ಕೋವಿಡ್-19 ಸೋಂಕಿತರ ಸಾವಿನ ಪ್ರಮಾಣ ಶೇಕಡ 2.72ಕ್ಕೆ: ಆರೋಗ್ಯ ಸಚಿವಾಲಯ
ಹೊಸದಿಲ್ಲಿ: ಭಾರತದಲ್ಲಿ ಕೋವಿಡ್-19 ಸೋಂಕು ತಗಲಿದವರ ಮರಣ ಪ್ರಮಾಣ ಒಂದು ತಿಂಗಳ ಮೊದಲು 2.82% ಇದ್ದುದು ಇದೀಗ 2.72ಕ್ಕೆ ಇಳಿದಿದೆ. ಇದು ಇತರ ದೇಶಗಳಿಗೆ ಹೋಲಿಸಿದರೆ ಕಡಿಮೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
30 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಾವಿನ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಎಂದು ವಿವರಿಸಿದೆ.
ಅಂತೆಯೇ ಗುಣಮುಖರಾಗುತ್ತಿರುವವರ ಪ್ರಮಾಣ ಕೂಡಾ ಹೆಚ್ಚುತ್ತಿದ್ದು, ಶುಕ್ರವಾರದ ವೇಳೆಗೆ ಗುಣಮುಖರಾದವರ ಪ್ರಮಾಣ ಶೇಕಡ 62.42ಕ್ಕೇರಿದೆ. 18 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ದರ ರಾಷ್ಟ್ರೀಯ ಸರಾಸರಿಗಿಂತ ಅಧಿಕ ಇದೆ ಎಂದು ಸಚಿವಾಲಯ ಹೇಳಿದೆ.
ಕೊರೋನಾವೈರಸ್ ಸೋಂಕು ರೋಗಿಗಳ ವೈದ್ಯಕೀಯ ಆರೈಕೆಯ ಗುಣಮಟ್ಟ ಸುಧಾರಣೆಗೆ ಗಮನ ಹರಿಸಲಾಗಿದೆ. ಆಯುಷ್ಮಾನ್ ಭಾರತ್ ಮತ್ತು ಸುಕ್ಷೇಮ ಕೇಂದ್ರಗಳ ಕಾರ್ಯಕರ್ತರು ಪರಿಣಾಮಕಾರಿ ಸಮೀಕ್ಷೆ ನಡೆಸುವ ಜತೆಗೆ ಸಂಪರ್ಕ ಪತ್ತೆಗೆ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದೆ.
ಏತನ್ಮಧ್ಯೆ ಗುರುವಾರ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 7,93,802 ದಾಟಿದ್ದು, ಕಳೆದ 24 ಗಂಟೆಯಲ್ಲಿ 475 ಮಂದಿ ಮೃತಪಟ್ಟಿದ್ದಾರೆ. ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 21604ಕ್ಕೇರಿದೆ. ಕಳೆದ 24 ಗಂಟೆಗಳಲ್ಲಿ 19138 ಮಂದಿ ಗುಣಮುಖರಾಗಿದ್ದು, ಒಟ್ಟು ಚೇತರಿಸಿಕೊಂಡವರ ಸಂಖ್ಯೆ 4,95,515ಕ್ಕೇರಿದೆ ಎಂದು ಸಚಿವಾಲಯ ಹೇಳಿದೆ. ದೇಶದಲ್ಲಿ ಸದ್ಯಕ್ಕೆ 2,76,682 ಸಕ್ರಿಯ ಪ್ರಕರಣಗಳಿವೆ