ಶಾರ್ಜಾ: ಕಟ್ಟಡದಿಂದ ಕೆಳಗೆ ಬಿದ್ದು ಭಾರತೀಯ ಇಂಜಿನಿಯರ್ ಮೃತ್ಯು
ದುಬೈ (ಯುಎಇ), ಆ. 3: ಬಕ್ರೀದ್ ದಿನದಂದು ಯುಎಇಯ ಶಾರ್ಜಾದಲ್ಲಿರುವ ಜನವಸತಿ ಕಟ್ಟಡವೊಂದರ ಆರನೇ ಮಹಡಿಯಿಂದ ಬಿದ್ದು 24 ವರ್ಷದ ಭಾರತೀಯ ಇಂಜಿನಿಯರ್ ಒಬ್ಬರು ಸಾವಿಗೀಡಾಗಿದ್ದಾರೆ ಎಂದು ‘ಖಲೀಜ್ ಟೈಮ್ಸ್’ ಸೋಮವಾರ ವರದಿ ಮಾಡಿದೆ.
ಮೃತಪಟ್ಟ ಇಲೆಕ್ಟ್ರಿಕಲ್ ಇಂಜಿನಿಯರ್ ಸುಮೇಶ್ ಕೇರಳ ನಿವಾಸಿಯಾಗಿದ್ದಾರೆ. ಅವರು ಶುಕ್ರವಾರ ತಾನು ವಾಸಿಸುತ್ತಿದ್ದ ಕಟ್ಟಡದಿಂದ ಕೆಳಗೆ ಬಿದ್ದಿದ್ದಾರೆ. ಅವರು ಫೋನ್ನಲ್ಲಿ ಮಾತನಾಡುತ್ತಿದ್ದರು ಹಾಗೂ ಕೆಳಗೆ ಬೀಳುವ ಕೆಲವೇ ನಿಮಿಷಗಳ ಮೊದಲು ಫೋನನ್ನು ಕೆಳಗೆ ಎಸೆದಿದ್ದರು ಎನ್ನಲಾಗಿದೆ.
ಒಂದು ವರ್ಷದ ಹಿಂದೆ ಯುಎಇಗೆ ಬಂದಿದ್ದ ಸುಮೇಶ್, ಶಾರ್ಜಾದ ಮುವೈಲೇ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಅವರು ಸ್ವಲ್ಪ ಸಮಯದಿಂದ ಕೆಲವು ‘ವೈಯಕ್ತಿಕ ಸಮಸ್ಯೆ’ಗಳಿಂದ ಬಳಲುತ್ತಿದ್ದರು ಎಂದು ಅವರ ಕೋಣೆಯಲ್ಲಿ ಜೊತೆಯಾಗಿ ವಾಸಿಸುತ್ತಿದ್ದವರು ಹೇಳಿದ್ದಾರೆ ಎಂದು ಪತ್ರಿಕೆ ಹೇಳಿದೆ.
ಸುಮೇಶ್ ವಾರ್ಷಿಕ ರಜೆಯಲ್ಲಿ ಭಾರತಕ್ಕೆ ಮರಳುವವರಿದ್ದರು, ಆದರೆ, ಕೋವಿಡ್-19 ಸಾಂಕ್ರಾಮಿಕ ಹರಡಿದ ಹಿನ್ನೆಲೆಯಲ್ಲಿ ಅದು ಸಾಧ್ಯವಾಗಿರಲಿಲ್ಲ ಎಂದು ಅವರ ಸಹವಾಸಿಗಳು ಹೇಳಿದ್ದಾರೆ.