15 ವರ್ಷ ಹಳೆಯ ಪೆಟ್ರೋಲ್ ವಾಹನಗಳಿಗೆ ಅವಕಾಶ ನೀಡಲು ಎನ್ ಜಿಟಿ ನಕಾರ
ಹೊಸದಿಲ್ಲಿ: ಕೊರೋನಾ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಹಿರಿಯ ನಾಗರಿಕ ಜೀವ ಉಳಿಸುವ ದೃಷ್ಟಿಯಿಂದ 15 ವರ್ಷಕ್ಕಿಂತ ಹಳೆಯ ಪೆಟ್ರೋಲ್ ವಾಹನಗಳು ಕಾರ್ಯಾಚರಿಸಲು ಅನುಮತಿ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಮನವಿಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ ಜಿಟಿ) ತಿರಸ್ಕರಿಸಿದೆ.
ಎನ್ ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಆದರ್ಶಕುಮಾರ್ ಗೋಯಲ್ ನೇತೃತ್ವದ ಪೀಠ, ದೆಹಲಿ ನಿವಾಸಿ ಹಾಗೂ ಹಿರಿಯ ನಾಗರಿಕ ಕಮಲ್ ಸಹಾಯ್ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿ, ಇಂಥ ಹಲವು ಅರ್ಜಿಗಳು ಹಿಂದೆ ಸಲ್ಲಿಕೆಯಾಗಿವೆ. ಸುಪ್ರೀಂಕೋರ್ಟ್ ಕೂಡಾ ಎನ್ ಜಿಟಿ ಕ್ರಮವನ್ನು ಎತ್ತಿಹಿಡಿದಿದೆ ಎಂದು ಸ್ಪಷ್ಟಪಡಿಸಿದೆ.
15 ವರ್ಷ ಹಳೆಯ ಪೆಟ್ರೋಲ್ ವಾಹನಗಳ ಬಳಕೆ ನಿಷೇಧಿಸಿದ ಎನ್ ಜಿಟಿ ನಿರ್ಧಾರವನ್ನು ಪರಿಷ್ಕರಿಸಿ, ಕೋವಿಡ್-19 ಸಾಂಕ್ರಾಮಿಕ ನಿಯಂತ್ರಣಕ್ಕೆ ಬರುವವರೆಗೆ ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.
“ಮನವಿಯಂತೆ ಎನ್ಜಿಟಿ ನಿರ್ಧಾರವನ್ನು ಪರಿಷ್ಕರಿಸಿದರೆ ಅದು ವೈರಸ್ ಹರಡುವಲ್ಲಿ ಮತ್ತು ಹಿರಿಯ ನಗರಿಕರ ಜೀವ ಉಳಿಸುವಲ್ಲಿ ಸಹಕಾರಿಯಾಗಲಿದೆ”ಎಂದು ಶಾನ್ ಮೊಹ್ಮದ್ ಮತ್ತು ತುಷಾರ್ ಗುಪ್ತಾ ಅವರ ಮೂಲಕ ಸಲ್ಲಿಸಲಾದ ಅರ್ಜಿಯಲ್ಲಿ ವಾದಿಸಲಾಗಿತ್ತು.
2014ರ ನವೆಂಬರ್ 26ರಂದು ಎನ್ ಜಿಟಿ ಆದೇಶ ನೀಡಿ 15 ವರ್ಷಕ್ಕಿಂತ ಹಳೆಯ ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳಿಗೆ ಸಂಚಾರಕ್ಕೆ ಅವಕಾಶ ನೀಡಬಾರದು ಎಂದು ಸೂಚಿಸಿತ್ತು. ಆ ವಾಹನಗಳನ್ನು ವಶಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿತ್ತು.