ಈ ಕಾರಣಕ್ಕಾಗಿ ಅರುಣ್ ಜೇಟ್ಲಿ ಜೊತೆ ಅಸಮಾಧಾನ ಹೊಂದಿದ್ದ ಮನೋಹರ್ ಪಾರಿಕ್ಕರ್
ಹೊಸ ಪುಸ್ತಕದಲ್ಲಿ ಮಾಜಿ ರಕ್ಷಣಾ ಸಚಿವರ ಕುರಿತು ಹಲವು ಕುತೂಹಲಕಾರಿ ಸಂಗತಿಗಳು
ಹೊಸದಿಲ್ಲಿ: ಸದ್ಯದಲ್ಲಿಯೇ ಬಿಡುಗಡೆಗೊಳ್ಳಲಿರುವ ಮಾಜಿ ರಕ್ಷಣಾ ಸಚಿವ ಹಾಗೂ ಮಾಜಿ ಗೋವಾ ಸಿಎಂ ಮನೋಹರ್ ಪಾರಿಕ್ಕರ್ ಅವರ ಜೀವನಚರಿತ್ರೆ an extraordinary life ದಿವಂಗತ ರಾಜಕೀಯ ನಾಯಕನ ಜೀವನದ ಹಲವು ಮಜಲುಗಳನ್ನು ದೇಶದ ಜನರೆದುರು ಇಡಲಿದೆ. ಈ ಕೃತಿಯನ್ನು ಹಿರಿಯ ಪತ್ರಕರ್ತರಾದ ಸದ್ಗುರು ಪಾಟೀಲ್ ಹಾಗೂ ಮಾಯಾಭೂಷಣ್ ನಾಗ್ವೆನ್ಕರ್ ಬರೆದಿದ್ದಾರೆ.
“ಪರಿಕ್ಕರ್ ಅವರು 2014ರಲ್ಲಿ ಕೇಂದ್ರ ಸಚಿವ ಸಂಪುಟವನ್ನು ಸೇರುವುದಕ್ಕಿಂತ ಮುಂಚೆ ಪ್ರಧಾನಿ ಕಚೇರಿ ಅವರಿಗೆ ಮೂರು ಬಾರಿ ಕರೆ ಮಾಡಿತ್ತು, ಕೊನೆಗೆ ಪಾರಿಕ್ಕರ್ ಅವರು ಒಲ್ಲದ ಮನಸ್ಸಿನಿಂದ ಆ ವರ್ಷದ ನವೆಂಬರ್ ತಿಂಗಳಲ್ಲಿ ಸಚಿವ ಹುದ್ದೆ ಒಪ್ಪಿಕೊಂಡಿದ್ದರು. ರಕ್ಷಣಾ ಸಚಿವರಾಗಿ ಅವರ ಅವಧಿ ಸ್ಮರಣಾರ್ಹವಾಗಿದ್ದರೂ ಪಾರಿಕ್ಕರ್ ಅವರ ಖಾಸಗಿ ಜೀವನ ‘ತ್ರಾಸದಾಯಕ' ಹಾಗೂ ‘ಒಂಟಿತನ'ದಿಂದ ಕೂಡಿತ್ತು. ದಿಲ್ಲಿಯ ಮಾಲಿನ್ಯ ಹಾಗೂ ದರ್ಬಾರಿ ಸಂಸ್ಕೃತಿ, ಸ್ನೇಹಿತರ ಕೊರತೆ ಹಾಗೂ ಗೋವಾದ ಮೀನಿನ ಕೊರತೆಯಿಂದಾಗಿ ಅವರು ರಾಜಧಾನಿಯನ್ನು ದ್ವೇಷಿಸುತ್ತಿದ್ದರು'' ಎಂದು ಈ ಕೃತಿಯಲ್ಲಿ ವಿವರಿಸಲಾಗಿದೆ.
ಆಗಿನ ವಿತ್ತ ಸಚಿವ ಅರುಣ್ ಜೇಟ್ಲಿ ಜತೆ ಪಾರಿಕ್ಕರ್ ಅಷ್ಟೊಂದು ಉತ್ತಮ ಸಂಬಂಧವನ್ನು ಹೊಂದಿರಲಿಲ್ಲ ಹಾಗೂ ಜೇಟ್ಲಿ ಸೇನೆಯ ‘ಒಂದು ರ್ಯಾಂಕ್ ಒಂದು ಪೆನ್ಶನ್' ಯೋಜನೆ ಜಾರಿಯನ್ನು ಮುಂದೂಡುತ್ತಿದ್ದರೆಂದು ಪಾರಿಕ್ಕರ್ ಆರೋಪಿಸಿದ್ದರು. ಭಾರತ 2016ರಲ್ಲಿ ಸರ್ಜಿಕಲ್ ದಾಳಿ ನಡೆಸಿದ ಇಡೀ ರಾತ್ರಿ ಪಾರಿಕ್ಕರ್ ನಿದ್ದೆಯನ್ನೇ ಮಾಡಿರಲಿಲ್ಲ ಹಾಗೂ ದಾಳಿ ಯಶಸ್ವಿಯಾಯಿತೆಂದು ತಿಳಿಯುತ್ತಲೇ ಅವರು ತಮ್ಮ ಪುತ್ರ ಉತ್ಪಲ್ ಗೆ ಕರೆ ಮಾಡಿ ``ಪಾಕಿಸ್ತಾನದ ಉಡಾಯ್ಲೊ'' (ಪಾಕಿಸ್ತಾನವನ್ನು ಕೆಳಕ್ಕೆ ಬೀಳಿಸಿದ್ದೇವೆ) ಎಂದು ಉದ್ಘರಿಸಿದ್ದರೆಂಬುದನ್ನು ಕೃತಿಯಲ್ಲಿ ಹೇಳಲಾಗಿದೆ.
ರಫೇಲ್ ಕಡತದ ಕುರಿತು: ಜನವರಿ 2019ರಲ್ಲಿ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ ಕುತೂಹಲಕಾರಿ ಮಾಹಿತಿಯೊಂದನ್ನು ಹೊರಹಾಕಿದ್ದರು. ವಿವಾದಾಸ್ಪದ ರಫೇಲ್ ಒಪ್ಪಂದದ ಕುರಿತಾದ ಕಡತಗಳು ಪಾರಿಕ್ಕರ್ ಅವರ ಬೆಡ್‍ರೂಂನಲ್ಲಿವೆ ಎಂದು ಅವರು ಹೇಳಿಕೊಂಡಿದ್ದರು. ಅದಕ್ಕೆ ಪುರಾವೆಯೆಂಬಂತೆ ಒಬ್ಬ ಅನಾಮಿಕ ಪತ್ರಕರ್ತ ಹಾಗೂ ಗೋವಾ ಆರೋಗ್ಯ ಸಚಿವ ವಿಶ್ವಜೀತ್ ರಾಣೆ ನಡುವಿನ ಸಂಭಾಷಣೆಯಲ್ಲಿ ರಾಣೆ ಮೇಲಿನಂತೆ ಹೇಳಿದ್ದಾರೆನ್ನಲಾದ ಧ್ವನಿಮುದ್ರಿಕೆಯನ್ನೂ ತಮ್ಮ ಪಕ್ಷ ಹೊಂದಿದೆ ಎಂದಿದ್ದರು.
ಆದರೆ ಪಾರಿಕ್ಕರ್ ಅವರ ಜೀವನಚರಿತ್ರೆ ಬರೆದಿರುವ ಲೇಖಕರು ಹೇಳುವಂತೆ ಕಾಂಗ್ರೆಸ್ ಆರೋಪ ಕುರಿತಂತೆ ಪಾರಿಕ್ಕರ್ ಏಕೆ ಪ್ರತಿಕ್ರಿಯಿಸುತ್ತಿಲ್ಲ ಎಂದು ಹಲವರು ಅವರನ್ನು ಕೇಳಿದ್ದಕ್ಕೆ, ಅದರ ಅಗತ್ಯವಿರಲಿಲ್ಲ ಹಾಗೂ ಎಲ್ಲಾ ಮಾಹಿತಿ ಇಲ್ಲಿದೆ ಎಂದು ಪಾರಿಕ್ಕರ್ ಹೇಳಿದ್ದರು. ಅಂದರೆ ಎಲ್ಲಾ ಮಾಹಿತಿ `ತಮ್ಮ ಮನಸ್ಸಿನಲ್ಲಿದೆ' ಎಂಬ ಅರ್ಥದಲ್ಲಿ ಪಾರಿಕ್ಕರ್ ಹಾಗೆ ಹೇಳಿದ್ದರೆಂದು ಅವರ ಸಹೋದ್ಯೋಗಿಯೊಬ್ಬರು ಹೇಳಿದ್ದರೂ, ವಿಶ್ವಜೀತ್ ರಾಣೆ ಅವರು ಅದನ್ನು `ಕಡತಗಳು ಪಾರಿಕ್ಕರ್ ಅವರ ಬೆಡ್ ರೂಂನಲ್ಲಿದೆ' ಎಂದು ಹೇಳಿ ವಿವಾದ ಸೃಷ್ಟಿಸಿದ್ದರೆಂದು ಹೇಳಲಾಗಿದೆ.