ವಿಕಾಸ್ ದುಬೆ ಬಲಗೈ ಬಂಟ ಎನ್‌ಕೌಂಟರ್‌ನಲ್ಲಿ ಸಾವು
ಲಕ್ನೋ, ಜು.8: ಕುಖ್ಯಾತ ರೌಡಿ ವಿಕಾಸ್ ದುಬೆಯ ಬಲಗೈಬಂಟ ಅಮರ್ ದುಬೆ ಬುಧವಾರ ನಸುಕಿನಲ್ಲಿ ಹಮೀರ್‌ಪುರದಲ್ಲಿ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಪೊಲೀಸರ ಜತೆ ನಡೆದ ಎನ್‌ಕೌಂಟರ್‌ನಲ್ಲಿ ಹತನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮಧ್ಯಪ್ರದೇಶಕ್ಕೆ ತಪ್ಪಿಸಿಕೊಂಡು ಹೋಗುವ ಪ್ರಯತ್ನದಲ್ಲಿದ್ದಾಗ ಆತನನ್ನು ಎಸ್‌ಟಿಎಫ್ ಬಲೆಗೆ ಬೀಳಿಸಿತು ಎಂದು ಅಧಿಕೃತ ಮೂಲಗಳು ಹೇಳಿವೆ.
ಗಡಿಯಲ್ಲಿ ವ್ಯಾಪಕ ತಪಾಸಣೆ ಇರುವ ಹಿನ್ನೆಲೆಯಲ್ಲಿ ಈತ ಮಧ್ಯಪ್ರದೇಶಕ್ಕೆ ಹೋಗುವ ಯೋಚನೆಯನ್ನು ಕೈಬಿಟ್ಟು, ಹಮೀರ್‌ಪುರದ ಮೌದಾಹಾ ಪ್ರದೇಶದಲ್ಲಿದ್ದ ಸಂಬಂಧಿಕರ ಮನೆಯತ್ತ ತೆರಳುತ್ತಿದ್ದ. ಆಗ ಎಸ್‌ಟಿಎಫ್ ಸಿಬ್ಬಂದಿಯ ಬಲೆಗೆ ಬಿದ್ದ. ಸ್ವಯಂಚಾಲಿತ ಬಂದೂಕು ಮತ್ತು ಆತನ ಬ್ಯಾಗ್ ವಶಪಡಿಸಿಕೊಳ್ಳಲಾಗಿದೆ. ವಿಧಿವಿಜ್ಞಾನ ತಜ್ಞರು ಎನ್‌ಕೌಂಟರ್ ಸ್ಥಳಕ್ಕೆ ಧಾವಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಎನ್‌ಕೌಂಟರ್‌ನಲ್ಲಿ ಇಬ್ಬರು ಪೊಲೀಸರಿಗೆ ಗುಂಡೇಟು ತಗುಲಿದೆ.
ಕಳೆದ ಶುಕ್ರವಾರ ನಡೆದ ಎಂಟು ಪೊಲೀಸರ ಹತ್ಯೆ ಪ್ರಕರಣದಲ್ಲಿ ಅಮರ್ ದುಬೆ ಆರೋಪಿಯಾಗಿದ್ದ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಪ್ರಶಾಂತ್ ಕುಮಾರ್ ವಿವರಿಸಿದ್ದಾರೆ. ಈತನ ಬಗ್ಗೆ ಸುಳಿವು ನೀಡಿದವರಿಗೆ 25 ಸಾವಿರ ರೂಪಾಯಿ ಬಹುಮಾನ ಘೋಷಿಸಲಾಗಿತ್ತು.
ವಿಕಾಸ್ ದುಬೆ ಇರುವಿಕೆ ಬಗೆಗಿನ ಸುಳಿವಿನ ಆಧಾರದಲ್ಲಿ ಕಾರ್ಯೋನ್ಮುಖವಾದ ಎಸ್‌ಟಿಎಫ್‌ನ ಒಂದು ತಂಡ ಅಮರ್ ದುಬೆಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಯಿತು ಎಂದು ಕುಮಾರ್ ಹೇಳಿದ್ದಾರೆ. ಶುಕ್ರವಾರ ಪೊಲೀಸರ ಮೇಲೆ ನಡೆದ ದಾಳಿಯ ವೇಳೆ ಅಮರ್ ದುಬೆ ಕೂಡಾ ವಿಕಾಸ್ ದುಬೆ ಮನೆಯಲ್ಲಿದ್ದ ಎಂದು ತಿಳಿದುಬಂದಿದೆ.