ಅಮಿತಾಬ್ ಬಚ್ಚನ್, ಅಭಿಷೇಕ್ ಆರೋಗ್ಯಸ್ಥಿತಿ ಸ್ಥಿರ
ಮುಂಬೈ, ಜು.14: ಕೊರೋನ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿರುವ ಖ್ಯಾತ ನಟ ಅಮಿತಾಬ್ ಬಚ್ಚನ್ ಹಾಗೂ ಅವರ ಪುತ್ರ, ನಟ ಅಭಿಷೇಕ್ ಬಚ್ಚನ್ ಚಿಕಿತ್ಸೆಗೆ ಸೂಕ್ತವಾಗಿ ಸ್ಪಂದಿಸುತ್ತಿದ್ದು ಇಬ್ಬರ ಆರೋಗ್ಯವೂ ಸ್ಥಿರವಾಗಿದೆ. ಕನಿಷ್ಟ 7 ದಿನ ಅವರು ಆಸ್ಪತ್ರೆಯಲ್ಲಿರಬೇಕಾಗುತ್ತದೆ ಎಂದು ಆಸ್ಪತ್ರೆಯ ಮೂಲಗಳು ಮಂಗಳವಾರ ಹೇಳಿವೆ.
ತಮಗೆ ಕೊರೋನ ಸೋಂಕು ತಗುಲಿರುವುದನ್ನು 77 ವರ್ಷದ ಅಮಿತಾಬ್ ಬಚ್ಚನ್ ಹಾಗೂ 44 ವರ್ಷದ ಅಭಿಷೇಕ್ ಬಚ್ಚನ್ ಜೂನ್ 11ರಂದು ಟ್ವಿಟರ್ ನಲ್ಲಿ ಬಹಿರಂಗಗೊಳಿಸಿದ್ದರು. ಜೊತೆಗೆ, ಅಭಿಷೇಕ್ ಪತ್ನಿ, ಖ್ಯಾತ ನಟಿ ಐಶ್ವರ್ಯ ರೈ, ಪುತ್ರಿ 8 ವರ್ಷದ ಆರಾಧ್ಯಾ ಬಚ್ಚನ್ ಗೂ ಕೊರೋನ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮನೆಯಲ್ಲೇ ಕ್ವಾರಂಟೈನ್ ಗೆ ಒಳಪಟ್ಟಿರುವುದಾಗಿ ಕುಟುಂಬದ ಮೂಲಗಳು ಹೇಳಿವೆ. ಈ ಮಧ್ಯೆ, ಅಮಿತಾಬ್ ಮತ್ತವರ ಕುಟುಂಬದವರು ಶೀಘ್ರ ಗುಣಮುಖರಾಗಲೆಂದು ಹಾರೈಸಿ ಅಭಿಮಾನಿಗಳಿಂದ ಸಂದೇಶಗಳ ಮಹಾಪೂರವೇ ಹರಿದು ಬರುತ್ತಿದೆ. ಸೋಮವಾರ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿರುವ ಅಮಿತಾಬ್, ಪ್ರತ್ಯೇಕವಾಗಿ ಇರುವ ಕತ್ತಲೆಯನ್ನು ತಮ್ಮ ಸಂದೇಶಗಳ ಬೆಳಕಿನಿಂದ ನಿವಾರಿಸಿದ ನಿಮಗೆ ಶಿರಬಾಗುತ್ತೇನೆ ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಅಮಿತಾಬ್ ಮನೆಯಲ್ಲಿ ಕೆಲಸ ಮಾಡುತ್ತಿರುವ 26 ಜನರನ್ನೂ ಸೋಮವಾರ ಕೊರೋನ ಸೋಂಕು ಪರೀಕ್ಷೆಗೆ ಒಳಪಡಿಸಲಾಗಿತ್ತು. ಮಂಗಳವಾರ ನೆಗೆಟಿವ್ ವರದಿ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.