ಹಾಗಲಕಾಯಿ ಸಾಕ್ಷಿ
ಹಾಗಲಕಾಯಿ ಎನ್ನುತ್ತಿದ್ದಂತೆಯೇ ಹಲವರ ನಾಲಗೆ ಕಹಿಯನುಂಡಂತೆ ನುಲಿದು ಜೊಲ್ಲುರಸ ನುಂಗಲು ಯತ್ನಿಸುತ್ತದೆ. ಈ ಹಸಿರು ತರಕಾರಿ ನಮ್ಮೂರು ಮಾತ್ರವಲ್ಲ ಇಡಿ ದಕ್ಷಿಣ ಏಶ್ಯವನ್ನೇ ವಿವಿಧ ರೀತಿಯ ಅಡುಗೆಗಳಲ್ಲಿ ಆವರಿಸಿಕೊಂಡಿದೆ. ಅರೆ! ಈ ಕಹಿ ಪಲ್ಲೆಯಲ್ಲಿ ಎಂತಹ ಅಡುಗೆ ಅನ್ನುತೀರ? ನಾಲಗೆಯಲ್ಲಿ ನೀರು ಜಿನುಗುವಷ್ಟು ವೈವಿಧ್ಯ ಇದಕ್ಕುಂಟು. ನಾವು ಅಬ್ಬಬ್ಬ ಎಂದರೆ ಹಾಗಲಕಾಯಿ ಗೊಜ್ಜು ಮತ್ತು ಬಜ್ಜಿ ಮಾಡುತ್ತೇವೆ. ಅಷ್ಟಕ್ಕೆ ಸಾಕು ಎನಿಸುವಷ್ಟು ಮುಖ ಸಿಂಡರಿಸಿಕೊಳ್ಳುವ ಬಹುಜನರಿದ್ದಾರೆ. ಆದರೆ ತಿನ್ನುವ ಪದಾರ್ಥದ ಮೇಲೆ ಪ್ರೀತಿ ಇದ್ದರೆ, ಪ್ರಯೋಗಶೀಲ ಮನಸ್ಸು ಇದ್ದರೆ ಬೇಕಾದಷ್ಟು ವೈವಿಧ್ಯವನ್ನು ಕಾಣಬಹುದು. ಹಾಗಲಕಾಯಿ ಸಸ್ಯಶಾಸ್ತ್ರದ ಪ್ರಕಾರದ ಸೌತೆಕಾಯಿ ಕುಟುಂಬದ ಕ್ಯುಕಬಿರ್ಟೆಸಿಯಾ ಜಾತಿಗೆ ಸೇರಿದ್ದು. ಇದನ್ನು ಹೇರಳವಾಗಿ ಭಾರತ, ಚೀನಾ, ಇಂಡೋನೇಶ್ಯ, ಮಲೇಶ್ಯ, ಜಪಾನ್, ವಿಯೆಟ್ನಾಂ ಮುಂತಾದ ದೇಶಗಳಲ್ಲಿ ಬೆಳೆಯಲಾಗುತ್ತದೆ. ಇದರಲ್ಲಿರುವ ಔಷಧೀಯ ಗುಣಗಳ ಬಗ್ಗೆ ಮಾತನಾಡಲು ಹೋಗುವುದಿಲ್ಲ. ಕಾರಣ ಪ್ರಕೃತಿಯ ಪ್ರತಿ ಸಸ್ಯದಲ್ಲೂ ಇಂತಹ ಗುಣಗಳು ಇದ್ದೇ ಇವೆ ಆದರೆ ಕೆಲವು ಮಾತ್ರ ವಿಷಪೂರಿತವಾಗಿವೆ. ಅಂತಹವನ್ನು ನಾವು ಸೇವಿಸಲು ಸಾಧ್ಯವಿಲ್ಲ, ಬಿಟ್ಟರೆ ಉಳಿದುವೆಲ್ಲಾ ಔಷಧೀಯ ಗುಣವುಳ್ಳ ಸಸ್ಯಗಳೇ ಆಗಿವೆ. ಮಾಂಸದ ವಿಚಾರದಲ್ಲೂ ಇದು ಸತ್ಯ. ಮಾಂಸ ಕೂಡ ಔಷಧೀಯ ಗುಣವುಳ್ಳದ್ದು ಇದನ್ನು ಚರಕ ಸಂಹಿತೆ ಮೊದಲಾದ ಆಯುರ್ವೇದ ಕೃತಿಗಳಲ್ಲಿ ಕಾಣಬಹುದು. ಆದರೆ ಮಾಂಸವು ಧರ್ಮ ಮತ್ತು ರಾಜಕಾರಣದ ದಾಳವಾಗಿ ಬಳಕೆಯಾಗಿ ಉಳಿದ ಅಂಶಗಳು ಗೌಣವಾಗಿವೆ.
ಕರಿಹಾಗಲ, ಬಿಳಿಹಾಗಲ, ಮಾಡಹಾಗಲ ಅಲ್ಲದೇ ಗಿಡ್ಡ ಮತ್ತು ಉದ್ದ ತಳಿಯ ಹಾಗಲಗಳು ಬೇಕಾದಷ್ಟಿವೆ ಮತ್ತು ಇವು ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ತೆರನಾದ ಮೇಲ್ಮೈ ಲಕ್ಷಣಗಳನ್ನು ಹೊಂದಿವೆ. ಭಾರತದ ಹಾಗಲ ಕಾಯಿ ಮುಳ್ಳಿನ ಮೇಲ್ಮೈ ಹೊಂದಿದ್ದರೆ ಚೀನಾ ಹಾಗಲಕಾಯಿ ಸಪಾಟಾಗಿ ಕಾಣುತ್ತದೆ. ಆದರೆ ಎಲ್ಲ ತಳಿಗಳಲ್ಲೂ ಕಹಿ ಎಂಬುದು ಸಾಮಾನ್ಯ ಅಂಶ. ಹಾಗಲಕಾಯಿ ಬಳ್ಳಿಗಳು ನಮ್ಮ ಮನೆಯ ಹಿತ್ತಲುಗಳಲ್ಲಿ ಸಾಮಾನ್ಯವಾಗಿವೆ. ತಿಂದು ಎಸೆದ ಕಾಯಿಯ ಬೀಜ ಸಾಕಿತ್ತು. ಅದಕ್ಕೆ ಅಗತ್ಯದ ನೀರು, ಬಳ್ಳಿ ಹಬ್ಬಲು ಒಂದು ಆಸರೆ ಸಿಕ್ಕರೆ ಸಾಕು ತನ್ನ ಪಾಡಿಗೆ ತಾನು ಬೆಳೆದು ಹೂವುಗಳೊಂದಿಗೆ ನಳನಳಿಸುತ್ತಾ ಋತುಮಾನ ಬಂದೊಡನೆ ಕಾಯಿ ಕಚ್ಚಿ ತೂಗುತ್ತಿದ್ದವು. ಇಂತಹ ಕಾಯಿಗಳನ್ನು ಅಡುಗೆಗೆ ಕೀಳುವಾಗ ಆರೋಗ್ಯವಂತ ದಪ್ಪನಾದ ಯಾವುದೇ ಹುಳ ಹಿಡಿಯದ ಕಾಯನ್ನು ಗುರುತಿಸಿ ಅದನ್ನು ಬೀಜ ಮಾಡಿಕೊಳ್ಳುವ ಸಲುವಾಗಿ ಬಿಟ್ಟು ಹಣ್ಣಾದ ಮೇಲೆ ಕಿತ್ತು ಮನೆಯ ಸೂರಿಗೋ ಅಥವಾ ಅಟ್ಟದ ಮಂಕರಿಗೆ ಇಟ್ಟರೆ ಆಯಿತು ಮತ್ತೆ ಅದರ ಬೆಳೆಯ ಋತುಮಾನ ಬಂದಾಗ ಅದನ್ನು ಒಡೆದು ಬೀಜಗಳನ್ನು ಬಿತ್ತಲು, ಇತರರಿಗೆ ಹಂಚಲು ಬಳಸಲಾಗುತ್ತಿತ್ತು. ಅದೊಂದು ಕೃಷಿ ಸುಸ್ಥಿರ ಪದ್ಧತಿ. ಈಗೆಲ್ಲಾ ಅಂಗಡಿಯ ಹೈಬ್ರಿಡು ಬೀಜಗಳ ಕಾಟ. ಹಾಗಲಕಾಯನ್ನು ನಾವು ಗೊಜ್ಜು ಮಾಡುವುದು ಬಿಟ್ಟು ಬೇರೆಯದಕ್ಕೆ ಬಳಸಿದ್ದು ಅಪರೂಪ.
ಅದರ ಕಹಿ ರುಚಿಯು ಮಕ್ಕಳಿಗೆ ಇಷ್ಟವಾಗದ ಕಾರಣವೋ ಏನೋ ನಾವು ಅದರ ಹೆಚ್ಚಿನ ಅಡುಗೆಗಳನ್ನು ಮಾಡುತ್ತಿರಲಿಲ್ಲ. ಹಾಗಲಕಾಯಿ ಬಜ್ಜಿ ನಾನು ಈಚಿನ ಹತ್ತು ವರ್ಷಗಳಲ್ಲಿ ನೋಡಿದ್ದು. ಅದಕ್ಕೂ ಮೊದಲು ಕಂಡಿರಲಿಲ್ಲ. ಈಗಲೂ ನಮ್ಮಮನೆಗಳಲ್ಲಿ ಹಾಗಲಕಾಯಿಯ ಒಂದೇ ಅಡುಗೆ ಅದು ಗೊಜ್ಜು. ಈಗಾಗಲೇ ಮೊದಲೇ ಔಷಧೀಯ ಗುಣಗಳ ಬಗ್ಗೆ ಮಾತಾಡುವುದಿಲ್ಲವೆಂದು ಹೇಳಿದ್ದೆ. ಯಾಕೆಂದರೆ ಹಾಗಲಕಾಯಿ ತಿನ್ನುವುದಿಲ್ಲ ಎಂದರೆ ಸಾಕು ಮನೆಯ ಹಿರೀಕರು ಈ ಪಲ್ಲೆಯಲ್ಲಿ ಇರುವ ಅದೆಷ್ಟೋ ಔಷಧೀಯ ಉಪಯೋಗಗಳ ಬಗ್ಗೆ ಸೆಮಿನಾರು ಶುರು ಮಾಡಿಬಿಡುತ್ತಿದ್ದರು. ಇದರ ಕಹಿ ರುಚಿಯೇ ಅದಕ್ಕೆ ಸಾಕ್ಷಿ ಎಂದು ಹೇಳುತ್ತಾ ‘’ ನಾಲಿಗೆಗೆ ಕಹಿಯಾದರೂ ಹೊಟ್ಟೆಗೆ ಒಳ್ಳೆಯದು’’ ಅಂತ ನಾಕೈದು ನಾಣ್ನುಡಿ ನುಡಿಯದೇ ಬಿಡುತ್ತಿರಲಿಲ್ಲ. ಮೊದಮೊದಲು ಬಲವಂತದ ವಿಷಪ್ರಾಶನದಂತೆ ತಿನ್ನುತ್ತಿದ್ದ ಹಾಗಲಕಾಯ ಗೊಜ್ಜು ಕ್ರಮೇಣ ರುಚಿಗಟ್ಟ ತೊಡಗಿತು. ಕಾಯನ್ನು ಕತ್ತರಿಸಿ ಬೀಜ ತೆಗೆದು ಉಪ್ಪು, ಹುಳಿ, ಖಾರಗಳ ಸರಿಯಾದ ಮಿಶ್ರಣದೊಂದಿಗೆ ಹುರಿದು ಬೇಯಿಸಿದ ಗೊಜ್ಜನ್ನು ರೊಟ್ಟಿ, ಚಪಾತಿಯ ಜೊತೆ ಮೆಲ್ಲುತ್ತಿದ್ದರೆ ‘ಕಹಿ’ಗೂ ಎಂಥ ರುಚಿ ಇದೆ ಎನಿಸುತ್ತಿತ್ತು. ಆಮೇಲೆ ಇದನ್ನು ಬಿಸಿಬಿಸಿ ಅನ್ನದ ಜೊತೆಗೆ ಕಲಸಿ ತಿನ್ನುವುದು ರೂಢಿಯಾಗಿಬಿಟ್ಟಿತು. ಈಗಂತೂ ವೈಯಕ್ತಿಕವಾಗಿ ನನಗೆ ಹಾಗಲಗೊಜ್ಜು ಇದ್ದಲ್ಲಿ ಅನ್ನವೇ ಬೇಕು ಅನ್ನಿಸುತ್ತೆ.
ನಮ್ಮಲ್ಲಿ ಗೊಜ್ಜಿನ ಜೊತೆಗೆ ಕಾಯನ್ನು ದುಂಡಾಗಿ ಕತ್ತರಿಸಿ ಉಪ್ಪುಖಾರದಲ್ಲಿ ನೆನೆಸಿ ನಂತರ ಅದನ್ನು ಕಡ್ಲೆ ಹಿಟ್ಟಿನ ಜೊತೆಗೆ ಅಥವಾ ಬರಿದಾಗಿ ಎಣ್ಣೆಯಲ್ಲಿ ಕರಿದು ಬಜ್ಜಿ ಮಾಡುವುದು ಮತ್ತು ಹುರಿದ ಹಾಗಲದ ಚೂರುಗಳನ್ನು ಹುರಿದ ಉದ್ದು ಮತ್ತು ಕಡಲೆ ಬೇಳೆ, ತೆಂಗಿನ ತುರಿ, ಮೆಣಸಿನ ಜೊತೆಗೆ ಅರೆದು ಒಗ್ಗರಣೆ ಕೊಟ್ಟು ಚಟ್ನಿ ಮಾಡುವುದು, ಕಾಯಿರಸ ಮಾಡುವುದು ಇದೆ. ಹಾಗೆಯೇ ಎಳೆಯ ಹಾಗಲಬಳ್ಳಿಯ ಚಿಗುರುಗಳನ್ನು ಸೊಪ್ಪು ಸಾರು ಮಾಡುವಾಗ ಬಳಸುತ್ತಾರೆ. ಮಲೆನಾಡಿನ ಹಾಗಲಕಾಯಿ ಅರೆದು ಮಾಡಿದ ಹಪ್ಪಳ ಸಿಗುತ್ತದೆ. ಉತ್ತರಭಾರತ, ನೇಪಾಳದ ಕೆಲವು ಕಡೆ ಇದರ ಉಪ್ಪಿನಕಾಯಿ ಮಾಡುತ್ತಾರೆ.
ಹಾಗೆಯೇ ಕಾಯಿಯ ಬೀಜ ಹೊರತೆಗೆದು ಅದಕ್ಕೆ ಮಸಾಲೆ ತುಂಬಿ ಎಣ್ಣೆಯಲ್ಲಿ ಕರಿದು ತಿಂಡಿ ಮಾಡುತ್ತಾರೆ. ತೆಂಗು-ಮಸಾಲೆ-ಖಾರಗಳೊಂದಿಗೆ ಕರಿಯುವುದು, ಹುರಿಯುವುದು ಬೇಯಿಸುವುದು ಬಿಟ್ಟರೆ ಹೆಚ್ಚಿನ ಪ್ರಯೋಗಗಳು ನಮ್ಮಲ್ಲಿ ಇಲ್ಲ. ಆದರೆ ಏಶ್ಯ ಪೂರ್ವ ದೇಶಗಳಲ್ಲಿ ಬೇಕಾದಷ್ಟು ಹಾಗಲಕಾಯಿಯ ಆಹಾರ ವೈವಿಧ್ಯವಿದೆ. ಹಾಗಲಕಾಯಿಯ ಜ್ಯೂಸು, ಸೂಪು, ಬೇರೆ ಬೇರೆ ತರಹದ ಮಾಂಸಗಳ ಜೊತೆಗೆ ಹುರಿದು ಮಾಡಿದ ಗೊಜ್ಜುಗಳು, ತಿನಿಸುಗಳು ಬೇಕಾದಷ್ಟಿವೆ. ಚೀನಾದಲ್ಲಿ ಹಾಗಲಕಾಯಿಯ ಒಳತಿರುಳು ತೆಗೆದು ಅಲ್ಲಿಗೆ ಬೇಯಿಸಿದ ಮಾಂಸದ ತುಂಡು ಇಟ್ಟು ಹಬೆಯಲ್ಲಿ ಬೇಯಿಸಿ ಸೂಪಿನ ಜೊತೆಗೆ ತಿನ್ನಲು ಬಳಸುತ್ತಾರೆ. ಹಾಗೆಯೆ ಕತ್ತರಿಸಿದ ಕಾಯಿಯ ತುಂಡುಗಳನ್ನು ಮಾಂಸದ ಜೊತೆಗೆ ಹುರಿದು ತಿನ್ನುತ್ತಾರೆ. ಈ ತರಹದ ಹಾಗಲದ ಸೂಪು ವಿಯೆಟ್ನಾಂನಲ್ಲೂ ಜನಪ್ರಿಯ. ಬೇಯಿಸಿದ ಮಾಂಸ, ಒಣಗಿಸಿದ ಮಾಂಸ, ಸಿಗಡಿಗಳ ಜೊತೆ ತೆಂಗಿನಕಾಯಿಯ ಹಾಲು ಬಳಸಿ ಬೇಯಿಸಿದ ಹಾಗಲದ ತುಂಡುಗಳನ್ನು ಹಬೆಯಲ್ಲಿ ಬೇಯಿಸಿ ಬಡಿಸುತ್ತಾರೆ. ಇದು ಅಲ್ಲಿನ ಜನಪ್ರಿಯ ಖಾದ್ಯಗಳಲ್ಲಿ ಒಂದು. ಹಾಗೆಯೆ ಫಿಲಿಪ್ಪೀನ್ಸ್ ನಲ್ಲಿ ಗೋಮಾಂಸದ ತುಂಡುಗಳನ್ನು ರುಬ್ಬಿಕೊಂಡ ಉಪ್ಪು, ಹಾಗಲಕಾಯಿ, ಟೊಮ್ಯಾಟೊಗಳ ಜೊತೆಗೆ ಹುರಿದು ತಿನ್ನುತ್ತಾರೆ.
ಗೊಯ ಚಂಪರು:
ಇವುಗಳಲ್ಲಿ ಮುಖ್ಯವಾದದ್ದು ಅಂದರೆ ಜಪಾನಿನ ದ್ವೀಪಗಳಲ್ಲಿ ವಾಸಿಸುವ ಒಕಿನವನ್ ಬುಡಕಟ್ಟು ಜನರ ಅಡುಗೆ. ಅವರಲ್ಲಿ ಹಾಗಲಕಾಯಿಗೆ ಮಹತ್ವ ಜಾಸ್ತಿ. ಅದರಲ್ಲಿ ಚಂಪರು ಪ್ರಸಿದ್ಧವಾದ ಒಕಿನವನ್ ಅಡುಗೆ. ಇದರಲ್ಲಿ ಟೋಫು, ಮಾಂಸ ಮತ್ತು ತರಕಾರಿಗಳನ್ನು ಹೇರಳವಾಗಿ ಬಳಸಿ ಹುರಿದು ಬಡಿಸಲಾಗುತ್ತದೆ. ಇದರಲ್ಲಿ ಮತ್ತೆ ಟೋಫು ಚಂಪರು, ಮಾಮಿನ ಚಂಪರು, ಸೋಮೆನ್ ಚಂಪರು ಮತ್ತು ಗೊಯ ಚಂಪರು ಎಂಬ ನಾಲ್ಕು ಬಗೆಗಳಿವೆ. ಇವುಗಲ್ಲಿ ಗೊಯ(ಹಾಗಲಕಾಯಿ) ಚಂಪರು ಅನ್ನು ಅವರು ಅತ್ಯುತ್ತಮವೂ ಶ್ರೇಷ್ಠವೂ ಆದ ಚಂಪರು ಎಂದು ಭಾವಿಸುತ್ತಾರೆ. ಜಪಾನಿನಲ್ಲಿ ನೂರು ವರ್ಷ ದಾಟಿ ಬದುಕುವ ಜನರಿದ್ದಾರೆ. ಆದರೆ ಒಕಿನವನ್ ಬುಡಕಟ್ಟಿನ ಜನರು ಅವರಿಗಿಂತಲೂ ಹೆಚ್ಚು ಬದುಕುತ್ತಾರಂತೆ. ಅದಕ್ಕೆ ಈ ಹಾಗಲಕಾಯಿಯೇ ಕಾರಣವಂತೆ.
ಗೊಯ ಚಂಪರುವನ್ನು ಸಣ್ಣಗೆ ಹಚ್ಚಿದ ಎಲೆಕೋಸು, ಕ್ಯಾರೆಟ್, ಟೋಫುಗಳ ಜೊತೆಗೆ ತಿರುಳು ತೆಗೆದ ಹಾಗಲಕಾಯಿ ಮತ್ತು ಮೊಟ್ಟೆ, ಹಂದಿ ಮಾಂಸದ ತೆಳುತುಂಡುಗಳನ್ನು ಸೇರಿಸಿ ಎಣ್ಣೆಯಲ್ಲಿ ಹುರಿದು ಬೇಯಿಸಿ ಸಿದ್ಧಗೊಳಿಸುತ್ತಾರೆ. ಒಟ್ಟಿನಲ್ಲಿ ದಕ್ಷಿಣ ಏಶ್ಯದಲ್ಲಿ ಹಾಗಲಕಾಯಿ ಬಹಳ ಪ್ರಾಮುಖ್ಯತೆ ಪಡೆದುಕೊಂಡಿರುವ ಏಕಮಾತ್ರ ತರಕಾರಿ ಆಗಿದೆ. ಅದು ತನ್ನ ಕಹಿ ರುಚಿಯಲ್ಲಿ, ವೈವಿಧ್ಯಮಯ ಅಡುಗೆಗಳಲ್ಲಿ, ಔಷಧೀಯ ಗುಣಗಳಲ್ಲಿ, ಜನರ ನಂಬುಗೆಗಳಲ್ಲಿ ಆಳವಾಗಿ ಬೇರೂರಿದೆ. ಸಕ್ಕರೆ ಕಾಯಿಲೆ ನಿಯಂತ್ರಣದ ಮಾತು ಬಂದಾಗೆಲ್ಲ ಹಾಗಲಕಾಯಿಯ ಮಾತು ಕೂಡ ಬರುವುದನ್ನು ನೀವು ಅಲ್ಲಲ್ಲಿ ಗಮನಿಸಬಹುದು. ಇದಕ್ಕೆ ಸಂಬಂಧಿಸಿದಂತೆ ಕೂಡ ಹಲವು ಪ್ರಯೋಗಗಳು ನಡೆದಿವೆ. ಇಷ್ಟೆಲ್ಲಾ ಕಿರೀಟಗಳನ್ನು ಹೊಂದಿಯೂ ಕೂಡ ಹಾಗಲಕಾಯಿ ನಮ್ಮ ಮನೆಯ ಹಿತ್ತಿಲಿನಲ್ಲಿ ಬೆಳೆದು ಫಲ ಕೊಡಲು ಸಿದ್ಧವಿದೆ. ಹಾಗಿರುವಾಗ ನಾವೇಕೆ ಸುಮ್ಮನಿರಬೇಕು. ಹೊಸ ಹೊಸ ಅಡುಗೆಗಳಿಗೆ, ಮಾಂಸದ ಗೊಜ್ಜುಗಳಿಗೆ ಹಾಕಿ ಪ್ರಯೋಗಕ್ಕೆ ಸಿದ್ಧವಾಗಬೇಕು.. ಒಕಿನವನ್ನವರ ಪ್ರಕಾರ ಶತಾಯುಷ್ಯಕ್ಕೆ ಹಾಗಲಕಾಯೇ ಸಾಕ್ಷಿ.