ಅವರೆಕಾಯಿಯ ಐಭೋಗ
ಹಸಿ ಅವರೆಕಾಯಿ ಸೀಜನ್ ಬಂತು ಅಂದರೆ ಮನೆ ಮನೆಯಲ್ಲೂ ಅವರೆಕಾಯಿ ಮಾಯ. ಹೊಲದಿಂದ ಹಿಡಿದು ಸಾಗಿಸುವ ವ್ಯಾನುಗಳಲ್ಲಿ, ಮಾರುಕಟ್ಟೆಯಲ್ಲಿ, ಬೀದಿಬೀದಿಯ ಅಂಗಡಿ ಮುಂಗಟ್ಟುಗಳಲ್ಲಿ, ಕೈಗಾಡಿಗಳಲ್ಲಿ ಎಲ್ಲಿ ನೋಡಿದರಲ್ಲಿ ಅವರೆಕಾಯಿ. ಬೆಳಗ್ಗೆಯೋ ಸಂಜೆಯೋ ಬೀದಿಯಲ್ಲಿ ನಡೆದುಹೋದರೆ ಹಿದುಕಿದ ಅವರೆಯ ಸಿಪ್ಪೆಕಣ್ಣಿಗೆ ಕಾಣದಿದ್ದರೆ ಕೇಳಿ! ಹಸಿ ಅವರೆಕಾಯಿ ಉಳಿದ ಕಾಳುಗಳಿಗಿಂತ ತುಸು ಹೆಚ್ಚೇ ಹೆಸರು ಮಾಡಿದ ಹಸಿಕಾಯಿ. ಹಸಿ ತೊಗರಿಕಾಯಿ, ಹಸಿ ಅಲಸಂದೆಕಾಯಿ ಸಿಗುತ್ತವೆಯಾದರೂ ಇದರಂತೆ ಟ್ರೆಂಡ್ ಮಾಡಲು ಸಾಧ್ಯವಾಗಿಲ್ಲ. ಹಾಗೆಯೇ ಇದರಷ್ಟು ವಿವಿಧ ರೀತಿಯ ಅಡುಗೆಯ ಪ್ರಯೋಗಗಳಿಗೆ ತುತ್ತಾದ ಕಾಯಿ ಮತ್ತೊಂದಿಲ್ಲ. ಸಸ್ಯಾಹಾರ, ಮಾಂಸಾಹಾರ, ಕುರುಕು ತಿಂಡಿ ಇತ್ಯಾದಿಯಾಗಿ ಎಲದಕ್ಕೂ ಸಿದ್ದ ಮತ್ತು ರುಚಿಬದ್ಧ. ಅವರೆಕಾಳಿನ ಅಡಿಗೆ ಅಮೇಲೆ ನೋಡೋಣ. ಮೊದಲು ಅವರೆಕಾಯಿಯ ಮಾತು ಆಡೋಣ.. ಹಿಂಗಾರು ಬಿದ್ದಾಗ ನಮ್ಮ ಹೊಲಗಳಲ್ಲಿ ಬಿತ್ತುವ ಅವರೆಕಾಯಿ ಡಿಸೆಂಬರ್ ವೇಳೆಗೆ ಕುಯಿಲಿಗೆ ಬರುತ್ತದೆ. ಸಂಕ್ರಾಂತಿ ಹಬ್ಬದಲ್ಲಿ ಅವರೆಕಾಯಿಯ ಸಾರು, ಪಲ್ಯಗಳು ಇದ್ದೇ ಇರುತ್ತವೆ. ಆಮೇಲೆ ನಿಧಾನಕ್ಕೆ ಯುಗಾದಿ ವೇಳೆಗೆ ಕಣ್ಮರೆಯಾಗುತ್ತದೆ. ಮತ್ತೆ ಚಳಿಗಾಲಕ್ಕೆ ಕಾಯಬೇಕು. ಕೆಲವು ಕಡೆ ವರ್ಷದ ಎಲ್ಲಾ ಋತುಮಾನಗಳಲ್ಲೂ ಬೆಳೆಯುವುದು ಉಂಟು. ಆದರೆ ಸಾರ್ವತ್ರಿಕವಾದ ಬೆಲೆ ಸಮಯ ಹಿಂಗಾರಿನ ನಂತರವೇ. ಹಳ್ಳಿಯ ಹೆಂಗಸರಿಗೆ ಅವರೆಕಾಯಿ ಸೊಗಡು ಬಹಳ ಇಷ್ಟ. ಗಂಡಸರು ಅಪ್ಪಿತಪ್ಪಿಸೊಗಡಿನ ವಾಸನೆ ಇಲ್ಲದ ಅವರೆಕಾಯಿ ತಂದರೆ ಬೈಗುಳ ತಪ್ಪಿದ್ದಲ್ಲ. ಕೆಲವರಂತೂ ಅಂತಹದನ್ನು ಸಹಿಸದೆ ತಾವೇ ಸ್ವತಃ ಮಾರುಕಟ್ಟೆ ಅಥವಾ ಸಂತೆಗೆ ಹೋಗಿ ತರುತ್ತಾರೆ. ಅವರೆಕಾಯಿ ಬರಿಯ ಕಾಳು ಆಗಿ ಉಳಿದಿಲ್ಲ. ಅದು ಜನರ ಬದುಕಿನ ಜೊತೆಗೆ ಬೆರೆತು ಹೋಗಿದೆ. ಸೀಜನ್‌ಬಂದಾಗ ನೆಂಟನನ್ನು ನೋಡಿಕೊಳ್ಳುವ ಹಾಗೆ ಅವರೆಯನ್ನು ಮನೆಗೆ ಕರೆತರುತ್ತಾರೆ. ಅದರಿಂದ ನಾನಾ ರೀತಿಯ ಅಡುಗೆಗಳನ್ನು ಮಾಡಿ ತಿಂದು ಖುಷಿಯಾಗಿರುತ್ತಾರೆ. ಈ ಋತುಮಾನ ಬಂತು ಎಂದರೆ ಎಲ್ಲರ ಮನೆಯಲ್ಲಿ ಬರಿ ಅವರೆಯದ್ದೇ ಮಾತು. ಕಾಳು ದಪ್ಪನಾಗಿ ಬಲಿತ ಅವರೆ ಸೊಗಡಿನ ವಾಸನೆಯ ಕಾಯಿ ಬಿಡಿಸುತ್ತಲೇ ದಪ್ಪಕಾಳುಗಳು ಹಿದುಕಿದ ಬೇಳೆಗೂ, ಸಣ್ಣ ಕಾಯಿಗಳು ಸಾರು, ಪಲ್ಯ ಇತ್ಯಾದಿಗಳಿಗೂ ಎಂದು ವಿಭಾಗವಾಗುತ್ತವೆ. ಏನು? ಒಬ್ಬರೇ ಕೂತು ಕಾಯಿ ಬಿಡಿಸುವುದಿಲ್ಲ, ಕೆಲವು ಕಡೆ ಇಡೀ ಕುಟುಂಬ ಕುಳಿತರೆ, ಇನ್ನು ಕೆಲವೆಡೆ ಬೀದಿಯ ಹೆಂಗಸರು, ಮಕ್ಕಳು ಸೇರಿಕೊಳ್ಳುತ್ತಾರೆ. ಅವರೆಕಾಯಿ ಮುಟ್ಟುವ ಚಪಲ ಯಾರಿಗಿಲ್ಲ ಹೇಳಿ. ಸೊಗಡಿನ ವಾಸನೆಯನ್ನು ಕಂಡು ಮೂಗು ಮುಚ್ಚಿಕೊಳ್ಳುವವರು ಕೂಡ ಒಮ್ಮೆಯಾದರು ಮುಟ್ಟಬೇಕು ಎಂದು ಬಯಸುತ್ತಾರೆ. ನುಣುಪಾದ ಮೇಲ್ಮೈನ ಕಾಳುಗಳಂತೂ ಒಳ್ಳೆಯ ಮುತ್ತಿನ ಮೊಟ್ಟೆಗಳಂತೆ ಭಾಸವಾಗುತ್ತವೆ. ಬಿಡಿಸಿಕೊಳ್ಳುವಾಗಲೇ ಸಣ್ಣ ದಪ್ಪವಿಭಾಗಿಸಿಕೊಂಡು ದಪ್ಪನಾದ ಕಾಳುಗಳನ್ನು ನೀರಿನಲ್ಲಿ ನೆನೆಹಾಕಿ, ಮತ್ತೆ ಇನ್ನೊಂದು ಸೆಶನ್‌ನಲ್ಲಿ ನಿಧಾನಕ್ಕೆ ಹಿದುಕಿ ಸಿಪ್ಪೆಯನ್ನು ತೆಗೆದು ಕಾಯಿಯನ್ನು ಉಳಿಸಿಕೊಂಡು ಅಡುಗೆಗೆ ಬಳಸಲಾಗುತ್ತದೆ. ಹಿದುಕಿದ ಅವರೆಕಾಯಿ ಬಹಳಷ್ಟು ಜನರಿಗೆ ಪಂಚಪ್ರಾಣ. ಅಕ್ಕಿ ಅಥವಾ ದಪ್ಪರವೆಯ ಉಪ್ಪಿಟ್ಟಿಗೆ, ಚಿತ್ರಾನ್ನದ ಒಗ್ಗರಣೆಗೆ, ನಾನಾ ತರಹದ ಸಾರುಗಳಿಗೆ ಬಳಸಬಹುದು. ಅಷ್ಟೇಕೆ ದೋಸೆಯ ಸಂಪಣದ ಜೊತೆಗೆ ಅರೆದು ಹಾಕಿ ಅವರೆ ದೋಸೆ ಮಾಡಬಹುದು. ಅಕ್ಕಿ ಹಿಟ್ಟಿನ ಜೊತೆಗೆ ಕಲಸಿ ಅವರೆಕಾಯಿ ಅಕ್ಕಿರೊಟ್ಟಿ ಮಾಡಬಹುದು. ಮಸಾಲೆ ಜೊತೆಗೆ ತುರಿಯಾಗಿ ರುಬ್ಬಿಕೊಂಡು ವಡೆ ಮಾಡಬಹುದು. ಕೈಯಲ್ಲಿ ಹೊಸಕಿ ಬೇಳೆ ಮಾಡಿ ಮಟನ್ ಕೈಮಾ ಜೊತೆಗೆ ಮಸಾಲೆ ಸೇರಿಸಿ ಸಾರು ಮಾಡಬಹುದು. ಈ ಸಾರು ಹಳೇ ಮೈಸೂರು ಭಾಗದಲ್ಲಿ ಬಹಳ ಜನಪ್ರಿಯ. ಹಾಗೆಯೇ ಸೊಪ್ಪಿನ ಜೊತೆಗೆ ಬೇಯಿಸಿ ಬಸ್ಸಾರು ಮತ್ತು ಉಪ್ಸಾರು ಮಾಡಿ ಪಲ್ಯ ಮಾಡಬಹುದು. ಕಾಯಿ ಅಥವಾ ಬೇಳೆ ಯಾವುದನ್ನು ಹಾಕಿಯಾದರೂ ಬಾತ್ ಮಾಡಬಹುದು ಇಷ್ಟಲ್ಲದೇ ಹಿದುಕಿದ ಅವರೆಕಾಯಿ ಹೆಚ್ಚು ಉಳಿದರೆ ಅವನ್ನು ಬೇಳೆ ಮಾಡಿ ಒಣಗಿಸಿಟ್ಟುಕೊಳ್ಳಬಹುದು. ಈ ಬೇಳೆ ಈಗಾಗಲೇ ಹೇಳಿದ ಹತ್ತು ಹಲವು ಅಡುಗೆಗಳಿಗೆ ನೀರಲ್ಲಿ ನೆನೆಸಿ ತೆಗೆದು ಬಳಸಿಕೊಳ್ಳಬಹುದು. ಬೆಲೆ ಕಡಿಮೆ ಇದ್ದಾಗಲಂತೂ ಮೂಟೆಯಲ್ಲಿ ಅವರೆಕಾಯಿಯನ್ನು ತಂದು ಬಿಡಿಸಿ ಹಿದುಕಿ ಒಣಗಿಸಿ ಇಟ್ಟುಕೊಳ್ಳುವುದನ್ನು ನಾನು ಕಂಡಿದ್ದೇನೆ. ಈಚೆಗೆ ಜನಕ್ಕೆ ಮಾರುಕಟ್ಟೆಗೆ ಹೋಗಿ ಕೊಳ್ಳಲು, ಬಿಡಿಸಲು ಹಿಂಸೆ ಅನಿಸುವಾಗ ಹಲವಾರು ಹಿದುಕಿ ಸಿದ್ದಪಡಿಸಿದ ಅವರೆಕಾಯಿಯನ್ನು ಪಾವುಗಳ ಅಳತೆಯಲ್ಲಿ ಸಂತೆ ಅಥವಾ ಮನೆ ಮನೆಗೂ ಹೋಗಿ ಮಾರುವುದು ಕೂಡ ಶುರುವಾಗಿದೆ. ಇದು ಸೀಜನ್‌ನಲ್ಲಿ ಒಳ್ಳೆಯ ವ್ಯಾಪಾರಕ್ಕೆ ಕಾರಣವಾಗಿದೆ. ಚಪ್ಪರದ ಅವರೆಕಾಯಿ ವಿಶೇಷ ತಳಿ ಬೇರೆ ಇದೆ. ಅದನ್ನು ಮನೆಗಳಲ್ಲಿ ತೋಟಗಳಲ್ಲಿ ಚಪ್ಪರ ಹಾಕಿ ಅಥವಾ ಮನೆಯ ಸೂರಿಗೆ ಹಬ್ಬಿಸಿ ಬೆಳೆಯುತ್ತಿದ್ದರು. ಇದನ್ನು ಕೂಡ ಹೊಲಗಳಲ್ಲಿ ಬೆಳೆದು ಮಾರುಕಟ್ಟೆಯಲ್ಲಿ ಮಾರುತ್ತಾರೆ. ಇದರ ವಿಶೇಷ ಏನು ಅಂದರೆ ಕಾಯಿಯನ್ನು ಮಾತ್ರವಲ್ಲ ಸಿಪ್ಪೆಯನ್ನು ಕೂಡ ಅಡುಗೆಗೆ ಬಳಸುವುದು. ಅಸಲಿಗೆ ಕಾಯಿ ಬಲಿಯುವ ವರೆಗೆ ಯಾರು ಕಾಯುವುದಿಲ್ಲ. ಯಾಕೆಂದರೆ ಇದರಲ್ಲಿ ಸಿಪ್ಪೆಯೇ ಬಹಳ ರುಚಿ ಮತ್ತು ಪೌಷ್ಟಿಕಾಂಶಗಳು ಉಳ್ಳದ್ದು. ಇದಕ್ಕೆ ಮಾಮೂಲಿಯ ಅವರೆಕಾಯಿಯಂತೆ ಸೊಗಡಿನ ವಾಸನೆ ಬರುವುದಿಲ್ಲ. ಬಣ್ಣದಲ್ಲಿ ಕೂಡ ಸ್ವಲ್ಪತಿಳಿ ಬಿಳಿ ಮತ್ತು ಹಸಿರು ಬಣ್ಣದ್ದು. ಬಿಡಿಸಿ ತಂದ ಚಪ್ಪರದ ಅವರೆಕಾಯಿಯ ಮಧ್ಯದ ನಾರು ಬಿಡಿಸಿ ಕೈಯಲ್ಲೇ ಮೂರು ನಾಕು ತುಂಡು ಮಾಡಿ ಬಸ್ಸಾರಿಗೋ ಪಲ್ಯಕ್ಕೊ ಹಾಕಿ ಹದವಾಗಿ ಬೇಯಿಸಿ ತಿಂದರೆ ಬೆಣ್ಣೆಯ ಹಾಗೆ ನಾಲಗೆಯಲ್ಲಿ ಕರಗುತ್ತದೆ. ಇದನ್ನು ಹೆಚ್ಚು ನೀರಿನಲ್ಲಿ ಅಥವಾ ಸಾರಿನಲ್ಲಿ ಬೇಯಿಸಬಾರದು. ಕಾಯಿಯ ರೂಪ ಹೋಗಿ ಮುದ್ದೆಯಾಗಿ ಬಿಡುತ್ತದೆ. ಅವರೆ ಮೇಳ:
ಹಸಿ ಅವರೆಕಾಯಿಯ ತಿನಿಸುಗಳು ಎಷ್ಟು ಜನಪ್ರಿಯವಾಯಿತೆಂದರೆ ಬೆಂಗಳೂರಿನಲ್ಲಿ ಅವರೆ ಮೇಳವೇ ಶುರುವಾಗಿಬಿಟ್ಟಿತು. ಹಸಿ ಅವರೆಕಾಯಿಯಿಂದ ಮಾಡಬಹುದಾದ ಎಲ್ಲ ತರಹದ ತಿನಿಸುಗಳು ಇಲ್ಲಿ ತಿನ್ನಲು ಮನೆಗೆ ಒಯ್ಯಲು ಸಿಗುತ್ತವೆ, ಅವರೆಕಾಯಿ ದೋಸೆ, ನಿಪ್ಪಟ್ಟು, ಚಕ್ಕುಲಿ, ತುಪ್ಪದಲ್ಲಿ ಹುರಿದ ಉಪ್ಪುಕಾಳು, ಉಪ್ಪಿಟ್ಟು, ಅವರೆಬೇಳೆಯ ಪಲ್ಯಗಳ ಜೊತೆಗೆ ಚಿತ್ರ ವಿಚಿತ್ರವಾದ ಎಷ್ಟರ ಮಟ್ಟಿಗೆ ಎಂದರೆ ಅವರೆಕಾಯಿ ಹಾಕಿದ ಐಸ್ ಕ್ರೀಮ್ ಕೂಡ ಲಭ್ಯ. ಇಂತಹ ಮೇಳಗಳು ಈಗ ಹಲವು ಕಡೆ ಆಗುತ್ತಿವೆ. ವಾಣಿಜ್ಯ ದೃಷ್ಟಿಯಿಂದ ನೋಡಿದರೆ ಪ್ರತಿ ವರ್ಷ ಇಂತಹ ಮೇಳಗಳಿಗೆ ಜನಬೆಂಬಲ ಜಾಸ್ತಿಯಾಗುತ್ತಲೇ ಇದೆ. ಬೆಂಗಳೂರು ಮಾತ್ರವಲ್ಲ ರಾಯಚೂರು ದಾಟಿ ಬೇರೆ ಬೇರೆ ಕಡೆಗೂ ಅವರೆಮೇಳ ಹಬ್ಬಿಕೊಂಡಿದೆ. ಒಣ ಅವರೆಕಾಳು, ಹಸಿ ಅವರೆಕಾಯಿ ಬಿಟ್ಟರೆ ಸದಾ ಕಾಲ ನಮ್ಮ ಬಳಕೆ ಸಿಗುತ್ತದೆ. ಇದನ್ನು ಸಾರು, ಕೂಟು, ಗೊಜ್ಜುಗಳಿಗೆ ಬಳಸುವುದು ಸಾಮಾನ್ಯ. ನೀರಿನಲ್ಲಿ ನೆನೆಸಿ ಅಥವಾ ಬಾಣಲೆಯಲ್ಲಿ ಹುರಿದ ಕಾಳುಗಳನ್ನು ಬೇಯಿಸಿಕೊಂಡು ರುಚಿಯಾದ ಅಡುಗೆಗಳನ್ನು ಮಾಡುತ್ತಾರೆ. ಅದರಲ್ಲಿ ವಿಶೇಷವಾದದ್ದು ಹಳೇ ಮೈಸೂರು ಭಾಗದಲ್ಲಿ ಮಾಡುವ ‘ಅವರೆಕಾಳು ಕೂಟು’. ಈ ಹಿಂದಿನ ದಶಕಗಳಲ್ಲಿ ಹಳ್ಳಿಗಳಲ್ಲಿ ನಡೆಯುವ ಮನೆಯ ಕಾರ್ಯಕ್ರಮಗಳು. ದೇವರ ಉತ್ಸವ ಮೊದಲಾದ ಕಡೆ ಊಟವೆಂದರೆ ರಾಗಿಮುದ್ದೆ ಮತ್ತು ಅವರೆಕಾಳು ಕೂಟು ಇದ್ದೇ ಇರುತ್ತಿತ್ತು. ಇವತ್ತಿನ ಹಾಗೆ ಆಡಂಬರದ ಊಟ ಇರುತ್ತಿರಲಿಲ್ಲ. ಚೆನ್ನಾಗಿ ನೀರಿನಲ್ಲಿ ನೆನೆಸಿದ ಅವರೆಕಾಳುಗಳನ್ನು ಕೊಪ್ಪರಿಗೆಯಲ್ಲಿ ಬೇಯಿಸಿ ಹುರಿದ ಹುಚ್ಚೆಳ್ಳು, ಮಸಾಲೆ ಸೇರಿಸಿ ಬಾಡಿಸಿದರೆ ಕೊಪ್ಪರಿಗೆಯಲ್ಲಿ ಬೇಯುವ ಕೂಟಿನ ವಾಸನೆ ಊಟದ ಮನೆಗೆ ಎಳೆದೊಯ್ಯುತ್ತಿತ್ತು. ಈಗ ಅಂತಹ ಸಂಭ್ರಮವಿಲ್ಲ, ಯಾರಾದರೂ ಸತ್ತಾಗ ತಿಥಿಯಲ್ಲಿ ಅವರೆಕಾಳಿನ ಕೂಟು ಮಾಡಿದರೆ ಹೆಚ್ಚು. ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಜನರು ಅವರೆಕಾಳಿನ ಊಟವನ್ನು ಆದಷ್ಟು ನಿರಾಕರಿಸುವುದು ಕೂಡ ಕಾರಣವಾಗಿರಬಹುದು. ಇದನ್ನು ತಿಂದಷ್ಟು ಜನರು ‘ಹೂಸು’ತ್ತಾರೆ ಎಂಬುದು ಹಬ್ಬಿ ಬಳಕೆಯೇ ಕಡಿಮೆ ಆಗಿಬಿಟ್ಟಿದೆ. ಈ ಕೂಟು ರಾಗಿಮುದ್ದೆ ಮಾತ್ರವಲ್ಲ, ಅಕ್ಕಿರೊಟ್ಟಿಗೆ, ಚಪಾತಿಗೆ ಒಳ್ಳೆಯ ಜೊತೆ. ನೆನೆದರೆ ಬಾಯಲ್ಲಿ ನೀರೂರುತ್ತದೆ. ಹಾಗೆ ಒಮ್ಮೆ ಅವರೆಕಾಯಿಯ ಬೆಳೆ, ಮಾರುಕಟ್ಟೆ, ವ್ಯಾಪಾರ, ದರ ಮತ್ತು ಕಾಯಿಯ ಅಡುಗೆಯ ನಾನಾ ಪ್ರಯೋಗಗಳು, ಅವುಗಳ ಜನಪ್ರಿಯತೆ ಮತ್ತು ಮಾರಾಟ;ಎಲ್ಲವು ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ. ಉಳಿದೆಲ್ಲಾ ಸೊಪ್ಪು, ಪಲ್ಲೆ, ಕಾಳುಗಳಿಗೆ ಹೋಲಿಸಿದರೆ ಅವರೆಕಾಯಿ ‘ಸ್ಟಾರ್’ಗಿರಿಯನ್ನು ಗಿಟ್ಟಿಸಿರುವುದು ಗೊತ್ತಾಗುತ್ತದೆ.