ಪಠ್ಯಕ್ರಮದಲ್ಲಿ ವರ್ಗೀಯವಾದಿ ಅಜೆಂಡಾ ಜಾರಿಗೆ: ಕೋವಿಡ್-19 ನೆಪ
ಕೊರೋನದಿಂದ ಉಡುಗೊರೆಯಾಗಿ ದೊರೆತ ಈ ‘ಅವಕಾಶ’ವನ್ನು ಆಡಳಿತಾರೂಢ ಸರಕಾರವು ಶಿಕ್ಷಣ ಕ್ಷೇತ್ರದಲ್ಲಿ ತನ್ನ ಕಾರ್ಯಸೂಚಿಯನ್ನು ಬಲಪಡಿಸಲು ಸಂಪೂರ್ಣವಾಗಿ ಬಳಸಿಕೊಳ್ಳುತ್ತಿದೆ. ಆಡಳಿತಾರೂಢ ಸರಕಾರಕ್ಕೆ ಅಹಿತಕರವಾಗಿರುವ ಪಠ್ಯಕ್ರಮವನ್ನು ತೆಗೆದುಹಾಕಲಾಗುತ್ತಿದೆ. ಪಠ್ಯಗಳನ್ನು ತೆಗೆದುಹಾಕುವ ಈ ಕೃತ್ಯವು ಶೈಕ್ಷಣಿಕ ಪಠ್ಯಕ್ರಮದ ಸ್ವರೂಪವನ್ನೇ ಬದಲಾಯಿಸುವ ಕೇಂದ್ರ ಸರಕಾರದ ಉದ್ದೇಶಕ್ಕೆ ಪೂರಕವಾಗಲಿದೆ. ಆರೆಸ್ಸೆಸ್‌ನ ಸಹಸಂಘಟನೆಯು ಪಠ್ಯಕ್ರಮದ ‘ಭಾರತೀಕರಣ’ದ ಕುರಿತಾಗಿ ಮಾನವಸಂಪನ್ಮೂಲ ಇಲಾಖೆಗೆ ಸಲಹೆಗಳನ್ನು ನೀಡಿರುವುದು ಇಲ್ಲಿ ಉಲ್ಲೇಖಾರ್ಹವಾಗಿದೆ.
ಎಲ್ಲಾ ವಲಯಗಳಲ್ಲಿಯೂ ಕೋವಿಡ್-19 ಭಯಭೀತ ವಾತಾವರಣವನ್ನು ಸೃಷ್ಟಿಸಿರುವಂತೆಯೇ, ಕೆಲವು ದೇಶಗಳ ಆಡಳಿತಗಾರರು ತಮ್ಮ ಕಾರ್ಯಸೂಚಿಗಳ ಅನುಷ್ಠಾನವನ್ನು ತ್ವರಿತಗೊಳಿಸಲು ಈ ಸಂದರ್ಭವನ್ನು ಬಳಸಿಕೊಳ್ಳುತ್ತಿದ್ದಾರೆ. ಕೋವಿಡ್-19 ಹಾವಳಿಯ ಸಮಯದಲ್ಲಿ ಕೆಲವು ದೇಶಗಳಲ್ಲಿ ನಿರ್ದಿಷ್ಟ ರೂಪಗಳಲ್ಲಿ ಪ್ರಜಾತಾಂತ್ರಿಕ ಸ್ವಾತಂತ್ರಗಳನ್ನು ಮೊಟಕುಗೊಳಿಸಲಾಗಿದೆ. ಇಂತಹ ಆವುಟಗಳ ವಿರುದ್ಧ ಅಮೆರಿಕದಲ್ಲಿ ದೊಡ್ಡ ಚಳವಳಿಯೇ ಹುಟ್ಟಿಕೊಂಡಿದೆ. ಮುಕ್ತವಾದ ಚರ್ಚೆ ಹಾಗೂ ಭಿನ್ನಮತಗಳ ಸಹಿಷ್ಣುತೆಯ ಪದ್ಧತಿಗಳನ್ನು ದುರ್ಬಲಗೊಳಿಸುವ ಹಾಗೂ ಸೈದ್ಧಾಂತಿಕ ಏಕರೂಪತೆಯನ್ನು ಹೇರುವಿಕೆಯನ್ನು ವಿರೋಧಿಸುವ ಚಳವಳಿಯು ಅಲ್ಲಿ ತೀವ್ರಗೊಂಡಿದೆ.
ಭಾರತದಲ್ಲಿಯೂ ಇದೇ ರೀತಿಯ ಬೆದರಿಕೆಯ ಪ್ರವೃತ್ತಿಯು ತೀವ್ರಗೊಂಡಿದೆ. ಇದರ ಜೊತೆಗೆ, ಕೊರೋನ ವೈರಸ್ ಸೋಂಕಿನ ಹರಡುವಿಕೆಯನ್ನು ಮುಸ್ಲಿಮ್ ಸಮುದಾಯದ ಜೊತೆಗೆ ಥಳಕುಹಾಕಲು ವರ್ಗೀಯ ಶಕ್ತಿಗಳು ಬಳಸಿಕೊಂಡಿವೆ. ಇದೀಗ ವಿದ್ಯಾರ್ಥಿಗಳಿಗೆ ಪಠ್ಯಗಳ ಹೊರೆಯನ್ನು ಕಡಿಮೆಗೊಳಿಸುವ ನೆಪದಲ್ಲಿ ಭಾರತೀಯ ರಾಷ್ಟ್ರೀಯವಾದಕ್ಕೆ ಸಂಬಂಧಿಸಿದ ಪ್ರಮುಖ ಪಠ್ಯವಿಷಯಗಳನ್ನು ಕೈಬಿಡಲಾಗುತ್ತಿದೆ.
ಒಕ್ಕೂಟ ವ್ಯವಸ್ಥೆ (ಫೆಡರಲಿಸಂ), ಪೌರತ್ವ, ರಾಷ್ಟ್ರೀಯವಾದ, ಜಾತ್ಯತೀತತೆ, ಮಾನವಹಕ್ಕುಗಳು, ಕಾನೂನು ನೆರವು ಹಾಗೂ ಸ್ಥಳೀಯ ಸ್ವಯಮಾಡಳಿತದಂತಹ ವಿಷಯಗಳನ್ನು ಕೈಬಿಡಲಾಗಿದೆ. ಕೋಮುವಾದಿ ಶಕ್ತಿಗಳಿಗೆ ಶಿಕ್ಷಣವೆಂಬುದು ತಮ್ಮ ಹಿತಾಸಕ್ತಿಯನ್ನು ಬೆಳೆಸಲು ಇರುವ ಪ್ರಮುಖ ಕ್ಷೇತ್ರವಾಗಿ ಬಿಟ್ಟಿದೆ. ಭಾರತದ ಪಠ್ಯಕ್ರಮದಲ್ಲಿ ಎಡಪಂಥೀಯರ ಪ್ರಾಬಲ್ಯವಿದ್ದು, ಅವು ಮಕಾಲೆ, ಮಾರ್ಕ್ಸ್ ಅವರಿಂದ ಪ್ರಭಾವಿತವಾಗಿವೆ ಮತ್ತು ಅವುಗಳನ್ನು ಭಾರತೀಕರಣಗೊಳಿಸುವ ಅಗತ್ಯವಿದೆಯೆಂದು ಕೇಸರಿಶಕ್ತಿಗಳು ಪ್ರತಿಪಾದಿಸುತ್ತಾ ಬಂದಿವೆ. 1998ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಪಠ್ಯಕ್ರಮಗಳನ್ನು ಬದಲಾಯಿಸುವ ಮೊದಲ ಪ್ರಯತ್ನ ನಡೆದಿತ್ತು. ಆಗ ಮುರಳಿ ಮನೋಹರ ಜೋಶಿ ಮಾನವಸಂಪನ್ಮೂಲ ಅಭಿವೃದ್ಧಿ ಸಚಿವರಾಗಿದ್ದರು. ಶಿಕ್ಷಣವನ್ನು ಕೇಸರೀಕರಣಗೊಳಿಸುವ ನಿಟ್ಟಿನಲ್ಲಿ ಪಠ್ಯಕ್ರಮದಲ್ಲಿ ಅವರು ಬದಲಾವಣೆಗಳನ್ನು ತಂದಿದ್ದರು. ಜ್ಯೋತಿಷ್ಯಶಾಸ್ತ್ರ ಹಾಗೂ ಪೌರೋಹಿತ್ಯದಂತಹ ವಿಷಯಗಳನ್ನು, ಜಾತಿ ವ್ಯವಸ್ಥೆಯನ್ನು ಸಮರ್ಥಿಸುವಂತಹ ಅಧ್ಯಾಯಗಳನ್ನು ಅವರು ಪಠ್ಯಕ್ರಮದಲ್ಲಿ ಪರಿಚಯಿಸಿದ್ದರು. ಹಿಟ್ಲರ್ ಮಾದರಿಯ ರಾಷ್ಟ್ರೀಯವಾದವನ್ನು ಪ್ರಶಂಸಿಸಲಾಯಿತು.
2004ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಪರಾಭವದ ಬಳಿಕ ಅಧಿಕಾರಕ್ಕೇರಿದ ಯುಪಿಎ, ಪಠ್ಯಕ್ರಮದಲ್ಲಿನ ಇಂತಹ ತಿರುಚುವಿಕೆಗಳನ್ನು ಸರಿಪಡಿಸಲು ಯತ್ನಿಸಿತು. 2014ರ ಲೋಕಸಭಾ ಚುನಾವಣೆಯ ಬಳಿಕ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೆಸ್ಸೆಸ್ ನಿಷ್ಠ ಸಂಘಟನೆಗಳು ಸಕ್ರಿಯವಾಗತೊಡಗಿದವು. ಮಾನವಸಂಪನ್ಮೂಲ ಸಚಿವಾಲಯದ ಅಧಿಕಾರಿಗಳ ಮೇಲೆ ಪ್ರಭಾವ ಬೀರಿದ ಅವು ಹಿಂದೂ ರಾಷ್ಟ್ರವಾದಿ ಕಾರ್ಯಸೂಚಿಗೆ ಹೊಂದಿಕೆಯಾಗುವಂತಹ ಪಠ್ಯಕ್ರಮವನ್ನು ಅಳವಡಿಸುವ ಅಗತ್ಯವಿದೆಯೆಂದು ಅವರ ಮನವೊಲಿಸತೊಡಗಿತು. ಆರೆಸ್ಸೆಸ್‌ನ ‘ಶಿಕ್ಷಾ ಸಂಸ್ಕೃತಿ ಉತ್ತಮ್ ನ್ಯಾಸ್’ ಪಠ್ಯಗಳಲ್ಲಿ ಇಂಗ್ಲಿಷ್, ಉರ್ದು ಪದಗಳನ್ನು ತೆಗೆಯುವಂತೆ ಆಗ್ರಹಿಸತೊಡಗಿತು. ರಾಷ್ಟ್ರೀಯ ವಾದದ ಕುರಿತಂತೆ ರಬೀಂದ್ರನಾಥ್ ಠಾಗೋರ್ ಅವರ ಚಿಂತನೆಗಳು, ಖ್ಯಾತ ಚಿತ್ರಕಲಾವಿದ ಎಂ.ಎಫ್.ಹುಸೇನ್ ಅವರ ಜೀವನಚರಿತ್ರೆಯ ತುಣುಕುಗಳು, ಮುಸ್ಲಿಮ್ ಆಡಳಿತಗಾರರ ಔದಾರ್ಯಗಳ ಕುರಿತ ಉಲ್ಲೇಖಗಳು, ಬಿಜೆಪಿಯು ಹಿಂದೂವಾದಿ ಪಕ್ಷವೆಂಬ ಕುರಿತಾದ ಪ್ರಸ್ತಾವನೆಗಳು, 1984ರ ಸಿಖ್ ವಿರೋಧಿ ಗಲಭೆಗೆ ಪ್ರಧಾನಿ ಮನಮೋಹನ್‌ಸಿಂಗ್ ಅವರ ಕ್ಷಮಾಯಾಚನೆ, 2002ರ ಗುಜರಾತ್ ಗಲಭೆಯಲ್ಲಿ ನಡೆದ ನರಮೇಧದ ಘಟನೆಗಳ ಕುರಿತ ವಿಷಯಗಳನ್ನು ಕೈಬಿಡಲಾಯಿತು. ಈ ಪ್ರಕ್ರಿಯೆಗೆ ಪಠ್ಯಕ್ರಮಗಳ ಭಾರತೀಕರಣ ಎಂದು ಬಿಜೆಪಿ ಸರಕಾರ ಬಣ್ಣಿಸಿಕೊಂಡಿತು.
ಆರೆಸ್ಸೆಸ್ ಹಲವು ಸಂಘಟನೆಗಳನ್ನು ಒಳಗೊಂಡ ಬೃಹತ್ ಸಂಸ್ಥೆಯಾ ಗಿದ್ದು, ಅದರ ಪ್ರಚಾರಕರಲ್ಲೊಬ್ಬರಾದ ದೀನನಾಥ್ ಬಾತ್ರಾ ಎಂಬವರು ‘ಶಿಕ್ಷಾ ಬಚಾವೋ’ ಅಭಿಯಾನ ಸಮಿತಿಯನ್ನು ಸ್ಥಾಪಿಸಿದ್ದರು. ಆರೆಸ್ಸೆಸ್‌ನ ಸಿದ್ಧಾಂತಕ್ಕೆ ಹೊಂದಿಕೆಯಾಗದ ಪುಸ್ತಕಗಳನ್ನು ಪ್ರಕಟಿಸದಂತೆ ಅದು ವಿವಿಧ ಪ್ರಕಾಶನ ಸಂಸ್ಥೆಗಳ ಮೇಲೆ ಪ್ರಭಾವ ಬೀರುತ್ತಿದೆ. ವೆಂಡಿ ಡೊನಿಗೆರ್ ಅವರ ‘ದಿ ಹಿಂದೂಸ್’ ಕೃತಿಯನ್ನು ಪ್ರಕಟನೆಯಿಂದ ಹಿಂದಕ್ಕೆ ತೆಗೆದುಕೊಳ್ಳುವಂತೆಯೂ ಅದು ಒತ್ತಡ ಹೇರಿತ್ತು. ಪುರಾತನ ಭಾರತದಲ್ಲಿ ದಲಿತರ ಹಾಗೂ ಮಹಿಳೆಯರ ಸ್ಥಿತಿಗತಿಯನ್ನು ಆ ಪುಸ್ತಕ ಕೃತಿಯಲ್ಲಿ ವಿವರಿಸಿರುವುದು ಆರೆಸ್ಸೆಸ್‌ನ ಆಕ್ಷೇಪಕ್ಕೆ ಕಾರಣವಾಗಿತ್ತು. ದೀನನಾಥ್ ಬಾತ್ರಾ ಅವರು ಈಗಾಗಲೇ ಶಾಲಾ ಪಠ್ಯಕ್ಕಾಗಿ 9 ಪುಸ್ತಕಗಳ ಸೆಟ್ ಒಂದನ್ನು ಸಿದ್ಧಪಡಿಸಿದ್ದಾರೆ. ಆರೆಸ್ಸೆಸ್‌ನ ದೃಷ್ಟಿಕೋನದ ಪುರಾತನ ಇತಿಹಾಸ ಹಾಗೂ ಸಮಾಜ ವಿಜ್ಞಾನ ಪಠ್ಯಗಳು ಅವುಗಳಲ್ಲಿ ಒಳಗೊಂಡಿವೆ. ಈಗಾಗಲೇ ಅವುಗಳನ್ನು ಗುಜರಾತಿ ಭಾಷೆಗೆ ಅನುವಾದಿಸಲಾಗಿದೆ. ಈ ಪುಸ್ತಕಗಳ ಸಾವಿರಾರು ಸೆಟ್‌ಗಳು ಈಗಾಗಲೇ ಗುಜರಾತ್‌ನ ಶಾಲೆಗಳಲ್ಲಿ ಬಳಕೆಯಾಗುತ್ತಿವೆ.
ಭಾರತೀಯ ರಾಷ್ಟ್ರೀಯವಾದ, ಜಾತ್ಯತೀತತೆ ಹಾಗೂ ಮಾನವಹಕ್ಕುಗಳ ಕುರಿತಾದ ಮೂಲಭೂತ ಅಂಶಗಳನ್ನು ವಿವರಿಸುವಂತಹ ಪಠ್ಯಕ್ರಮಗಳನ್ನು ತೆಗೆದುಹಾಕುವ ಕ್ರಮವು, ಈ ದಿಕ್ಕಿನಲ್ಲಿ ಇಟ್ಟಂತಹ ಇನ್ನೊಂದು ಹೆಜ್ಜೆಯಾಗಿದೆ. ಈ ಪಠ್ಯವಿಷಯಗಳು ಕಳೆದ ಕೆಲವು ವರ್ಷಗಳಿಂದ ಹಿಂದೂ ರಾಷ್ಟ್ರವಾದಿಗಳಿಗೆ ಅಹಿತಕರವಾಗಿತ್ತು. 2015ರಲ್ಲಿ ಗಣರಾಜ್ಯೋತ್ಸವದ ಮುನ್ನಾ ದಿನದಂದು ಕೇಂದ್ರ ಸರಕಾರ ಪ್ರಕಟಿಸಿದ ಜಾಹೀರಾತಿನಲ್ಲಿ ಜಾತ್ಯತೀತತೆಯನ್ನು ಭಾರತೀಯ ಸಂವಿಧಾನದ ಮುನ್ನುಡಿಯ ವಾಕ್ಯದಿಂದ ತೆಗೆದುಹಾಕಲಾಗಿತ್ತು. ಇದೇ ವೇಳೆ ಭಾರತದ ಸ್ವಾತಂತ್ರ ಚಳವಳಿ ಹಾಗೂ ಭಾರತೀಯ ಸಂವಿಧಾನದ ಜಾತ್ಯತೀತ ವೌಲ್ಯಗಳನ್ನು ನಿರಂತರವಾಗಿ ಟೀಕಿಸಲಾಯಿತು. ಈ ಕಾರಣಕ್ಕಾಗಿ ಹಲವಾರು ಆರೆಸ್ಸೆಸ್ ಚಿಂತಕರು ಹಾಗೂ ಬಿಜೆಪಿ ನಾಯಕರು ಭಾರತೀಯ ಸಂವಿಧಾನದಲ್ಲಿ ಬದಲಾವಣೆಗೆ ಆಗ್ರಹಿಸತೊಡಗಿದರು.
ಜಾತ್ಯತೀತತೆಯೆಂಬುದು ಭಾರತೀಯ ಸಂವಿಧಾನದ ಒಟ್ಟಾರೆ ಪರಿಕಲ್ಪನೆಯ ಒಂದು ಭಾಗವಾಗಿದೆ. ಧಾರ್ಮಿಕ ರಾಷ್ಟ್ರೀಯತೆ ಹಾಗೂ ವರ್ಗೀಯ ವಿಭಜನಾವಾದಿ ರಾಷ್ಟ್ರೀಯತೆಯ ಹೆಸರಿನಲ್ಲಿ ಅವರು ವಿವಿಧ ವಿದ್ಯಾರ್ಥಿ ನಾಯಕರ ಮೇಲೆ ದಾಳಿ ನಡೆಸುತ್ತಿದ್ದಾರೆ. ನಾವು ರಾಷ್ಟ್ರೀಯವಾದವನ್ನು ಅಧ್ಯಯನ ಮಾಡುವಾಗ ಭಾರತೀಯ ರಾಷ್ಟ್ರೀಯವಾದದ ಪರಂಪರೆಯು ವಸಾಹತುಶಾಹಿಯ ವಿರುದ್ಧ ನಡೆದ ನಮ್ಮ ಸ್ವಾತಂತ್ರ ಚಳವಳಿಯ ಬಹುತ್ವವನ್ನು ಸಾರುತ್ತಿತ್ತು. ಭಾರತೀಯ ರಾಷ್ಟ್ರೀಯವಾದಕ್ಕಾಗಿ ಆ ಚಳವಳಿ ನಡೆದಿತ್ತು ಹಾಗೂ ವಸಾಹತುಶಾಹಿಗಳ ವಿರುದ್ಧ ನಡೆದ ಮಹಾನ್ ಹೋರಾಟದಲ್ಲಿ ಹಿಂದೂ ಹಾಗೂ ಮುಸ್ಲಿಮ್ ಕೋಮುವಾದಿಗಳನ್ನು ದೂರವಿರಿಸಲಾಯಿತು. ಈ ಹೋರಾಟವು ಭಾರತವನ್ನು ವಿವಿಧತೆಯಲ್ಲಿ ಏಕತೆಯುಳ್ಳ ಒಂದು ದೇಶವಾಗಿ ನಿರ್ಮಿಸಿತು.
ಪೌರತ್ವದ ಕುರಿತ ಅಧ್ಯಾಯಗಳನ್ನು ಕೂಡಾ ಪಠ್ಯಕ್ರಮದಿಂದ ಕೈಬಿಡಲಾಗಿದೆ. ಒಕ್ಕೂಟ ವ್ಯವಸ್ಥೆ (ಫೆಡರಲಿಸಂ)ಯು ಭಾರತದ ಆಡಳಿತಾತ್ಮಕ ಹಾಗೂ ರಾಜಕೀಯ ಸಂರಚನೆಯ ಪ್ರಮುಖ ಭಾಗವಾಗಿದೆ. ಸರ್ವಾಧಿಕಾರದ ಪ್ರವೃತ್ತಿಗಳು ಪ್ರಬಲವಾಗುತ್ತಿರುವ ಈಗಿನ ದಿನಗಳಲ್ಲಿ ಒಕ್ಕೂಟ ವ್ಯವಸ್ಥೆಯು ಬವಣೆಗೆೆ ಸಿಲುಕಿದೆ. ಪ್ರಜಾಪ್ರಭುತ್ವವೆಂಬುದು ಅಧಿಕಾರದ ವಿಕೇಂದ್ರೀಕರಣವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರವು ಆಡಳಿತ ವ್ಯವಸ್ಥೆಯ ತಳಮಟ್ಟವನ್ನು ಅಂದರೆ ಸ್ಥಳೀಯ ಸ್ವಯಂ ಆಡಳಿತದ ಮೂಲಕ ಗ್ರಾಮಗಳು ಹಾಗೂ ಸಾಮಾನ್ಯ ನಾಗರಿಕರನ್ನು ತಲುಪುತ್ತದೆ. ಒಕ್ಕೂಟ ವ್ಯವಸ್ಥೆ ಹಾಗೂ ಸ್ಥಳೀಯ ಸ್ವಯಂ ಆಡಳಿತ ಕುರಿತ ಅಧ್ಯಾಯಗಳನ್ನು ಪಠ್ಯಕ್ರಮದಿಂದ ತೆಗೆದುಹಾಕುವ ಮೂಲಕ ಆಡಳಿತಾರೂಢ ಪಕ್ಷವು ತನ್ನ ವಿಚಾರಧಾರೆಯನ್ನು ಬಹಿರಂಗವಾಗಿ ಪ್ರದರ್ಶಿಸಿದೆ.
ಮಾನವಹಕ್ಕುಗಳ ಕುರಿತ ಅಧ್ಯಾಯವನ್ನು ಕೂಡಾ ಪಠ್ಯಕ್ರಮದಿಂದ ತೆಗೆದುಹಾಕಿರುವುದು ಗಮನಾರ್ಹವಾಗಿದೆ. ಮಾನವಹಕ್ಕುಗಳ ಪರಿಕಲ್ಪನೆ ಹಾಗೂ ಮಾನವ ಘನತೆಯು ಒಂದಕ್ಕೊಂದು ಬೆಸೆದುಕೊಂಡಿವೆ. ಮಾನವಹಕ್ಕುಗಳ ಪರಿಕಲ್ಪನೆಯು ಕೂಡಾ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಮಹತ್ವದ್ದಾಗಿದೆ. ಭಾರತವು ಮಾನವಹಕ್ಕುಗಳಿಗೆ ಸಂಬಂಧಿಸಿ ವಿಶ್ವಸಂಸ್ಥೆಯ ಹಲವಾರು ಒಡಂಬಡಿಕೆಗಳಿಗೆ ಸಹಿಹಾಕಿದೆ. ಇನ್ನು ಮುಂದೆ ಮಾನವಹಕ್ಕುಗಳು ಕೆಲವೇ ಕೆಲವು ಉನ್ನತಮಟ್ಟದಲ್ಲಿರುವವರಿಗೆ ಸಂಬಂಧಿಸಿದ್ದಾಗಲಿದೆ.
ಕೊರೋನದಿಂದ ಉಡುಗೊರೆಯಾಗಿ ದೊರೆತ ಈ ‘ಅವಕಾಶ’ವನ್ನು ಆಡಳಿತಾರೂಢ ಸರಕಾರವು ಶಿಕ್ಷಣ ಕ್ಷೇತ್ರದಲ್ಲಿ ತನ್ನ ಕಾರ್ಯಸೂಚಿಯನ್ನು ಬಲಪಡಿಸಲು ಸಂಪೂರ್ಣವಾಗಿ ಬಳಸಿಕೊಳ್ಳುತ್ತಿದೆ. ಆಡಳಿತಾರೂಢ ಸರಕಾರಕ್ಕೆ ಅಹಿತಕರವಾಗಿರುವ ಪಠ್ಯಕ್ರಮವನ್ನು ತೆಗೆದುಹಾಕಲಾಗುತ್ತಿದೆ. ಪಠ್ಯಗಳನ್ನು ತೆಗೆದುಹಾಕುವ ಈ ಕೃತ್ಯವು ಶೈಕ್ಷಣಿಕ ಪಠ್ಯಕ್ರಮದ ಸ್ವರೂಪವನ್ನೇ ಬದಲಾಯಿಸುವ ಕೇಂದ್ರ ಸರಕಾರದ ಉದ್ದೇಶಕ್ಕೆ ಪೂರಕವಾಗಲಿದೆ. ಆರೆಸ್ಸೆಸ್‌ನ ಸಹಸಂಘಟನೆಯು ಪಠ್ಯಕ್ರಮದ ಭಾರತೀಕರಣದ ಕುರಿತಾಗಿ ಮಾನವಸಂಪನ್ಮೂಲ ಇಲಾಖೆಗೆ ಸಲಹೆಗಳನ್ನು ನೀಡಿರುವುದು ಇಲ್ಲಿ ಉಲ್ಲೇಖಾರ್ಹವಾಗಿದೆ.
ಒಂದು ವೇಳೆ ಈ ಶಿಫಾರಸುಗಳು ಜಾರಿಗೆ ಬಂದದ್ದೇ ಆದಲ್ಲಿ ಪುರಾಣಕಥೆಗಳಾದ ರಾಮಾಯಣ ಹಾಗೂ ಮಹಾಭಾರತವು ಇತಿಹಾಸ ವೆನಿಸಲಿದೆ. ಭಾರತೀಯರು ಪುರಾತನ ಕಾಲದಿಂದಲೇ ಕಾಂಡಕೋಶ (ಸ್ಟೆಮ್‌ಸೆಲ್) ತಂತ್ರಜ್ಞಾನ, ಪ್ಲಾಸ್ಟಿಕ್ ಸರ್ಜರಿ, ವೈಮಾನಿಕ ವಿಜ್ಞಾನ ಇತ್ಯಾದಿ ಜ್ಞಾನವನ್ನು ಹೊಂದಿದ್ದರೆಂಬಂತಹ ವಿಷಯಗಳು ಇನ್ನು ಮುಂದೆ ಕೋಮುವಾದಿಶಕ್ತಿಗಳು ಯೋಜಿಸಿದಂತೆ, ಪಠ್ಯಗಳಲ್ಲಿ ಸ್ಥಾನವನ್ನು ಪಡೆದುಕೊಳ್ಳಲಿವೆ.