಳ ಒಂದು ಒಕ್ಕೂಟ ದೇಶ. ಅಂತಲೇ ನಮ್ಮ ಸಂವಿಧಾನ ನಿರ್ಮಾಪಕರು ಇದನ್ನು ಫೆಡರಲ್ ಸ್ಟೇಟ್ ಎಂದು ಕರೆದರು. ಇಂತಹ ಒಂದು ದೇಶಕ್ಕೆ ನಾಯಕನಾಗುವವನು ಯಾವುದೇ ಜಾತಿ, ಧರ್ಮ, ಪ್ರದೇಶಗಳೊಂದಿಗೆ ಗುರುತಿಸಿಕೊಳ್ಳಬಾರದು.ಎಲ್ಲ ಸಮುದಾಯಗಳನ್ನು ಒಟ್ಟಿಗೆ ಕರೆದುಕೊಂಡು ಹೋಗುವವನೇ ನಿಜವಾದ ಜನ ನಾಯಕ. ದೇಶದ ಸ್ವಾತಂತ್ರ್ಯ ಚಳವಳಿ ತೀವ್ರತೆ ಪಡೆಯಲು ಕಾರಣ ಗಾಂಧೀಜಿಯಂತಹ ಒಬ್ಬ ನಾಯಕ ಸಿಕ್ಕಿದ್ದರಿಂದ. ಗಾಂಧಿ ಬಗ್ಗೆ ಅನೇಕ ಭಿನ್ನಾಭಿಪ್ರಾಯಗಳಿರಬಹುದು.ಆದರೆ ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗುವ ನಾಯಕತ್ವದ ಗುಣ ಅವರಿಗಿತ್ತು. ಬಾಪೂಜಿ ಮಾತ್ರವಲ್ಲದೆ ಆ ಕಾಲದ ನಾಯಕರಲ್ಲಿ ಜಾತಿ, ಮತ ನೋಡದೆ ಜನರನ್ನು ಸಮಾನವಾಗಿ ಪ್ರೀತಿಸುವ ತಾಯ್ತನವಿತ್ತು. ಪಂಡಿತ ಜವಾಹರಲಾಲ್ ನೆಹರೂ, ಸುಭಾಷ್ ಚಂದ್ರ ಬೋಸ್, ಡಾ.ಅಂಬೇಡ್ಕರ್, ಭಗತ್ ಸಿಂಗ್, ಮೌಲಾನಾ ಅಬ್ದುಲ್ ಕಲಾಮ್ ಆಝಾದ್ ಇವರೆಲ್ಲ ನಿಜವಾದ ಜನ ನಾಯಕರಾಗಿದ್ದರು.
ಸ್ವಾತಂತ್ರ್ಯ ನಂತರವೂ ಈ ಭಾರತಕ್ಕೆ ನಾಯಕರ ಕೊರತೆ ಇರಲಿಲ್ಲ. ಸಂಸತ್ತಿನಲ್ಲಿ ಪ್ರಧಾನಿ ನೆಹರೂಗೆ ಸರಿ ಸಾಟಿಯಾಗಿ ನಿಂತು ವಾದಿಸಬಲ್ಲ ಸೋಷಲಿಸ್ಟ್ ನಾಯಕರಾದ ರಾಮ ಮನೋಹರ ಲೋಹಿಯಾ, ನಾಥ ಪೈ ಅಶೋಕ ಮೆಹತಾ, ಕಮ್ಯುನಿಸ್ಟ್ ನಾಯಕರಾಗಿದ್ದ ಶ್ರೀಪಾದ ಅಮೃತ ಡಾಂಗೆ, ಎ.ಕೆ. ಗೋಪಾಲನ್, ಭೂಪೇಶ ಗುಪ್ತ, ಪ್ರೊ.ಹಿರೇನ್ ಮುಖರ್ಜಿ, ಸ್ವತಂತ್ರ ಪಕ್ಷದ ಎನ್.ಜಿ. ರಂಗಾ, ಮೀನೂ ಮಸಾನಿ ಅವರಂಥ ಘಟಾನುಘಟಿಗಳಿದ್ದರು. ಲೋಹಿಯಾರಂಥವರು ಮಾತಾಡಲು ನಿಂತರೆ ಪ್ರಧಾನಿ ನೆಹರೂ ಸದನದ ಎಸಿ ವ್ಯವಸ್ಥೆಯಲ್ಲೂ ಬೆವರುತ್ತಿದ್ದರು. ಆದರೆ ಪ್ರತಿಪಕ್ಷ ನಾಯಕರನ್ನು ಅವರು ಎಂದೂ ಶತ್ರುಗಳಂತೆ ನೋಡಲಿಲ್ಲ. ತಮ್ಮನ್ನು ಟೀಕಿಸುವ ಲೋಹಿಯಾ, ಭೂಪೇಶ ಗುಪ್ತರಂತಹವರನ್ನು ನೆಹರೂ ಇಷ್ಟ ಪಡುತ್ತಿದ್ದರು. ಪ್ರಜಾಪ್ರಭುತ್ವ ಆರೋಗ್ಯಕರವಾಗಿರಬೇಕೆಂದರೆ ಸಮರ್ಥ ಪ್ರತಿಪಕ್ಷ ನಾಯಕರು ಸದನದಲ್ಲಿ ಇರಬೇಕೆಂದು ಬಯಸುತ್ತಿದ್ದರು. ಅಂತಲೇ ಲೋಹಿಯಾ ವಿರುದ್ಧ ಕಾಂಗ್ರೆಸ್ ನಿಂದ ದುರ್ಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿದ್ದರು. ಹೀಗೆ ಭಾರತದ ಪ್ರಜಾಪ್ರಭುತ್ವವನ್ನು ಬಾಬಾ ಸಾಹೇಬರು, ನೆಹರೂ, ಮುಂತಾದವರು ಸೇರಿ ಕಟ್ಟಿದರು.
ಸ್ವಾತಂತ್ರ್ಯ ಚಳವಳಿಯಲ್ಲಾಗಲಿ ನಂತರದ ಮೂರು ದಶಕಗಳಲ್ಲಾಗಲಿ ಜನ ನಾಯಕರೆನ್ನುವವರು ಜನತೆಯ ನಡುವಿನಿಂದ ಬರುತ್ತಿದ್ದರು. ಜನ ಹೋರಾಟಗಳ ನಡುವಿನಿಂದ ಮೇಲೆದ್ದು ಬರುತ್ತಿದ್ದರು. ಇಂದಿರಾ ಗಾಂಧಿ ಕಾಲದಲ್ಲಿ ಬಂದ ಜಾರ್ಜ್ ಫರ್ನಾಂಡೀಸ್, ಮಧು ಲಿಮಯೆ, ಮಧು ದಂಡವತೆ, ಎಕೆಜಿ, ಜ್ಯೋತಿರ್ಮಯ ಬಸು, ಸಮರ ಮುಖರ್ಜಿ ಇವರೂ ಕೂಡ ಹೀಗೆ ಸಂಘರ್ಷದ ಸಮರ ಭೂಮಿಯಲ್ಲಿ ಅರಳಿದವರು.ಅಟಲ್ ಬಿಹಾರಿ ವಾಜಪೇಯಿ, ಜಗನ್ನಾಥ ರಾವ್ ಜೋಶಿ ಅವರ ಬಗ್ಗೆ ಎಷ್ಟೇ ತಾತ್ವಿಕ ಭಿನ್ನಾಭಿಪ್ರಾಯಗಳಿದ್ದರೂ ಅವರು ಉತ್ತಮ ವಾಕ್ಪಟುಗಳಾಗಿದ್ದರು. ಅಂತಲೇ ಸಂಸತ್ತಿನ ಚರ್ಚೆಗಳು ಆಗ ಘನತೆಯಿಂದ ಕೂಡಿರುತ್ತಿದ್ದವು.
ಕರ್ನಾಟಕದಲ್ಲಿ ಸಿದ್ಧವನಹಳ್ಳಿ ನಿಜಲಿಂಗಪ್ಪ, ಬಿ.ಡಿ.ಜತ್ತಿ,. ಕೆಂಗಲ್ ಹನುಮಂತಯ್ಯ, ಕೆ.ಸಿ.ರೆಡ್ಡಿ, ದೇವರಾಜ ಅರಸು, ನಾಗಪ್ಪಆಳ್ವಾ, ವೈಕುಂಠ ಬಾಳಿಗಾ, ಜಾಫರ್ ಶರೀಫ್, ಅಜೀಜ್ ಸೇಠ್, ಬಿ.ಎಂ. ಇದಿನಬ್ಬ , ಬಂಗಾರಪ್ಪ ಅವರಂತಹ ನಾಯಕರಿದ್ದರು. ಪ್ರತಿಪಕ್ಷಗಳ ಸಾಲಿನಲ್ಲಿ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರು, ಎಸ್. ಶಿವಪ್ಪ ಕಮ್ಯುನಿಸ್ಟರಾದ ಬಿ.ವಿ. ಕಕ್ಕಿಲ್ಲಾಯ, ಎಂ.ಎಸ್. ಕೃಷ್ಣನ್, ಸೂರ್ಯನಾರಾಯಣರಾವ್, ಪಂಪಾಪತಿ, ವಿ.ಎನ್. ಪಾಟೀಲ, ಕೃಷ್ಣ ಶೆಟ್ಟಿ ಮುಂತಾದವರು ಎದ್ದು ಕಾಣುತ್ತಿದ್ದರು. ಇವರೆಲ್ಲರೂ ಜನತೆಯ ನಡುವಿನಿಂದ ಬಂದವರು ದಾವಣಗೆರೆಯ ಜವಳಿ ಗಿರಣಿಯಲ್ಲಿ ಕಾರ್ಮಿಕನಾಗಿದ್ದ ಕಾಮ್ರೇಡ್ ಪಂಪಾಪತಿ ಜಾತಿ ಬಲ, ದುಡ್ಡಿನ ಬಲವಿಲ್ಲದೆ ಮೂರು ಬಾರಿ ಶಾಸಕರಾಗಿ ಗೆದ್ದು ಬಂದರು. ಪಂಪಾಪತಿ ಯಾರನ್ನೂ ಜಾತಿ, ಮತ ಭಾಷೆಯನ್ನು ನೋಡಿ ಪ್ರೀತಿಸಲಿಲ್ಲ. ಜನರೂ ಅವರನ್ನು ಜಾತಿಮತ ನೋಡದೆ ಘಟಾನುಘಟಿ ಸಿರಿವಂತರನ್ನು ಸೋಲಿಸಿ ವಿಧಾನ ಸಭೆಗೆ ಗೆಲ್ಲಿಸಿ ಕಳಿಸುತ್ತಿದ್ದರು.
ಆದರೆ ಎಂಬತ್ತರ ದಶಕದ ಕೊನೆಯಲ್ಲಿ ಎಲ್ಲವೂ ಬದಲಾಯಿತು. ಜಾಗತೀಕರಣದ ನವ ಉದಾರವಾದಿ ಆರ್ಥಿಕತೆಯನ್ನು ಆಳುವ ವರ್ಗ ದೇಶದ ಮೇಲೆ ಹೇರಿದ ನಂತರ ಅದಕ್ಕೆ ಪೂರಕವಾಗಿ ಕೋಮುವಾದದ ಕಾಯಿಲೆಯೂ ಉಲ್ಬಣಿಸಿತು. ಅಯೋಧ್ಯೆಯ ರಾಮ ಮಂದಿರ ರಥಯಾತ್ರೆ ಮತ್ತು ಜಾಗತೀಕರಣದ ಚೈತ್ರ ಯಾತ್ರೆಗಳು ಒಟ್ಟೊಟ್ಟಿಗೆ ಬಂದವು. ದೇಶವನ್ನು ದರೋಡೆ ಮಾಡುವ ಜಾಗತೀಕರಣದ ನೀತಿಯನ್ನು ವಿರೋಧಿಸಬೇಕಾದ ಜನ ಜಾತಿ, ಮತಗಳ ಆಧಾರದಲ್ಲಿ ವಿಭಜನೆಗೊಂಡರು. ಶ್ರಮಜೀವಿ ವರ್ಗವೂ ಒಂದಾಗಿ ಉಳಿಯಲಿಲ್ಲ. ಮಂದಿರ ನಿರ್ಮಾಣದ ಜೊತೆ ಜೊತೆಗೆ ಹಿಂದೂ ರಾಷ್ಟ್ರನಿರ್ಮಾಣದ ಘೋಷಣೆ ಕೇಳಿಬಂತು. ಅಷ್ಟರಲ್ಲಿ ಭಾರತದಲ್ಲಿ ಹೊಸ ಪೀಳಿಗೆ ಕಣ್ಣು ತೆರೆಯತೊಡಗಿತ್ತು. ಅದೇ ಪೀಳಿಗೆಗೆ ಬಲೆ ಬೀಸಿದ ಕೋಮುವಾದಿ ಶಕ್ತಿಗಳು ಈಗ ಅಧಿಕಾರ ಹಿಡಿದು ಕೂತಿದ್ದಾರೆ. ಕೋಮುವಾದಿ ಸಂಘಟನೆಗಳ, ಪಕ್ಷಗಳ ನಾಯಕರು ಎಲ್ಲ ಭಾರತೀಯರನ್ನು ಒಂದಾಗಿ ಕೂಡಿಸಿಕೊಂಡು ಜೊತೆಗೆ ಕರೆದುಕೊಂಡು ಹೋಗುವ ನಾಯಕರಲ್ಲ. ಇವರು ಒಂದು ಬಹುಸಂಖ್ಯಾತ ಸಮುದಾಯದಲ್ಲಿ ಹುಸಿ ಭೀತಿಯನ್ನು ಉಂಟು ಮಾಡಿ ನಾಯಕರಾದವರು. ಇವರೊಂದಿಗೆ ಇವರನ್ನು ಸಾಕುವ ಕಾರ್ಪೊರೇಟ್ ಬಂಡವಾಳಶಾಹಿಗಳು, ರಿಯಲ್ ಎಸ್ಪೇಟ್ ಮಾಫಿಯಾಗಳು, ಮೈನಿಂಗ್ ಖದೀಮರು ಸೇರಿದ್ದಾರೆ.ಇದು ಭಾರತದ ಇಂದಿನ ದುರಂತ.
ಕೊರೋನ ಬರುವುದಕ್ಕಿಂತ ಮುಂಚೆ ಇವರೆಲ್ಲ ಎರಡು ಚುನಾವಣೆಗಳನ್ನು ಹೇಗೆ ಗೆದ್ದರು ಎಂಬುದು ಎಲ್ಲರಿಗೂ ಗೊತ್ತಿದೆ. ಎರಡನೇ ಬಾರಿ ಅಧಿಕಾರಕ್ಕೆ ಬಂದ ನಂತರ ದೇಶವನ್ನು ಆರ್ಥಿಕವಾಗಿ ದಿವಾಳಿಯ ಅಂಚಿಗೆ ತಂದು ನಿಲ್ಲಿಸಿದರು. ಪೌರತ್ವ ಕಾಯ್ದೆಗೆ ತಿದ್ದುಪಡಿ ತಂದು ಭಾರತೀಯರಲ್ಲೇ ಒಂದು ಸಮುದಾಯದ ಜನರನ್ನು ಹಿಟ್ಲರ್ ಮಾದರಿಯ ಡಿಟೆನ್ಷೆನ್ ಸೆಂಟರ್‌ಗಳಿಗೆ ದಬ್ಬಲು ಹೊಂಚು ಹಾಕಿದ್ದರು. ದೇಶ ಒಡೆಯುವ ಈ ಹುನ್ನಾರದ ವಿರುದ್ಧ ಜನತೆ ಹೋರಾಟಕ್ಕೆ ಇಳಿದಿದ್ದರು. ಪ್ರತಿ ಊರಲ್ಲೂ ಶಾಹೀನ್‌ಬಾಗ್‌ಗಳು ತಲೆ ಎತ್ತುತ್ತಿದ್ದವು.ಅದನ್ನು ವಿಫಲಗೊಳಿಸಲು ದಿಲ್ಲಿಯಲ್ಲಿ ಕೋಮು ದಂಗೆ ಸೃಷ್ಟಿಸಿ ಅಮಾಯಕರನ್ನು ಕೊಂದರು.ಆದರೆ ಅಷ್ಟರಲ್ಲಿ ಕೊರೋನ ಬಂದು ಇವರಿಗೆ ಮತ್ತೆ ಜೀವದಾನ ನೀಡಿತು.ಅದನ್ನೇ ಬಳಸಿಕೊಂಡು ಜನ ವಿರೋಧಿ ಕಾಯ್ದೆಗಳನ್ನು ಹೇರುತ್ತಿದ್ದಾರೆ.
ಒಂದು ಕಾಲದಲ್ಲಿ ಸಂಸತ್ತಿನ ಉಭಯ ಸದನಗಳಲ್ಲಿ ಜನಪರ ಹೋರಾಟಗಾರರು, ತ್ಯಾಗ ಜೀವಿಗಳು, ವಿದ್ವಾಂಸರು, ವಾಕ್ಪಟುಗಳು, ಕಾನೂನು ಪರಿಣಿತರು ತುಂಬಿರುತ್ತಿದ್ದರು. ಈಗ ಉದ್ಯಮಪತಿಗಳು, ಮೈನಿಂಗ್ ಮಾಫಿಯಾಗಳು, ರಿಯಲ್ ಎಸ್ಟೇಟ್ ದಗಾಕೋರರು, ಕೊಲೆ ಆರೋಪ ಹೊತ್ತವರು, ನಕಲಿ ಎನ್ ಕೌಂಟರ್ ಕ್ರಿಮಿನಲ್‌ಗಳು ತುಂಬಿದ್ದಾರೆ. ಪ್ರತಿಪಕ್ಷಗಳು ದುರ್ಬಲ ಗೊಂಡಿವೆ. ಹಿಂದೆ ಲೋಹಿಯಾ ಅಂತಹವರು ಸಂಸತ್ತಿಗೆ ಬರಲೆಂದು ನೆಹರೂ ಕಾಂಗ್ರೆಸ್‌ನಿಂದ ದುರ್ಬಲ ಅಭ್ಯರ್ಥಿಯನ್ನು ನಿಲ್ಲಿಸುತ್ತಿದ್ದರು. ಈಗ ಮಲ್ಲಿಕಾರ್ಜುನ ಖರ್ಗೆಯವರಂತಹ ಸಮರ್ಥ ವಾಕ್ಪಟುಗಳು ಲೋಕಸಭೆಗೆ ಬರಬಾರದೆಂದು ಹಣ ನೀರಿನಂತೆ ಸುರಿದು, ಜಾತಿ ರಾಜಕೀಯ ಮಾಡಿ ಅವರನ್ನು ಸೋಲಿಸಲಾಗಿದೆ.
ಈಗ ಅಂಬಾನಿ, ಅದಾನಿ ಕೃಪಾ ಪೋಷಿತ ನಾಯಕರೇ ಜನ ನಾಯಕರಾಗಿದ್ದಾರೆ. ಮಾಧ್ಯಮಗಳ ಮೂಲಕ ಇಂದಿನ ನಾಯಕರ ಇಮೇಜು ವರ್ಧನೆ ಕೆಲಸ ಅವಿರತವಾಗಿ ನಡೆದಿದೆ. ಎಲ್ಲ ಭಾರತೀಯರು ಪ್ರೀತಿಸುವ, ಎಲ್ಲ ಭಾರತೀಯರನ್ನು ಜಾತಿ,ಮತ ನೋಡದೇ ಪ್ರೀತಿಸುವ ನೇತಾರರು ಇವರಲ್ಲ. ಕೊರೋನ ಬಂದರೆ ಬಂಗಲೆ ಬಿಟ್ಟು ಹೊರಗೆ ಬಾರದ ಸದಾ ಕಿರು ತೆರೆಗಳಲ್ಲಿ ಅಬ್ಬರಿಸುವ ಇವರು ಜನ ನಾಯಕರಲ್ಲ, ಹಾಗೆಂದು ಭ್ರಮೆ ಮೂಡಿಸಿದವರು.
ನಿಜವಾದ ಜನ ನಾಯಕರು ಇಲ್ಲವೆಂದಲ್ಲ. ಅಂತಹವರು ಹೊಸ ಪೀಳಿಗೆಯಿಂದ ಬರುತ್ತಿದ್ದಾರೆ. ಬಿಹಾರದ ಬೆಗುಸರಾಯ್‌ನ ಕನ್ಹಯ್ಯ ಕುಮಾರ್, ಗುಜರಾತಿನ ಜಿಗ್ನೇಶ್ ಮೇವಾನಿ,ಉತ್ತರ ಪ್ರದೇಶದ ಚಂದ್ರಶೇಖರ ಆಝಾದ್ ಇಂತಹವರು ಭರವಸೆ ಮೂಡಿಸುತ್ತಿದ್ದಾರೆ. ಈ ಕೊರೋನ ಕಾಲದಲ್ಲೂ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್,ಆ ರೋಗ್ಯ ಸಚಿವೆ ಶೈಲಜಾ ಟೀಚರ್, ದೇಶದ ಗಮನವನ್ನು ಸೆಳೆದಿದ್ದಾರೆ. ಜನ ಹೋರಾಟಗಳು ತೀವ್ರಗೊಂಡಂತೆ ಹೊಸ ನಾಯಕರು ಬರುತ್ತಾರೆ. ಚಳವಳಿಗಳೇ ನಾಯಕರನ್ನು ಸೃಷ್ಟಿಸುತ್ತವೆ.